Government Vs Mysore Royal Family: ಚಾಮರಾಜನಗರದ 5,000 ಎಕರೆ ಭೂಮಿ ವಿಚಾರಕ್ಕೆ  ಪ್ರಭುತ್ವ ಸಮರ; ಬಡವಾಗುವನೇ ರೈತ?
x

Government Vs Mysore Royal Family: ಚಾಮರಾಜನಗರದ 5,000 ಎಕರೆ ಭೂಮಿ ವಿಚಾರಕ್ಕೆ ಪ್ರಭುತ್ವ ಸಮರ; ಬಡವಾಗುವನೇ ರೈತ?

ರೆಸಾರ್ಟ್, ಸಫಾರಿ, ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ ಉದ್ಯಮಗಳ ಬೆಳವಣಿಗೆ ಮಾಡಲೂ ಇದು ಯೋಗ್ಯ ಸ್ಥಳ. ಮುಂದಿನ ದಿನಗಳಲ್ಲಿ ಚಾ.ನಗರ ಅಭಿವೃದ್ಧಿ ವೇಗ ಹೆಚ್ಚಿದರೆ ರಿಯಲ್ ಎಸ್ಟೇಟ್ ಬೆಳವಣಿಗೆಗೂ ಇದು ಹೇಳಿ ಮಾಡಿಸಿದ ಜಾಗ. ಇಷ್ಟೆಲ್ಲಾ ಕಾರಣಗಳಿಂದ ಸರ್ಕಾರ ಮತ್ತು ರಾಜ ವಂಶಸ್ಥರ ನಡುವೆ ಜಟಾಪಟಿ ಆರಂಭವಾಗಿದೆ.


ರಾಜಾಳ್ವಿಕೆ ಕೊನೆಗೊಂಡು ಪ್ರಜೆಗಳ ಕೈಗೆ ಅಧಿಕಾರ ಬಂದರೂ ರಾಜವಶಂಸ್ಥರ ಮತ್ತು ಸರ್ಕಾರದ ನಡುವಿನ ತಕರಾರುಗಳಿಗೆ ಪೂರ್ಣ ವಿರಾಮ ಬಿದ್ದಿಲ್ಲ. ರಾಜಪ್ರಭುತ್ವದಲ್ಲಿ ಬಡವರು, ರೈತರು, ನಿರ್ಗತಿಕರಿಗೆ ನೀಡಿದ್ದ ಆಸ್ತಿಗಳು ಮತ್ತೆ ಬೇಕೆಂದು ಈಗ ಮೈಸೂರು ರಾಜವಂಶಸ್ಥರು ಹೇಳುತ್ತಿರುವುದು ರೈತರ ಪಾಲಿಗೆ ಆತಂಕ ತಂದಿದೆ.

ಇದರಿಂದಾಗಿ ರಾಜ ಮನೆತನ ಹಾಗೂ ರಾಜ್ಯ ಸರ್ಕಾರಗಳ ನಡುವಿನ ರಾಜಕೀಯ ಮೇಲಾಟ ರೈತರನ್ನು ಬಡವಾಗಿಸುವುದೇ ಎಂಬ ಭೀತಿ ಎದುರಾಗಿದೆ. ಗುರುವಾರ ಅಂದರೆ ಏ. 24 ರಂದು ಚಾಮರಾಜನಗರದಲ್ಲೇ ಸಚಿವ ಸಂಪುಟ ಸಭೆ ನಡೆಯಲಿದೆ. ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಚಾಮರಾಜನಗರ 5,000ಕ್ಕೂ ಹೆಚ್ಚು ಎಕರೆ ಭೂಮಿ ತಮ್ಮದು ಎಂದು ಹಕ್ಕು ಸ್ಥಾಪಿಸಲು ಹೊರಟಿರುವುದು ಸಂಪುಟಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

ರಾಜವಂಶಸ್ಥರು ಮತ್ತು ರಾಜ್ಯ ಸರ್ಕಾರದ ನಡುವೆ ಜ.26, 1950ರಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಮಾತುಕತೆ ಏರ್ಪಟ್ಟು, ರಾಜಪರಿವಾರಕ್ಕೆ ಯಾವ್ಯಾವ ಆಸ್ತಿಗಳು ಸೇರಬೇಕು ಎನ್ನುವ ಬಗ್ಗೆ ಒಪ್ಪಂದ ಆಗುತ್ತದೆ. ಅದೇ ಒಪ್ಪಂದದ ಆಧಾರದಲ್ಲಿ ಇದೀಗ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಚಾಮರಾಜನಗರ ತಾಲ್ಲೂಕಿನ ಅಟ್ಟುಗುಳಿಪುರ, ಸಿದ್ದಯ್ಯನಪುರ, ಉಮ್ಮತ್ತೂರು, ಹರದನಹಳ್ಳಿ, ಕರಡಿಹಳ್ಳ, ಬೂದಿತಿಟ್ಟು, ಬಸವಾಪುರ, ಕನ್ನಿಕೆರೆ ಗ್ರಾಮಗಳ 5,000ಕ್ಕೂ ಹೆಚ್ಚು ಎಕರೆ ಭೂಮಿ ನಮ್ಮದು ಎಂದು ಹಕ್ಕು ಸ್ಥಾಪಿಸಲು ಹೊರಟಿದ್ದಾರೆ.

ಹಿನ್ನೆಲೆಯೇನು?

ದೇಶಕ್ಕೆ ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವದ ಸ್ಥಾಪನೆಗೆ ಅಡಿಪಾಯ ಸಿದ್ಧಗೊಳ್ಳುತ್ತಿದ್ದರೂ ಮೈಸೂರು ಸಂಸ್ಥಾನದ ಅಂದಿನ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು ಅಖಂಡ ಭಾರತದ ಒಕ್ಕೂಟಕ್ಕೆ ಸೇರಲು ಹಿಂದೇಟು ಹಾಕುತ್ತಾರೆ. ಈ ವೇಳೆ ಐತಿಹಾಸಿಕ ಮೈಸೂರು ಚಲೋ ಚಳುವಳಿ ನಡೆದು ಅಕ್ಟೋಬರ್ 24ರಂದು ಮೈಸೂರು ಸಂಸ್ಥಾನ ಭಾರತದ ಒಕ್ಕೂಟದ ಭಾಗವಾಗುತ್ತದೆ. ಆ ಸಂದರ್ಭದಲ್ಲಿ ರಾಜವಂಶಸ್ಥರು ಮತ್ತು ರಾಜ್ಯ ಸರ್ಕಾರದ ನಡುವೆ ಆಸ್ತಿಗಳಿಗೆ ಸಂಬಂಧಿಸಿದಂತೆ ಮಾತುಕತೆ ಏರ್ಪಟ್ಟು, ರಾಜಪರಿವಾರಕ್ಕೆ ಸಿಗಬೇಕಾದ ಆಸ್ತಿಗಳ ಬಗ್ಗೆ ಒಪ್ಪಂದವಾಗಿತ್ತು.

ಇದಾದ ನಂತರ ರಾಜ ಪರಿವಾರ ಮತ್ತು ಸರ್ಕಾರಗಳ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹತ್ತಾರು ವ್ಯಾಜ್ಯಗಳು ಕೋರ್ಟ್ ಅಂಗಳದಲ್ಲಿ ಇವೆ. ಬೆಂಗಳೂರಿನ ಅರಮನೆ ಮೈದಾನದ 15.7 ಎಕರೆ ಭೂಮಿಯ ಜಟಾಪಟಿಯು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ. ಮೈಸೂರಿನ ಕುರುಬಾರಹಳ್ಳಿಯ ಸರ್ವೆ ನಂಬರ್ 4, ಆಲನಹಳ್ಳಿಯ ಸರ್ವೆ ನಂಬರ್ 41 ಸೇರಿದಂತೆ ಲಲಿತಮಹಲ್ ಹೆಲಿಪ್ಯಾಡ್, ಚಾಮುಂಡಿ ಬೆಟ್ಟದ ತಪ್ಪಲಿನ ಭೂಮಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಡೆಯರ್ ಕುಟುಂಬಕ್ಕೆ ಸುಪ್ರಿಂ ಕೋರ್ಟ್ ನಲ್ಲಿ ಗೆಲುವಾಗಿದೆ. ಈ ಹಂತದಲ್ಲೇ ಚಾಮರಾಜನಗರದಲ್ಲಿ 5,000 ಎಕರೆಗಿಂತ ಹೆಚ್ಚು ತಮ್ಮ ಖಾಸಗಿ ಸ್ವತ್ತು ಇದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಖಾತೆ, ಕಂದಾಯ ಮಾಡಬಾರದು ಎಂಬುದಾಗಿ ಎರಡನೇ ಬಾರಿಗೆ ಮಾ.20 2025ರಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2014ರಲ್ಲಿಯೂ ಪ್ರಮೋದಾದೇವಿ ಒಡೆಯರ್ ಅವರು ಅಂದಿನ ಜಿಲ್ಲಾಧಿಕಾರಿ ಸಾವಿತ್ರಿ ಅವರಿಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಹೋರಾಟಕ್ಕೆ ಹೊಸ ಆಯಾಮ

ಅತಿ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಚಾಮರಾಜನಗರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಂದಾಯ ಗ್ರಾಮಗಳ ರಚನೆ, ರೈತರಿಗೆ ಹಕ್ಕುಪತ್ರ, ದಾಖಲೆಗಳನ್ನು ಒದಗಿಸಲು ತಾಲ್ಲೂಕು, ಜಿಲ್ಲಾಡಳಿತ ಮುಂದಾಗಿವೆ. ಇದಕ್ಕೆ ಪೂರಕವಾಗಿ ಸಾಕಷ್ಟು ಸರ್ವೆ ಕಾರ್ಯ ನಡೆದು, ದಾಖಲೆಗಳ ಪರಿಶೀಲನೆಯೂ ಆಗಿದೆ. ಈ ಹಂತದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಜಿಲ್ಲಾಧಿಕಾರಿ, ಚಾ.ನಗರ ತಹಸೀಲ್ದಾರ್, ಭೂ ದಾಖಲೆಗಳ ಉಪನಿರ್ದೇಶಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು 1951ರ ಒಪ್ಪಂದದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಸ್ವತ್ತನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಹಾಗೂ ಇನ್ನಿತರ ವಹಿವಾಟುಗಳನ್ನು ನಡೆಸಬಾರದು ಎಂದು ತಕರಾರು ಅರ್ಜಿ ಕೊಟ್ಟಿದ್ದಾರೆ.

ಜಿಲ್ಲಾಡಳಿತ ಹೇಳುವುದೇನು..?

ರೈತರಿಗೆ ಅನುಭೋಗದಲ್ಲಿ ಇರುವ ಜಮೀನನ್ನು ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ದರ್ಖಾಸ್ತು, ಪೋಡಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಹಂತದಲ್ಲಿ ಪ್ರಮೋದಾದೇವಿ ಒಡೆಯರ್ ಅವರಿಂದ ಬಂದಿರುವ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶಿಲ್ಪನಾಗ್ ಪ್ರತಿಕ್ರಿಯೆ ನೀಡಿ ರೈತರ ಭೂಮಿಯನ್ನು ದರ್ಖಾಸ್ತು, ಪೋಡಿ ಮಾಡಿ ಆರ್ ಟಿಸಿ ವಿತರಣೆ ಮಾಡುವುದು ನಮ್ಮ ಕರ್ತವ್ಯ. ಇದನ್ನು ಮಾಡಲು ನಾವು ಮುಂದಾಗಿದ್ದೇವೆ. ಈ ಹಂತದಲ್ಲಿ ಪ್ರಮೋದಾದೇವಿ ಒಡೆಯರ್ ಅವರು ಸುಮಾರು 5000 ಎಕರೆ ಭೂಮಿಗೆ ಸಂಬಂಧಿಸಿದಂತೆ ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಿಲ್ಲ. ಅರ್ಜಿಯನ್ನು ಎಸಿ, ತಹಸೀಲ್ದಾರ್ ಅವರಿಗೆ ಪರಿಶೀಲನೆಗೆ ಕಳಿಸಿದ್ದೇನೆ, ಅವರಿಂದ ಉತ್ತರ ಬಂದ ಬಳಿಕ ಸರ್ಕಾರದ ನಿರ್ದೇಶನ ಪಡೆದು ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದಿದ್ದಾರೆ.

ದಾನ ಕೊಟ್ಟ ಭೂಮಿಯ ಇತಿಹಾಸ

ಅಮೃತ ಕಾವಲ್ ಎಂದು ಹೆಸರಾಗಿದ್ದ ಭೂಮಿಯನ್ನು 1796 ರ ಅವಧಿಯಲ್ಲೇ ಮಹಾರಾಜರು ರೈತರಿಗೆ ದಾನವಾಗಿ ಕೊಟ್ಟರು ಎಂದು ಇತಿಹಾಸ ಹೇಳುತ್ತದೆ. ಬಿ.ರಾಚಯ್ಯ ಅವರು ಅರಣ್ಯ ಸಚಿವರಾಗಿದ್ದ ವೇಳೆ ಇಲ್ಲಿನ ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡಿ ಭೂ ಹಕ್ಕನ್ನು ನೀಡುತ್ತಾರೆ. ಸುವರ್ಣಾವತಿ ಡ್ಯಾಂನ ಅಚ್ಚುಕಟ್ಟು ಪ್ರದೇಶವಾದ ಇಲ್ಲಿ ತಮಗೆ ಸಿಕ್ಕ ಭೂಮಿಯನ್ನು ಹದ ಮಾಡಿ, ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಇದೀಗ ರಾಜಮನೆತನದವರ ತಕರಾರಿನಿಂದ ಸುಮಾರು ಒಂದೂವರೆ ಸಾವಿರ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಅಲ್ಲದೇ ಅರಮನೆ ಮುಂದೆಯೇ ಪ್ರತಿಭಟನೆ ಮಾಡುತ್ತೇವೆ, ನ್ಯಾಯ ಸಿಗದೇ ಇದ್ದರೆ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ವನ್ಯ ಸಂಪತ್ತು ಸುತ್ತುವರೆದಿರುವ ಸುಂದರ ತಾಣ

ಬೆಂಗಳೂರಿನಿಂದ ತಮಿಳುನಾಡಿನ ಕೊಯಂಬತ್ತೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 948ರ ಮಗ್ಗುಲಲ್ಲೇ ಹಬ್ಬಿರುವ ವಿಶಾಲ ಪ್ರದೇಶವಿದು. ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ಕೇವಲ ಒಂಭತ್ತು ಕಿಲೋಮೀಟರ್ ಅಂತರ. ಮತ್ತೊಂದು ಕಡೆ ಬಿಳಿಗಿರಿ ರಂಗನಾಥ ಅರಣ್ಯ ವಲಯ, ಸತ್ಯಮಂಗಲ ಕಾಡಿನ ಪ್ರವೇಶಕ್ಕೆ ಹೆಬ್ಬಾಗಿಲು, ಪ್ರಕೃತಿ ಸೌಂದರ್ಯದ ಒಡಲಿನಂತೆ ಇರುವ ಈ ಪ್ರದೇಶ ಈ ಹಿಂದೆ ಮಹಾರಾಜರ ನೆಚ್ಚಿನ ಬೇಟೆಯ ತಾಣವೂ ಆಗಿತ್ತು. ಅದಕ್ಕಾಗಿಯೇ ಇಲ್ಲಿ ವಿಶ್ರಾಂತಿ ಧಾಮಗಳನ್ನು ನಿರ್ಮಾಣ ಮಾಡಿ ಆಗಾಗ ಬೇಟೆಗೆ ಖಾಯಂ ಆಗಿ ಬರುತ್ತಲೇ ಇದ್ದರು. ಐತಿಹಾಸಿಕ ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಚಾ.ನಗರದಲ್ಲಿ ಇರುವ ಚಾಮರಾಜೇಶ್ವರ ದೇವಸ್ಥಾನಗಳೆಲ್ಲಾ ಇಲ್ಲಿವೆ.

ಸುವರ್ಣಾವತಿ, ಚಕ್ಕಿಹೊಳೆ ಅಣೆಕಟ್ಟುಗಳ ಬುಡದಲ್ಲಿಯೇ ಬರುವ ಇಲ್ಲಿ ಭತ್ತ, ತೆಂಗು, ಎಣ್ಣೆಕಾಳು, ದ್ವಿದಳ ಧಾನ್ಯಗಳ ಜೊತೆಗೆ ರಾಗಿ, ಜೋಳ ತರಕಾರಿ ಬೆಳೆಗಳು ಪ್ರಮುಖ ಸ್ಥಾನ ಪಡೆದಿವೆ. ರೆಸಾರ್ಟ್, ಸಫಾರಿ, ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ ಉದ್ಯಮಗಳ ಬೆಳವಣಿಗೆ ಮಾಡಲೂ ಇದು ಯೋಗ್ಯ ಸ್ಥಳ. ಮುಂದಿನ ದಿನಗಳಲ್ಲಿ ಚಾ.ನಗರ ಅಭಿವೃದ್ಧಿ ವೇಗ ಹೆಚ್ಚಿದರೆ ರಿಯಲ್ ಎಸ್ಟೇಟ್ ಬೆಳವಣಿಗೆಗೂ ಇದು ಹೇಳಿ ಮಾಡಿಸಿದ ಜಾಗ. ಇಷ್ಟೆಲ್ಲಾ ಕಾರಣಗಳಿಂದ ಮಹತ್ವ ಪಡೆದುಕೊಂಡಿರುವ ಈ ಪ್ರದೇಶ ಸರ್ಕಾರ ಮತ್ತು ರಾಜ ವಂಶಸ್ಥರ ನಡುವೆ ಜಟಾಪಟಿ ಹುಟ್ಟುಹಾಕಿದ್ದರೂ, ಸರ್ಕಾರದ ಕಂದಾಯ ಗ್ರಾಮ ರಚನೆಯ ಪ್ರಯತ್ನಕ್ಕೆ ಯಶ ಸಿಗುವ ವಿಶ್ವಾಸ ಸದ್ಯಕ್ಕಿದೆ.

ಅಟ್ಟುಗುಳಿಪುರದ 4,445 ಎಕರೆ, ಹರದನಹಳ್ಳಿಯ 150 ಎಕರೆ, ಬೂದಿತಿಟ್ಟಿನ 63 ಎಕರೆ, ಕರಡಿಹಳ್ಳದ 75 ಎಕರೆ, ಕನ್ನಿಕೆರೆಯ 190 ಎಕರೆ, ಉಮ್ಮತ್ತೂರಿನ 199 ಎಕರೆ, ಬಸವಾಪುರದ 13 ಎಕರೆಗೆ ಸಂಬಂಧಿಸಿದಂತೆ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು, ನೂರಾರು ವರ್ಷಗಳಿಂದ ರೈತರು ವ್ಯವಸಾಯ ಮಾಡಿಕೊಂಡು ಬಂದಿರುವ ಭೂಮಿಯ ಹಕ್ಕಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆ ಆಗದು. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೇರೆ ಪ್ರದೇಶಗಳಲ್ಲಿಯೂ ಅವರ ಆಸ್ತಿ ಇದ್ದು, ಅವುಗಳ ಸ್ವಾಧೀನಕ್ಕೆ ಪ್ರಯತ್ನಿಸುತ್ತಿರಬಹುದು. ರೈತರಿಗೆ ಸರ್ಕಾರವೂ ಅನುಕೂಲ ಮಾಡಿಕೊಡಲಿದೆ. ಈ ಬೆಳವಣಿಗೆಯಿಂದ ಪ್ರಾರಂಭದಲ್ಲಿ ರೈತರು ಗೊಂದಲಕ್ಕೆ ಒಳಗಾಗಿದ್ದು ನಿಜ. ನಂತರ ಆಗಿರುವ ಬೆಳವಣಿಗೆಗಳು ರೈತರಿಗೆ ಅನುಕೂಲ ಮಾಡಿಕೊಡಲಿವೆ ಎಂದಿದ್ದಾರೆ.

ಪ್ರಮೋದಾ ದೇವಿ, ಜಿಲ್ಲಾಧಿಕಾರಿ ಏನಂತಾರೆ?

ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು, "ನಮ್ಮ ಅರಮನೆಯ ಕಚೇರಿ ಯಾವಾಗಲೂ ತೆರೆದಿರುತ್ತದೆ. ರೈತರು ನಮ್ಮನ್ನೇ ನೇರವಾಗಿ ಬಂದು ಭೇಟಿಯಾಗಿ ಮಾತನಾಡಬಹುದು. ಕೋರ್ಟ್ ತೀರ್ಪು ಏನೇ ಬಂದರೂ ರೈತರಿಗೆ ನಾವು ತೊಂದರೆ ಮಾಡುವುದಿಲ್ಲ. ಅವರು ಯಾವುದೇ ರೀತಿಯ ಆತಂಕಪಡುವುದು ಬೇಡ," ಎಂದು ಹೇಳುತ್ತಾರೆ.

"ಪ್ರಮೋದಾ ದೇವಿ ಅವರು ಸಲ್ಲಿಸಿರುವ ತಕರಾರು ಅರ್ಜಿಯನ್ನು ಪರಿಶೀಲನೆಗೆ ಕಳುಹಿಸಿದ್ದೇನೆ. ಅವರು ಅರ್ಜಿಗೆ ಪೂರಕವಾಗಿ ಸರಿಯಾದ ದಾಖಲೆಗಳನ್ನು ನೀಡಿಲ್ಲ. ಈ ಸಂಬಂಧ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತೇವೆ. ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ," ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿಕೆ ನೀಡಿದ್ದಾರೆ.

Read More
Next Story