
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2.5 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ
ಹೈಡ್ರೋಪೋನಿಕ್ ಗಾಂಜಾ ಎನ್ನುವುದು ಸಾಮಾನ್ಯ ಗಾಂಜಾಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ದುಬಾರಿಯಾದ ಮಾದಕ ವಸ್ತುವ. ಇದನ್ನು ಮಣ್ಣಿನ ಬದಲಿಗೆ ಪೋಷಕಾಂಶಯುಕ್ತ ದ್ರಾವಣಗಳನ್ನು ಬಳಸಿ ಕೃತಕವಾಗಿ ಬೆಳೆಸಲಾಗುತ್ತದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬ್ಯಾಂಕಾಕ್‌ನಿಂದ ಆಗಮಿಸಿದ ಪ್ರಯಾಣಿಕರಿಂದ ಬರೋಬ್ಬರಿ 6.24 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಅದರ ಬೆಲೆ 2.18 ಕೋಟಿ ರೂಪಾಯಿ ಮೌಲ್ಯ ಎಂದು ಹೇಳಿದ್ದಾರೆ.
2026ರ ಜನವರಿ ತಿಂಗಳ ಆರಂಭದಲ್ಲೇ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ನಡೆದ ಮೂರನೇ ಪ್ರಮುಖ ಡ್ರಗ್ಸ್ ಬೇಟೆ ಇದಾಗಿದ್ದು, ಆಗ್ನೇಯ ಏಷ್ಯಾದಿಂದ ಭಾರತಕ್ಕೆ ಪೂರೈಕೆಯಾಗುತ್ತಿರುವ ಮಾದಕ ವಸ್ತುವಿನ ಕಳ್ಳಸಾಗಣೆ ಜಾಲಕ್ಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ 14 ಕೋಟಿ ರೂ. ಮೌಲ್ಯದ 14 ಕೆಜಿ ಹಾಗೂ ಬೆಂಗಳೂರಿನಲ್ಲಿ 1.75 ಕೋಟಿ ರೂ. ಮೌಲ್ಯದ 5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು.
ಏನಿದು ಹೈಡ್ರೋಪೋನಿಕ್ ಗಾಂಜಾ?
ಹೈಡ್ರೋಪೋನಿಕ್ ಗಾಂಜಾ ಎನ್ನುವುದು ಸಾಮಾನ್ಯ ಗಾಂಜಾಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ದುಬಾರಿಯಾದ ಮಾದಕ ವಸ್ತುವ. ಇದನ್ನು ಮಣ್ಣಿನ ಬದಲಿಗೆ ಪೋಷಕಾಂಶಯುಕ್ತ ದ್ರಾವಣಗಳನ್ನು ಬಳಸಿ ಕೃತಕವಾಗಿ ಬೆಳೆಸಲಾಗುತ್ತದೆ. 'ಜರ್ನಲ್ ಆಫ್ ಕ್ಯಾನಬಿಸ್ ರಿಸರ್ಚ್' ವರದಿಗಳ ಪ್ರಕಾರ, ಸಾಮಾನ್ಯ ಗಾಂಜಾಕ್ಕಿಂತ ಇದರಲ್ಲಿ ಟಿಹೆಚ್‌ಸಿ (THC) ಅಂಶವು ಶೇ. 20ಕ್ಕಿಂತಲೂ ಅಧಿಕವಿರುತ್ತದೆ. ಇದು ಸಾಂಪ್ರದಾಯಿಕ ಗಾಂಜಾಕ್ಕಿಂತ ಎರಡು ಪಟ್ಟು ಹೆಚ್ಚು ಅಮಲು ನೀಡುವ ಸಾಮರ್ಥ್ಯ ಹೊಂದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ ಸುಮಾರು 35 ಲಕ್ಷ ರೂಪಾಯಿಗಳಷ್ಟು ಭಾರಿ ಬೆಲೆ ಹೊಂದಿದೆ.
ಕಠಿಣ ಕಾಯ್ದೆ ಮತ್ತು ಹೆಚ್ಚುತ್ತಿರುವ ನಿಗಾ
ಮಾದಕ ವಸ್ತುಗಳ ಪತ್ತೆಯಾದ ಹಿನ್ನೆಲೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾಯ್ದೆಯಡಿ ಅಪರಾಧ ಸಾಬೀತಾದಲ್ಲಿ 10 ರಿಂದ 20 ವರ್ಷಗಳವರೆಗೆ ಕಡ್ಡಾಯ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಮಾದಕ ದ್ರವ್ಯ ನಿಯಂತ್ರಣ ಮಂಡಳಿ (NCB) ನೀಡಿರುವ ವರದಿಗಳ ಪ್ರಕಾರ, 2023 ರಿಂದೀಚೆಗೆ ಭಾರತದಲ್ಲಿ ಸಿಂಥೆಟಿಕ್ ಡ್ರಗ್ಸ್‌ಗಳ ಹಾವಳಿ ಶೇ. 30ರಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಡ್ರಗ್ಸ್ ಜಾಲದ ಬೇರುಗಳನ್ನು ಹುಡುಕಲು ಅಧಿಕಾರಿಗಳು ಜಾಲ ಬೀಸಿದ್ದಾರೆ.

