
ED CASE | ಡಿ.ಕೆ ಶಿವಕುಮಾರ್‌ಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್
ಲೋಕ ಸಮರದ ಸಂದರ್ಭದಲ್ಲಿ ಬಿಗ್ ರಿಲೀಫ್, ಇದು ನನ್ನ ಜೀವನದ ದೊಡ್ಡ ದಿನ ಎಂದ ಡಿ.ಕೆ ಶಿವಕುಮಾರ್
ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂಥ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ 2019ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಡಿ.ಕೆ ಶಿವಕುಮಾರ್ ಅವರ ವಿರುದ್ಧ ತೆರಿಗೆ ವಂಚನೆ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಹವಾಲಾ ವ್ಯವಹಾರದ ಆರೋಪ ಕೇಳಿ ಬಂದಿತ್ತು.
ಜಾರಿ ನಿರ್ದೇಶನಾಲಯವು (ಇಡಿ) ಐಪಿಸಿ ಸೆಕ್ಷನ್ 120B ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅದನ್ನು ರದ್ದು ಮಾಡಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಸಹ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಈ ಮೂಲಕ ಡಿ.ಕೆ ಶಿವಕುಮಾರ್ ಅವರಿಗೆ ಬಹು ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಜೈಲು ಸೇರಿದ್ದ ಡಿ.ಕೆ ಶಿವಕುಮಾರ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಪ್ರಭಾವಿ ನಾಯಕರೆಂದೇ ಗುರುತಿಸಿಕೊಂಡಿರುವ ಡಿ.ಕೆ ಶಿವಕುಮಾರ್ ಅವರು ಜೈಲುವಾಸವನ್ನೂ ಅನುಭವಿಸಿದ್ದರು. ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು 2019ರ ಸೆಪ್ಟೆಂಬರ್‌ನಲ್ಲಿ ಅವರನ್ನು ಬಂಧಿಸಿದ್ದರು. ಒಂದು ತಿಂಗಳ ನಂತರ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈ ಪ್ರಕರಣವು ಬಿಜೆಪಿಯ ಸೇಡಿನ ಭಾಗ ಹಾಗೂ ರಾಜಕೀಯವಾಗಿ ಕುಗ್ಗಿಸುವ ಷಡ್ಯಂತ್ರ ಎಂದು ಡಿ.ಕೆ ಶಿವಕುಮಾರ್ ಅವರು ಆರೋಪಿಸಿದ್ದರು.
ಶಿವಕುಮಾರ್ ಮತ್ತು ಅವರ ಸಹಾಯಕರಿಗೆ ಸಂಬಂಧಿಸಿದ ಜಾಗಗಳ ಮೇಲೆ ಸಹ ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಈ ದಾಳಿಗಳಲ್ಲಿ ಅಂದಾಜು 300 ಕೋಟಿ ನಗದು ಸಿಕ್ಕಿದ್ದಾಗಿ ಅಧಿಕಾರಿಗಳು ತಿಳಿಸಿದ್ದರು.ಇನ್ನು ಡಿ.ಕೆ ಶಿವಕುಮಾರ್ ಅವರು 2019ರಲ್ಲಿ ಇಡಿ ನೀಡಿದ ಸಮನ್ಸ್ ವಜಾಗೊಳಿಸುವಂತೆ ಕೋರಿ ಕರ್ನಾಟಕದ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಅಲ್ಲಿ ಅವರಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದು ಗ್ರೇಟ್ ರಿಲೀಫ್ ಎಂದ ಡಿ.ಕೆ ಶಿವಕುಮಾರ್
ಈ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಇದು ನನಗೆ ಗ್ರೇಟ್ ರಿಲೀಫ್ ಎಂದು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡುತ್ತಿತ್ತು. ಈಗ ನನಗೆ ಗ್ರೇಟ್ ರಿಲೀಫ್ ಸಿಕ್ಕಿದೆ. ನಾನು ತೊಂದರೆಗೀಡಾಗಿದ್ದೇನೆ. ಇಂದು ನನ್ನ ಜೀವನದಲ್ಲಿ ದೊಡ್ಡ ದಿನ ಎಂದಿದ್ದಾರೆ.