
ಒಳ ಮೀಸಲಾತಿ ಜಾರಿಗೆ ಸರ್ಕಾರದ ಮೀನಮೇಷ: ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ
ಯಡಿಯೂರಪ್ಪ ಪ್ರಕರಣದಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೆ, ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಯಾವುದೇ ತಡೆ ಇಲ್ಲ. ಈ ವಿಚಾರದಲ್ಲಿ ಸರ್ಟಿಫಿಕೇಟ್ ನಮಗೆ ಬೇಕಿಲ್ಲ ಎಂದು ಆರ್.ಅಶೋಕ್ ಕಿಡಿಕಾರಿದರು.
ಒಳ ಮೀಸಲಾತಿ ಜಾರಿಗೆ ಪ್ರಧಾನಿಯವರ ಸಹಮತವಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ನೇತತ್ವದ ಸರ್ಕಾರ ಒಳ ಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿದೆ ಎಂದು ವಿರೋಧ ಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಕುರಿತಂತೆ ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಶಂಖ ಊದುತ್ತಿದ್ದಾರೆ ವಿನಃ ಬೇರೆನೂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಅಧಿಕಾರವನ್ನು ರಾಜ್ಯಗಳಿಗೆ ನೀಡಿರುವುದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಹಿಂದೆ ನಮ್ಮ ಸರ್ಕಾರ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ತಂದಿತ್ತು. ಪ್ರಧಾನಿ ನರೇಂದ್ರ ಮೋದಿಯವರು ತೆಲಂಗಾಣಕ್ಕೆ ಭೇಟಿ ನೀಡಿದಾಗ ಒಳ ಮೀಸಲಾತಿಗೆ ಅನುಮೋದನೆ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಈಗ ಎಸ್‌ಐಟಿ ವಿಚಾರವೇ ಎಲ್ಲೆಲ್ಲೂ ಕೇಳಿಬರುತ್ತಿದೆ. ಒಳ ಮೀಸಲಾತಿ ಹಾಗೂ ಜಾತಿಗಣತಿ ವಿಚಾರದಲ್ಲೂ ಎಸ್‌ಐಟಿ ರಚಿಸಿದರೆ ಅಚ್ಚರಿ ಇಲ್ಲ. ರಾಜ್ಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅನ್ವಯಿಸುತ್ತಿದೆ. ಎಸ್‌ಐಟಿ ಮೇಲೆ ಅನುಮಾನ ಹೆಚ್ಚಾಗಿ ಅದನ್ನೇ ತನಿಖೆ ನಡೆಸಬೇಕಾದ ಸ್ಥಿತಿ ಎದುರಾಗಿದೆ. ಎಸ್‌ಐಟಿಗಳ ನಿಜಬಣ್ಣ ಬಯಲು ಮಾಡಲು ಡಬಲ್ ಎಸ್‌ಐಟಿ ವಿಭಾಗ ಸ್ಥಾಪಿಸಬೇಕಾದ ಅನಿವಾರ್ಯವಿದೆ ಎಂದು ಲೇವಡಿ ಮಾಡಿದರು.
ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್‌ನವರು ಹಣ ಲೂಟಿ ಹೊಡೆದಿದ್ದಾರೆ. ಇದರ ವಿರುದ್ಧ ಬಿಜೆಪಿ ಸಮರ್ಥ ಹೋರಾಟ ನಡೆಸಿದೆ. ಯಡಿಯೂರಪ್ಪ ಪ್ರಕರಣದಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೆ, ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಯಾವುದೇ ತಡೆ ಇಲ್ಲ. ದೇಶದಲ್ಲಿ ನ್ಯಾಯಾಂಗವೇ ಉನ್ನತವಾದದು. ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ನಮಗೆ ಬೇಕಿಲ್ಲ ಎಂದು ಕಿಡಿಕಾರಿದರು.
ಗೋಮುಖ ವ್ಯಾಘ್ರ ಸರ್ಕಾರ ಎಂದು ಕಿಡಿ
ದೇಶದ್ರೋಹ ಕಾಯ್ದೆಯಡಿ ದಾಖಲಿಸಿದ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯುತ್ತಿರುವುದು ಅಕ್ಷಮ್ಯ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಬಂದು ಮತಾಂತರ ಮಾಡಿದವರ ಪ್ರಕರಣವನ್ನು ವಾಪಸ್ ಪಡೆದುಬಿಡಿ. ರಾಜ್ಯಕ್ಕೆ ನಿಮ್ಮ ನಿಜ ಬಣ್ಣ ತಿಳಿಯಲಿದೆ. ವ್ಯಾಘ್ರ ಮುಖ ನಿಮ್ಮದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತಾಂತರ, ಗಲಭೆ, ಬಾಂಬ್ ಸ್ಫೋಟಕ್ಕೂ ಅವಕಾಶ ಕೊಡಿ. ನಿಮ್ಮ ವಿಮುಖ ಸಂಸ್ಕೃತಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಹಾಳಾಗಿದೆ ಎಂದು ಹೇಳಿದರು. ಕಾಂಗ್ರೆಸ್ ದುರಾಡಳಿತದ ವಿರುದ್ಧ ಹೋರಾಟ ಮುಂದುವರಿಸಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದರು.
ಕೇಂದ್ರದಿಂದ ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಸರ್ಕಾರದ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಇಲ್ಲಿವರೆಗೆ ಕೊಟ್ಟಿದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ. ಮುಡಾ, ವಾಲ್ಮಿಕಿ, ಇತರೆ ಇಲಾಖೆಗಳ ಅನುದಾನವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.
ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿರುವ ಜಿಎಸ್‌ಟಿ ಪಾಲು ಎಷ್ಟು, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ಕೊಟ್ಟಿರುವ ಹಣವೆಷ್ಟು ಎಂಬುದನ್ನು ಈಗಾಗಲೇ ಅಂಕಿ ಅಂಶಗಳ ಸಮೇತ ಬಹಿರಂಗಪಡಿಸಿದ್ದೇವೆ ಎಂದು ಹೇಳಿದರು.