
Internal Reservation | ಮೀಸಲಾತಿ ಹಂಚಿಕೆಯಲ್ಲಿ ಇಲ್ಲ ಸಾಮಾಜಿಕ ನ್ಯಾಯ ; ಸ್ಪಶ್ಯ ಜಾತಿಗಳ ಜೊತೆ ಅಲೆಮಾರಿಗಳ ಸ್ಪರ್ಧೆ ಸಾಧ್ಯವೇ?
ಪರಿಶಿಷ್ಟರಲ್ಲಿ ಅಂತರ್ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ಒದಗಿಸಬೇಕೆಂಬ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನೂ ಬದಿಗಿರಿಸಿ, ಕೇವಲ ಜನಸಂಖ್ಯೆ ಆಧರಿತವಾಗಿ ಮೀಸಲಾತಿ ಹಂಚಿಕೆ ಮಾಡಿರುವುದು ವಿರೋಧಕ್ಕೆ ಕಾರಣವಾಗಿದೆ.
ಅಲೆಮಾರಿ ಸಂಬಂಧಿತ 59 ಜಾತಿಗಳನ್ನು ʼಪ್ರವರ್ಗ -ಸಿʼ ಗೆ (ಸ್ಪೃಶ್ಯ ಜಾತಿಗಳು) ಸೇರಿಸಿ ಒಳ ಮೀಸಲಾತಿ ಜಾರಿಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಅಲೆಮಾರಿ ಸಮುದಾಯದ ಜೊತೆಗೆ ಎಡಗೈ ಹಾಗೂ ಬಲಗೈ ಸಮುದಾಯ, ಪ್ರಗತಿಪರ ಚಿಂತಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಪರಿಶಿಷ್ಟರಲ್ಲಿ ಅಂತರ್ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ಒದಗಿಸಬೇಕೆಂಬ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನೂ ಬದಿಗಿರಿಸಿ, ಕೇವಲ ಜನಸಂಖ್ಯೆ ಆಧರಿತವಾಗಿ ಮೀಸಲಾತಿ ಹಂಚಿಕೆ ಮಾಡಿರುವುದು ವಿರೋಧಕ್ಕೆ ಕಾರಣವಾಗಿದೆ. ಸರ್ಕಾರದ ಈ ಧೋರಣೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಅತಿ ಕಡಿಮೆ ಹಿಂದುಳಿದ ಅಥವಾ ಮುಂದುವರಿದ ಸ್ಪಶ್ಯ ಜಾತಿಗಳ ಗುಂಪಿಗೆ ಶತಮಾನಗಳಿಂದ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಸೇರಿಸಿರುವುದು ನ್ಯಾ.ನಾಗಮೋಹನ್ ದಾಸ್ ಆಯೋಗದ ವೈಜ್ಞಾನಿಕ ಸಮೀಕ್ಷೆಗೆ ತಿಲಾಂಜಲಿ ಇಟ್ಟಂತಾಗಿದೆ ಎಂದು ವಿವಿಧ ದಲಿತ ಪರ ಸಂಘಟನೆಗಳು, ಪ್ರಗತಿಪರರು, ಚಿಂತಕರು ಆರೋಪಿಸಿದ್ದಾರೆ.
ಸ್ಪೃಶ್ಯ ಜಾತಿಗಳು ಹಾಗೂ ಅಲೆಮಾರಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಪ್ರಾತಿನಿದ್ಯಕ್ಕೆ ಆಯೋಗ ಒದಗಿಸಿರುವ ಅಂಶಗಳಿಂದಲೇ ಸರ್ಕಾರದ ನಿರ್ಧಾರ ಪ್ರಬಲ ಜಾತಿಗಳ ಪರವಾದದು ಎಂಬುದು ಚರ್ಚಿತ ವಿಚಾರವಾಗಿದೆ.
ನ್ಯಾ. ನಾಗಮೋಹನ್ ದಾಸ್ ಆಯೋಗ, ಈ ಹಿಂದಿನ ನ್ಯಾ. ಎ.ಜೆ.ಸದಾಶಿವ ಆಯೋಗವು ಅಲೆಮಾರಿ ಜಾತಿಗಳ ಸ್ಥಿತಿಗತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಅವರನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ ಅವರ ಧೋರಣೆ ಸಮಾಜವಾದ ಸಿದ್ಧಾಂತಕ್ಕೆ ತದ್ವಿರುದ್ಧವಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಸಮುದಾಯಗಳು ಮೂರುವರೆ ದಶಕದಿಂದ ಹೋರಾಟ ನಡೆಸಿ, ಪಾಲು ದಕ್ಕಿಸಿಕೊಂಡಿವೆ. ಆದರೆ, ಸ್ಪಶ್ಯ ಜಾತಿಗಳು ಯಾವುದೇ ಪ್ರತಿಭಟನೆ, ಹೋರಾಟ ಮಾಡದೇ ಅನಾಯಾಸವಾಗಿ ಹೆಚ್ಚು ಮೀಸಲಾತಿಯ ಪ್ರಯೋಜನ ಪಡೆಯುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿದೆ.
ಅಲೆಮಾರಿ ಸಮುದಾಯ ಹಾಗೂ ಸ್ಪೃಸ್ಯ ಜಾತಿಗಳು ಈವರೆಗೂ ಪಡೆದಿರುವ ಸವಲತ್ತು, ಸರ್ಕಾರಿ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಪ್ರಾತಿನಿದ್ಯದ ಅಂಕಿ ಅಂಶಗಳನ್ನು ಅವಲೋಕಿಸಿದರೆ ಲಂಬಾಣಿ ಸಮುದಾಯ ಅಗ್ರಪಂಕ್ತಿಯಲ್ಲಿದೆ.
ಸ್ಪೃಶ್ಯ ಸಮುದಾಯ-ಅಲೆಮಾರಿಗಳಲ್ಲಿ ಶಿಕ್ಷಣ ಹೇಗಿದೆ?
ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಪ್ರಕಾರ ಗುಂಪು -ಡಿ( ಪ್ರಸ್ತುತ ಪ್ರವರ್ಗ- ಸಿ) ನಲ್ಲಿ ಬರುವ ಲಂಬಾಣಿ, ಭೋವಿ, ಕೊರಚ ಹಾಗೂ ಕೊರಮ ಜಾತಿಗಳ ಜನಸಂಖ್ಯೆ 28.34 ಲಕ್ಷವಿದ್ದು, 6.62 ಲಕ್ಷ ಮಂದಿ ಅನಕ್ಷರಸ್ಥರಿದ್ದಾರೆ.
2.58 ಲಕ್ಷ ಪಿಯುಸಿ, 1.43 ಲಕ್ಷ ಪದವಿ, 16,493 ಡಿಪ್ಲೋಮಾ, 31,292 ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ 34,732, ಶಾಲೆ ಬಿಟ್ಟ ಮಕ್ಕಳು 5.69 ಲಕ್ಷ , ವಿದೇಶಿ ವಿದ್ಯಾರ್ಥಿ ವೇತನ ಪಡೆದವರು 1301 ಮಂದಿ, ಸರ್ಕಾರಿ ನೌಕರಿ ಪಡೆದವರು 36, 694 ಮಂದಿ ಇದ್ದಾರೆ.
ಅಲೆಮಾರಿ ಜಾತಿಗಳಲ್ಲಿ ಈ ಅಂಕಿ ಅಂಶ ಗಮನಿಸುವುದಾದರೆ ಒಟ್ಟು 5.22 ಲಕ್ಷ ಜನಸಂಖ್ಯೆ ಇದೆ. 1.02 ಲಕ್ಷ ಅನಕ್ಷರಸ್ಥರು, ಪಿಯುಸಿ ತೇರ್ಗಡೆ ಹೊಂದಿರುವವರ ಸಂಖ್ಯೆ 34,653, ಪದವಿ ಪಡೆದವರು 19,085, ಡಿಪ್ಲೋಮಾ ಪಡೆದವರು 3,424, ಸ್ನಾತಕೋತ್ತರ ಪದವಿ ಪಡೆದವರು 9,275, ಎಂಜಿನಿಯರಿಂಗ್ ಶಿಕ್ಷಣ ಪಡೆದವರು 4,874, ಶಾಲೆ ಬಿಟ್ಟವರು 79,639, ಸರ್ಕಾರಿ ನೌಕರಿ ಪಡೆದವರು 4,490 ಮಂದಿ ಇದ್ದಾರೆ.
ಸ್ಪೃಸ್ಯ ಜಾತಿಗಳಲ್ಲಿ ಬಂಜಾರ, ಲಂಬಾಣಿ, ಲಂಬಡ, ಲಮಾಣಿ, ಸುಗಲಿ, ಸುಕಾಲಿ ಜನಸಂಖ್ಯೆ 14,05 ಲಕ್ಷ ಇದೆ. ಭೋವಿ ಹಾಗೂ ಸಂಬಂಧಿತ ಜಾತಿಗಳು 11.29 ಲಕ್ಷ, ಕೊರಚರು 56,746, ಕೊರಮ ಹಾಗೂ ಸಂಬಂಧಿತ ಜಾತಿಗಳ ಜನಸಂಖ್ಯೆ 2,43 ಲಕ್ಷ ಇದೆ.
ಅಲೆಮಾರಿಗಳಲ್ಲಿ ಬುಡ್ಗ ಹಾಗೂ ಬೇಡ ಜಂಗಮರು 1.44 ಲಕ್ಷ, ಚೆನ್ನ ದಾಸರ, ಹೊಲೆಯ ದಾಸರ 79,625, ಶಿಳ್ಳೇಕ್ಯಾತರು 45, 989 ಜನಸಂಖ್ಯೆ ಹೊಂದಿರುವುದನ್ನು ಹೊರತುಪಡಿಸಿದರೆ ಬೇರಾವ ಜಾತಿಗಳು ಹೆಚ್ಚು ಜನಸಂಖ್ಯೆ ಹೊಂದಿಲ್ಲ. ಸಪಾರಿ, ಮಾಸ್ತಿ, ಮಣ್ಣೆ,ಲಿಂಗಧರ್, ಬಿಂದ್ಲಾ ಜಾತಿಗಳು 100ರ ಒಳಗೆ ಜನಸಂಖ್ಯೆ ಹೊಂದಿವೆ. ಬಕದ್, ಬಂಡಿ, ಬ್ಯಾಗರ, ಚಿಕ್ಕಿಲಿಯನ್, ಜಗ್ಗಲಿ, ಜಾಂಬುವುಲು, ಕೂಸಾ, ಕೊಟೇಗರ್ ಮೆಟ್ರಿ, ಕುರುವನ್, ಮಚಲ, ಮಾಲಾ ಸನ್ಯಾಸಿ, ಮೇಘವಾಲ್, ಮೆಂಘವರ್, ನಾದಿಯಾ, ಅದಿ, ನಾಯಾದಿ, ಪಂಬದ, ತಿರ್ಗರ್ ಜಾತಿಗಳು 1000ಜನಸಂಖ್ಯೆ ಒಳಗಿವೆ.
ಸುಪ್ರೀಂಕೋರ್ಟ್ ಮೊರೆ ಹೋಗಲು ಚಿಂತನೆ
ರಾಜ್ಯ ಸರ್ಕಾರವು ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಮಾರ್ಪಾಡು ಮಾಡಿದೆ. ಅಲೆಮಾರಿಗಳು ಕಡಿಮೆ ಜನಸಂಖ್ಯೆ ಹೊಂದಿದ್ದು, ಯಾವುದೇ ರಾಜಕೀಯ ಪ್ರಾತಿನಿದ್ಯ ಹೊಂದಿಲ್ಲ. ಶೇ 60 ರಷ್ಟು ಅನಕ್ಷರಸ್ಥರು, 70 ರಷ್ಟು ನಿರುದ್ಯೋಗ ಇದೆ. ಬಡತನ ಇದೆ, ಇಂದಿಗೂ ಹಲವು ಅಲೆಮಾರಿ ಸಮುದಾಯಗಳು ಟೆಂಟ್ , ಡೇರೆ, ಗುಡಿಸಲುಗಳಲ್ಲಿ ವಾಸ ಮಾಡುವ ಸ್ಥಿತಿ ಇದೆ. ಹೀಗಿರುವಾಗ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ಅತಾರ್ತಿಕವಾಗಿದೆ. ಅಲ್ಲದೇ ಸುಪ್ರೀಂಕೋರ್ಟ್ ಮಾರ್ಗಸೂಚಿಗೆ ವಿರುದ್ಧವಾಗಿದೆ. ಸರ್ಕಾರ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಸಮುದಾಯದ ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದು ಅಲೆಮಾರಿ ಸಮಿದಾಯದ ಮುಖಂಡ ಹಾಗೂ ಹೈಕೋರ್ಟ್ ವಕೀಲ ಎಚ್.ವಿ.ಮಂಜುನಾಥ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಸ್ಪೃಶ್ಯರ ರಾಜಕೀಯ ಪ್ರಾತಿನಿಧ್ಯ ಹೇಗಿದೆ, ಸರ್ಕಾರಿ ಉದ್ಯೋಗ ಎಷ್ಟಿದೆ?
ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಕಡಿಮೆ ಹಿಂದುಳಿದ ಸ್ಪೃಶ್ಯ ಜಾತಿಗಳ ಗುಂಪಿನಲ್ಲಿ ನಾಲ್ಕು ಜಾತಿಗಳಿವೆ. ಈ ಜಾತಿಗಳಲ್ಲಿ ಔದ್ಯೋಗಿಕವಾಗಿ 'ಎ' ವೃಂದದ ಉದ್ಯೋಗಗಳಲ್ಲಿ ಎ, ಬಿ,ಸಿ ಗುಂಪಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಪ್ರಾತಿನಿಧ್ಯ ದೊರೆತಿದೆ. ಸ್ಪೃಶ್ಯ ಜಾತಿಗಳಲ್ಲಿ ಸಾಕ್ಷರತಾ ಪ್ರಮಾಣವು ಇತರೆ ಗುಂಪುಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ತಾಂತ್ರಿಕ ಮತ್ತು ಉನ್ನತ ಶಿಕ್ಷಣದಲ್ಲಿ ಎ, ಬಿ ಮತ್ತು ಸಿ ಗುಂಪಿಗೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ಪ್ರಾತಿನಿಧ್ಯ ದೊರೆತಿದೆ. ಜೊತೆಗೆ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ರಾಜಕೀಯ ಪ್ರಾತಿನಿಧ್ಯವೂ ಉತ್ತಮವಾಗಿದೆ.
ಸರ್ಕಾರಿ ಉದ್ಯೋಗಗಳಲ್ಲಿ ಸ್ಪೃಸ್ಯ ಜಾತಿಗಳಿಗೆ ಸಿಕ್ಕಿರುವ ಪ್ರಾತಿನಿಧ್ಯ ನೋಡುವುದಾದರೆ ಎ ವೃಂದದ ಉದ್ಯೋಗಗಳಲ್ಲಿ 1,618, ಬಿ ವೃಂದದ ಉದ್ಯೋಗಗಳಲ್ಲಿ 2,548, ಸಿ ವೃಂದದ ಉದ್ಯೋಗಗಳಲ್ಲಿ 28,064 ಹಾಗೂ ಡಿ ವೃಂದದ ಉದ್ಯೋಗಗಳಲ್ಲಿ 4,467 ಮಂದಿ ಸರ್ಕಾರಿ ನೌಕರರಿದ್ದಾರೆ.
ರಾಜಕಾರಣದಲ್ಲಿ ಚುನಾಯಿತ ಪ್ರತಿನಿಧಿಗಳಾಗಿ 6,463 ಜನರಿದ್ದಾರೆ. ಈ ಜಾತಿಗಳಲ್ಲಿ ಭೂ ಒಡೆತನದ ಪ್ರಮಾಣ ಶೇ. 37.52ರಷ್ಟಿದೆ. ಈ ಅಂಕಿ ಅಂಶ ಗಮನಿಸಿದರೆ ಇವರು ಇತರೆ ಜಾತಿಗಳಿಗಿಂತ ಉತ್ತಮವಾಗಿದ್ದಾರೆ ಎಂದು ಆಯೋಗ ತಿಳಿಸಿದೆ.
ಅಲೆಮಾರಿಗಳ ರಾಜಕೀಯ ಪ್ರಾತಿನಿದ್ಯ, ಸರ್ಕಾರಿ ಉದ್ಯೋಗದ ಸ್ಥಿತಿಗತಿ ಹೇಗಿದೆ?
ಸರ್ಕಾರಿ ಉದ್ಯೋಗಗಳಲ್ಲಿ 59 ಅಲೆಮಾರಿ ಜಾತಿಗಳ ಪ್ರಾತಿನಿಧ್ಯ ಕಡಿಮೆ ಇದೆ. ಎ ವೃಂದದ ಉದ್ಯೋಗಗಳಲ್ಲಿ 147, ಬಿ ವೃಂದದಲ್ಲಿ 255, ಸಿ ವೃಂದದಲ್ಲಿ 3,386 ಮತ್ತು ಡಿ ವೃಂದದಲ್ಲಿ 702 ಮಂದಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಈ ಸಮುದಾಯಗಳು ಆರ್ಥಿಕವಾಗಿ ಹಿಂದುಳಿದಿವೆ. ವಾಸಿಸಲು ಬೇಕಾದ ಗುಣಮಟ್ಟದ ವಸತಿ ಮತ್ತು ಮೂಲಭೂತ ಸೌಲಭ್ಯಗಳಿಲ್ಲದೇ ಬದುಕು ಸಾಗಿಸುತ್ತಿವೆ. ಈ ಗುಂಪಿನಲ್ಲಿರುವ ಜಾತಿಗಳು ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿರುವುದು ಸಹ ತುಂಬಾ ಕಡಿಮೆ. ಈ ಜಾತಿಗಳಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಇಲ್ಲಿಯವರೆಗೂ ದೊರೆತಿಲ್ಲ. ಕೆಲವೇ ಕೆಲವು ಜಾತಿಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆರಳೆಣಿಕೆಯಷ್ಟು ಅಂದರೆ 465 ಮಂದಿಗೆ ಅವಕಾಶ ದೊರೆತಿದೆ. ಬಹುತೇಕ ಜಾತಿಗಳು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜಾತಿಗಳಾಗಿವೆ ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ಜಾತಿಗಳಲ್ಲಿ ಭೂ ಒಡೆತನದ ಪ್ರಮಾಣ ಶೇ 31.83ರಷ್ಟು ಕಂಡು ಬರುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದರೆ ಇತರೆ ಎಲ್ಲಾ ಗುಂಪಿನಲ್ಲಿರುವ ಜಾತಿಗಳಿಗಿಂತ ಈ ಜಾತಿಗಳು ಅತ್ಯಂತ ಹಿಂದುಳಿದ ಜಾತಿಗಳಾಗಿವೆ. ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿರುವ ಇವರನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಗಳು ಎಂದು ಪರಿಗಣಿಸಿ, ಪ್ರತ್ಯೇಕ ಗುಂಪು ಮಾಡಲಾಗಿತ್ತು. ಆದರೆ, ಈಗ ಈ ಜಾತಿಗಳನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಲಾಗಿದೆ.
ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನವು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ಕೂಡಲೇ ಮೀಸಲಾತಿ ಪರಿಷ್ಕರಣೆ ಮಾಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅಲೆಮಾರಿ ಸಮುದಾಯದ ಮುಖಂಡ ವೆಂಕಟಾಚಲ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.