
Series-3: ರಾಜ್ಯ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆ; ಆದರೂ 'ಮೂಗುದಾರ' ನಿರಂತರ
16 ವರ್ಷಗಳ ಕಾಲ ಇದ್ದ ಮೀಸಲಾತಿ ನಿಗದಿಪಡಿಸುವ ರಾಜ್ಯ ಚುನಾವಣಾ ಆಯೋಗದ ಅಧಿಕಾರವನ್ನು ರಾಜ್ಯ ಸರ್ಕಾರವು ಕಿತ್ತುಕೊಂಡಿದೆ. ಈಗ ಕೇವಲ ಚುನಾವಣೆ ನಡೆಸುವುದು ಮಾತ್ರ ಆಯೋಗದ ಕೆಲಸವಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕಾಲಕಾಲಕ್ಕೆ ಪಾರದರ್ಶಕ ಮತ್ತು ನ್ಯಾಯಯುತವಾಗಿ ನಡೆಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗವು ಹೊಂದಿದೆ. ಸಂವಿಧಾನಿಕ ಸಂಸ್ಥೆಯಾಗಿರುವ ರಾಜ್ಯ ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಕಾಲಕಾಲಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಮತ್ತು ಚುನಾವಣಾ ಪ್ರಕ್ರಿಯೆ ಮೇಲೆ ನಿಗಾವಹಿಸುವುದು ಪ್ರಮುಖ ಕಾರ್ಯವಾಗಿದೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ತಾಲೂಕು, ಜಿಲ್ಲಾಪಂಚಾಯತ್ ಚುನಾವಣೆ ನಡೆಸಲು ಅನುವು ಮಾಡದೆ ರಾಜ್ಯ ಚುನಾವಣಾ ಆಯೋಗವು ತನ್ನ ಕಾರ್ಯವನ್ನು ನಿರ್ವಹಿಸಲು ಸರ್ಕಾರ ಅವಕಾಶ ನೀಡದೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡಿದೆ.
ರಾಜ್ಯ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯು ಸ್ವಾಯತ್ತವಾಗಿದೆ. 16 ವರ್ಷಗಳ ಕಾಲ ಇದ್ದ ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಕಿತ್ತುಕೊಂಡಿದೆ. ಈಗ ಕೇವಲ ಚುನಾವಣೆ ನಡೆಸುವುದು ಮಾತ್ರ ಆಯೋಗದ ಕೆಲಸವಾಗಿದೆ. ಮತದಾರರ ಪಟ್ಟಿಯು ಸಹ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯಿಂದ ಲಭ್ಯವಾಗುತ್ತದೆ. ಮೀಸಲಾತಿ ಪಟ್ಟಿ ನೀಡಿದರೆ ಮಾತ್ರ ಚುನಾವಣೆ ನಡೆಸಲು ಸಾಧ್ಯ. ಆದರೆ ಸರ್ಕಾರದ ನಡೆಯಿಂದಾಗಿ ನ್ಯಾಯಾಲಯದ ಮೆಟ್ಟೀಲೆರಿ ಕಾನೂನು ಹೋರಾಟ ನಡೆಸುವಲ್ಲಿ ನಿರತವಾಗಿದೆ.
ಆಯೋಗದ ಕಾರ್ಯವೈಖರಿ
ನಗರ ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯ ಜತೆಗೆ ಉಪಚುನಾವಣೆಯನ್ನು ಸಹ ನಡೆಸುತ್ತದೆ. ಇದರ ಜತೆಗೆ ಸ್ಥಳೀಯ ಸಂಸ್ಥೆಗೆ ಆಯ್ಕೆಯಾಗುವ ಸದಸ್ಯರ ಆಸ್ತಿವಿವರವನ್ನು ಪಡೆದುಕೊಳ್ಳಲಿದೆ. ಇದನ್ನು ಹೊರತುಪಡಿಸಿದರೆ ರಾಜ್ಯ ಚುನಾವಣಾ ಆಯೋಗಕ್ಕೆ ಬೇರಾವುದೇ ಹೊಣೆಗಾರಿಕೆ ಇಲ್ಲವಾಗಿದೆ ಎಂದು ಹೇಳಲಾಗಿದೆ.
ಮೀಸಲಾತಿ ನಿಗದಿ 16 ವರ್ಷ ಮಾತ್ರ ಅಧಿಕಾರ
ರಾಜ್ಯ ಚುನಾವಣಾ ಆಯೋಗಕ್ಕೆ ಮೀಸಲಾತಿ ನಿಗದಿ ಮಾಡುವ ಅಧಿಕಾರ ಕೇವಲ 16 ವರ್ಷ ಮಾತ್ರ ಇತ್ತು. 2005ರಿಂದ 2021ರ ಅವಧಿಯಲ್ಲಿ ಮಾತ್ರ ಆಯೋಗವು ಮೀಸಲಾತಿ ಪಟ್ಟಿ ನಿಗದಿ ಮಾಡಿತ್ತು. 2005ಕ್ಕೂ ಮುನ್ನವೂ ಸಹ ಮೀಸಲಾತಿ ಪಟ್ಟಿ ನಿಗದಿಗೊಳಿಸುವ ಅಧಿಕಾರ ಸರ್ಕಾರದ ಹಿಡಿತದಲ್ಲಿಯೇ ಇತ್ತು. ಸರ್ಕಾರವೇ ಮೀಸಲಾತಿ ಪಟ್ಟಿ ನಿಗದಿಗೊಳಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ನೀಡುತಿತ್ತು. ನಂತರ ಆಯೋಗವು ಚುನಾವಣಾ ಪ್ರಕ್ರಿಯೆಯನ್ನು ನಡೆಸುತ್ತಿತ್ತು. ಇದೀಗ ಸರ್ಕಾರವು ಮತ್ತೆ ಮೀಸಲಾತಿ ನಿಗದಿಗೊಳಿಸುವ ಅಧಿಕಾರವನ್ನು ತನ್ನ ಕಪಿಪುಷ್ಠಿಗೆ ತೆಗೆದುಕೊಂಡಿದೆ. ಸರ್ಕಾರ ಮೀಸಲಾತಿ ನಿಗದಿಗೊಳಿಸಿದ ಬಳಿಕವೇ ಚುನಾವಣೆ ನಡೆಸಬೇಕು. ಇದನ್ನು ಹೊರತುಪಡಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಬೇರೆ ದಾರಿಯೇ ಇಲ್ಲ ಎಂದು ಮೂಲಗಳು ಹೇಳಿವೆ.
ಸರ್ಕಾರಕ್ಕೆ ಕ್ಷೇತ್ರಗಳ ಗಡಿ ನಿಗದಿ ಅಧಿಕಾರ
ಸ್ಥಳೀಯ ಸಂಸ್ಥೆಗಳೇ ಆಗಲಿ, ವಿಧಾನಸಭಾ ಕ್ಷೇತ್ರವೇ ಆಗಲಿ ಅಥವಾ ಲೋಕಸಭಾ ಕ್ಷೇತ್ರವಾದರೂ ಅವುಗಳ ಗಡಿಯನ್ನು ನಿಗದಿಗೊಳಿಸುವ (Delimitation) ಅಧಿಕಾರ ಸರ್ಕಾರಕ್ಕೆ ಇದೆಯೇ ಹೊರತು ಯಾವುದೇ ಚುನಾವಣಾ ಆಯೋಗಕ್ಕೆ ಇಲ್ಲ. ಸ್ಥಳೀಯ ಸಂಸ್ಥೆಗಳ ಗಡಿಯನ್ನು ರಾಜ್ಯ ಸರ್ಕಾರ ಗಡಿ ನಿಗದಿ ಗೊಳಿಸಿದರೆ, ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಗಡಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಲಿದೆ. ಸರ್ಕಾರಗಳು ಗಡಿಯನ್ನು ನಿಗದಿಗೊಳಿಸಿ ಆಯೋಗಗಳಿಗೆ ಚುನಾವಣೆ ನಡೆಸಲು ನೀಡುತ್ತದೆ. ಅದರಂತೆ ಆಯೋಗವು ಚುನಾವಣೆ ನಡೆಸಲಿದೆ. ಚುನಾವಣೆ ವೇಳೆ ಯಾವುದೇ ಅಕ್ರಮ ನಡೆದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ದಾಖಲಿಸಿ ತನಿಖೆ ಕೈಗೊಳ್ಳುತ್ತದೆ. ರಾಜ್ಯ ಚುನಾವಣಾ ಆಯೋಗವು ಸಹ ಇದೇ ಕಾರ್ಯವನ್ನು ನಿರ್ವಹಿಸಲಿದೆ ಎಂದು ಹೇಳಲಾಗಿದೆ.
ಸರ್ಕಾರವು ತಾತ್ಕಾಲಿಕವಾಗಿ ಆಯೋಗವೊಂದನ್ನು ರಚಿಸಲಿದ್ದು, ಈ ಮೂಲಕ ಕ್ಷೇತ್ರದ ಗಡಿ ನಿಗದಿ ಮಾಡಲಾಗುತ್ತದೆ. ಆಯೋಗವು ಕ್ಷೇತ್ರಗಳ ಗಡಿ ಕುರಿತು ಅಧ್ಯಯನ ನಡೆಸಲಿದೆ. ಜನಸಂಖ್ಯೆ, ಭೂ ಅಳತೆ ಮಾನದಂಡಗಳನ್ನಿಟ್ಟುಕೊಂಡು ಗಡಿಯನ್ನು ನಿಗದಿ ಮಾಡಲಿದೆ ಎಂದು ಮೂಲಗಳು ಹೇಳಿವೆ.
ಆಯೋಗದ ಆಯುಕ್ತರ ನೇಮಕವು ಸಹ ಸರ್ಕಾರದ್ದು
ರಾಜ್ಯ ಚುನಾವಣಾ ಆಯೋಗ ಆಯುಕ್ತರನ್ನು ಸರ್ಕಾರವೇ ನೇಮಕ ಮಾಡಲಿದೆ. ವಿವಿಧ ಕ್ಷೇತ್ರದ ತಜ್ಞರೊಬ್ಬರನ್ನು ಆಯ್ಕೆ ಮಾಡಲಿದೆ. ಬಳಿಕ ಸರ್ಕಾರವು ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ರಾಜ್ಯಪಾಲರು ಒಪ್ಪಿಗೆ ನೀಡಿದ ಬಳಿಕ ಒಬ್ಬರನ್ನು ಸರ್ಕಾರ ನಿಯೋಜನೆ ಮಾಡಲಿದೆ. ಇವರ ಅಧಿಕಾರವಧಿಯು ಐದು ವರ್ಷ ಇರಲಿದೆ. ರಾಜ್ಯ ಚುನಾವಣಾ ಆಯೋಗದ ಕಾರ್ಯವೈಖರಿಯು ಇವರ ಅಧೀನದಲ್ಲಿರುತ್ತದೆ. ಸ್ಥಳೀಯ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿರುತ್ತದೆ.
ರಾಜ್ಯ ಚುನಾವಣಾ ಆಯೋಗದ ಅಧಿಕಾರ ಸಂಬಂಧ ದ ಫೆಡರಲ್ ಕರ್ನಾಟಕ ಜತೆಗೆ ಮಾತನಾಡಿದ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ, ರಾಜ್ಯ ಚುನಾವಣಾ ಆಯೋಗದ ಅಧಿಕಾರವು ತನ್ನದೇ ಸಿಮೀತವಾದ ವ್ಯಾಪ್ತಿ ಇದೆ. ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಆದರೆ, ಸರ್ಕಾರವು ಮೀಸಲಾತಿ ಪಟ್ಟಿ ನೀಡಬೇಕಿದೆ. ಮೀಸಲಾತಿ ನಿಗದಿ ಮಾಡುವ ಅಧಿಕಾರ ಆಯೋಗದಲ್ಲಿ ಇಲ್ಲ. ಈ ಮೊದಲು ಆಯೋಗ ಮೀಸಲಾತಿ ನಿಗದಿಗೊಳಿಸುತ್ತಿತ್ತು. ನಂತರ ಸರ್ಕಾರ ಮೀಸಲಾತಿ ನಿಗದಿಗೊಳಿಸುವುದನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಮತ್ತೊಮ್ಮೆ ಆಯೋಗದ ವ್ಯಾಪ್ತಿಗೆ ತೆಗೆದುಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರುವ ಚಿಂತನೆ ಇದೆ ಎಂದು ಹೇಳಿದರು.
ಆಯೋಗದ ಮಾಜಿ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರವು ತನ್ನ ಕಾರ್ಯವನ್ನು ಮಾಡಬೇಕು. ಆಗ ರಾಜ್ಯ ಚುನಾವಣಾ ಆಯೋಗವು ತನ್ನಕೆಲಸವನ್ನು ತನ್ನದೇ ಮಿತಿಯಲ್ಲಿ ನಿರ್ವಹಿಸಲು ಸುಲಭವಾಗಲಿದೆ. ರಾಜಕೀಯ ಉದ್ದೇಶಕ್ಕಾಗಿ ಚುನಾವಣೆಯನ್ನು ವಿಳಂಬ ಮಾಡಬಾರದು. ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ಇಲ್ಲ. ಬಹುತೇಕ ಕಾರ್ಯವು ರಾಜ್ಯ ಸರ್ಕಾರದ ಮೇಲೆ ಅವಲಂಬಿತವಾಗಿರುತ್ತದೆ. ಕ್ಷೇತ್ರದ ಗಡಿ ನಿಗದಿ, ಮೀಸಲಾತಿ ನಿಗದಿ ಮಾಡುವುದು ಸರ್ಕಾರದ ಕಾರ್ಯವಾಗಿದೆ. ಇದನ್ನು ಸರಿಯಾಗಿ ಮಾಡಿ ಆಯೋಗಕ್ಕೆ ನೀಡಿದರೆ ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸಲು ಸುಲಭವಾಗಲಿದೆ ಎಂದು ತಿಳಿಸಿದರು.
ಪಂಚಾಯತ್ ರಾಜ್ ಹಿನ್ನೆಲೆ
ಕರ್ನಾಟಕದಲ್ಲಿ 1983 ಅನ್ನು ಪಂಚಾಯತಿ ರಾಜ್’ನ ಹೊಸ ಇತಿಹಾಸ ಯುಗ ಎಂದು ಗುರುತಿಸಲಾಗಿದೆ. ಮೊದಲ ಬಾರಿಗೆ ಕಾಂಗ್ರೆಸ್' ಪಕ್ಷ ರಾಜ್ಯದ ಅಧಿಕಾರವನ್ನು ಕಳೆದುಕೊಂಡಿತು ಮತ್ತು ಜನತಾ ಪಕ್ಷ ಸರ್ಕಾರವನ್ನು ರಚಿಸಿತು. ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಪಂಚಾಯತ್ ರಾಜ್ ಅಳವಡಿಸಲು ಬದ್ಧರಾಗಿದ್ದರು. 'ಜನರಿಗೆ ಶಕ್ತಿ' ಘೋಷಣೆ ಆಧರಿಸಿ ಸ್ಥಳೀಯ ಸರ್ಕಾರಗಳ ಹೊಸ ಪ್ರಯೋಗ ಪ್ರಾರಂಭಿಸಿದರು. ಅಶೋಕ್ ಮೆಹ್ತಾ ಸಮಿತಿಯ ಶಿಫಾರಸುಗಳ ಮಾದರಿಯಲ್ಲೇ ಜನತಾ ಸರ್ಕಾರ ಒಂದು ಮಸೂದೆ ತಯಾರಿಸಿತು. 1983 ರಲ್ಲಿ ರಾಜ್ಯ ವಿಧಾನಸಭೆಯಲ್ಲಿ, ಜನತಾ ಸರ್ಕಾರ, ʼಕರ್ನಾಟಕ ಜಿಲ್ಲಾಪರಿಷತ್ ತಾಲೂಕು ಪಂಚಾಯತ್ ಸಮಿತಿ ಮಂಡಲ್ ಪಂಚಾಯತ್ ಮತ್ತು ನ್ಯಾಯ ಪಂಚಾಯತ್ ಕಾಯಿದೆ 1983ʼ ಎಂಬ ಕಾಯಿದೆಯನ್ನು ಮಾಡಿದರು. ಅದಕ್ಕೆ ರಾಷ್ಟ್ರಪತಿ ಒಪ್ಪಿದರು. ಇದರ ಉದ್ದೇಶ ಅಧಿಕಾರದ ಮತ್ತು ಕಾರ್ಯಗಳ ವಿಕೇಂದ್ರಿಕರಣ ಕಲ್ಪಿಸುವುದು. ಪ್ರಜಾಸತ್ತಾತ್ಮಕ ಸಂಸ್ಥೆಗಳ ಅಭಿವೃದ್ಧಿಯನ್ನು ಪರಿವರ್ತಿಸುವ ಉದ್ದೇಶಕ್ಕಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಿ ಯೋಜನೆಗಳಲ್ಲಿ ಜನರ ಭಾಗವಹಿಸುವಿಕೆ ಪ್ರಮುಖ ಗುರಿಯಾಗಿದೆ.
ಈ ಕಾಯ್ದೆ ದೇಶದ ಸ್ಥಳೀಯ ಸರ್ಕಾರಗಳ ಇತಿಹಾಸದ ಹೆಗ್ಗುರುತು ಎನಿಸಿಕೊಂಡಿದೆ. ಪಂಚಾಯತಿ ರಾಜ್ ವ್ಯವಸ್ಥೆ ವಿಕೇಂದ್ರೀಕೃತ ಆಡಳಿತ ತಂತ್ರಗಳು ಎಂದು ಘೋಷಿಸಿತು. 80ರ ದಶಕದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮುಂದಾಗಿದ್ದು,1985 ರ ಆ.14 ರಂದು ಕಾಯ್ದೆ ಜಾರಿಗೊಳಿಸಿತು. ನಂತರ ಇದನ್ನು ಜಾರಿಗೊಳಿಸಿದ- ಎರಡನೇ ರಾಜ್ಯ ಪಶ್ಚಿಮ ಬಂಗಾಳ. ಅದು, ಪಂಚಾಯತ್ ರಾಜ್ ಮೇಲೆ ಮತ್ತು ಅಧಿಕಾರ ವಿಕೇಂದ್ರೀಕರಣದಲ್ಲಿ ತನ್ನ ಸಂಪೂರ್ಣ ನಂಬಿಕೆ ಇದೆ ಎಂದು ತಿಳಿಸಿತು. ಕಾಯ್ದೆಯಲ್ಲಿ ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ರೂಪಿಸಲಾಯಿತು. ನಂತರ 1993ರಲ್ಲಿ ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಕಾಯ್ದೆ ಜಾರಿಗೊಳಿಸಿ , ಆಡಳಿತದಲ್ಲಿ ಪ್ರಜಾಸತ್ತತ್ಮಕ ವಿಕೇಂದ್ರೀಕರಣಕ್ಕೆ ಮತ್ತಷ್ಟು ಬಲ ತುಂಬಲಾಯಿತು.