ಬಿಜೆಪಿಯವರ ಮಾತು ಕೇಳಿ 15 ಮಸೂದೆ ವಾಪಾಸ್ ಮಾಡಿದ ರಾಜ್ಯಪಾಲರು: ಡಿ.ಕೆ. ಶಿವಕುಮಾರ್ ಆರೋಪ
x

ಬಿಜೆಪಿಯವರ ಮಾತು ಕೇಳಿ 15 ಮಸೂದೆ ವಾಪಾಸ್ ಮಾಡಿದ ರಾಜ್ಯಪಾಲರು: ಡಿ.ಕೆ. ಶಿವಕುಮಾರ್ ಆರೋಪ


ʻʻಬಿಜೆಪಿಯ ನಾಯಕರ ಮಾತು ಕೇಳಿ 15 ಮಸೂದೆಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ʻʻಬಿಜೆಪಿಯವರ ಮಾತನ್ನೇ ಕೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಏಕಿರಬೇಕು. ಏನಾದರು ಸ್ಪಷ್ಟನೆ ಕೇಳಿದರೆ ನೀಡೋಣ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ರಾಜ್ಯಪಾಲರಿಗೆ ದೇವರು ಒಳ್ಳೆ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆʼʼ ಎಂದರು.

ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕೇಳಿದಾಗ ʻʻಸರ್ಕಾರ ಬೀಳಿಸಲು ಯಾವ ಪ್ರಯತ್ನ ಮಾಡಿದರೂ ಏನು ಆಗುವುದಿಲ್ಲ. ನಾವೂ ಸಹ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆʼʼ ಎಂದು ಖಾರವಾಗಿ ಉತ್ತರಿಸಿದರು.

ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿದ್ದನ್ನು ಈ ಹಿಂದೆ ವಿರೋಧಿಸಿದ್ದ ಕಾಂಗ್ರೆಸ್ ಅದೇ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿದೆ ಎಂದು ಕೇಳಿದಾಗ ʻʻಉದ್ಯೋಗ ಸೃಷ್ಟಿಯಾಗಬೇಕು. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು. ಕರ್ನಾಟಕದಲ್ಲಿ ಇರುವ ಕೈಗಾರಿಕಾ ಕಾನೂನಿಗೆ ತಕ್ಕಂತೆ ಅವರಿಗೆ ಭೂಮಿ ನೀಡಿದ್ದೇವೆ. ನಾವು ಅವರಿಗೆ ಹೊಸದಾಗಿ ಭೂಮಿ ಕೊಟ್ಟಿಲ್ಲ. ಈ ಹಿಂದೆ ಕೊಟ್ಟಿದ್ದನ್ನೇ ಪರಿಶೀಲಿಸಿ ಸೇಲ್ ಡೀಡ್ ಮಾಡಿಕೊಟ್ಟಿದ್ದೇವೆ. ಲಕ್ಷಾಂತರ ಜನರ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಟ್ಟಂತೆ ಇಲ್ಲಿಯೂ ಅದನ್ನೇ ಮಾಡಲಾಗಿದೆ. ಬಿಜೆಪಿಯವರು ಮಾಡಿದ್ದನ್ನು ನಾವು ಸರಿ ಮಾಡಿಕೊಟ್ಟಿದ್ದೇವೆʼʼ ಎಂದರು.

ಪರಮೇಶ್ವರ್ ಅವರು ಸಹ ದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದಾಗ ʻʻನಮ್ಮವರನ್ನು ಬೇಡ ಎನ್ನಲು ಆಗುತ್ತದೆಯೇ? ಅವರದೇ ಇಲಾಖೆ ಕೆಲಸ, ಪಕ್ಷದ ಕೆಲಸ ಇರುತ್ತದೆ. ನಮಗೂ ಸಹ ಎರಡೂ ಕೆಲಸಗಳಿದ್ದು, ಎಲ್ಲರು ಒಟ್ಟಿಗೆ ಹೋಗುತ್ತಿದ್ದೇವೆʼʼ ಎಂದು ಹೇಳಿದರು.

Read More
Next Story