ಗುತ್ತಿಗೆದಾರ ಆತ್ಮಹತ್ಯೆ | ಪ್ರಿಯಾಂಕ್‌ ಖರ್ಗೆ ಪರ ಸಿಎಂ ಬ್ಯಾಟಿಂಗ್‌ ಹಿಂದಿನ ಕಾರಣಗಳೇನು?
x

ಗುತ್ತಿಗೆದಾರ ಆತ್ಮಹತ್ಯೆ | ಪ್ರಿಯಾಂಕ್‌ ಖರ್ಗೆ ಪರ ಸಿಎಂ ಬ್ಯಾಟಿಂಗ್‌ ಹಿಂದಿನ ಕಾರಣಗಳೇನು?

ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ, ಪ್ರತಿಪಕ್ಷಗಳ ಬೇಡಿಕೆ ತಿರಸ್ಕರಿಸಿರುವ ಸರ್ಕಾರ, ಪ್ರಿಯಾಂಕ್ ಖರ್ಗೆ ಪರ ಗಟ್ಟಿಯಾಗಿ ನಿಂತಿದೆ.


ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವು ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡಿದ್ದ ಗುತ್ತಿಗೆದಾರರ ಆತ್ಮಹತ್ಯೆ ಹಾಗೂ ಶೇ 40ಕಮಿಷನ್ ಆರೋಪ ಈಗ ಕೈ ಪಾಳಯಕ್ಕೆ ತಿರುಗುಬಾಣವಾಗಿದೆ. ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ, ಪ್ರತಿಪಕ್ಷಗಳ ಬೇಡಿಕೆ ತಿರಸ್ಕರಿಸಿರುವ ಸರ್ಕಾರ, ಪ್ರಿಯಾಂಕ್ ಖರ್ಗೆ ಪರ ಗಟ್ಟಿಯಾಗಿ ನಿಂತಿದೆ.

ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಆದರೆ, ಸಿಐಡಿ ತನಿಖೆಗೆ ಅಪಸ್ವರ ಎತ್ತಿರುವ ಬಿಜೆಪಿ ನಾಯಕರು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ರಾಜ್ಯವ್ಯಾಪಿ ಹೋರಾಟಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ಇಡೀ ಸರ್ಕಾರವೇ ನಿಂತಿರುವ ಹಿನ್ನೆಲೆಯಲ್ಲಿ ಅವರ ಪ್ರಭಾವ, ವರ್ಚಸ್ಸು ಕುರಿತ ಚರ್ಚೆಗಳು ಆರಂಭವಾಗಿವೆ. ಇನ್ನು ತನಿಖೆಗೂ ಮುನ್ನವೇ ಪ್ರಿಯಾಂಕ್ ಗೆ ಕ್ಲಿನ್‌ಚಿಟ್‌ ನೀಡುವಂತಹ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗಳು ಕೂಡ ಅಂತಹ ಚರ್ಚೆಗಳಿಗೆ ಇಂಬು ನೀಡಿವೆ.

ಪ್ರಬಲ ದಲಿತ ಸಚಿವ ಪ್ರಿಯಾಂಕ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ದಲಿತ ಸಮುದಾಯದ ಪ್ರಬಲ ಸಚಿವ. ಅಂಬೇಡ್ಕರ್ ವಾದಿ. ಸಂವಿಧಾನ, ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಪಕ್ಷದ ವಿಚಾರಗಳಿಗೆ ಧಕ್ಕೆ ಬಂದಾಗ ಮೊದಲು ದನಿಯೆತ್ತುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿಪಕ್ಷಗಳ ಆರೋಪಗಳಿಗೆ ತೀಕ್ಷ್ಣ ಹಾಗೂ ಆಕ್ರಮಣಕಾರಿ ತಿರುಗೇಟು ನೀಡುವ ಮೂಲಕ ಛಾಪು ಮೂಡಿಸಿದ್ದಾರೆ. ಇದೇ ಸ್ವಭಾವ ಹಾಗೂ ವರ್ಚಸ್ಸು ಪ್ರಿಯಾಂಕ್ ಖರ್ಗೆ ಬೆಂಬಲಿಸಲು ಕಾರಣ ಎನ್ನಲಾಗಿದೆ.

ವಿವಾದಕ್ಕೆ ಸಿಲುಕಿದ್ದ ಪ್ರಿಯಾಂಕ್ ಖರ್ಗೆ

ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಡೆಫೆನ್ಸ್ ಪಾರ್ಕ್‌ನಲ್ಲಿ 5 ಎಕರೆ ವಿಸ್ತೀರ್ಣದ ಸಿಎ ನಿವೇಶನ ಪಡೆದಿದ್ದ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಕ್ಕೆ ಸಿಲುಕಿದ್ದರು. ತಮ್ಮ ಸೋದರ ರಾಹುಲ್ ಖರ್ಗೆ ಹೆಸರಿನಲ್ಲಿ ನಿವೇಶನ ಪಡೆಯಲು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಗಂಭೀರ ಆರೋಪ ಎದುರಾಗಿತ್ತು. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ಸಮಯದಲ್ಲೇ ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ವಿವಾದ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪ್ರಿಯಾಂಕ್ ಖರ್ಗೆ ತಕ್ಷಣವೇ ಸಿಎ ನಿವೇಶನವನ್ನು ಕೆಐಎಡಿಬಿಗೆ ವಾಪಸ್ ನೀಡಿ, ಟೀಕೆಗಳಿಂದ ಪಾರಾಗಿದ್ದರು.

ಸರ್ಕಾರದ ನಡೆಗೆ ಪ್ರತಿಪಕ್ಷಗಳ ಟೀಕೆ

ಪ್ರಿಯಾಂಕ್ ಖರ್ಗೆ ಆಪ್ತರ ಕಿರುಕುಳ ತನ್ನ ಸಾವಿಗೆ ಕಾರಣವೆಂದು ಡೆತ್‌ನೋಟ್‌ ಬರೆದಿಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಆದರೆ, ಪ್ರಕರಣದ ತನಿಖೆಗೂ ಮುನ್ನ ಪ್ರಿಯಾಂಕ್ ಖರ್ಗೆ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂಬ ಸಿಎಂ ಹೇಳಿಕೆ ಹಾಗೂ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಪಕ್ಷದ ಧ್ವನಿ, ಯಾವುದೇ ಕಾರಣಕ್ಕೂ ರಾಜೀನಾಮೆ ಪಡೆಯಲ್ಲ ಎಂಬ ಡಿಕೆ ಶಿವಕುಮಾರ್‌ ಹೇಳಿಕೆಗಳು ಪ್ರತಿಪಕ್ಷಗಳ ಕಣ್ಣು ಕೆಂಪಾಗಿಸಿವೆ.

ಈ ಹಿಂದೆ ಬಿಜೆಪಿ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಆರೋಪ ಕೇಳಿ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಇದೇ ರೀತಿ ಪ್ರಿಯಾಂಕ್ ಖರ್ಗೆ ಕೂಡ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂಬುದು ಪ್ರತಿಪಕ್ಷಗಳ ಒತ್ತಾಯವಾಗಿದೆ.

ಸಿಎಂ ಸಿದ್ದರಾಮಯ್ಯ ತಂತ್ರವೇನು?

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಪಡೆದರೆ ದಲಿತ ಸಮುದಾಯದ ವಿರೋಧ ಎದುರಿಸಬೇಕಾಗುತ್ತದೆ. ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದು, ಕ್ರಮಕ್ಕೆ ಮುಂದಾದರೆ ಸಿಎಂ ಗಾದಿ ಅಲುಗಾಡುವ ಭೀತಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಹಾಗಾಗಿ ಪ್ರಿಯಾಂಕ್‌ ಖರ್ಗೆ ಪರ ಇಡೀ ಸರ್ಕಾರವೇ ಇದೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಈ ಹಿಂದೆ ದಲಿತ ಸಿಎಂ ಪಟ್ಟ ತಪ್ಪಿಸುವ ಸಲುವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ ಜಿ ಪರಮೇಶ್ವರ್ ಅವರನ್ನೇ ಸೋಲಿಸಿದರೆಂಬ ಆರೋಪಗಳು ಸಿಎಂ ಅವರನ್ನು ಕಾಡುತ್ತಿದ್ದವು. ಈಗ ಪ್ರಿಯಾಂಕ್‌ ವಿರುದ್ಧ ಕ್ರಮ ಕೈಗೊಂಡರೆ ಅದು ನಿಜವಾಗುತ್ತದೆ ಎಂಬ ಭೀತಿಯೂ ಸಮರ್ಥನೆಗೆ ಕಾರಣ ಎನ್ನಲಾಗಿದೆ.

ಇಡೀ ಪ್ರಕರಣ ರಾಜಕೀಯ ಪ್ರೇರಿತ

ಯಾವುದೇ ಸರ್ಕಾರದಲ್ಲಿ ಸಚಿವರ ವಿರುದ್ಧ ಆರೋಪ ಕೇಳಿಬಂದರೆ ರಾಜೀನಾಮೆಗೆ ಒತ್ತಾಯಿಸುವುದು ಸಾಮಾನ್ಯ. ರಾಜೀನಾಮೆ ಪಡೆದರೆ ಅದು ವಿರೋಧ ಪಕ್ಷಕ್ಕೆ ಜಯ ತಂದುಕೊಟ್ಟಂತೆ ಆಗುತ್ತದೆ. ಜೊತೆಗೆ ಆಡಳಿತ ಪಕ್ಷವನ್ನು ದುರ್ಬಲಗೊಳಿಸಿದಂತೆ ಆಗುತ್ತಿದೆ. ಬಿಜೆಪಿ ಅವಧಿಯಲ್ಲಿ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಪಡೆದಾಗಲೂ ಇದೇ ಪರಿಸ್ಥಿತಿ ಇತ್ತು. ಇನ್ನು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ವಿಚಾರ ನೋಡುವುದಾದರೆ ಇಡೀ ಪ್ರಕರಣ ರಾಜಕೀಯ ಪ್ರೇರಿತ, ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ನೇರ ಭಾಗಿಯಾಗಿಲ್ಲ. ಆಪ್ತನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆದಿಲ್ಲ, ಸಾಕ್ಷ್ಯ ದೊರೆತಿಲ್ಲ. ಹೀಗಿರುವಾಗ ಸಚಿವರ ರಾಜೀನಾಮೆಗೆ ಒತ್ತಾಯಿಸುವುದು ಸಮಂಜಸವಲ್ಲ ಎಂದು ರಾಜಕೀಯ ವಿಶ್ಲೇಷಕ ಎಂ. ನಾಗರಾಜು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಸಚಿನ್ ಬರೆದಿರುವ ಡೆತ್‌ನೋಟನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಬೇಕು. ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹಸ್ತಕ್ಷೇಪದ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಬೇಕು. ಇದಾವುದೂ ಇಲ್ಲದೇ ಆರೋಪಿಯು ಸಚಿವರಿಗೆ ಆಪ್ತನಾಗಿದ್ದ ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ಕೇಳುತ್ತಿರುವುದು ರಾಜಕೀಯ ಪ್ರೇರಿತ. ಜನಸಾಮಾನ್ಯರಿಗೆ ಕಾಣುವ ಹೊರಗಿನ ರಾಜಕಾರಣವೇ ಬೇರೆ, ಒಳಗೆ ನಡೆಯುವ ರಾಜಕಾರಣವೇ ಬೇರೆ. ಇದೊಂದು ರೀತಿಯ ಕೇರಂ ಆಟವಿದ್ದಂತೆ. ರಾಜಕೀಯ ಒಳನೋಟ ಸುಲಭವಾಗಿ ಅರ್ಥವಾಗುವುದಿಲ್ಲ ಎಂದರು.

ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಹೇಳಿಕೆ ದೇಶದಲ್ಲೇ ದೊಡ್ಡ ವಿವಾದವಾಗಬೇಕಿತ್ತು. ಆದರೆ, ಪ್ರತಿಪಕ್ಷಗಳು ಇದನ್ನು ಮರೆ ಮಾಚಲು ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ, ವಿವಾದವನ್ನೇ ಮರೆ ಮಾಚುತ್ತಿವೆ ಎಂದು ಅಭಿಪ್ರಾಯಪಟ್ಟರು.

ವರ್ಚಸ್ಸು ಕುಂದಿಸುವ ಯತ್ನ

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಯಾವುದೇ ನೇರ ಆರೋಪಗಳು ಇಲ್ಲದಿದ್ದರೂ ರಾಜೀನಾಮೆ ಒತ್ತಾಯಿಸುತ್ತಿರುವುದು ಅರ್ಥಹೀನ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಪ್ರಭಾವ ಕುಂದಿಸುವ ಸಲುವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಿಯಾಂಕ್ ಖರ್ಗೆ ಪ್ರವರ್ಧಮಾನಕ್ಕೆ ಬರುತ್ತಿರುವ ದಲಿತ ರಾಜಕಾರಣಿ, ಎಲ್ಲ ವಿಷಯಗಳ ಕುರಿತು ನಿಖರವಾಗಿ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಪ್ರತಿಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ವೃಥಾ ರಾಜೀನಾಮೆ ಕೇಳುತ್ತಿದ್ದಾರೆ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಪ್ರಿಯಾಂಕ್ ಖರ್ಗೆ ರಾಜಕೀಯ ಹಿನ್ನೆಲೆ

ಮಲ್ಲಿಕಾರ್ಜುನ ಖರ್ಗೆ ಪುತ್ರರಾದ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ 3 ಬಾರಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1998 ರಲ್ಲಿ ಎನ್ಎಸ್‌ಯುಐ (ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ) ಕಾರ್ಯಕರ್ತರಾಗಿ ರಾಜಕೀಯ ಪ್ರವೇಶಿಸಿದರು. 2005 ರಿಂದ 2007 ರವರೆಗೆ ಕೆಪಿಸಿಸಿ ಕಾರ್ಯದರ್ಶಿಯಾಗಿ, 2011ರವರೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

2009 ರಲ್ಲಿ ವಿಧಾನಸಭಾ ಉಪಚುನಾವಣೆಗೆ ಚಿತ್ತಾಪುರದಿಂದ ಸ್ಪರ್ಧಿಸಿ ಸೋತರು. 2011ರಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2013 ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಜೊತೆಗೆ ಮಂತ್ರಿ ಭಾಗ್ಯವೂ ದಕ್ಕಿತು. ಸಿದ್ದರಾಮಯ್ಯ ಸರ್ಕಾರದಲ್ಲಿ 38ವರ್ಷಕ್ಕೆ ಅತ್ಯಂತ ಕಿರಿಯ ಸಚಿವರಾಗಿ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ನಿಭಾಯಿಸಿದರು. 2018 ರಲ್ಲಿ ಮತ್ತೊಮ್ಮೆ ಚಿತ್ತಾಪುರದಿಂದ ಗೆದ್ದು, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾದರು. 2023 ರಲ್ಲಿ ಮೂರನೇ ಬಾರಿಗೆ ಸ್ಪರ್ಧಿಸಿ ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Read More
Next Story