ರಾಷ್ಟ್ರೀಯ ಆರೋಗ್ಯ ಅಭಿಯಾನ: 28 ಸಾವಿರ ಗುತ್ತಿಗೆ ನೌಕರರಿಗೆ ʼಟರ್ಮ್‌ ಇನ್ಶೂರೆನ್ಸ್,ʼ  ಗಿಫ್ಟ್‌
x
ಎನ್‌ಎಚ್‌ಎಂ ನೌಕರರಿಗೆ ಟರ್ಮ್‌ ಇನ್ಶೂರೆನ್ಸ್ ಸೌಲಭ್ಯ ಒದಗಿಸುವ ಸಂಬಂಧ ಆರೋಗ್ಯ ಸಚಿವರು ಸಂಘಟನೆ ಮುಖಂಡರ ಜೊತೆ ಸಭೆ ನಡೆಸಿದರು

ರಾಷ್ಟ್ರೀಯ ಆರೋಗ್ಯ ಅಭಿಯಾನ: 28 ಸಾವಿರ ಗುತ್ತಿಗೆ ನೌಕರರಿಗೆ ʼಟರ್ಮ್‌ ಇನ್ಶೂರೆನ್ಸ್,ʼ ಗಿಫ್ಟ್‌

ಯಾವುದೇ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ 60 ಲಕ್ಷ ಪರಿಹಾರ ಸಿಗಲಿದೆ. ಶಾಶ್ವತ ಅಂಗವೈಕಲ್ಯಕ್ಕೆ 60 ಲಕ್ಷ ವಿಮೆ , ಭಾಗಶಃ ಅಂಗ ವೈಕಲ್ಯ ಉಂಟಾದರೆ ವಿಮೆ ಮೊತ್ತದ ಶೇ 70ರಷ್ಟು ಪರಿಹಾರ,. 60 ವರ್ಷದೊಳಗೆ ಸ್ವಾಭಾವಿಕ ಮರಣಕ್ಕೆ 10 ಲಕ್ಷ ಪರಿಹಾರ ಮೊತ್ತ ಸಿಗಲಿದೆ.


ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಟರ್ಮ್ ಇನ್ಶೂರೆನ್ಸ್ ಘೋಷಿಸುವ ಮೂಲಕ ರಾಜ್ಯ ಸರ್ಕಾರ ಹೊಸ ವರ್ಷದ ಉಡುಗೊರೆ ನೀಡಿದೆ.

ರಾಜ್ಯದಲ್ಲಿರುವ 28 ಸಾವಿರ ನೌಕರರಿಗೆ (ನರ್ಸ್‌ಗಳು, ಆಯಾಗಳು ಮತ್ತಿತರ ಆರೋಗ್ಯ ಸಹಾಯಕರು) ಟರ್ಮ್ ಇನ್ಶೂರೆನ್ಸ್ ಹಾಗೂ ಆರೋಗ್ಯ ವಿಮೆಯ ಸೌಲಭ್ಯ ಒದಗಿಸಿದ್ದು, ಜ.1 ರಂದು ಆಕ್ಸಿಸ್ ಬ್ಯಾಂಕ್ ಜೊತೆ ಒಡಂಬಡಿಕೆಗೆ ಸರ್ಕಾರ ಸಹಿ ಮಾಡಿದೆ.

ಎನ್ಎಚ್ಎಂ ನೌಕರರ ಬಹುದಿನದ ಬೇಡಿಕೆಯಾಗಿದ್ದ ಟರ್ಮ್ ಇನ್ಶೂರೆನ್ಸ್ ಯೋಜನೆ ಜಾರಿ ಸಂಬಂಧ 2024 ಡಿ. 21 ರಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸರ್ಕಾರದ ಅನುಮೋದನೆ ಪಡೆದಿದ್ದರು.

ಟರ್ಮ್ ಇನ್ಶೂರೆನ್ಸ್ ಲಾಭವೇನು?

ಆಕ್ಸಿಸ್ ಬ್ಯಾಂಕ್ ವೇತನ ಖಾತೆ ಯೋಜನೆಯಡಿ ಎನ್ಎಚ್ಎಂ ನೌಕರರಿಗೆ ಟರ್ಮ್ ಇನ್ಶೂರೆನ್ಸ್‌ ಸೌಲಭ್ಯ ಸಿಗಲಿದೆ. ಯಾವುದೇ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ವೈಯಕ್ತಿಕ ಅಪಘಾತ ವಿಮೆ ಯೋಜನೆಯಡಿ 60 ಲಕ್ಷ ಪರಿಹಾರ ಸಿಗಲಿದೆ. ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವವರಿಗೂ 60 ಲಕ್ಷ ವಿಮೆ ಸೌಲಭ್ಯ ದೊರೆಯಲಿದೆ.ಭಾಗಶಃ ಅಂಗ ವೈಕಲ್ಯ ಉಂಟಾದರೆ ವಿಮೆ ಮೊತ್ತದ ಶೇ 70ರಷ್ಟು ಪರಿಹಾರ ಸಿಗಲಿದೆ. 60 ವರ್ಷದೊಳಗೆ ಸ್ವಾಭಾವಿಕ ಮರಣ ಹೊಂದಿದರೆ 10 ಲಕ್ಷ ಪರಿಹಾರ ಮೊತ್ತ ಸಿಗಲಿದೆ.

ಯೋಜನೆ ರೂವಾರಿ ಡಾ. ನವೀನ್ ಭಟ್

ರಾಜ್ಯಮಟ್ಟದಲ್ಲಿ ಎನ್ಎಚ್ಎಂ ನೌಕರರಿಗೆ ಟರ್ಮ್ ಇನ್ಶೂರೆನ್ಸ್ ಯೋಜನೆ ಜಾರಿ ಸಂಬಂಧ ಮೊದಲ ಬಾರಿಗೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಡಾ. ನವೀನ್ ಭಟ್ ವೈ ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳನ್ನು ಕರೆದು 2021 ಡಿ.21 ರಂದು ಸಭೆ ಮಾಡಿದ್ದರು. ಪ್ರಸ್ತಾವ ಪರಿಶೀಲನೆ ವೇಳೆಗೆ ಡಾ.ನವೀನ್ ಭಟ್ ಅವರನ್ನು ಸಾರಿಗೆ ನಿಗಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಂದಿನಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಾಕಷ್ಟ ಹೋರಾಟ ಮಾಡಿದ್ದರೂ ಸರ್ಕಾರ ಬೇಡಿಕೆ ಈಡೇರಿಸಿರಲಿಲ್ಲ.ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಎನ್‌ಎಚ್‌ಎಂ ನೌಕರರಿಗೆ ಜಾರಿಗೊಳಿಸಬೇಕಿದ್ದ ಟರ್ಮ್‌ ಇನ್‌ ಶ್ಯುರೆನ್ಸ್‌ ಅನ್ನು ಸಾರಿಗೆ ನೌಕರರಿಗೆ ಒದಗಿಸಿದ್ದರು. ಮೂರು ವರ್ಷಗಳ ಬಳಿಕ ಡಾ. ನವೀನ್ ಭಟ್ ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.

ನಿರ್ದೇಶಕರ ಪರಿಶ್ರಮದಿಂದಾಗಿ ಈಗ 28,000 ಸಿಬ್ಬಂದಿಗೆ ಕೊನೆಗೂ ಟರ್ಮ್ ಇನ್ಶೂರೆನ್ಸ್ ಯೋಜನೆ ಜಾರಿಗೊಳಿಸುವಲ್ಲಿ ಸಫಲರಾಗಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಅಭಿನಂದನೆ ತಿಳಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಶ್ರೀಕಾಂತ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story