
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ
ಖಾತಾ ಬದಲಾವಣೆ| ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರಿಗರಿಂದ ಸರ್ಕಾರ ವಸೂಲಿ: ಹೆಚ್‌ಡಿಕೆ ಆರೋಪ
ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಆದ್ದರಿಂದ ಎಲ್ಲಾ ಕಡೆ ಹಣಕ್ಕಾಗಿ ಕೈ ಹಾಕುತ್ತಿದೆ. ರಾಜ್ಯದಲ್ಲಿರುವ ರಸ್ತೆ ಗುಂಡಿಗಳನ್ನೂ ಮುಚ್ಚಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದರು.
"ದೀಪಾವಳಿ ಕೊಡುಗೆ ನೀಡುವುದಾಗಿ ಜಾಹೀರಾತು ನೀಡಿ, ರಾಜ್ಯ ಸರ್ಕಾರ ಬೆಂಗಳೂರಿನ ಜನರ ಜೇಬಿಗೆ ಕನ್ನ ಹಾಕಿದೆ. 'ಎ' ಖಾತೆ ಹೆಸರಿನಲ್ಲಿ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಸುಲಿಗೆ ಮಾಡಲು ಹೊರಟಿದೆ" ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ನಗರದ ಸಂಜಯ್ ವೃತ್ತದಲ್ಲಿ ನೂತನ ಆಟೋ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, "'ಬಿ' ಖಾತೆಯನ್ನು 'ಎ' ಖಾತೆಗೆ ಪರಿವರ್ತಿಸುವ ಮೂಲಕ ಸರ್ಕಾರ ಜನರಿಗೆ ಮಹಾನ್ ದೋಖಾ ಮಾಡುತ್ತಿದೆ. ಇದು ಜನರ ಬದುಕು ಹಸನು ಮಾಡುವ ಆರನೇ ಗ್ಯಾರಂಟಿಯೇ?" ಎಂದು ಪ್ರಶ್ನಿಸಿದರು.
15 ಸಾವಿರ ಕೋಟಿ ರೂಪಾಯಿ ವಸೂಲಿ ಗುರಿ
"ಬೆಂಗಳೂರಿನಲ್ಲಿ 'ಬಿ' ಖಾತೆಯಿಂದ 'ಎ' ಖಾತೆಗೆ ಬದಲಿಸಲು ಅರ್ಜಿ ಶುಲ್ಕವೇ 500 ರೂಪಾಯಿ. ಈ ಹೆಸರಿನಲ್ಲೇ ನೂರಾರು ಕೋಟಿ ಸುಲಿಗೆಯಾಗುತ್ತಿದೆ. ಹಿಂದೆ 3040 ನಿವೇಶನಕ್ಕೆ 13 ಸಾವಿರ ರೂಪಾಯಿ ಕಟ್ಟಬೇಕಿತ್ತು, ಆದರೆ ಈಗ 4 ರಿಂದ 8 ಲಕ್ಷ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಈ 'ಎ' ಖಾತಾ ದಂಧೆಯ ಮೂಲಕವೇ 15 ಸಾವಿರ ಕೋಟಿ ರೂ. ಸಂಗ್ರಹಿಸುವುದು ಸರ್ಕಾರದ ಗುರಿ" ಎಂದು ಕುಮಾರಸ್ವಾಮಿ ಅಂಕಿ-ಅಂಶಗಳ ಸಮೇತ ವಿವರಿಸಿದರು.
ಜನರಿಂದ ನಿರಂತರ ಸುಲಿಗೆ
"ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಜನರ ಮೇಲೆ ಒಂದಲ್ಲ ಒಂದು ತೆರಿಗೆ ವಿಧಿಸಿ ಸುಲಿಗೆ ಮಾಡುತ್ತಿದೆ. ಪ್ರತಿಯೊಂದರಲ್ಲೂ ಹಣ ಮಾಡುವ ಬಗ್ಗೆಯೇ ಯೋಚಿಸುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ, ಅದಕ್ಕಾಗಿಯೇ ಕಂಡಕಂಡಲ್ಲೆಲ್ಲಾ ಹಣಕ್ಕಾಗಿ ಕೈ ಹಾಕುತ್ತಿದೆ. ರಾಜ್ಯದ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ಇವರಿಂದ ಸಾಧ್ಯವಾಗುತ್ತಿಲ್ಲ" ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
ಅನುದಾನದ ದಾಖಲೆ ಬಿಡುಗಡೆಗೆ ಸವಾಲು
ಹಾಸನಕ್ಕೆ ಜೆಡಿಎಸ್ ಕೊಡುಗೆ ಏನು ಎಂದು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, "ನನ್ನ ಆರೋಗ್ಯ ವಿಚಾರಿಸಲು ದೆಹಲಿಗೆ ಬಂದಿದ್ದ ಹಾಸನದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, '2018ರಲ್ಲಿ ನೀವು ಕೊಟ್ಟ 500 ಕೋಟಿ ಅನುದಾನದಲ್ಲೇ ಇನ್ನೂ ಕೆಲಸ ನಡೆಯುತ್ತಿದೆ' ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ನಾನು ಅಧಿಕಾರದಲ್ಲಿದ್ದಾಗ ಎಷ್ಟು ಅನುದಾನ ಕೊಟ್ಟಿದ್ದೇನೆ, ಅವರು ಎಷ್ಟು ಕೊಟ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಜನರ ಮುಂದಿಡಲಿ" ಎಂದು ನೇರ ಸವಾಲು ಹಾಕಿದರು.