ಅನುದಾನ ತಾರತಮ್ಯ ಆರೋಪ ಸುಳ್ಳು: ಸಚಿವ ಡಾ.ಜಿ.ಪರಮೇಶ್ವರ್
x
ಡಾ ಜಿ ಪರಮೇಶ್ವರ್‌

ಅನುದಾನ ತಾರತಮ್ಯ ಆರೋಪ ಸುಳ್ಳು: ಸಚಿವ ಡಾ.ಜಿ.ಪರಮೇಶ್ವರ್

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಸುಳ್ಳು. ಅವರ ಕ್ಷೇತ್ರಗಳಿಗೂ 10ರಿಂದ 15 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.


ಶಾಸಕರಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ, ಡಿ.2 ರಂದು ಸಿಎಂ ಸಿದ್ದರಾಮಯ್ಯ ತುಮಕೂರು ಭೇಟಿಯ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿರುವ ಬಿಜೆಪಿ ಹೋರಾಟದ ಎಚ್ಚರಿಕೆ ಬೆನ್ನಲ್ಲೇ ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ತಲಾ 10 ರಿಂದ 15 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರ ನಿರ್ಧರಿಸಿದೆ.

ತುಮಕೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಸುಳ್ಳು. ಅವರ ಕ್ಷೇತ್ರಗಳಿಗೂ 10ರಿಂದ 15 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಸಮರ್ಪಕ ಅನುದಾನವನ್ನೇ ನೀಡಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಯಾವುದೇ ತಾರತಮ್ಯ ಮಾಡದೇ ಅನುದಾನ ನೀಡಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ ಅವರ ಶಾಸಕ ಕ್ಷೇತ್ರಕ್ಕೆ 50 ಕೋಟಿ ರೂ. ಅನುದಾನ ನೀಡಿದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 10 ಕೋಟಿ ರೂ. ಕೊಡುತ್ತಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡುತ್ತಿದೆ. ಈ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಜಿಲ್ಲೆಗೆ ಸಿಎಂ ಭೇಟಿ ನೀಡುವ ಸಮಯದಲ್ಲಿ ಕಪ್ಪು ಬಾವುಟ ತೋರಿಸಬಾರದು ಎಂದು ಮನವಿ ಮಾಡಿದ್ದಾರೆ.

ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ನ.24 ರಂದು ಪತ್ರಿಕಾಗೋಷ್ಠಿ ನಡೆಸಿ ಅನುದಾನ ತಾರತಮ್ಯದ ಕುರಿತು ಆರೋಪ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ತುಮಕೂರು ಭೇಟಿಯ ವೇಳೆ ಕಪ್ಪುಬಾವುಟ ಪ್ರದರ್ಶಿಸುವ ಎಚ್ಚರಿಕೆ ನೀಡಿದ್ದರು.

ಆ ಹಿನ್ನೆಲೆಯಲ್ಲಿ ಹಿರಿಯ ಸಚಿವ ಡಾ ಪರಮೇಶ್ವರ್‌, ಅಂತಹ ಆರೋಪಗಳು ಸುಳ್ಳು ಎಲ್ಲ ಶಾಸಕರ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ ಹೊರೆ ತಗ್ಗಿಸಲು ದಾಬಸ್‌ಪೇಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಕನಕನಪುರ, ಬೆಂಗಳೂರು ದಕ್ಷಿಣ ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಚರ್ಚೆ ನಡೆಯುತ್ತಿದೆ. ಇನ್ನೂ ಜಾಗ ಅಂತಿಮವಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ.

150 ಕೋಟಿ ವೆಚ್ಚದಲ್ಲಿ ಕ್ರಿಕೆಟ್ ಕ್ರೀಡಾಂಗಣ

ತುಮಕೂರು ತಾಲ್ಲೂಕಿನ ಸೋರೆಕುಂಟೆ ಗ್ರಾಮದ ಬಳಿ ₹150 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲಾಗುವುದು. ಸಿಎಂ ಸಿದ್ದರಾಮಯ್ಯ ಡಿ.2ರಂದು ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ಈಗಾಗಲೇ 41 ಎಕರೆ ನೀಡಲಾಗಿದೆ. ಇದಕ್ಕಾಗಿ ಅಸೋಸಿಯೇಷನ್‌ನವರು ₹6 ಕೋಟಿ ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ ಈಗಾಗಲೇ ಒಂದಷ್ಟು ಹಣ ಪಾವತಿ ಮಾಡಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ಕ್ರಿಕೆಟ್ ಕ್ರೀಡಾಂಗಣ ತಲೆ ಎತ್ತಲಿದೆ ಎಂದು ತಿಳಿಸಿದ್ದಾರೆ.

Read More
Next Story