Government reservation in recruitment, confusion among lakhs of candidates
x
ಕರ್ನಾಟಕ ಲೋಕಸೇವಾ ಆಯೋಗ

KPSC Controversy | ಸರ್ಕಾರದ ಮೀಸಲು ಬಿಕ್ಕಟ್ಟು ; ಲಕ್ಷಾಂತರ ಅಭ್ಯರ್ಥಿಗಳಿಗೆ ಇಕ್ಕಟ್ಟು

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ 2023 ಮಾರ್ಚ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಸ್ಥೆ ಹಾಗೂ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸಿ ವಿಧಾನಮಂಡಲದಲ್ಲಿ ಅಂಗೀಕರಿಸಿತ್ತು.


ಕರ್ನಾಟಕ ಲೋಕಸೇವಾ ಆಯೋಗ ಒಂದಿಲ್ಲೊಂದು ಪ್ರಕರಣಗಳಿಂದ ಸದಾ ಸುದ್ದಿಯಲ್ಲಿದೆ. ಇದೀಗ ರಾಜ್ಯ ಸರ್ಕಾರ ಮಾಡಿರುವ ಮೀಸಲಾತಿ ಎಡವಟ್ಟಿನಿಂದ. ಕೆಪಿಎಸ್ ಸಿ ಮತ್ತೊಮ್ಮೆ ಹೈಕೋರ್ಟ್‌ಗೆ ಹೋಗುವ ಪರಿಸ್ಥಿತಿ ಬಂದೊದಗಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023 ಮಾರ್ಚ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಸ್ಥೆ ಹಾಗೂ ನೇಮಕಾತಿಗಳಲ್ಲಿ ಮೀಸಲಾತಿ ಹೆಚ್ಚಿಸಿದ ನಿರ್ಣಯವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಲಾಗಿತ್ತು.

ನಂತರ ಸಂವಿಧಾನದ 9ನೇ ಷೆಡ್ಯೂಲ್‌ಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದರಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿತ್ತು.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15 ರಿಂದ ಶೇ.17 ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಳ ಮಾಡಿತ್ತು. ಸರ್ಕಾರ ಅಧಿಸೂಚನೆ ಹೊರಡಿಸುವ ಮುಂದಿನ ಎಲ್ಲಾ ನೇಮಕಾತಿಗಳಲ್ಲಿ ಈ ನಿಯಮ ಅನುಸರಿಸುವಂತೆ ತಿಳಿಸಿತ್ತು. ಆದರೆ ಸರ್ಕಾರ ಹೊರಡಿಸಿದ್ದ ಆದೇಶ ಸುಪ್ರೀಂ ಕೋರ್ಟ್‌ ಈ ಹಿಂದೆ ಮೀಸಲಾತಿ ಕುರಿತು ನೀಡಿದ್ದ ತೀರ್ಪಿಗೆ ವಿರೋಧವಾಗಿತ್ತು.

ಸುಪ್ರೀಂ ಕೋರ್ಟ್‌ ಹೇಳಿದ್ದೇನು ?

ಸುಪ್ರೀಂ ಕೋರ್ಟ್‌ 1992ರ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಮೀಸಲಾತಿ ಶೇ. 50 ರಷ್ಟು ಮೀರುವಂತಿಲ್ಲ ಎಂದು ತಿಳಿಸಿತ್ತು. ಆದರೆ ವಿಶೇಷ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಿಸಬಹುದು ಎಂದು ಇದೇ ಪ್ರಕರಣದಲ್ಲಿ ಸ್ಪಷ್ಟಪಡಿಸಿರುವುದು ಗೊಂದಲಗಳಿಗೆ ಕಾರಣವಾಗಿದೆ. ಈ ಅಂಶವನ್ನು ಮುಂದಿಟ್ಟುಕೊಂಡು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಮೀಸಲಾತಿ ಹೆಚ್ಚಳ ಮಾಡಬಹುದು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದರು.

ಏನಿದು ವಿವಾದ ?

ರಾಜ್ಯ ಸರ್ಕಾರ ಮೀಸಲಾತಿಯನ್ನು ಶೇ.56 ಕ್ಕೆ ಹೆಚ್ಚಳ ಮಾಡಿರುವುದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅರ್ಜಿದಾರರಾದ ಮಧು ಬಿ.ಎನ್‌. ಎಂಬುವವರು ಕರ್ನಾಟಕ ಆಡಳಿತ ಮಂಡಳಿಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ 2024 ಫೆಬ್ರವರಿಯಲ್ಲಿ 27ರಂದು ಕೆಪಿಎಸ್‌ಸಿ ಹೊರಡಿಸಿದ್ದ ಗೆಜೆಟೆಡ್‌ ಪ್ರೊಬೆಷನರಿ ಅಧಿಸೂಚನೆಯನ್ನು ರದ್ದುಪಡಿಸಿದ್ದು ಮತ್ತೊಮ್ಮೆ ಶೇ.50 ಮೀಸಲಾತಿಯಂತೆ ಅಧಿಸೂಚನೆ ಹೊರಡಿಸಲು ತಿಳಿಸಿದೆ. ಆದರೆ ಕೆಎಟಿ ತೀರ್ಪಿನ ವಿರುದ್ದ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಮೀಸಲಾತಿ ಹೆಚ್ಚಳದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 2023 ರಲ್ಲಿ ಸುಗ್ರೀವಾಜ್ಞೆ ಮೂಲಕ ನೇಮಕಾತಿಗಳಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. 50 ರಿಂದ ಶೇ.56ಕ್ಕೆ ಹೆಚ್ಚಳ ಮಾಡಿತ್ತು. ಆದರೆ ಸರ್ಕಾರ ಮೀಸಲಾತಿ ಹೆಚ್ಚಿಸಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಲಾಭವಾದರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೀಸಲಾತಿಯಲ್ಲಿ ನಷ್ಟವಾಗಿತ್ತು. ಆದ್ದರಿಂದಲೇ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಇದೀಗ ಕೋರ್ಟ್‌ ಮೊರೆ ಹೋಗಿದ್ದು ನ್ಯಾಯ ಸಿಗುವ ಭರವಸೆಯಲ್ಲಿದ್ದಾರೆ.

ಗೊಂದಲದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು

ಕೆಪಿಎಸ್‌ಸಿ ಡಿಸೆಂಬರ್‌ 29ರಂದು ನಡೆಸಿದ್ದ ಕೆಎಎಸ್‌ ಮರು ಪರೀಕ್ಷೆಗೆ 2,10,091 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಆದರೆ 1,01,237 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪೂರ್ವಭಾವಿ ಫಲಿತಾಂಶ ಪ್ರಕಟಿಸಿದ್ದ ಕೆಪಿಎಸ್‌ಸಿ 5,760 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಿ ಪರೀಕ್ಷೆ ನಡೆಸಿತ್ತು. ಇನ್ನೇನು ಶೀಘ್ರದಲ್ಲೇ ಮುಖ್ಯ ಪರೀಕ್ಷೆ ಮೌಲ್ಯಮಾಪನ ಮಾಡಲು ಕೆಪಿಎಸ್‌ಸಿ ಸಿದ್ಧತೆ ನಡೆಸಿತ್ತು. ಆದರೆ ಕೆಎಟಿಯು ಕೆಎಎಸ್‌ ಅಧಿಸೂಚನೆ ರದ್ದುಗೊಳಿಸಿರುವುದರಿಂದ ಕೆಪಿಎಸ್‌ಸಿ ಹೊಸ ಅಧಿಸೂಚನೆ ಹೊರಡಿಸುತ್ತದೆಯೋ ಅಥವಾ ಪ್ರಸ್ತುತವಿರುವ ಅಧಿಸೂಚನೆಯನ್ನು ಮುಂದುವರಿಸುತ್ತದೆಯೋ ಎಂದು ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ಬರೆದಿರುವ ಲಕ್ಷಾಂತರ ಅಭ್ಯರ್ಥಿಗಳು ಗೊಂದಲದಲ್ಲಿದ್ದಾರೆ.

ಸಿಎಂ 'ಸಂವಿಧಾನ ಬದ್ಧ' ತೀರ್ಮಾನ ಮಾಡಲಿ

ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ ರಾಜ್ಯಾಧ್ಯಕ್ಷ ಸಂತೋಷ್‌ ಮರೂರು ʼ ದ ಪೆಢರಲ್‌ ಕರ್ನಾಟಕʼ ಜತೆ ಮಾತನಾಡಿ," ನೇಮಕಾತಿಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶೇ.56 ಮೀಸಲು ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ದವಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಸಾಂವಿಧಾನಿಕ ಹಾಗೂ ನ್ಯಾಯಿಕ ರಕ್ಷಣೆ ಇಲ್ಲ ಎಂದು ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಈಗ ಸಿಎಂ ಆಗಿದ್ದು ತಮ್ಮ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಆ ಮೂಲಕ ನೇಮಕಾತಿಗಳಲ್ಲಿ ಸಾಮಾಜಿಕ ನ್ಯಾಯ ಒದಗಿಸಬೇಕು." ಎಂದು ತಿಳಿಸಿದರು.

ಸುಪ್ರೀಂ ತೀರ್ಪಿನಿಂದ ಸರ್ಕಾರಕ್ಕೆ ಹಿನ್ನೆಡೆ

ಮೀಸಲಾತಿ ಪ್ರಮಾಣ ಶೇ.50 ಕ್ಕಿಂತ ಹೆಚ್ಚಿರಬಾರದು ಎಂದು 1992 ಇಂದ್ರಾಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಸಂವಿಧಾನದ 141 ವಿಧಿ ಅನ್ವಯ ಸುಪ್ರೀಂ ನೀಡಿದ ತೀರ್ಪುಗಳು ದೇಶದ ಎಲ್ಲಾ ನ್ಯಾಯಾಲಯಗಳಿಗೂ ಅನ್ವಯವಾಗಲಿದೆ. ರಾಜ್ಯ ಸರ್ಕಾರ ನೇಮಕಾತಿ ಮೀಸಲಾತಿಯಲ್ಲಿ ಶೇ. 56 ಮೀಸಲಾತಿ ನೀಡಿರುವುದು ಸುಪ್ರೀಂ ತೀರ್ಪಿನ ಸ್ಪಷ್ಟ ಉಲ್ಲಂಘನೆ. ಈ ಕುರಿತು ಕೆಎಟಿಯಲ್ಲಿ ಅಧಿಸೂಚನೆ ರದ್ದುಗೊಳಿಸುವಂತೆ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ದ ಸರ್ಕಾರ ಮತ್ತು ಕೆಪಿಎಸ್ಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೂ ಅಲ್ಲಿಯೂ ಸರ್ಕಾರಕ್ಕೆ ಹಿನ್ನೆಡೆಯಾಗಲಿದೆ. ಅಭ್ಯರ್ಥಿಗಳ ಭವಿಷ್ಯ ಹಾಳುಮಾಡಲೆಂದೇ ನೇಮಕಾತಿಗಳನ್ನು ಕೋರ್ಟ್‌ಗೆ ತಂದು ವಿಳಂಬ ಮಾಡಲಾಗುತ್ತಿದೆ. ಕೆಪಿಎಸ್‌ಸಿ ಸುಧಾರಣೆಗೆ ಪಿ.ಸಿ. ಹೋಟಾ ಸಮಿತಿಯ ಅಂಶಗಳನ್ನು ಅಳವಡಿಸಿಕೊಂಡರೆ ನೇಮಕಾತಿಗಳಿಗೂ ವೇಗ ಸಿಗಲಿದೆ ಎಂದು ಹೈಕೋರ್ಟ್‌ ವಕೀಲ ಉಮಾಪತಿ ʼದ ಫೆಡರಲ್‌ ಕರ್ನಾಟಕಕ್ಕೆʼ ಹೇಳಿದರು.

ಮರು ಅಧಿಸೂಚನೆ ಹೊರಡಿಸಲಿ

ಕೆಪಿಎಸ್‌ಸಿ ಹೊರಡಿಸಿದ್ದ 384 ಗೆಜೆಟೆಡ್‌ ಪ್ರೊಬೆಷನರಿ ಅಧಿಸೂಚನೆ ಆರಂಭವಾದಾಗಿನಿಂದ ಮುಖ್ಯ ಪರೀಕ್ಷೆ ಬರೆಯುವವರೆಗೂ ಅಭ್ಯರ್ಥಿಗಳು ಗೊಂದಲದಲ್ಲೇ ಪರೀಕ್ಷೆ ಬರೆಯುವಂತಾಗಿತ್ತು. ಪೂರ್ವಭಾವಿ ಪರೀಕ್ಷೆಯಲ್ಲಿ ಭಾಷಾಂತರ ದೋಷದಿಂದ ಎರಡು ಬಾರಿ ಪರೀಕ್ಷೆ ನಡೆಸಲಾಯಿತು. ಮುಖ್ಯ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡಿರಲಿಲ್ಲ. ಕೆಎಟಿ ಹಾಗೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ 380ಕ್ಕೂ ಹೆಚ್ಚು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ರಾತ್ರಿ ಪೂರ್ತಿ ಮಳೆಯಲ್ಲಿ ಕೆಪಿಎಸ್‌ಸಿ ಭವನದ ಮುಂದೆ ಕಾದು ಮುಖ್ಯ ಪರೀಕ್ಷೆ ಬರೆಯಲು ಪ್ರವೇಶಪತ್ರ ಪಡೆದುಕೊಂಡು ಪರೀಕ್ಷೆ ಬರೆದಿದ್ದರು. ಆದರೆ ಇದೀಗ ಮೀಸಲಾತಿ ವ್ಯತ್ಯಾಸದಿಂದಾಗಿ ಅಧಿಸೂಚನೆಯನ್ನೇ ಕೆಎಟಿ ರದ್ದುಗೊಳಿಸಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಪಿಎಸ್‌ಸಿ ಮತ್ತೊಮ್ಮೆ ಮರು ಅಧಿಸೂಚನೆ ಹೊರಡಿಸಬೇಕು ಎಂದು ಮುಖ್ಯ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಹಾಸನದ ಸೌಮ್ಯ ʼದ ಫೆಡರಲ್‌ ಕರ್ನಾಟಕ' ಕ್ಕೆ ತಿಳಿಸಿದರು.

ರಾಜ್ಯದಲ್ಲಿ ಒಳ ಮೀಸಲಾತಿ ಸಮೀಕ್ಷೆಗೆ ಆಯೋಗ ರಚನೆ ಮಾಡಿ ಒಂದು ವರ್ಷ ಸಮೀಪಿಸುತ್ತಿದೆ. ಕಳೆದ ಒಂದು ವರ್ಷದಿಂದ ಸರ್ಕಾರ ಯಾವುದೇ ಹೊಸ ಅಧಿಸೂಚನೆ ಹೊರಡಿಸಿಲ್ಲ. ಅಧಿಸೂಚನೆ ಹೊರಡಿಸಿರುವ ಹುದ್ದೆಗಳು ಮೀಸಲಾತಿ ವ್ಯತ್ಯಾಸದಿಂದ ಕೋರ್ಟ್‌ನಲ್ಲಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬೇಗ ಸೂಕ್ತ ತೀರ್ಮಾನ ಕೈಗೊಂಡು ಹೊಸ ನೇಮಕಾತಿಗಳು ನಡೆಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Read More
Next Story