Government orders establishment of award in memory of Abhinaya Saraswati actress B. Sarojadevi
x

ನಟಿ  ಬಿ. ಸರೋಜಾದೇವಿ

ಬಿ.ಸರೋಜಾದೇವಿ ಸ್ಮರಣಾರ್ಥ ʼಅಭಿನಯ ಸರಸ್ವತಿʼ ಪ್ರಶಸ್ತಿ ಸ್ಥಾಪನೆ

2025ರಿಂದ ಜಾರಿಗೆ ಬರುವಂತೆ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಒಂದು ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.


Click the Play button to hear this message in audio format

ಪಂಚಭಾಷಾ ನಟಿ ದಿವಂಗತ ಬಿ.ಸರೋಜಾದೇವಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಪರಿಗಣಿಸಿ ರಾಜ್ಯ ಸರ್ಕಾರವು 'ಅಭಿನಯ ಸರಸ್ವತಿ ಬಿ.ಸರೋಜಾ ದೇವಿ' ಪ್ರಶಸ್ತಿ ಸ್ಥಾಪಿಸಿದೆ.

ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ-2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯ ನಿಯಮದಂತೆ 2025ರಿಂದಲೇ ಜಾರಿಗೆ ಬರುವಂತೆ ಪ್ರಶಸ್ತಿ ಸ್ಥಾಪಿಸಲಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಅರ್ಹತೆ ಏನು?

ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿಯಾಗಿದೆ.

ʼಕರ್ನಾಟಕ ರತ್ನʼ ಘೋಷಿಸಿದ್ದ ಸರ್ಕಾರ

ಅಭಿನಯ ಸರಸ್ವತಿ ಬಿ. ಸರೋಜಾದೇವಿ ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿ, ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರವು ʼಕರ್ನಾಟಕ ರತ್ನʼ ಪ್ರಶಸ್ತಿ ಘೋಷಿಸಿದೆ. ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಿದೆ.

ಮೊದಲ ಮಹಿಳಾ ಸೂಪರ್‌ಸ್ಟಾರ್

ಬೆಂಗಳೂರಿನಲ್ಲಿ 1938ರ ಜನವರಿ 7 ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ಸರೋಜಾದೇವಿ, ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಅವರ ತಂದೆ ಭೈರಪ್ಪ ಅವರು ನೃತ್ಯ ಕಲಿಯಲು ಮತ್ತು ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಪ್ರೋತ್ಸಾಹಿಸಿದರು. 13ನೇ ವಯಸ್ಸಿನಲ್ಲಿ ಒಂದು ಸಮಾರಂಭದಲ್ಲಿ ಹಾಡುತ್ತಿದ್ದಾಗ ಬಿ.ಆರ್. ಕೃಷ್ಣಮೂರ್ತಿಯವರು ಚಿತ್ರದ ಪ್ರಸ್ತಾಪ ನೀಡಿದರೂ ಅದನ್ನು ನಿರಾಕರಿಸಿದ್ದರು.

17ನೇ ವಯಸ್ಸಿನಲ್ಲಿ, ಸರೋಜಾದೇವಿ ಅವರನ್ನು ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದು ಗುರುತಿಸಲಾಯಿತು. 1955ರಲ್ಲಿ ತೆರೆಕಂಡ 'ಮಹಾಕವಿ ಕಾಳಿದಾಸ' ಚಿತ್ರವು ಅವರಿಗೆ ಕನ್ನಡದಲ್ಲಿ ದೊಡ್ಡ ಯಶಸ್ಸು ನೀಡಿತು. 1957ರಲ್ಲಿ 'ಪಾಂಡುರಂಗ ಮಹಾತ್ಯಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, 1970 ರ ದಶಕದ ಅಂತ್ಯದವರೆಗೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು.

Read More
Next Story