Krishna Upper Bank Project: Special Cabinet Meeting Today to Decide Land Compensation Rates
x

ಆಲಮಟ್ಟಿ ಜಲಾಶಯ

ಕೃಷ್ಣಾ ಮೇಲ್ದಂಡೆ ಯೋಜನೆ: ಕೋಟಿ ಕೋಟಿ ಹಣಕ್ಕೆ ಹರಸಾಹಸ! ಮೂರು ಇಲಾಖೆಯ ಅನುದಾನ ಕಡಿತ ʼಗ್ಯಾರಂಟಿʼ?

ಯುಕೆಪಿ-3 ಪೂರ್ಣಗೊಳಿಸಲು 70 ಸಾವಿರ ಕೋಟಿ ರೂ. ವೆಚ್ಚವಾಗುವ ಅಂದಾಜು ಇದ್ದು, ಶಿಕ್ಷಣ, ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆಯ ಅನುದಾನವನ್ನು ಬಳಕೆಗೆ ಸರ್ಕಾರವು ಗಂಭೀರವಾಗಿ ಚಿಂತನೆ ನಡೆಸಿದೆ.


ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಿಗೆ ಕೋಟಿ ಕೋಟಿ ಹಣ ಹೊಂದಿಸಲು ಹರಸಾಹಸ ಪಡುತ್ತಿರುವ ನಡುವೆಯೇ ಇದೀಗ ಮತ್ತೊಂದು ಹೊರೆ ಎದುರಾಗಿದೆ. ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಭೂಸ್ವಾಧೀನ ಪರಿಹಾರ ದರ ನಿಗದಿಗೊಳಿಸಿದ ಬೆನ್ನಲ್ಲೇ ಅನುದಾನ ಒದಗಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತವನ್ನು ಪೂರ್ಣಗೊಳಿಸಲು ಸುಮಾರು 70 ಸಾವಿರ ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ ಎಂದು ಸರ್ಕಾರ ತಿಳಿಸಿದೆ. ಆದರೆ ಅಷ್ಟೊಂದು ಹಣ ಯಾವ ಮೂಲದಿಂದ ಸಂಗ್ರಹಿಸಬೇಕು ಎಂಬುದು ಸರ್ಕಾರಕ್ಕೆ ತಲೆಬಿಸಿಯಾಗಿದೆ.

ಮೂಲಗಳ ಪ್ರಕಾರ ಸರ್ಕಾರವು ಶಿಕ್ಷಣ, ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆಯ ಅನುದಾನವನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ಈ ಮೂರು ಇಲಾಖೆಗಳಿಗೆ ಬಜೆಟ್‌ನಲ್ಲಿ ನೀಡಲಾದ ಅನುದಾನದ ಪೈಕಿ ಶೇ.10 ರಷ್ಟು ಕಡಿತ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ 3,433.84 ಕೋಟಿ ರೂ.ಗಳನ್ನು ಬಳಕೆಯಾಗಿದೆ. ಸರ್ಕಾರದ ಅನುದಾನದಲ್ಲಿ ಒಂದೆಡೆ ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿದ್ದರೆ, ಇನ್ನೊಂದೆಡೆ ಯುಕೆಪಿ-3ನೇ ಹಂತಕ್ಕೆ ಅನುದಾನ ಸಂಗ್ರಹ ಮಾಡುವ ನಿಟ್ಟಿನಲ್ಲಿ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಅನುದಾನ ಒದಗಿಸುವ ಕುರಿತು ಮೌಖಿಕ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಣ, ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆಗೆ ಖೋತಾ?

ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ 45,296 ಕೋಟಿ ರೂ., ಆರೋಗ್ಯ ಇಲಾಖೆಗೆ 17,473 ಕೋಟಿ ರೂ. ಮತ್ತು ನಗರಾಭಿವೃದ್ಧಿ ಇಲಾಖೆಗೆ 10 ಸಾವಿರ ಕೋಟಿ ರೂ.ಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಮೂರು ಇಲಾಖೆಗೆ ನೀಡಿರುವ ಅನುದಾನದಲ್ಲಿ ಪ್ರತಿ ಇಲಾಖೆಯಿಂದ ಶೇ.10ರಷ್ಟು ಅನುದಾನವನ್ನು ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಳಸಿಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

ಶಿಕ್ಷಣ ಇಲಾಖೆಗೆ ನೀಡಿರುವ 45,296 ಕೋಟಿ ರೂ.ನಲ್ಲಿ ಶೇ.10ರಷ್ಟು ಅಂದರೆ 4,528 ಕೋಟಿ ರೂ., ಆರೋಗ್ಯ ಇಲಾಖೆಗೆ ನೀಡಿರುವ 17473 ಕೋಟಿ ರೂ.ನಲ್ಲಿ ಶೇ.10ರಷ್ಟು ಅಂದರೆ 1,747 ಕೋಟಿ ರೂ. ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಒಂದು ಸಾವಿರ ಕೋಟಿ ರೂ.ನಷ್ಟು ಅನುದಾನವನ್ನು ಯುಕೆಪಿ ಯೋಜನೆ ಬಳಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿದೆ ಎಂದು ಹೇಳಲಾಗಿದೆ.

ವಿವಿಧ ಇಲಾಖೆಯಿಂದಲೂ ಕಡಿತ?

ಆರೋಗ್ಯ, ಶಿಕ್ಷಣ ಮತ್ತು ನಗರಾಭಿವೃದ್ಧಿ ಇಲಾಖೆ ಮಾತ್ರವಲ್ಲದೇ, ಇತರೆ ಇಲಾಖೆಯಿಂದಲೂ ಅನುದಾನವನ್ನು ಕಡಿತ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಹಣದ ಪೈಕಿ ಅಭಿವೃದ್ದಿ ಕಾಮಗಾರಿಗಳಿಗೆ ಹಂಚಿಕೆಯಾಗಿರುವ ಹಣವನ್ನೇ ಕಡಿತ ಮಾಡಲಾಗುತ್ತದೆ. ರಾಜ್ಯದ ಬಜೆಟ್‌ನಲ್ಲಿ ಹಣಕಾಸು ವರ್ಷದಲ್ಲಿ ವಿವಿಧ ಇಲಾಖೆಯ ಅಭಿವೃದ್ದಿ ಕಾರ್ಯಗಳಿಗೆ 80,197 ಕೋಟಿ ರೂಪಾಯಿವರೆಗೂ ಅನುದಾನ ಹಂಚಿಕೆ ಮಾಡಲಾಗಿದೆ. ಈ ಹಣದಲ್ಲಿಯೇ ಕಡಿತ ಮಾಡಲಾಗುತ್ತದೆ. ಆದರೇ, ಗ್ಯಾರಂಟಿ ಯೋಜನೆಗೆ ನೀಡಲಾದ ಅನುದಾನವನ್ನು ಕಡಿತಗೊಳಿಸುವುದಿಲ್ಲ. ಪ್ರಸಕ್ತ ವರ್ಷದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಹಂಚಿಕೆಯಾದ ಹಣದ ಪೈಕಿ ಆರೋಗ್ಯ, ಶಿಕ್ಷಣ ಮತ್ತು ನಗರಾಭಿವೃದ್ಧಿ ಇಲಾಖೆ ಹೊರತು ಪಡಿಸಿ ಇತರೆ ಇಲಾಖೆಗಳಿಂದಲೂ ಒಟ್ಟು 15 ಸಾವಿರ ಕೋಟಿ ರೂಪಾಯಿ ಹಣ ಕಡಿತ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ವೆಚ್ಚಗಳಿಗೆ ನೀಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

20 ಸಾವಿರ ಕೋಟಿ ರೂ. ಆರ್ಥಿಕ ಹೊರೆ

ಸರ್ಕಾರವು ನೀರಾವರಿಯೋಜನೆಗಾಗಿ ಪ್ರಸ್ತಕ ಆರ್ಥಿಕ ವರ್ಷದಲ್ಲಿ 22 ಸಾವಿರ ಕೋಟಿ ರು. ಅನುದಾನವನ್ನು ಮೀಸಲಿಟ್ಟಿದೆ. ಪ್ರತಿ ವರ್ಷ 15-20 ಸಾವಿರ ಕೋಟಿ ರೂ. ಯೋಜನೆಗೆ ಬೇಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಬೇಕಾಗಿರುವ ವಾರ್ಷಿಕ 20 ಸಾವಿರ ಕೋಟಿ ರೂ. ಹೊಸ ಆರ್ಥಿಕ ಹೊರೆಯಾಗಿದೆ.

20 ಸಾವಿರ ಕೋಟಿ ರೂ. ಹೆಚ್ಚವರಿ ಆರ್ಥಿಕ ಹೊರೆ ಸರ್ಕಾರಕ್ಕೆ ಸಣ್ಣ ಮೊತ್ತವಲ್ಲ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ ಕೂಡಾ ಅತಿಮುಖ್ಯವಾಗಿರುವ ಕಾರಣಕ್ಕೆ ಹಣ ಹೊಂದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೆಲವು ಇಲಾಖೆಗಳ ಪ್ರಸ್ತಾವಿತ ಯೋಜನೆಗಳಿಗೆ ಧಕ್ಕೆಯಾಗದ ರೀತಿ ಅನುದಾನ ಕ್ರೋಢೀಕರಿಸಲಾಗುವುದು ಎಂದು ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.

ಆಲಮಟ್ಟಿ ಅಣೆಕಟ್ಟು ಎತ್ತರ: ಮುಳುಗಡೆ ಭೂಮಿಗೆ ಪರಿಹಾರ ಸಮಸ್ಯೆ

ಯುಕೆಪಿ 3ನೇ ಹಂತದಲ್ಲಿ ಆಲಮಟ್ಟಿ ಡ್ಯಾಂ ಎತ್ತರವನ್ನು 519 ಮೀಟರ್ ನಿಂದ 524 ಮೀಟರ್‌ವರೆಗೂ ಎತ್ತರಿಸಲಾಗುತ್ತಿದೆ. ಜಲಾಶಯ ಎತ್ತರಿಸಿದರೆ 75 ಸಾವಿರ ಎಕರೆ ಭೂಮಿ ಮುಳುಗಡೆಯಾಗಲಿದೆ. ಇಲ್ಲಿನ ರೈತರ ನೀರಾವರಿ ಭೂಮಿಗೆ ಎಕರೆಗೆ 40 ಲಕ್ಷ ರೂ. ಒಣ ಭೂಮಿಗೆ 30 ಲಕ್ಷ ರೂ ಪರಿಹಾರವನ್ನು ಘೋಷಣೆಯಾಗಿದೆ. ಇನ್ನು ನಾಲೆ ಮತ್ತು ಪುನರ್‌ವಸತಿಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಪೈಕಿ ಕೃಷಿಭೂಮಿಗೆ ಎಕರೆಗೆ 30 ಲಕ್ಷ ರೂಪಾಯಿ, ಒಣ ಭೂಮಿಗೆ 25 ಲಕ್ಷ ರೂ ಪರಿಹಾರ ಧನ ನೀಡಲು ನಿರ್ಧರಿಸಲಾಗಿದೆ. ಕೇವಲ ಭೂಸ್ವಾಧೀನ ಪರಿಹಾರಕ್ಕೆ ವಾರ್ಷಿಕ 20 ಸಾವಿರ ಕೋಟಿ ರೂ ಆರ್ಥಿಕ ಹೊರೆ ಬೀಳಲಿದೆ ಎನ್ನಲಾಗಿದೆ.

75,563 ಎಕರೆ ಹಿನ್ನೀರಿನಲ್ಲಿ ಮುಳುಗಡೆ!

ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರ್‌ನಿಂದ 524.25 ಮೀಟರ್‌ಗೆ ಎತ್ತರಿಸಲು ಸರ್ಕಾರ ಮುಂದಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ಅನುಷ್ಠಾನಕ್ಕೆ ಆರಂಭದಲ್ಲಿ 51,184 ಕೋಟಿ ರೂ. ಯೋಜನಾ ಮೊತ್ತ ಅಂದಾಜು ಮಾಡಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆಗೆ 17,627 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು. ಆದರೆ, ಈ ಯೋಜನೆ ಅನುಷ್ಠಾನಕ್ಕೆ ಒಟ್ಟು 1.33.867 ಎಕರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಈ ಪೈಕಿ 75,563 ಎಕರೆ ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ. ಇದವರೆಗೆ 29.566 ಎಕರೆ ಭೂಸ್ವಾಧೀನ ತೀರ್ಪು ಹೊರಡಿಸಲಾಗಿದ್ದು, ಉಳಿದ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದೆ.

ರಾಜ್ಯದ ಅತಿದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ , ಅಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳನ್ನು ಆಧರಿಸಿ, ಮಳೆ-ಆಶ್ರಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ಮೂರನೇ ಹಂತದಲ್ಲಿ, ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀಟರ್‌ನಿಂದ 524.25 ಮೀಟರ್‌ಗೆ ಹೆಚ್ಚಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 130 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಾಗಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಜತೆಗೆ ಕೊಪ್ಪಳ ಮತ್ತು ಗದಗ ಜಿಲ್ಲೆಗಳು ಸೇರ್ಪಡೆಯಾಗಿದೆ. ಮೊದಲ ಹಂತದಲ್ಲಿ ನಾರಾಯಣಪುರ, ಆಲಮಟ್ಟಿ ಡ್ಯಾಂಗಳ ಮೂಲಕ 4.25 ಲಕ್ಷ ಹೆಕ್ಟೇರ್ ನೀರಾವರಿ ಕಲ್ಪಿಸಿದರೆ, 2ನೇ ಹಂತದಲ್ಲಿ 1.97 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿತ್ತು. 1ನೇ ಹಂತ 1990ರಲ್ಲಿ ಪೂರ್ಣವಾದರೆ, 2ನೇ ಹಂತ 2000 ನೇ ಸಾಲಿನಲ್ಲಿ ಪೂರ್ಣಗೊಂಡಿತ್ತು. ಇದೀಗ ಮೂರನೇ ಹಂತದ ಪ್ರಕ್ರಿಯೆ ಆರಂಭಗೊಂಡಿದೆ.

ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯ

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ನೀರಾವರಿ ಸೌಲಭ್ಯ ದೊರೆಯುತ್ತದೆ. ಇದರಿಂದ ಕೃಷಿ ಚಟುವಟಿಕೆಗಳು ಸುಧಾರಿಸುತ್ತವೆ ಮತ್ತು ಕುಡಿಯುವ ನೀರಿನ ಪೂರೈಕೆ ಸುಧಾರಿಸುತ್ತದೆ. ಅಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಹೆಚ್ಚಿನ ಪ್ರದೇಶಗಳಿಗೆ ನೀರು ಹರಿಸಲು ಸಾಧ್ಯವಾಗುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ಉದ್ಯೋಗ ಸೃಷ್ಟಿಯಾಗುವ ಅವಕಾಶಗಳಿವೆ.

ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಹೆಚ್ಚಿಸಲು ನಿರ್ಣಯಿಸಲಾಗಿದೆ. ಇದರಿಂದ ಜಲಾಶಯದ ಸಂಗ್ರಹ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದಾಗಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಪ್ರದೇಶಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಪ್ರಮಾಣದ ನೀರು ಲಭ್ಯರುವುದರಿಂದ ಎರಡನೇ ಬೆಳೆಗೆ ಸಹ ನೀರು ಒದಗಿಸಲು ಸಾಧ್ಯವಾಗುತ್ತದೆ. ಇದು ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕೃಷ್ಣಾ ನ್ಯಾಯಾಧೀಕರಣದಿಂದಲೇ ಅನುಮತಿ

ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಹೆಚ್ಚಿಸಲು ಅನುಮತಿ ನೀಡಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಈ ಜಮೀನಿಗೆ 5.94 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು (ಸುಮಾರು 14 ರಿಂದ 15 ಲಕ್ಷ ಎಕರೆ) ಭೂಮಿಯ ನೀರಾವರಿ ಕಲ್ಪಿಸಬಹುದಾಗಿದೆ. ಯೋಜನೆಯನ್ನು ಅನುಷ್ಠಾನಗೊಳಿಸಲು ಮುಳುಗಡೆಯಾಗುವ, ಪುನರವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ ಮತ್ತು ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಒಟ್ಟು 1,40,844 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.

ಇದುವರೆಗೆ ಒಟ್ಟು 32,612 ಎಕರೆ ಜಮೀನಿನ ಭೂ ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಭೂಮಿಗೆ ಸಂಬಂಧಪಟ್ಟಂತೆ ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ ರಾಯಚೂರಿನ ನ್ಯಾಯಾಲಯದಲ್ಲಿ 28,649 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 28, 407 ಪ್ರಕರಣಗಳು ಹೆಚ್ಚುವರಿ ಪರಿಹಾರ ಕೋರಿ ಸಲ್ಲಿಸಿದ ಪ್ರಕರಣಗಳಾಗಿವೆ ಎನ್ನಲಾಗಿದೆ.

ಗ್ಯಾರಂಟಿ ಯೋಜನೆ ಅನುದಾನ ಮುಟ್ಟದಿರಲು ತೀರ್ಮಾನ?

ಅಭಿವೃದ್ಧಿಗೆ ಹಣದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪದೇ ಪದೆ ಹೇಳುತ್ತಿದ್ದರೂ, ವಾಸ್ತವದಲ್ಲಿ ರಾಜ್ಯದ ಬೊಕ್ಕಸ ಚಿಂತಾಜನಕ ಸ್ಥಿತಿಯಲ್ಲಿದೆ ಎಂಬ ಆಂತರಿಕ ವರದಿಯೊಂದು ಸರ್ಕಾರದ ನಿದ್ದೆಗೆಡಿಸಿದೆ. ಕೃಷ್ಣಾ ಯೋಜನೆಗೆ 70,000 ಕೋಟಿ ರೂ. ಹೊಂದಿಸಲು, ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಬೇಕಾಗಬಹುದು ಎಂದು ಹಣಕಾಸು ಇಲಾಖೆಯೇ ಸ್ಪಷ್ಟ ಎಚ್ಚರಿಕೆ ನೀಡಿತ್ತು.

ಆದರೆ, ಈಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಇಲಾಖೆಗಳ ಅನುದಾನವನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆಯೇ ಹೊರತು ಗ್ಯಾರಂಟಿ ಯೋಜನೆಯ ಅನುದಾನವನ್ನು ಬಳಕೆ ಮಾಡದಿರಲು ನಿರ್ಣಯಿಸಿದೆ. ಗ್ಯಾರಂಟಿ ಯೋಜನೆಗಾಗಿಯೇ ಸರ್ಕಾರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಕೆ ಮಾಡುತ್ತಿದೆ. ಗ್ಯಾರಂಟಿ ಯೋಜನೆಗೆ ಅನುದಾನವನ್ನು ಇತರೆ ಮೂಲಗಳಿಂದ ಹೊಂದಾಣಿಕೆ ಮಾಡಬೇಕಿರುವ ಅಗತ್ಯ ಇರುವ ಕಾರಣ ಆ ಯೋಜನೆಯ ಅನುದಾನವನ್ನು ಮುಟ್ಟದಿರುವ ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿ ಪರಿಶಿಷ್ಟರ ಅಭಿವೃದ್ಧಿಗೆ 2025-26 ನೇ ಸಾಲಿನಲ್ಲಿ ಒದಗಿಸಿದ ಒಟ್ಟು 42,017.51 ಕೋಟಿ ರೂ. ಅನುದಾನದಲ್ಲಿ 13,433.84 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗಿದೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ಮೀಸಲಿಟ್ಟ ಒಟ್ಟು ಅನುದಾನದಲ್ಲಿ ಅತೀ ಹೆಚ್ಚು 8,101.17 ಕೋಟಿ ರೂ. ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 7,438.08 ಕೋಟಿ ರೂ. ಅನ್ನು 'ಗೃಹ ಲಕ್ಷ್ಮಿ'ಗೆ ನೀಡಲಾಗಿದೆ. ಗೃಹ ಲಕ್ಷ್ಮಿಗೆ ಬಜೆಟ್‌ನಲ್ಲಿ 28,608.40 ಕೋಟಿ ರೂ. ಒದಗಿಸಲಾಗಿದ್ದು, ಅದರಲ್ಲಿ ಎಸ್‌ಸಿಎಸ್‌ಪಿಯಿಂದ 5,364 ಕೋಟಿ ರೂ., ಟಿಎಸ್‌ಪಿಯಿಂದ 2,074.08 ಕೋಟಿ ರೂ. ನೀಡಲು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ಹೇಳಿವೆ. ಎಸ್‌ಸಿಎಸ್‌ಪಿ ಅಡಿ 507.49 ಕೋಟಿ ರೂ. ಮತ್ತು ಟಿಎಸ್‌ಪಿ ಅಡಿ 400.05 ಕೋಟಿ ರೂ. ಸೇರಿ ಒಟ್ಟು 907.54 ಕೋಟಿ ಹಳೆ ಬಾಕಿ ಉಳಿದಿದೆ. ಅದನ್ನೂ ಒಳಗೊಂಡು ಪ್ರಸಕ್ತ ಸಾಲಿನಲ್ಲಿ 8,345.62 ಕೋಟಿ ಲಭ್ಯವಿದೆ. 23,05,619 ಎಸ್‌ಸಿ, 9,01,122 ಎಸ್‌ಟಿ ಫಲಾನುಭವಿಗಳು ಇದ್ದಾರೆಂದು ಇಲಾಖೆ ಅಂದಾಜಿಸಿದ್ದು, ಈ ಅಂಕಿಅಂಶದ ಆಧಾರದಲ್ಲಿ 1,290.79 ಕೋಟಿ ಉಳಿಕೆ ಆಗಬಹುದು ಎಂದೂ ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.


Read More
Next Story