
ಬಿಡದಿಯಲ್ಲಿ ರೈತರು ಹೋರಾಟ ನಡೆಸಿದರು.
ಗ್ರೇಟರ್ ಬೆಂಗಳೂರು ಭೂಸ್ವಾಧೀನಕ್ಕೆ ವಿರೋಧ: ಕೀಟನಾಶಕ ಕುಡಿಯಲು ರೈತರ ಯತ್ನ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು, ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಸುಮಾರು 9,000 ಎಕರೆ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಿಸಲು ಉದ್ದೇಶಿಸಿದೆ.
ನಮ್ಮ ಭೂಮಿ ಕೊಡುವುದಿಲ್ಲ, ಎಂದು ಘೋಷಣೆ ಕೂಗುತ್ತಾ, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ರೈತರು ಕೀಟನಾಶಕ ಕುಡಿಯಲು ಯತ್ನಿಸಿದ ಘಟನೆ, ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ವೇಳೆ ಮಂಗಳವಾರ ನಡೆದಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು, ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಸುಮಾರು 9,000 ಎಕರೆ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಿಸಲು ಉದ್ದೇಶಿಸಿದೆ. ಇದನ್ನು ಭಾರತದ ಮೊದಲ 'ಕೃತಕ ಬುದ್ಧಿಮತ್ತೆ ಚಾಲಿತ ನಗರ ಎಂದು ಕರೆಯಲಾಗುತ್ತಿದೆ. ಆದರೆ, ಈ ಯೋಜನೆಗೆ ಭೂಮಿ ನೀಡಲು ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಗಲಾಟೆ
ಯೋಜನೆಗಾಗಿ ಭೂಮಿಯ ಜಂಟಿ ಅಳತೆ ಮೌಲ್ಯಮಾಪನ (ಜೆಎಂಸಿ) ಕಾರ್ಯವು ಸೆಪ್ಟೆಂಬರ್ 11ರಂದು ಆರಂಭವಾದಾಗಿನಿಂದಲೂ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಮಂಗಳವಾರ ಧರಣಿಯು ಐದನೇ ದಿನಕ್ಕೆ ಕಾಲಿಟ್ಟಿತ್ತು.
ಈ ಸಂದರ್ಭದಲ್ಲಿ, ರೈತರ ಧರಣಿಗೆ ಬೆಂಬಲ ಸೂಚಿಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಂಸದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದರು. ಡಾ. ಅಶ್ವತ್ಥ ನಾರಾಯಣ ಅವರು ಭಾಷಣ ಮಾಡುತ್ತಿದ್ದಂತೆಯೇ, ಹೊಸೂರಿನ ರಮ್ಯ, ಕಂಚುಗಾರನಹಳ್ಳಿಯ ಶಾರದಾ, ಚಿಕ್ಕಭೈರಮಂಗಲದ ನಾಗೇಶ್ ಕುಮಾರ್ ಮತ್ತು ಭೈರಮಂಗಲದ ಶ್ರೀಧರ್ ಅವರು, "ನಾವು ಭೂಮಿ ಕೊಡುವುದಿಲ್ಲ" ಎಂದು ಕೂಗುತ್ತಾ ಕೀಟನಾಶಕ ಕುಡಿಯಲು ಮುಂದಾದರು.
ತಕ್ಷಣವೇ ಎಚ್ಚೆತ್ತ ಇತರ ರೈತರು ಮತ್ತು ಮುಖಂಡರು, ಅವರನ್ನು ತಡೆದು ಕೈಯಲ್ಲಿದ್ದ ಕೀಟನಾಶಕ ಬಾಟಲಿಗಳನ್ನು ಕಸಿದುಕೊಂಡರು. ಮುಂಜಾಗ್ರತಾ ಕ್ರಮವಾಗಿ ನಾಲ್ವರನ್ನೂ ಆಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈತರನ್ನು ಆಸ್ಪತ್ರೆಗೆ ಕಳುಹಿಸಿದ ನಂತರ, ಬಿಜೆಪಿ ನಾಯಕರ ಭಾಷಣ ಮುಂದುವರಿಯಿತು.