ರಾಜ್ಯಪಾಲರು ಕೇಂದ್ರದ ಕೈಗೊಂಬೆ, ರಾಜಭವನ ಬಿಜೆಪಿ ಕಚೇರಿ: ಎಂ‌ ಬಿ ಪಾಟೀಲ
x

ರಾಜ್ಯಪಾಲರು ಕೇಂದ್ರದ ಕೈಗೊಂಬೆ, ರಾಜಭವನ ಬಿಜೆಪಿ ಕಚೇರಿ: ಎಂ‌ ಬಿ ಪಾಟೀಲ


ʻʻರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದು, ರಾಜಭವನವು ಬಿಜೆಪಿ ಕಚೇರಿಯಾಗಿದೆ. ಮುಡಾ ಹಗರಣದ ನೆವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಷಡ್ಯಂತ್ರದ ಒಂದು ಭಾಗವಾಗಿದೆ. ಇದಕ್ಕೆ ಬಿಜೆಪಿಯವರು ಪಶ್ಚಾತ್ತಾಪ ಪಡಬೇಕಾಗುತ್ತದೆʼʼ ಎಂದು ಬೃಹತ್ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಕಿಡಿಕಾರಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ʻʻಟಿ ಜೆ ಅಬ್ರಹಾಂ ಅವರು ಸಿಎಂ ವಿರುದ್ಧ ದೂರು ಕೊಟ್ಟಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿಗಳು ರಾಜಭವನಕ್ಕೆ ಸಮರ್ಪಕ ಮಾಹಿತಿ ಕೊಟ್ಟಿದ್ದರು. ಆದರೂ ರಾಜ್ಯಪಾಲರು ತರಾತುರಿಯಲ್ಲಿ ಸಿದ್ದರಾಮಯ್ಯನವರಿಗೆ ನೋಟೀಸ್ ಕೊಟ್ಟರು. ಆಗಲೇ ಅವರ ಮೇಲೆ ಅನುಮಾನ ಬಂದಿತ್ತು. ಈಗಿನ ಅವರ ನಡೆ ಅನಪೇಕ್ಷಣೀಯವಾಗಿದೆ. ಇದನ್ನು ರಾಜ್ಯದ ಜನತೆ ಸಹಿಸಿಕೊಳ್ಳುವುದಿಲ್ಲʼʼ ಎಂದು ಹೇಳಿದರು.

ʻʻಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮುಂತಾದವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ‌ ಕೋರಿ ಎಂಟು-ಹತ್ತು ತಿಂಗಳಿನಿಂದಲೂ ರಾಜ್ಯಪಾಲರ ಮುಂದೆ ಕೋರಿಕೆಗಳಿವೆ. ಅವುಗಳನ್ನು ಉದಾಸೀನ ಮಾಡಿರುವ ಅವರು, ಯಾವ ಹುರುಳೂ ಇಲ್ಲದ ಮುಡಾ ಹಗರಣದ ಬಗ್ಗೆ ವಿಪರೀತ ಆಸಕ್ತಿ ತಾಳಿದ್ದಾರೆʼʼ ಎಂದು ಆರೋಪಿಸಿದರು.

ʻʻಕೇಂದ್ರದ ಬಿಜೆಪಿ ಸರಕಾರವು ದೆಹಲಿ, ತಮಿಳುನಾಡು ಮುಂತಾದ ರಾಜ್ಯ ಸರ್ಕಾರಗಳ ವಿರುದ್ಧ ನಡೆಸುತ್ತಿರುವಂತಹ ಕೆಟ್ಟ ರಾಜಕಾರಣವನ್ನು ಈಗ ಕರ್ನಾಟಕದಲ್ಲೂ ಶುರು ಮಾಡಿದೆ. ಇದು ಭಾರೀ ಬಹುಮತದಿಂದ ಆರಿಸಿ ಬಂದಿರುವ ರಾಜ್ಯ ಸರ್ಕಾರದ ವಿರುದ್ಧ ತೋರಿಸುತ್ತಿರುವ ಅಸಹನೆಯಾಗಿದೆʼʼ ಎಂದು ಅವರು ಟೀಕಿಸಿದರು.

ʻʻಮುಡಾ ಹಗರಣದಲ್ಲಿ ತಪ್ಪು ಮಾಡಿರುವುದು ಆ ಸಂಸ್ಥೆ, ಸಿದ್ದರಾಮಯ್ಯನವರ ಕುಟುಂಬಕ್ಕೆ ಬದಲಿ ನಿವೇಶನಗಳನ್ನು ಕೊಟ್ಟಿದ್ದು ಬಿಜೆಪಿ ಸರಕಾರ, ಆಗ ಮುಡಾ ಸಭೆಯಲ್ಲಿ ಬಿಜೆಪಿ ನಾಯಕರೇ ಇದ್ದರು. ವಸ್ತುಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯನವರನ್ನು ಬಲಿಪಶು ಮಾಡಲು ಸಂಚು ನಡೆಯುತ್ತಿರುವುದು ಖಂಡನೀಯʼʼ ಎಂದು ಸಚಿವ ಎಂ‌ ಬಿ ಪಾಟೀಲ ಪ್ರತಿಪಾದಿಸಿದರು.

Read More
Next Story