ಬೆಂಗಳೂರಿನಲ್ಲಿ ಭೀಕರ ದುರಂತ: ಕಾಲೇಜು ಬಸ್ ಡಿಕ್ಕಿ, ಸ್ಥಳದಲ್ಲೇ ತಾಯಿ-ಮಗ ಸಾವು
x

ಬೆಂಗಳೂರಿನಲ್ಲಿ ಭೀಕರ ದುರಂತ: ಕಾಲೇಜು ಬಸ್ ಡಿಕ್ಕಿ, ಸ್ಥಳದಲ್ಲೇ ತಾಯಿ-ಮಗ ಸಾವು


Click the Play button to hear this message in audio format

ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಕಾಲೇಜು ಬಸ್ ಡಿಕ್ಕಿ ಹೊಡೆದ ಪರಿಣಾಮ, ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಗರದ ವಿವೇಕನಗರ ಮುಖ್ಯರಸ್ತೆಯಲ್ಲಿ ಸೋಮವಾರ (ಜ.19) ಬೆಳಿಗ್ಗೆ ನಡೆದಿದೆ.

ಮೃತರನ್ನು ಆಂಧ್ರಪ್ರದೇಶ ಮೂಲದ ಸಂಗೀತಾ (37) ಮತ್ತು ಅವರ ಮಗ ಪಾರ್ಥ (8) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಸುಮಾರು 6.30ರ ಸುಮಾರಿಗೆ ಸಂಗೀತಾ ಅವರು ತಮ್ಮ ಮಗನೊಂದಿಗೆ ಶಾಲೆಗೆ ತೆರಳುತ್ತಿದ್ದರು. ವಿವೇಕನಗರ ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ, ಪಕ್ಕದ ರಸ್ತೆಯಿಂದ ವೇಗವಾಗಿ ಬಂದ ಖಾಸಗಿ ಕಾಲೇಜಿನ ಬಸ್ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಾಯಿ ಮತ್ತು ಮಗು ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಮೃತ ಸಂಗೀತಾ ಅವರು ಇಲ್ಲಿನ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ (Helper) ಕೆಲಸ ಮಾಡುತ್ತಿದ್ದರು. ಮಗ ಪಾರ್ಥ ಕೂಡ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮೂಲತಃ ಆಂಧ್ರಪ್ರದೇಶದವರಾದ ಇವರ ಪತಿ ಪ್ರಸಾದ್ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಗನನ್ನು ಶಾಲೆಗೆ ಸೇರಿಸಿ, ತಾನೂ ಕೆಲಸಕ್ಕೆ ಹೋಗುವ ತರಾತುರಿಯಲ್ಲಿದ್ದಾಗ ಘಟನೆ ನಡೆದಿದೆ.

ಚಾಲಕ ಪರಾರಿ

ಅಪಘಾತ ಸಂಭವಿಸುತ್ತಿದ್ದಂತೆಯೇ ಬಸ್ ನಿಲ್ಲಿಸಿದ ಚಾಲಕ ಸುನೀಲ್, ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ವಿಷಯ ತಿಳಿದ ಕೂಡಲೇ ಅಶೋಕ ನಗರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಪರಾರಿಯಾಗಿರುವ ಚಾಲಕ ಸುನೀಲ್‌ಗಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ.

Read More
Next Story