ಲಾಭದ ಆಸೆ ತೋರಿಸಿ ವಂಚಿಸುವ ಹಣಕಾಸು ಸಂಸ್ಥೆಯ ಮಾಹಿತಿ ನೀಡಿ...5 ಲಕ್ಷ ರೂ. ಬಹುಮಾನ!
x

ಲಾಭದ ಆಸೆ ತೋರಿಸಿ ವಂಚಿಸುವ ಹಣಕಾಸು ಸಂಸ್ಥೆಯ ಮಾಹಿತಿ ನೀಡಿ...5 ಲಕ್ಷ ರೂ. ಬಹುಮಾನ!

ಸಾರ್ವಜನಿಕರಿಗೆ ಮೋಸ ಮಾಡುವ ಹಣಕಾಸು ಸಂಸ್ಥೆಗಳ ಬಗ್ಗೆ ಸರ್ಕಾರಕ್ಕೆ ಸೂಕ್ತ ದಾಖಲೆಗಳ ಸಮೇತ ಮಾಹಿತಿ ನೀಡುವ ವ್ಯಕ್ತಿಗಳಿಗೆ ಬಹುಮಾನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಹಲವು ಕಾನೂನುಬಾಹಿರವಾಗಿ ಜನರಿಗೆ ಹೆಚ್ಚಿನ ಬಡ್ಡಿ, ಲಾಭದ ಭರವಸೆ ನೀಡಿ ಠೇವಣಿಗಳನ್ನು ಸಂಗ್ರಹಿಸುವ ಹಣಕಾಸು ಸಂಸ್ಥೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿದೆ. ಸಾರ್ವಜನಿಕರಿಗೆ ಮೋಸ ಮಾಡುವಂತಹ ಸಂಸ್ಥೆಗಳ ಬಗ್ಗೆ ಸರ್ಕಾರಕ್ಕೆ ಸೂಕ್ತ ದಾಖಲೆಗಳ ಸಮೇತ ಮಾಹಿತಿ ನೀಡುವ ವ್ಯಕ್ತಿಗಳಿಗೆ ಬಹುಮಾನ ನೀಡಲು ಕ್ರಮ ಕೈಗೊಂಡಿದೆ. ಮೊದಲ ಬಾರಿಗೆ ರಾಜ್ಯ ಸರ್ಕಾರವು ಇಂತಹದೊಂದು ಕ್ರಮ ಕೈಗೊಂಡಿದ್ದು, ಈ ಸಂಬಂಧ ಆದೇಶ ಸಹ ಹೊರಡಿಸಿದೆ.

ಮೋಸ ಮಾಡುವ ಸಂಸ್ಥೆಗಳು ಸಹಕಾರಿ ಸಂಸ್ಥೆಗಳ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರ್‌ಬಿಐ ಅನುಮತಿ ಇಲ್ಲದೆ ಹಣ ವಸೂಲಿ ಮಾಡುತ್ತಿವೆ. ವಿವಿಧ ರೀತಿಯಲ್ಲಿ ಹಣಕಾಸು ಸಂಸ್ಥೆಗಳು ಇದ್ದು, ಹಲವು ಬಗೆಯಲ್ಲಿ ಮೋಸ ಮಾಡಲಾಗುತ್ತದೆ. ಜನತೆಗೆ ಅತಿಯಾಗಿ ಬಡ್ಡಿ ನೀಡುವ ಅಮಿಷೆ, ದೇಶ-ವಿದೇಶ ಪ್ರವಾಸದ ಅಮಿಷ ಸೇರಿದಂತೆ ಹಲವು ರೀತಿಯಲ್ಲಿ ಅಮಿಷೆವೊಡ್ಡಿ ವಂಚನೆ ಮಾಡಲಾಗುತ್ತದೆ. ಹಣಕಾಸು ಸಂಸ್ಥೆಗಳ ಮಾತಿಗೆ ಮರಳಾಗಿ ಜನರು ಲಕ್ಷಾಂತರ ರೂ. ಕಳೆದುಕೊಂಡ ನಿದರ್ಶನಗಳು ರಾಜ್ಯದಲ್ಲಿವೆ.

ಹಲವು ಅಮಿಷವೊಡ್ಡಿ ಸಾರ್ವಜನಿಕರಿಂದ ವಸೂಲಿ ಮಾಡುವ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ವಂಚನೆ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವು ಮೋಸ ಮಾಡುವಂತಹ ಹಣಕಾಸು ಸಂಸ್ಥೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದರೆ ಬಹುಮಾನ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ದಾಖಲೆ ಸಮೇತ ಮಾಹಿತಿ ನೀಡಿದರೆ 2 ರಿಂದ 5 ಲಕ್ಷ ರೂ. ವರೆಗೆ ಬಹುಮಾನ ನೀಡಲಾಗುತ್ತದೆ ಎಂದು ಸರ್ಕಾರವು ತಿಳಿಸಿದೆ.

ಮಾಹಿತಿ ಆಧಾರದ ಮೇಲೆ ಮೋಸದ ಸಂಸ್ಥೆಯಿಂದ ವಸೂಲಾದ ಹಣದಲ್ಲಿ ಐದು ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ. ಇಂತಹದೊಂದು ನಿರ್ಣಯ ಕೈಗೊಂಡಿರುವುದು ಸರ್ಕಾರ ರಾಜ್ಯದಲ್ಲಿ ಇದೇ ಮೊದಲು. ಈ ಮೂಲಕ ಮೋಸ ಮಾಡುವ ಸಂಸ್ಥೆಗಳಿಗೆ ಮೂಗುದಾರ ಹಾಕಲು ಮುಂದಡಿ ಇಟ್ಟಿದೆ. ಸಾರ್ವಜನಿಕರಿಗೆ ಮೋಸ ಮಾಡುವಂತಹ ಸಂಸ್ಥೆಗಳ ಸ್ವತ್ತುಗಳನ್ನು ಜಪ್ತಿ ಮಾಡುವುದಕ್ಕೆ ಕಾರಣವಾಗುವ ಮೂಲ ಮಾಹಿತಿಯನ್ನು ಒದಗಿಸುವ ಬಾತ್ಮೀದಾರರು ಮತ್ತು ಮಾಹಿತಿದಾರರಿಗೆ ಪ್ರೋತ್ಸಾಹಧನ ಯೋಜನೆ ಜಾರಿಗೆ ತರುವ ಮೂಲಕ ವಂಚನೆ ಮಾಡುವ ಹಣಕಾಸು ಸಂಸ್ಥೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಮೊದಲ ಮಾಹಿತಿಯಾಗಿದ್ದರೆ ಮಾತ್ರ ಬಹುಮಾನ

ತಪ್ಪಿತಸ್ಥ ಹಣಕಾಸು ಸಂಸ್ಥೆಯ ನಿರ್ದೇಶಕರು, ಪಾಲುದಾರರು, ಪ್ರವರ್ತಕರು, ವ್ಯವಸ್ಥಾಪಕರು ಅಥವಾ ಸದಸ್ಯರು ಮತ್ತು ಪದತ್ಯಾಗ ಮಾಡಿದ ಅಥವಾ ಸಂಸ್ಥೆಗೆ ರಾಜೀನಾಮೆ ನೀಡಿದ ಮಾಜಿ ನಿರ್ದೇಶಕರು, ಪಾಲುದಾರರು ಅಥವಾ ಪ್ರವರ್ತಕರು ಅಥವಾ ಹಣಕಾಸು ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆಂದು ಶಂಕಿಸಲಾದ ಯಾವುದೇ ವ್ಯಕ್ತಿಯ ಕಾರ್ಯಚಟುವಟಿಕೆಗಳು ಮತ್ತು ಸ್ವತ್ತುಗಳ ಬಗ್ಗೆ ದಾಖಲೆಗಳ ಸಮೇತ ಮಾಹಿತಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಿದೆ.

ಈ ಮಾಹಿತಿಯ ಪ್ರಧಾನ ಮೂಲವು ಮಾಹಿತಿದಾರನೇ ಆಗಿರಬೇಕು. ಇದಕ್ಕೂ ಮೊದಲು ಈ ಮಾಹಿತಿಯು ಸರ್ಕಾರದಿಂದ ನೇಮಕಗೊಂಡ ತನಿಖಾ ಅಧಿಕಾರಿಗೆ ಯಾವುದೇ ಮೂಲದಿಂದ ತಿಳಿದಿರಬಾರದು. ಅಂತಹ ತಪ್ಪಿತಸ್ಥರ ಸ್ವತ್ತುಗಳನ್ನು ಜಪ್ತಿ ಮತ್ತು ವಸೂಲಿಗಾಗಿ ತಪ್ಪಿತಸ್ಥ ಹಣಕಾಸು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿಶ್ವಾಸಾರ್ಹವಾದ ಮತ್ತು ಅವುಗಳಿಗೆ ನೇರವಾಗಿ ಸಂಬಂಧಪಡುವ ಮಾಹಿತಿಯಾಗಿರಬೇಕು. ಮೊದಲ ಮಾಹಿತಿಯಾಗಿದ್ದರೆ ಮಾತ್ರ ಬಹುಮಾನ ನೀಡಲಾಗುವುದು ಎಂಬುದು ಆದೇಶದಲ್ಲಿ ಉಲ್ಲೇಖವಾಗಿದೆ.



ಐದು ಲಕ್ಷ ರೂ.ವರೆಗೆ ಬಹುಮಾನದ ಮೊತ್ತ!

ಮೋಸ ಮಾಡುವ ಹಣಕಾಸು ಸಂಸ್ಥೆಗಳ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗೆ ಬಹುಮಾನ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಳಿಕ 2 ಲಕ್ಷ ರೂ.ಗಳನ್ನು ಬಹುಮಾನ ಮೊತ್ತ ನೀಡಲಾಗುವುದು. ಮಾಹಿತಿದಾರನಿಗೆ ಬಹುಮಾನವನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಮಧ್ಯಂತರ ಮತ್ತು ಅಂತಿಮ ಹಂತಗಳಲ್ಲಿ ಮಂಜೂರು ಮಾಡಲು ಸರ್ಕಾರ ಸೂಚಿಸಿದೆ. ಇದು ಮಾಹಿತಿಯನ್ನು ಯಾವ ಸ್ವತ್ತಿನ ಕುರಿತು ಒದಗಿಸಲಾಗಿದೆಯೋ ಆ ಸ್ವತ್ತಿನ ಮೀಸಲು ಬೆಲೆಯ ಶೇ.2ರಷ್ಟು ಮೀರದ ಅಥವಾ 2 ಲಕ್ಷ ರೂ., ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಬಹುಮಾನವಾಗಿ ನೀಡಲಾಗುವುದು. ಅಲ್ಲದೇ, ಅಂತಿಮ ಬಹುಮಾನ ಮೊತ್ತವು, ವಸೂಲು ಮಾಡಿದ ಮತ್ತು ಮಾಹಿತಿದಾರ ಒದಗಿಸಿದ ಮೂಲ ಮಾಹಿತಿಯಿಂದ ವಸೂಲಾದ ಬಾಕಿ ಮೊತ್ತದ ಶೇ.5ನ್ನು ಮೀರದ ಅಥವಾ 5 ಲಕ್ಷ ರೂ.ಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಬಹುಮಾನವಾಗಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಲಾಗಿದೆ.

ಸರ್ಕಾರ ಪರಿಗಣಿಸುವ ಅಂಶಗಳು

ಮಾಹಿತಿದಾರನು ನೀಡಿದ ಮಾಹಿತಿಯ ನಿಖರತೆ, ಮಾಹಿತಿಯ ನೈಜತೆ ಹಾಗೂ ಮಾಹಿತಿದಾರನು ಹಣಕಾಸು ಸಂಸ್ಥೆಯೊಂದಿಗೆ ಶಾಮೀಲಾಗಿದ್ದಾನೆಯೇ ಎಂಬುದು ಬಗೆಗಿನ ಮಾಹಿತಿಯ ಪ್ರಾಮಾಣಿಕತೆ ಅಂಶಗಳನ್ನು ಸರ್ಕಾರ ಪರಿಗಣಿಸಲಿದೆ. ಇನ್ನು ಮಾಹಿತಿದಾರನು ಸರ್ಕಾರಕ್ಕೆ ಮಾಹಿತಿ ನೀಡುವಾಗ ಕೆಲವು ಅಂಶಗಳನ್ನು ಪಾಲಿಸಲು ಸೂಚಿಸಿದೆ. ಅವರು ಸಲ್ಲಿಸುವ ದಾಖಲೆಗಳು ದೃಢೀಕರಿಸಿರಬೇಕು, ವದಂತಿ ಆಧಾರಿತವಾಗಿರಬಾರದು. ವಿಚಾರಣೆಯ ನಂತರದ ಸುಳ್ಳು, ದಾರಿತಪ್ಪಿಸುವ ಅಥವಾ ದುರುದ್ದೇಶಪೂರಿತ ಎಂದು ಸಾಬೀತಾಗಿರಬಾರದು ಎಂದು ಸರ್ಕಾರ ನಿಬಂಧನೆ ಹಾಕಿದೆ.

ಮಾಹಿತಿದಾರ ಒದಗಿಸಿದ ಮಾಹಿತಿ ಮತ್ತು ಗುರುತು ಅಥವಾ ಅವರಿಗೆ ಪಾವತಿಸಲಾದ ಬಹುಮಾನವನ್ನು ಗೌಪ್ಯವಾಗಿಡತಕ್ಕದ್ದು ಮತ್ತು ವಿಶೇಷ ನ್ಯಾಯಾಲಯದ ನಿರ್ದಿಷ್ಟ ಆದೇಶ ಅಥವಾ ನಿರ್ದೇಶನದ ಅನುಸಾರವಾಗಿ ಮತ್ತು ಅಂತಹ ಗೌಪ್ಯತೆಯನ್ನು ಬಹಿರಂಗಪಡಿಸತಕ್ಕದ್ದಲ್ಲ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖವಾಗಿದೆ.

ರಾಜ್ಯದಲ್ಲಿ ಹಣಕಾಸು ಸಂಸ್ಥೆಗಳ ಮೋಸ ಪ್ರಕರಣಗಳು

ರಾಜ್ಯದಲ್ಲಿ ಹಣಕಾಸು ಸಂಸ್ಥೆಗಳ ಮೋಸ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾವಿರಾರು ಜನ ಹೂಡಿಕೆದಾರರ ದುಡಿದ ಹಣ ನೀರುಪಾಲಾಗಿದೆ. ಹೆಚ್ಚು ಲಾಭದ ಭರವಸೆ, ಅತಿಯಾದ ಬಡ್ಡಿದರ, ತ್ವರಿತ ಲಾಭದ ಜಾಲಗಳಲ್ಲಿ ಸಿಲುಕಿ ಜನರು ನಷ್ಟ ಅನುಭವಿಸುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದ ಕೆಲವು ಪ್ರಮುಖ ಪ್ರಕರಣಗಳು ರಾಜ್ಯದ ಆರ್ಥಿಕ ಭದ್ರತೆ ಮತ್ತು ಸಾಮಾನ್ಯ ಜನರ ನಂಬಿಕೆಗೆ ದೊಡ್ಡ ಆಘಾತ ತಂದಿವೆ.

ಐಎಂಎ ವಂಚನೆ

ರಾಜ್ಯದಲ್ಲಿ ದೊಡ್ಡ ಹಣಕಾಸು ಮೋಸದ ಹೆಸರಾಗಿ ಗುರುತಿಸಿಕೊಂಡಿರುವುದು ಐಎಂಎ ಸಂಸ್ಥೆಯದ್ದಾಗಿದೆ. 2013 ರಿಂದ ಕಾರ್ಯಾರಂಭ ಮಾಡಿದ ಈ ಸಂಸ್ಥೆಯು ಸಾವಿರಾರು ಜನರಿಂದ ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು. ಕಡಿಮೆ ಅವಧಿಯಲ್ಲಿ ಶೇ.8–12 ರಷ್ಟು ಲಾಭ ನೀಡುವುದಾಗಿ ಭರವಸೆ ನೀಡಲಾಗುತ್ತಿತ್ತು. ಪ್ರಾಥಮಿಕ ಹಂತದಲ್ಲಿ ಕೆಲವರಿಗೆ ಲಾಭ ಹಿಂತಿರುಗಿಸಿದ್ದರಿಂದ ಜನರ ವಿಶ್ವಾಸ ಹೆಚ್ಚಿತ್ತು. ಆದರೆ 2019ರಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಪಲಾಯನವಾದ ಬಳಿಕ ದಂಧೆ ಬಯಲಿಗೆ ಬಂತು. ಪ್ರಕರಣದಲ್ಲಿ 30ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ವಂಚನೆಗೊಳಗಾಗಿದ್ದರು. ಅಂದಾಜು 4 ರಿಂದ 5 ಸಾವಿರ ಕೋಟಿ ಹೂಡಿಕೆ ನಷ್ಟವಾಗಿದೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ. ಇಡಿ, ಸಿಬಿಐ ಮತ್ತು ಎಸ್‌ಐಟಿ ತನಿಖೆ ಕೈಗೊಂಡು ಆಸ್ತಿ ಜಪ್ತಿ ಮಾಡಿಕೊಂಡಿವೆ. ಮಾಜಿ ಸಚಿವ ರೋಷನ್‌ ಬೇಗ್‌ ಸೇರಿದಂತೆ ಹಲವು ರಾಜಕೀಯ ನಾಯಕರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದ್ದವು.

ಚಿಟ್‌ಫಂಡ್‌ಗಳ ಮೋಸ

ರಾಜ್ಯದಲ್ಲಿ ಅನೇಕ ಚಿಟ್‌ಫಂಡ್‌ ಕಂಪನಿಗಳು ಜನರನ್ನು ಸೆಳೆಯುತ್ತಿವೆ. ಅಕ್ರಮವಾಗಿ ಕೋಟಿ ಕೋಟಿ ಹಣ ಸಂಗ್ರಹಿಸಿ, ಹೂಡಿಕೆದಾರರಿಗೆ ಹಣ ನೀಡದೆ ಮಾಯವಾದ ಪ್ರಕರಣಗಳು ದಾಖಲಾಗಿವೆ. ಜನರಿಗೆ ತಿಂಗಳಿಗೆ ನಿಗದಿತ ಶೇ.20–30 ರಷ್ಟು ಲಾಭ ನೀಡುತ್ತೇವೆ ಎಂದು ಹೇಳಿಕೆ ವಂಚನೆ ಮಾಡಲಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಲಾಭ ಕೊಟ್ಟು ಜನರ ವಿಶ್ವಾಸ ಗಳಿಸಿದ ನಂತರ, ದೊಡ್ಡ ಮೊತ್ತ ವಸೂಲಿ ಮಾಡಿ ಕಂಪನಿಯವರು ನಾಪತ್ತೆಯಾಗುವುದು ಮರುಕಳಿಸುವ ಘಟನೆಯಾಗಿದೆ.

ವಿನಿವಿಂಕ್‌ ಸಂಸ್ಥೆಯಿಂದ ವಂಚನೆ

2004ನೇ ಸಾಲಿನಲ್ಲಿ ನಮ್ಮ ಬ್ಯಾಂಕ್‌ನಲ್ಲಿ ೧೦೦ ರೂ.ಗೆ ತಿಂಗಳಿಗೆ 10 ರೂ. ಬಡ್ಡಿ ಕೊಡುತ್ತೇವೆ ಎಂಬ ಬೋಗಸ್ ಸ್ಕೀಮ್‌ವೊಂದನ್ನು ಕೆ. ಎನ್. ಶ್ರೀನಿವಾಸ್ ಶಾಸ್ತ್ರಿ ಎಂಬ ಮಧ್ಯ ವಯಸ್ಸಿನ ವ್ಯಕ್ತಿ ಪರಿಚಯಿಸಿದ್ದ. ವಿನಿವಿಂಕ್ ಸೌಹಾರ್ದ ಕೋ ಆಪರೇಟೀವ್ ಸೊಸೈಟಿ ತೆರೆದು ಅದಕ್ಕೆ 20 ನಿರ್ದೇಶಕರನ್ನು ನೇಮಿಸಿಕೊಂಡಿದ್ದ. ಬದುಕಿಗೆ ಶ್ರೀನಿವಾಸ ಶಾಸ್ತ್ರಿ ನೀಡುವ ಬಡ್ಡಿನೇ ಸಾಕು ಎಂಬ ಆಸೆಗೆ ಬಿದ್ದ ಜನರು ದುಡಿದಿದ್ದೆಲ್ಲಾವನ್ನು ವಿನಿವಿಂಕ್ ಸೌಹಾರ್ದ ಕೋ ಆಪರೇಟೀವ್ ಸೊಸೈಟಿಗೆ ತುಂಬಿದರು. ಬಡ್ಡಿ ಆಸೆಗೆ ಬಿದ್ದು ವಿನಿವಿಂಕ್ ಶಾಸ್ತ್ರಿ ಬ್ಯಾಂಕ್‌ಗೆ ದುಡ್ಡು ಹಾಕಿದ್ದ 20 ಸಾವಿರ ಮಂದಿ ರಾತ್ರೋ ರಾತ್ರಿ ಬೀದಿಗೆ ಬಿದ್ದರು. ಜನರು 203 ಕೋಟಿ ಹಣವನ್ನು ಹೂಡಿಕೆ ಮಾಡಿದ್ದರು. ವಿನಿವಿಂಕ್ ಅಕ್ರಮ ಪ್ರಕರಣ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು 20 ಸಾವಿರ ಮಂದಿಗೆ 203 ಕೋಟಿ ರೂ. ಮೋಸ ಮಾಡಿರುವ ಬಗ್ಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ2008 ರಲ್ಲಿ ಸಲ್ಲಿಸಿದ್ದರು. 2005 ರಲ್ಲಿ ಬೆಳಕಿಗೆ ಬಂದ ಈ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿತ್ತು.

ಆನ್‌ಲೈನ್‌ ಸಾಲ ಅಪ್ಲಿಕೇಶನ್‌ಗಳ ಕಾಟ

ಕೊರೋನಾ ನಂತರ ರಾಜ್ಯದಲ್ಲಿ ಅಕ್ರಮ ಆನ್‌ಲೈನ್‌ ಸಾಲ ಅಪ್ಲಿಕೇಶನ್‌ಗಳು ಹೊಸ ಭೀತಿಯಾಗಿದೆ. ತುರ್ತು ಹಣದ ಅವಶ್ಯಕತೆಯಲ್ಲಿದ್ದವರಿಗೆ ಕಡಿಮೆ ಸಮಯದಲ್ಲಿ ಸಾಲ ಮಂಜೂರು ಮಾಡುತ್ತೇವೆ ಎಂದು ಭರವಸೆ ನೀಡಿದ ಈ ಅಪ್ಲಿಕೇಶನ್‌ಗಳು, ಅತಿಯಾದ ಬಡ್ಡಿ ದರ ವಸೂಲಿ ಮಾಡಿ, ಪಾವತಿ ವಿಳಂಬವಾದರೆ ಖಾಸಗಿ ಮಾಹಿತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸುತ್ತಿವೆ. ಹಲವಾರು ಆತ್ಮಹತ್ಯೆ ಪ್ರಕರಣಗಳಿಗೂ ಇವು ಕಾರಣವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಪೊಲೀಸರು 100ಕ್ಕೂ ಹೆಚ್ಚು ಅಕ್ರಮ ಲೋನ್‌ ಆಪ್‌ಗಳನ್ನು ನಿರ್ಬಂಧಿಸಿದ್ದಾರೆ. ಚೀನಾದೊಂದಿಗೆ ಸಂಬಂಧ ಹೊಂದಿರುವ ಕೆಲವು ಕಂಪನಿಗಳ ವಿರುದ್ಧವೂ ತನಿಖೆ ನಡೆದಿದೆ.

ಈ ಎಲ್ಲಾ ಮೋಸದ ಪರಿಣಾಮವಾಗಿ ಸಾವಿರಾರು ಜನರು ತಮ್ಮ ಜೀವನದ ಹೂಡಿಕೆಯನ್ನು ಕಳೆದುಕೊಂಡಿದ್ದಾರೆ. ನಿವೃತ್ತರು, ಕಾರ್ಮಿಕರು, ಗೃಹಿಣಿಯರು, ಸಣ್ಣ ವ್ಯಾಪಾರಿಗಳು ಹಣ ಉಳಿಸಿ ಭವಿಷ್ಯ ಭದ್ರಗೊಳಿಸಲು ಹೂಡಿಕೆ ಮಾಡಿದವರು ಬಲಿಯಾಗಿದ್ದಾರೆ. ಹಣ ಕಳೆದುಕೊಂಡು ಹಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೆಲವರು ಆತ್ಮಹತ್ಯೆಗೂ ಶರಣಾಗಿದ್ದಾರೆ.

ಅಕ್ರಮ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ

ಆರ್‌ಬಿಐ ಅನುಮತಿ ಇಲ್ಲದ ಯಾವುದೇ ಹಣಕಾಸು ಸಂಸ್ಥೆಗೆ ಹಣ ಹೂಡಬಾರದು ಎಂದು ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಕ್ರಮ ಸಂಸ್ಥೆಗಳ ಆಸ್ತಿಗಳನ್ನು ವಶಪಡಿಸಿಕೊಂಡು ಹೂಡಿಕೆದಾರರಿಗೆ ಹಿಂತಿರುಗಿಸುವ ಪ್ರಯತ್ನ ಮಾಡುತ್ತಿದೆ. ಆನ್‌ಲೈನ್‌ ಲೋನ್‌ ಆಪ್‌ಗಳ ವಿರುದ್ಧ ಸೈಬರ್ ಕ್ರೈಂ ವಿಭಾಗದಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಯಾವುದೇ ಕಂಪನಿಯು ಆರ್‌ಬಿಐ ಅಥವಾ ಸೆಬಿ ಅನುಮತಿ ಹೊಂದಿದೆಯೇ ಎಂದು ಮೊದಲು ಪರಿಶೀಲಿಸಬೇಕು. ಅನಧಿಕೃತ ಲೋನ್ ಆಪ್‌ಗಳು ದುರುಪಯೋಗ ಮಾಡುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರಬೇಕು. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ನೀಡುತ್ತೇವೆ ಎನ್ನುವುದು ಮೋಸದ ಪ್ರಮುಖ ಲಕ್ಷಣ. ಹೂಡಿಕೆ ಮಾಡುವ ಮೊದಲು ಸಂಸ್ಥೆಯು ಆರ್‌ಬಿಐ, ಸೆಬಿ ಅಥವಾ ಸಹಕಾರ ಇಲಾಖೆಯಿಂದ ಮಾನ್ಯತೆ ಪಡೆದಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂಬುದು ಆರ್ಥಿಕ ತಜ್ಞರ ಸಲಹೆಯಾಗಿದೆ.

Read More
Next Story