ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಗೆ ಸಹಿ ಹಾಕದೇ ವಾಪಸ್ ಕಳಿಸಿದ ರಾಜ್ಯಪಾಲ ಗೆಹ್ಲೋಟ್
x

ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಗೆ ಸಹಿ ಹಾಕದೇ ವಾಪಸ್ ಕಳಿಸಿದ ರಾಜ್ಯಪಾಲ ಗೆಹ್ಲೋಟ್


ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದ್ದ, ಹೆಚ್ಚು ಆದಾಯವಿರುವ ದೇಗುಲಗಳಿಗೆ ತೆರಿಗೆ ವಿಧಿಸುವ ಹಿಂದೂ ಧಾರ್ಮಿಕ ದತ್ತಿ ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹಿ ಹಾಕದೇ ವಾಪಸ್ ಕಳುಹಿಸಿದ್ದಾರೆ.

ಮುಜರಾಯಿ ಇಲಾಖೆಯ ವ್ಯಾಪ್ತಿಯ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿ ಮಸೂದೆ ಇದಾಗಿದೆ. ಇದನ್ನು ಎರಡೆರಡು ಬಾರಿ ವಿಧಾನಸಭೆಯಲ್ಲಿ ಮಂಡನೆ ಮಾಡಿ ಕಾಂಗ್ರೆಸ್ ಸರ್ಕಾರ ಅನುಮೋದನೆ ಪಡೆದಿತ್ತು.

ಮಸೂದೆಯನ್ನು ವಾಪಸ್ ಕಳುಹಿಸಿರುವ ರಾಜ್ಯಪಾಲರು ಕೆಲವೊಂದು ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ತಿದ್ದುಪಡಿ ಮಸೂದೆಯನ್ನು ಸಚಿವ ರಾಮಲಿಂಗಾ ರೆಡ್ಡಿ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ನಲ್ಲಿ ಮಂಡಿಸಿದ್ದರು. ಆದರೆ, ಅದಕ್ಕೆ ಸೋಲಾಗಿ ಸರ್ಕಾರ ತೀವ್ರ ಮುಖಭಂಗವನ್ನು ಎದುರಿಸಿತ್ತು. ಹಾಗಾಗಿ, ವಿಧಾನಸಭೆಯಲ್ಲಿ ಎರಡೆರಡು ಬಾರಿ ಮಂಡಿಸಿ, ಅನುಮೋದನೆ ಪಡೆದುಕೊಂಡು, ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು.

ಇದೀಗ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಸ್ಪಷ್ಟೀಕರಣ ಕೇಳಿ ಕಡತವನ್ನು ಸರ್ಕಾರಕ್ಕೆ ವಾಪಸ್ ಕಳಿಸಿದ್ದು, "ಹೈಕೋರ್ಟ್ನ ಧಾರವಾಡ ಪೀಠವು ರಿಟ್ ಅರ್ಜಿ 3440/2005ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ –1997 ಮತ್ತು ಅದಕ್ಕೆ ತಂದಿರುವ ತಿದ್ದುಪಡಿಗಳನ್ನು ಈಗಾಗಲೇ ವಜಾ ಮಾಡಿದೆ. ಹೈಕೋರ್ಟ್ ನೀಡಿದ್ದ ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಅಂತಿಮ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ತಿದ್ದುಪಡಿ ಮಾಡಬಹುದೇ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆʼʼ ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯಲ್ಲಿ ಏನಿದೆ?

ವಾರ್ಷಿಕವಾಗಿ 10 ಲಕ್ಷ ರೂಪಾಯಿಯಿಂದ ಒಂದು ಕೋಟಿ ರೂಪಾಯಿಯವರೆಗೆ ಆದಾಯವಿರುವ ದೇವಾಲಯಗಳಿಗೆ ಶೇಕಡ 5ರಷ್ಟು ಮತ್ತು 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಇರುವ ದೇಗುಲಗಳಿಗೆ ಶೇ. 10ರಷ್ಟು ತೆರಿಗೆ ವಿಧಿಸುವ ಧಾರ್ಮಿಕ ದತ್ತಿ, ಧರ್ಮಾದಾಯ ತಿದ್ದುಪಡಿ ಮಸೂದೆ ಇದಾಗಿದೆ.

ಇದಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ದೇಗುಲಗಳ ಆದಾಯಕ್ಕೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಣ್ಣು ಹಾಕಿದೆ ಎಂದು ಬಿಜೆಪಿ ಕಿಡಿಕಾರಿತ್ತು.

ಈ ಎಲ್ಲ ಬೆಳವಣಿಗೆಗಳ ನಂತರ ಸ್ಪಷ್ಟನೆ ನೀಡಿದ್ದ ಸರ್ಕಾರ, ಹಿಂದೂ ದೇಗುಲಗಳ ಆದಾಯವನ್ನು ಅನ್ಯ ಕಾರ್ಯಗಳಿಗೆ ಬಳಸುವುದಿಲ್ಲ. ಸಂಗ್ರಹವಾಗುವ ಹಣವನ್ನು ಸಿ ಶ್ರೇಣಿಯ ದೇವಾಲಯಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ. ಈ ನಿಧಿಯನ್ನು ಬಳಸಿಕೊಂಡು 34 ಸಾವಿರ ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ವಿಮಾ ಸೌಲಭ್ಯ ಒದಗಿಸುವ ಪ್ರಸ್ತಾವ ಇಲಾಖೆಯ ಮುಂದಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಮರ್ಥನೆ ನೀಡಿದ್ದರು.

Read More
Next Story