ಬೆಳಗಾವಿ ಸುವರ್ಣಸೌಧಕ್ಕೆ ಭೂಮಿ ಕೊಟ್ಟವರಿಗೆ ನೀರು ಕೊಡದ ಸರ್ಕಾರ; ಗ್ರಾಮಗಳಲ್ಲಿ ನೀರಿಗಾಗಿ ನಿತ್ಯ ಪರದಾಟ
x

ಬೆಳಗಾವಿ ಸುವರ್ಣಸೌಧದ ಸಮೀಪದ ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಬೆಳಗಾವಿ ಸುವರ್ಣಸೌಧಕ್ಕೆ ಭೂಮಿ ಕೊಟ್ಟವರಿಗೆ ನೀರು ಕೊಡದ ಸರ್ಕಾರ; ಗ್ರಾಮಗಳಲ್ಲಿ ನೀರಿಗಾಗಿ ನಿತ್ಯ ಪರದಾಟ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ಮನೆಗೂ ಶುದ್ಧ ನೀರು ಪೂರೈಸುವ ಜಲಜೀವನ್ ಮಿಷನ್ ಸೇರಿದಂತೆ ಹಲವು ಯೋಜನೆಗಳನ್ನು ತಂದರೂ ಹಲಗಾ ಗ್ರಾಮದಲ್ಲಿ ಮಾತ್ರ ನೀರಿನ ಸಮಸ್ಯೆ ಬಗೆಹರಿದಿಲ್ಲ. ನಳಗಳ ಮುಂದೆ ಕೊಡಗಳನ್ನು ಇಟ್ಟು ಕಾಯಬೇಕಾದ ಪರಿಸ್ಥಿತಿ ಹೇಳತೀರದಾಗಿದೆ.


Click the Play button to hear this message in audio format

ಉತ್ತರ ಕರ್ನಾಟಕ ಭಾಗದ ಶಕ್ತಿಸೌಧವಾದ ಬೆಳಗಾವಿಯ ಸುವರ್ಣಸೌಧದ ನೆರಳಲ್ಲೇ ನೀರಿಗೆ ಹಾಹಾಕಾರ ಎದುರಾಗಿದೆ. ಸುವರ್ಣಸೌಧ ನಿರ್ಮಾಣಕ್ಕಾಗಿ ಭೂಮಿ ನೀಡಿದ ಗ್ರಾಮಸ್ಥರು ಈಗ ಹನಿ ನೀರಿಗೂ ತತ್ವಾರ ಎದುರಿಸುತ್ತಿದ್ದಾರೆ.

ವರ್ಷಕ್ಕೊಮ್ಮೆ ಚಳಿಗಾಲದ ಅಧಿವೇಶನ ನಡೆಸಿ, ರಾಜ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ, ಪರಿಹಾರ ಕಂಡುಕೊಳ್ಳುವ ಸರ್ಕಾರವು ಸುವರ್ಣಸೌಧ ಸಮೀಪವೇ ಇರುವ ಗ್ರಾಮಗಳ ನೀರಿನ ಬವಣೆ ನೀಗಿಸದಿರುವುದು ದುರ್ದೈವ. ಇಲ್ಲಿನ ಹಲಗಾ ಗ್ರಾಮದಲ್ಲಿ ಪ್ರತಿ ದಿನ ನೀರಿಗಾಗಿ ಗ್ರಾಮಸ್ಥರಲ್ಲಿ ಜಗಳ ತಪ್ಪಿದ್ದಲ್ಲ. ಹಗಲು ರಾತ್ರಿ ಎನ್ನದೇ ನಳಗಳ ಮುಂದೆ ಕೊಡಗಳನ್ನು ಇರಿಸಿ ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ಇಲ್ಲಿದೆ. ದಶಕದಿಂದ ನೀರಿಗೆ ಹಾಹಾಕಾರ ಎದುರಾದರೂ ಸರ್ಕಾರಗಳು ಪರಿಹಾರ ಸೂಚಿಸಿಲ್ಲ. ಈ ಬಗ್ಗೆ ʻದ ಫೆಡರಲ್ ಕರ್ನಾಟಕʼ ಹಲಗಾ ಗ್ರಾಮದ ಜನರ ಬವಣೆಯನ್ನು ತೆರೆದಿಟ್ಟಿದೆ.

ನೀರಿನ ಬವಣೆಗೆ ಜನ ಹೈರಾಣ

ಹಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ಸುವರ್ಣಸೌಧವಿದೆ. ಕಣ್ಣಿಗೆ ಕಾಣಿಸುವಷ್ಟು ಸಮೀಪವಿರುವ ಹಲಗಾ ಗ್ರಾಮದಲ್ಲಿ ಸುಮಾರು 8 ಸಾವಿರ ಜನರಿದ್ದಾರೆ. ಇಲ್ಲಿ 18 ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ಆದರೆ, ಗ್ರಾಮದಲ್ಲಿ ನೀರಿನ ಬವಣೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ಮನೆಗೂ ಶುದ್ಧ ನೀರು ಪೂರೈಸುವ ಜಲಜೀವನ್ ಮಿಷನ್ ಸೇರಿದಂತೆ ಹಲವು ಯೋಜನೆಗಳನ್ನು ತಂದರೂ ಹಲಗಾ ಗ್ರಾಮದಲ್ಲಿ ಮಾತ್ರ ನೀರಿನ ಸಮಸ್ಯೆ ಬಗೆಹರಿದಿಲ್ಲ. ನಳಗಳ ಮುಂದೆ ಕೊಡಗಳನ್ನು ಇಟ್ಟು ಕಾಯಬೇಕಾದ ಪರಿಸ್ಥಿತಿ ಹೇಳತೀರದಾಗಿದೆ.

ಸುವರ್ಣಸೌಧ ನಿರ್ಮಿಸಲು ಇದೇ ಹಲಗಾ ಗ್ರಾಮದಿಂದ ಭೂಮಿ ಪಡೆಯಲಾಗಿದೆ. ಕೂಗಳತೆಯಲ್ಲಿ ಅಧಿವೇಶನ ನಡೆದರೂ ಹಲಗಾದಲ್ಲಿ ಮಾತ್ರ ನೀರಿಗಾಗಿ ಪರದಾಡುವ ಸ್ಥಿತಿ ನಿಂತಿಲ್ಲ. ಪಂಚಾಯ್ತಿಯವರು ನೀರು ಯಾವಾಗ ಬಿಡುತ್ತಾರೆ ಎಂಬುದು ಗೊತ್ತಿಲ್ಲ, ಕೆಲವೊಮ್ಮೆ ವಾರವಾದರೂ ನೀರು ಬಿಡುವುದೇ ಇಲ್ಲ ಎಂಬುದು ಗ್ರಾಮಸ್ಥರ ಅಳಲು.

ಸರದಿ ಸಾಲಿನಲ್ಲಿ ಬಿಂದಿಗೆ ಇಟ್ಟು ಕಾವಲು

ಬೆಳಿಗ್ಗೆಯೇ ಬಿಂದಿಗೆಗಳನ್ನು ಇಟ್ಟು ನೀರು ಯಾವಾಗ ಬರುತ್ತದೆ ಅಂತಾ ಕಾವಲು ಕಾಯುವ ಪರಿಸ್ಥಿತಿ ಹಲಗಾ ಗ್ರಾಮದ ನಿವಾಸಿಗಳದ್ದಾಗಿದೆ. ಕೆಲವೊಮ್ಮೆ ವಾರವಾದರೂ ನೀರು ಬರಲ್ಲ. ಬಿಟ್ಟರೂ ಒಂದು ಮನೆಗೆ 4 ರಿಂದ 5 ಬಿಂದಿಗೆ ಮಾತ್ರ ಸಿಗುತ್ತದೆ.

ʼದ ಫೆಡರಲ್ ಕರ್ನಾಟಕʼ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ನೀರು ಬಾರದೇ ಕೊಡಗಳನ್ನು ವಾಪಸ್ ತೆಗೆದುಕೊಂಡು ಹೋಗುವ ದೃಶ್ಯ ಕಂಡುಬಂದಿತು.

ನೀರಿಗಾಗಿ ಪದೇ ಪದೇ ಜಗಳ

ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಜಗಳ ಸಾಮಾನ್ಯವೆನಿಸಿದೆ. ನಾವು ಎಷ್ಟೇ ಜಗಳವಾಡಿದರೂ ಪಂಚಾಯ್ತಿಯವರು ಸ್ವಲ್ಪ ಹೊತ್ತು ಮಾತ್ರ ನೀರು ಬಿಡುತ್ತಾರೆ. ಒಂದು ಮನೆಗೆ 4-5 ಬಿಂದಿಗೆ ನೀರು ಸಿಕ್ಕರೆ ಹೆಚ್ಚು ಎಂದು 60 ವರ್ಷದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ನೀರು ಒಂದು ವಾರವಾದರೂ ಬರಲ್ಲ, ಒಂದು ವೇಳೆ ನೀರು ಬಂದರೂ ಅದಕ್ಕಾಗಿ ಜಗಳಗಳು ನಡೆಯುತ್ತವೆ. ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ಯಾರೊಬ್ಬರು ಮುಂದೆ ಬಂದಿಲ್ಲ ಎಂದು ದೂರಿದರು.

ಕುಡಿಯಲು ಯೋಗ್ಯವಲ್ಲದ ನೀರು

ಪಂಚಾಯ್ತಿಯಿಂದ ಬಿಡುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಬಳಕೆಗೆ ಮಾತ್ರ ಉಪಯೋಗಿಸುತ್ತೇವೆ. ಕೆಲವರು ವಿಧಿಯಿಲ್ಲದೇ ಅದೇ ನೀರನ್ನು ಕಾಯಿಸಿ ಕುಡಿಯುತ್ತಾರೆ. ಸರ್ಕಾರಗಳು ಕುಡಿಯುವ ನೀರಿಗಾಗಿ ಕೋಟಿ ಕೋಟಿ ಖರ್ಚು ಮಾಡುತ್ತಿವೆ. ಆದರೆ, ಹಲಗಾ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಜತೆಗೆ ಬಳಕೆಗೂ ಸಮರ್ಪಕವಾದ ನೀರು ಪೂರೈಸಬೇಕು ಎಂದು ಮಹಿಳೆಯರು ಆಗ್ರಹಿಸಿದರು.

ಜಮೀನು ಹೋಗಿದೆ, ಆದರೆ ನೀರಿಲ್ಲ

ಸುವರ್ಣಸೌಧಕ್ಕೆ ನಮ್ಮ ಜಮೀನು ಹೋಗಿದೆ. ನಮ್ಮ ಕುಟುಂಬದ 15 ಎಕರೆ ಜಮೀನು ಹೋಗಿದೆ. ಜಮೀನು ಪಡೆಯುವ ಸಂದರ್ಭದಲ್ಲಿ ನಿಮಗೆ ನೀರಿನ ವ್ಯವಸ್ಥೆ ಸೇರಿ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಈವರೆಗೂ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಜಮೀನು ಕಳೆದುಕೊಂಡ 90 ವರ್ಷದ ವೃದ್ದ ಫಕೀರ ಅವರು ʼದ ಫೆಡರಲ್‌ ಕರ್ನಾಟಕʼದ ಬಳಿ ಅಸಮಾಧಾನ ತೋಡಿಕೊಂಡರು.

ಮತ್ತೊಬ್ಬ ರೈತ ನಾಗಪ್ಪ ಬಿಳಿಗುಂಜಿ ಮಾತನಾಡಿ, ಸುವರ್ಣಸೌಧಕ್ಕೆ 5 ಎಕರೆ ಭೂಮಿ ಕೊಟ್ಟಿದ್ದೇವೆ. ನಮ್ಮ ಭೂಮಿ ಪಡೆಯುವಾಗ ನೀರಿನ ಸೌಲಭ್ಯ ಒದಗಿಸುವ ವಾಗ್ದಾನ ನೀಡಿದ್ದರು. ಈಗ ಪಂಚಾಯ್ತಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕೇಳಿದರೆ ನಿಮಗೆ ಯಾರು ವಾಗ್ದಾನ ನೀಡಿದ್ದರೋ ಅವರನ್ನೇ ಕೇಳಿ ಎನ್ನುತ್ತಾರೆ. ಬೇಸಿಗೆಯಲ್ಲೂ ಹೆಚ್ಚು ಸಮಸ್ಯೆ ಕಾಡಲಿದೆ. ಅಂಗಡಿಯಿಂದ ನಿತ್ಯ ಕುಡಿಯುವ ನೀರಿನ ಬಾಟಲಿಗಳನ್ನು ಖರೀದಿಸಿ ತರಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

ಬೇಸಿಗೆಯಲ್ಲಿ ಪರಿಸ್ಥಿತಿ ಶೋಚನೀಯ

ಈಗ ವಾರಕ್ಕೊಮ್ಮೆಅಥವಾ ಎರಡು ಬಾರಿ ನೀರು ಬರುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ನಮ್ಮ ಪರಿಸ್ಥಿತಿ ಹೇಳತೀರದು, ಕಾಸು ಕೊಟ್ಟು ಟ್ಯಾಂಕರ್‌ನಿಂದ ನೀರು ಪಡೆದುಕೊಳ್ಳುತ್ತೇವೆ ಎಂದು ಗ್ರಾಮದ ಮಹಿಳೆ ಚಂದ್ರಕಲಾ ಅವರು ನೀರಿನ ಬವಣೆ ಕುರಿತು ವಿವರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರ ಅಭಿಪ್ರಾಯ

ಕೇವಲ 10 ದಿನ ನಡೆಯುವ ಅಧಿವೇಶನಕ್ಕೆ ಹಿಡಕಲ್ ಜಲಾಶಯದಿಂದ ಸುವರ್ಣಸೌಧಕ್ಕೆ ನೀರು ಕೊಡುತ್ತಾರೆ. ನಮಗೆ ಪ್ರತಿ ನಿತ್ಯ ನೀರು ಬೇಕು, ಹಿಡಕಲ್‌ ಜಲಾಶಯದಿಂದ ಸುವರ್ಣಸೌಧಕ್ಕೆ ಹರಿಸಿರುವಂತೆ ನಮಗೂ ನೀರಿನ ಸೌಲಭ್ಯ ಕೊಡಬೇಕು. ಸಾಕಷ್ಟು ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರು ದೂರಿದರು.

ಗ್ರಾಮದಲ್ಲಿ ಓವರ್‌ಹೆಡ್‌ ಟ್ಯಾಂಕ್‌, ಪೈಪ್‌ಲೈನ್‌ ಇದೆ. ಸುವರ್ಣ ಸೌಧಕ್ಕೆ ಹಿಡಕಲ್‌ ಜಲಾಶಯದಿಂದ ಸಂಪರ್ಕ ಒದಗಿಸಿರುವಂತೆ ಪಂಚಾಯ್ತಿಗೆ ಒದಗಿಸಿದರೆ ಶೇ 100 ರಷ್ಟು ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

ಸುವರ್ಣಸೌಧ ಕಾರಂಜಿಗೆ 4 ಕೋಟಿ ಖರ್ಚು

ಸುವರ್ಣಸೌಧ ಗಾರ್ಡನ್ ನಲ್ಲಿ ಅಲಂಕಾರಕ್ಕೆ ಕಾರಂಜಿಯನ್ನು 4 ಕೋಟಿ ವೆಚ್ಚದಲ್ಲಿ ಖರ್ಚು ಮಾಡಲಾಗಿದೆ. ಗಾರ್ಡನ್ ನಲ್ಲಿ ಹಸಿರು ಮಾಸದಂತೆ ನೀರನ್ನು ಬಿಡಲಾಗುತ್ತದೆ. ಆದರೆ, ಪಕ್ಕದಲ್ಲಿರುವ ಹಲಗಾ ಗ್ರಾಮದ ಜನ ನೀರಿಗೆ ಕಾಯುವಂತಹ ಪರಿಸ್ಥಿತಿ ಇದೆ.



Read More
Next Story