ಬೆಂಗಳೂರಿಗೆ ಬಂತು ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್; ಟಿಕೆಟ್‌ ದರ ಎಷ್ಟು? ಬುಕಿಂಗ್ ಹೇಗೆ?
x
ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌

ಬೆಂಗಳೂರಿಗೆ ಬಂತು ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್; ಟಿಕೆಟ್‌ ದರ ಎಷ್ಟು? ಬುಕಿಂಗ್ ಹೇಗೆ?

ಬೆಂಗಳೂರಿನ ಐತಿಹಾಸಿಕ ತಾಣಗಳನ್ನು ವೀಕ್ಷಿಸಲು KSTDC 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸಿದೆ. ರವೀಂದ್ರ ಕಲಾಕ್ಷೇತ್ರದಿಂದ ಆರಂಭವಾಗುವ ಈ ಬಸ್‌ ಟಿಕೆಟ್ ದರ, ಮಾರ್ಗ ಮತ್ತು ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ.


ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಕರ್ನಾಟಕ ಸರ್ಕಾರವು ಬುಧವಾರ (ಜನವರಿ 21, 2026) ಲಂಡನ್ ಮಾದರಿಯ 'ಅಂಬಾರಿ' (Ambaari) ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಈ ಸೇವೆಯನ್ನು ನಿರ್ವಹಿಸುತ್ತಿದ್ದು, ನಗರದ ಸಾಂಸ್ಕೃತಿಕ ಕೇಂದ್ರಗಳು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಕಟ್ಟಡಗಳು ಮತ್ತು ಉದ್ಯಾನವನಗಳನ್ನು ಒಳಗೊಂಡ ವೃತ್ತಾಕಾರದ ಮಾರ್ಗದಲ್ಲಿ ಈ ಬಸ್ ಸಂಚರಿಸಲಿದೆ.

ಬಸ್‌ ಪ್ರಯಾಣ ಸಮಯ ಮತ್ತು ಟಿಕೆಟ್‌ ದರ

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ 'ಅಂಬಾರಿ' ಎಂಬ ಹೆಸರಿನ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಪ್ರವಾಸಿ ಬಸ್ ಪ್ರತಿದಿನ ಬೆಳಗ್ಗೆ 10:30ಕ್ಕೆ ರವೀಂದ್ರ ಕಲಾಕ್ಷೇತ್ರದಿಂದ ತನ್ನ ಪ್ರಯಾಣವನ್ನು ಆರಂಭಿಸಿ ರಾತ್ರಿ 8:00 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಒಟ್ಟು ಮೂರು ಬಸ್‌ಗಳು ನಗರದ ಪ್ರಮುಖ ಆಕರ್ಷಣೆಗಳ ಮೂಲಕ ಸಂಚರಿಸಲಿದ್ದು, ಒಬ್ಬರಿಗೆ 180 ರೂಪಾಯಿ ಟಿಕೆಟ್ ದರ (ತೆರಿಗೆ ಪ್ರತ್ಯೇಕ) ನಿಗದಿಪಡಿಸಲಾಗಿದೆ. ಆಸಕ್ತರು ರವೀಂದ್ರ ಕಲಾಕ್ಷೇತ್ರದಲ್ಲಿರುವ ಕೌಂಟರ್‌ನಲ್ಲಿ ನೇರವಾಗಿ ಅಥವಾ KSTDC ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ +91 80 4334 4334 ಅನ್ನು ಸಂಪರ್ಕಿಸಬಹುದಾಗಿದೆ.

ಪ್ರವಾಸಿ ಮಾರ್ಗದ ಪ್ರಮುಖ ಆಕರ್ಷಣೆಗಳು

ಬೆಂಗಳೂರಿನ ಈ ಪ್ರವಾಸಿ ಮಾರ್ಗವು ನಗರದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಆಧುನಿಕತೆಯ ಅದ್ಭುತ ಸಂಗಮವಾಗಿದೆ. ಕಲೆ ಮತ್ತು ಸಂಗೀತದ ಕೇಂದ್ರವಾದ ರವೀಂದ್ರ ಕಲಾಕ್ಷೇತ್ರದಿಂದ ಆರಂಭವಾಗುವ ಈ ಪಯಣವು, ಐತಿಹಾಸಿಕ ವಸಾಹತುಶಾಹಿ ಶೈಲಿಯ ಟೌನ್ ಹಾಲ್ ಹಾಗೂ ಇತಿಹಾಸ ಮತ್ತು ತಂತ್ರಜ್ಞಾನದ ಶ್ರೀಮಂತಿಕೆಯನ್ನು ಸಾರುವ ಸರ್ಕಾರಿ ಮ್ಯೂಸಿಯಂ ಮತ್ತು ವಿಶ್ವೇಶ್ವರಯ್ಯ ಮ್ಯೂಸಿಯಂಗಳನ್ನು ಒಳಗೊಂಡಿದೆ.

ಹಸಿರಿನಿಂದ ಕಂಗೊಳಿಸುವ ಬೆಂಗಳೂರಿನ ಶ್ವಾಸಕೋಶ ಎಂದೇ ಪ್ರಸಿದ್ಧವಾದ ಕಬ್ಬನ್ ಪಾರ್ಕ್ ಹಾಗೂ ಕ್ವೀನ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಗಳ ಸುಂದರ ಮಾರ್ಗಗಳು ಪ್ರವಾಸಿಗರಿಗೆ ಮುದ ನೀಡುತ್ತವೆ. ಆಡಳಿತಾತ್ಮಕವಾಗಿ ಅತ್ಯಂತ ಪ್ರಮುಖವಾದ ವಿಧಾನಸೌಧ, ವಿಕಾಸಸೌಧ, ಕೆಂಪು ಬಣ್ಣದ ಭವ್ಯ ಕರ್ನಾಟಕ ಹೈಕೋರ್ಟ್ ಕಟ್ಟಡ, ಬಿಬಿಎಂಪಿ ಕಚೇರಿ ಮತ್ತು ಎಂ.ಎಸ್. ಬಿಲ್ಡಿಂಗ್‌ಗಳನ್ನು ಈ ಪ್ರವಾಸದಲ್ಲಿ ಹತ್ತಿರದಿಂದ ನೋಡಬಹುದು. ಇದರೊಂದಿಗೆ ಕ್ರೀಡಾಪ್ರೇಮಿಗಳ ನೆಚ್ಚಿನ ಕಂಠೀರವ ಮತ್ತು ಚಿನ್ನಸ್ವಾಮಿ ಸ್ಟೇಡಿಯಂಗಳು ಹಾಗೂ ಅತ್ಯಾಧುನಿಕ ಜೀವನಶೈಲಿಯ ಕೇಂದ್ರವಾದ ಯುಬಿ ಸಿಟಿಯು ಈ ಪ್ರವಾಸಿ ಮಾರ್ಗದ ಪ್ರಮುಖ ಆಕರ್ಷಣೆಗಳಾಗಿವೆ.

ಬಸ್‌ ಸಂಚರಿಸುವ ಮಾರ್ಗ

ರವೀಂದ್ರ ಕಲಾಕ್ಷೇತ್ರ → ಟೌನ್ ಹಾಲ್ → ಕಾರ್ಪೊರೇಷನ್ → ಹಡ್ಸನ್ ಸರ್ಕಲ್ → ಕಸ್ತೂರಿಬಾ ರಸ್ತೆ → ಕಂಠೀರವ ಸ್ಟೇಡಿಯಂ → ವಿಠ್ಠಲ್ ಮಲ್ಯ ರಸ್ತೆ → ಯುಬಿ ಸಿಟಿ → ಸರ್ಕಾರಿ ಮ್ಯೂಸಿಯಂ → ವಿಶ್ವೇಶ್ವರಯ್ಯ ಮ್ಯೂಸಿಯಂ → ಅನಿಲ್ ಕುಂಬ್ಳೆ ಸರ್ಕಲ್ → ಕಬ್ಬನ್ ಪಾರ್ಕ್ → ಕ್ವೀನ್ಸ್ ರಸ್ತೆ → ಚಿನ್ನಸ್ವಾಮಿ ಸ್ಟೇಡಿಯಂ → ಕಬ್ಬನ್ ರಸ್ತೆ → ಮಿನ್ಸ್ಕ್ ಸ್ಕ್ವೇರ್ → ಜಿಪಿಒ → ಯುಟಿಲಿಟಿ ಬಿಲ್ಡಿಂಗ್ → ಅಂಬೇಡ್ಕರ್ ರಸ್ತೆ → ಹೈಕೋರ್ಟ್ → ವಿಧಾನಸೌಧ → ವಿಕಾಸಸೌಧ → ಎಂ.ಎಸ್. ಬಿಲ್ಡಿಂಗ್ → ಕೆ.ಆರ್. ಸರ್ಕಲ್ → ನೃಪತುಂಗ ರಸ್ತೆ → ಮರಳಿ ರವೀಂದ್ರ ಕಲಾಕ್ಷೇತ್ರಕ್ಕೆ.

Read More
Next Story