ಆಸ್ತಿ ಖರೀದಿದಾರರಿಗೆ ಸರ್ಕಾರದ ಬರೆ; ನಾಳೆಯಿಂದಲೇ ಆಸ್ತಿ ನೋಂದಣಿ ಶುಲ್ಕ ಹೆಚ್ಚಳ
x

ಆಸ್ತಿ ಖರೀದಿದಾರರಿಗೆ ಸರ್ಕಾರದ ಬರೆ; ನಾಳೆಯಿಂದಲೇ ಆಸ್ತಿ ನೋಂದಣಿ ಶುಲ್ಕ ಹೆಚ್ಚಳ

ಹೊಸ ನಿಯಮದನ್ವಯ ಈಗಿರುವ ಆಸ್ತಿ ನೋಂದಣಿ ಶುಲ್ಕವನ್ನು ಶೇ.1ರಿಂದ ಶೇ.2ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ನಿವೇಶನ, ಭೂಮಿ, ಫ್ಲ್ಯಾಟ್ ಹಾಗೂ ಮನೆ ಖರೀದಿಗೆ ಅನ್ವಯವಾಗಲಿದೆ


ರಾಜ್ಯ ಸರ್ಕಾರದ ಬೆಲೆ ಏರಿಕೆ ಪರ್ವ ಮುಂದುವರಿದಿದೆ. ಈಗಾಗಲೇ ಹಾಲು, ವಿದ್ಯುತ್, ನೀರು, ಸಾರಿಗೆ ಪ್ರಯಾಣ ಹಾಗೂ ಮೆಟ್ರೋ ದರ ಹೆಚ್ಚಿಸಿರುವ ಬೆನ್ನಲ್ಲೇ ಇದೀಗ ಆಸ್ತಿ ನೋಂದಣಿ ಶುಲ್ಕ ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೊಸ ದರ ಆ.31 ರಿಂದ ಜಾರಿಗೆ ಬರಲಿದೆ.

ಹೊಸ ನಿಯಮದನ್ವಯ ಈಗಿರುವ ಆಸ್ತಿ ನೋಂದಣಿ ಶುಲ್ಕವನ್ನು ಶೇ.1ರಿಂದ ಶೇ.2ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ನಿವೇಶನ, ಭೂಮಿ, ಫ್ಲ್ಯಾಟ್ ಹಾಗೂ ಮನೆ ಖರೀದಿಗೆ ಅನ್ವಯವಾಗಲಿದೆ. ಪ್ರಸ್ತುತ, ಶೇ.1ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6ರಷ್ಟು ಶುಲ್ಕ ಪಾವತಿ ಮಾಡಬೇಕಾಗಿತ್ತು. ಈಗ ನೋಂದಣಿ ಶುಲ್ಕ ಹೆಚ್ಚಿಸಿರುವ ಕಾರಣ ಒಟ್ಟು ಪಾವತಿ ಶುಲ್ಕ ಶೇ 7.6ಕ್ಕೆ ಏರಿಕೆಯಾಗಲಿದೆ ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಿದೆ.

2024-25 ಮತ್ತು 2025-೨೬ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಆದಾಯದಲ್ಲಿ ತೀವ್ರ ಕುಸಿತ ಕಂಡು ಬಂದಿರುವ ಕಾರಣ ನೋಂದಣಿ ಶುಲ್ಕ ಏರಿಕೆ ಮಾಡಲಾಗಿದೆ. ಈ ಹೆಚ್ಚುವರಿ ಶುಲ್ಕವು ಸ್ವಾಧೀನ, ಭೋಗ್ಯ ಪತ್ರ, ಸ್ಥಿರಾಸ್ತಿ, ಶುದ್ಧ ಕ್ರಯ ಪತ್ರ ಸೇರಿದಂತೆ ವಿವಿಧ ಆಸ್ತಿ ಖರೀದಿ ನೋಂದಣಿಗಳಿಗೆ ಅನ್ವಯ ಆಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.18 ರಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಆದಾಯ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿ, ಆದಾಯ ಏರಿಕೆಗೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ನೋಂದಣಿ ಶುಲ್ಕ ಏರಿಕೆ ಕುರಿತಂತೆ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ನೋಂದಣಿ ಶುಲ್ಕ ಪರಿಷ್ಕರಣೆಗೆ ತೀರ್ಮಾನಿಸಿದ್ದರು. ಆಂಧ್ರಪ್ರದೇಶ ಹೊರತುಪಡಿಸಿದರೆ ನೆರೆಯ ರಾಜ್ಯಗಳಿಗಿಂತ ಕರ್ನಾಟಕ ಅತ್ಯಂತ ಕಡಿಮೆ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಹೊಂದಿದೆ. ಹಾಗಾಗಿ ನೋಂದಣಿ ಶುಲ್ಕ ಏರಿಕೆ ಅನಿವಾರ್ಯ ಎಂಬುದು ಅಧಿಕಾರಿಗಳ ವಾದವಾಗಿದೆ. ತಮಿಳುನಾಡು ಮುದ್ರಾಂಕ ಮತ್ತು ನೋಂದಣಿ ಶುಲ್ಕ ಶೇ 11 ರಷ್ಟಿದ್ದರೆ, ಮಹಾರಾಷ್ಟ್ರದಲ್ಲಿ ಶೇ 7 ರಷ್ಟಿದೆ.

ಏರಿಕೆಗೂ ಹಿಂದೆ, ಮುನ್ನ ಶುಲ್ಕ ಪಟ್ಟಿ

ಈ ಹಿಂದೆ ಶೇ 1 ರಷ್ಟಿದ್ದ ನೋಂದಣಿ ಶುಲ್ಕವು ಏರಿಕೆಯ ಬಳಿಕ ಶೇ 2 ರಷ್ಟಾಗಲಿದೆ. ಆಸ್ತಿಯ ಅಳತೆ ಹಾಗೂ ಮೌಲ್ಯ ಆಧರಿಸಿದ ಶುಲ್ಕ ಶೇ 2.5 ಇದೆ. ಆಸ್ತಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕದಲ್ಲಿ ಶೇ 0.5 ರಷ್ಟು ಹೊಸ ಸೆಸ್‌, ಶೇ 0.1 ರಷ್ಟು ಸರ್‌ಚಾರ್ಜ್‌ ವಿಧಿಸಲಾಗಿದೆ. ಆ ಮೂಲಕ ಆಸ್ತಿ ಖರೀದಿದಾರರು ಈ ಹಿಂದಿನ ಶೇ 6.6 ರ ಬದಲಾಗಿ ಶೇ 7.6 ರಷ್ಟು ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಪಾವತಿಸಬೇಕಾಗಿದೆ.

ಆದಾಯ ಗುರಿ ಎಷ್ಟು, ಸಂಗ್ರಹಿಸಿದ್ದೆಷ್ಟು?

2024–25 ನೇ ಆರ್ಥಿಕ ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆದಾಯದ ಗುರಿ 26 ಸಾವಿರ ಕೋಟಿ ರೂ. ಇತ್ತು, ಆದರೆ, 22,500 ಕೋಟಿ ರೂ. ಮಾತ್ರ ಸಂಗ್ರಹವಾಗಿತ್ತು.

ಅದೇ ರೀತಿ 2025–26ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು 7 ಸಾವಿರ ಕೋಟಿ ರೂ. ಗುರಿ ಹೊಂದಲಾಗಿತ್ತು. ಆದರೆ ಈವರೆಗೆ 4,556 ಕೋಟಿ ಮಾತ್ರ ಸಂಗ್ರಹವಾಗಿದ್ದು, ಶೇ 35 ರಷ್ಟು ಕುಸಿತ ಕಂಡಿದೆ.

Read More
Next Story