Dengue Outbreak | ‌ಡೆಂಗ್ಯೂ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲ: ಶೋಭಾ ಕರಂದ್ಲಾಜೆ
x

Dengue Outbreak | ‌ಡೆಂಗ್ಯೂ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲ: ಶೋಭಾ ಕರಂದ್ಲಾಜೆ


ʻರಾಜ್ಯದಲ್ಲಿ ಡೆಂಗ್ಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರ್ಕಾರ ಡೆಂಗ್ಯೂ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆʼ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆ ಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರ ನಡುವೆ ಡೆಂಗ್ಯೂ ಹಾಗೂ ಝೀಕಾ ಹೆಚ್ಚಾಗುತ್ತಿದೆ. ಸರ್ಕಾರ ಡೆಂಗ್ಯೂ ನಿಯಂತ್ರಣದ ಬಗ್ಗೆ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆʼʼ ಎಂದು ವಾಗ್ದಾಳಿ ನಡೆಸಿದರು.

ʻʻಮುಂದಿನ ಅಧಿವೇಶನದಲ್ಲಿ ಡೆಂಗ್ಯೂ ಹಾಗೂ ಝೀಕಾ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಆಸ್ಪತ್ರೆಗಳಲ್ಲಿ ಬಹಳಷ್ಟು ಜನರು ದಾಖಲಾಗುತ್ತಿದ್ದು, ಸರಿಯಾಗಿ ಔಷಧಿ ಸಿಗುತ್ತಿಲ್ಲ. ಔಷಧಿಯ ದರ ಹೆಚ್ಚಿಸಿದ್ದಾರೆ. ಡೆಂಗ್ಯೂ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಯಾರೂ ಪಾಲಿಸುತ್ತಿಲ್ಲʼʼ ಎಂದು ಅವರು ಆರೋಪ ಮಾಡಿದರು.

ಜೋರಾದ ಡೆಂಗ್ಯೂ ಅಬ್ಬರ

ಈ ನಡುವೆ ರಾಜ್ಯದಲ್ಲಿ ಡೆಂಗ್ಯೂ ಸೋಕಿನ ಅಬ್ಬರ ಜೋರಾಗಿದೆ. ಶನಿವಾರ ಒಂದೇ ದಿನ 175 ಜನರಲ್ಲಿ ಡೆಂಗ್ಯೂ ಸೋಂಕು ಪತ್ತೆಯಾಗಿದೆ. ಈವರೆಗೆ 7000 ಮಂದಿಗೆ ಡೆಂಗ್ಯೂ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಒಂದೇ ದಿನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 115 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಈಗಾಗಲೇ ಸೋಂಕಿತ 352 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 127 ಸೋಂಕಿತರು ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 175 ಜನರಲ್ಲಿ ಡೆಂಗ್ಯೂ ವರದಿಯಾಗಿದ್ದು, ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ ಓರ್ವ ಮಗು, ಒಂದರಿಂದ 18 ವರ್ಷದೊಳಗಿನ 53 ಮಂದಿ ಹಾಗೂ 18 ವರ್ಷ ಮೇಲ್ಪಟ್ಟ 121 ಜನರು ಸೇರಿದ್ದಾರೆ.

Read More
Next Story