
ಪಶ್ಚಿಮ ಘಟ್ಟದ ಜಲಮೂಲ ಶರಾವತಿಗೆ ʼಪಂಪ್ಡ್ ಸ್ಟೋರೇಜ್ ʼಯೋಜನೆ ಎಂಬ ಆಪತ್ತು! ಸದ್ದಿಲ್ಲದೆ ಟೆಂಡರ್ ಪ್ರಕ್ರಿಯೆ ಮುಗಿಸಿದ ಸರ್ಕಾರ
ಶರಾವತಿ ಯೋಜನೆಗೆ ಸರ್ಕಾರ 10 ಸಾವಿರ ಕೋಟಿ ರೂ.ಗೆ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿದೆ. ಹೈದರಾಬಾದ್ ಮೂಲದ ಸಂಸ್ಥೆಗೆ 8ಸಾವಿರ ಕೋಟಿ ರೂ. ಯೋಜನೆಯ ಟೆಂಡರ್ ನೀಡಲಾಗಿದೆ
ರಾಜ್ಯದ ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳ ನಡುವೆ ಹರಿಯವ ಶರಾವತಿ ನದಿಯ ಓಟಕ್ಕೆ ಅಣೆಕಟ್ಟುಗಳ ಮೇಲೆ ಅಣೆಕಟ್ಟು ಕಟ್ಟಿ ಅಡ್ಡ ಹಾಕುವುದಷ್ಟೇ ಅಲ್ಲ, ಈಗ ಶರಾವತಿ ಮತ್ತು ಅರಬ್ಬೀ ಸಮುದ್ರದ ನೆಂಟಸ್ತನವನ್ನೇ ಕಡಿದು ಹಾಕುವ ಯೋಜನೆ ರೂಪಿಸಲಾಗಿದೆ ಎಂಬ ದೂರುಗಳು ಬಲವಾಗಿ ಕೇಳಿಬರುತ್ತಿವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಪರಿಸರ ಪ್ರೇಮಿಗಳ ತೀವ್ರ ವಿರೋಧದ ನಡುವೆಯೂ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಿದೆ.
ಶರಾವತಿ ನದಿಯು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟಕ್ಕೆ ಮರೆಗು. ಅಲ್ಲದೇ, ಅಲ್ಲಿಯ ಅಪರೂಪದ ಸಸ್ಯ ಸಂಕುಲಕ್ಕೆ, ಪ್ರಾಣಿ ಸಂಕುಲಕ್ಕೆ, ಜಲಚರಗಳಿಗೆ, ಜನರಿಗೆ ಜೀವ ನದಿ. ಇದೀಗ ಈ ನದಿಯ ಜೀವಸಂಕುಲಕ್ಕೆ, ಜಲಚರಕ್ಕೆ ಅಪಾಯಕಾರಿ ಯೋಜನೆಯೊಂದು ಜಾರಿ ಮಾಡಲಾಗುತ್ತಿದೆ. ಶರಾವತಿ ಉಳಿಸಿ ಅನ್ನೋ ಅಭಿಯಾನ ಮಲೆನಾಡು ಭಾಗದಲ್ಲಿ ಕಿಚ್ಚು ಹಚ್ಚಿರುವ ನಡುವೆ ರಾಜ್ಯ ಸರ್ಕಾರ ಬರೋಬ್ಬರಿ 10 ಸಾವಿರ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿದೆ. ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್‌ಮತ್ತು ಇನ್ಫಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆಗೆ 8005 ಕೋಟಿ ರೂ.ಗಳಿಗೆ ಯೋಜನೆಯ ಟೆಂಡರ್‌ನೀಡಲಾಗಿದೆ
ಶರಾವತಿ ನದಿ ಇರುವ ಪ್ರದೇಶವು ಅಳಿವಿನಂಚಿನಲ್ಲಿರುವ ಅಪರೂಪದ ಸಿಂಗಳೀಕಗಳ ಅಭಯಾರಣ್ಯವೂ ಆಗಿದೆ. ಇಲ್ಲಿ ಅತಿಕ್ರಮ ಪ್ರವೇಶ ಮಾಡಬಾರದು ಮತ್ತು ಮರಗಳನ್ನು ಕಡಿಯುವಂತಿಲ್ಲ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಆದರೆ ಇದೇ ಅರಣ್ಯ ವ್ಯಾಪ್ತಿಯಲ್ಲಿ 16 ಸಾವಿರ ಮರಗಳನ್ನು ಕಡಿಯಲು ಒಪ್ಪಿಗೆ ನೀಡಲಾಗಿದೆ. ವಿದ್ಯುತ್ ಕೊರತೆ ನೀಗಿಸಿಕೊಳ್ಳಲು ಸಮುದ್ರ ಸೇರುವ ನೀರನ್ನು ಪುನರ್ಬಳಕೆ ಮಾಡಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸಲು ಯೋಜನೆ ಅಗತ್ಯ ಎಂಬುದು ಸರ್ಕಾರದ ವಾದವಾಗಿದೆ.
ಏನಿದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ?
ತೀರ್ಥಹಳ್ಳಿಯಲ್ಲಿ ಹುಟ್ಟುವ ಶರಾವತಿ ನದಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಗೇರುಸೊಪ್ಪ ಅಣ್ಣೆಕಟ್ಟಿನಿಂದ ಪಂಪ್ ಸ್ಟೋರೇಜ್ ಮಾಡಿ ಮೇಲ್ಭಾಗದಲ್ಲಿರುವ ಶಿವಮೊಗ್ಗ ಜಿಲ್ಲೆಯ ತಳಕಳಲೆ ಅಣೆಕಟ್ಟಿಗೆ ನೀರನ್ನು ಪಂಪ್ಡ್ ಮಾಡಲಾಗುತ್ತದೆ. ಈ ಮೂಲಕ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಗುರಿಯಾಗಿದೆ.
ಈ ಪಂಪ್ಡ್ ಸ್ಟೋರೇಜ್ ಯೋಜನೆಯು ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನವಾಗಿದೆ. ಎರಡು ಜಲಾಶಯಗಳ ನಡುವೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಇದ್ದ ವೇಳೆ ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಣೆ ಮಾಡಲಾಗುತ್ತದೆ. ವಿದ್ಯುತ್ ಬೇಡಿಕೆ ಅಧಿಕವಾದಾಗ ಆ ನೀರು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತದೆ. ಹೊಸ ಜಲಾಶಯ ನಿರ್ಮಾಣ ಮಾಡದೆ ಹೆಚ್ಚು ವಿದ್ಯುತ್ ಉತ್ಪಾದಿಸಲು ಅನುಕೂಲ ಆಗುವುದರಿಂದ ಇದು ಗ್ರಿಡ್ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ಸರ್ಕಾರದ ಸಮರ್ಥನೆಯಾಗಿದೆ.
ಯೋಜನೆಯ ಸಂಪೂರ್ಣ ವಿವರ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನಾ ವೆಚ್ಚ 10,500 ಕೋಟಿ ರೂ. ಆಗಿದ್ದು, ಯೋಜನೆಗೆ ಭೂಮಿಯ ಒಳಭಾಗದಲ್ಲಿ 19.982 ಹೆಕ್ಟೇರ್, ಭೂಮಿಯ ಮೇಲ್ಮೈನಲ್ಲಿ 34.173 ಹೆಕ್ಟೇರ್, ಅರಣ್ಯ ಭೂಮಿ 54.155 ಹೆಕ್ಟೇರ್ ಒಳಗೊಂಡ ಪ್ರದೇಶ ಅಗತ್ಯವಾಗಿರುತ್ತದೆ. ಅಂತೆಯೇ ಅರಣ್ಯೇತರ ಭೂಮಿ ಒಳಭಾಗದಲ್ಲಿ 0.1 ಹೆಕ್ಟೇರ್, ಹೊರಭಾಗದಲ್ಲಿ 88.508 ಹೆಕ್ಟೇರ್ ಅಗತ್ಯ ಇದೆ ಎಂದು ಹೇಳಲಾಗಿದೆ.
ಈ ನಡುವೆ, ಯೋಜನೆಯಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಳಕಳಲೆ ಗ್ರಾಮದಲ್ಲಿ 3.63 ಹೆಕ್ಟೇರ್ ಭೂಮಿ,1 ಸರ್ಕಾರಿ ಶಾಲೆ, 8 ಮನೆಗಳು, 7 ದನದ ಕೊಟ್ಟಿಗೆಗಳು ವ್ಯಾಪ್ತಿಗೆ ಬರುತ್ತವೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯ ಹೊನ್ನಾವರ ತಾಲೂಕಿನ ಗೇರುಸೊಪ್ಪ, ನಗರಬಸ್ತಿಕೇರಿ, ಬೆಗುಡಿ ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಗೇರುಸೊಪ್ಪ, ನಗರಬಸ್ತಿಕೇರಿಯಲ್ಲಿ 0.404 ಹೆಕ್ಟೇರ್ ಭೂ ಭಾಗ, 40 ಮನೆಗಳು, 3 ಮಳಿಗೆಗಳು, 2 ದೇವಾಲಯದ ತಡೆಗೋಡೆ ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಬೆಗುಡಿಗ್ರಾಮ ವ್ಯಾಪ್ತಿಯಲ್ಲಿ 20.497 ಹೆಕ್ಟೇರ್ ಭೂಮಿ, 1 ಅಂಗನವಾಡಿ, 6 ಮನೆಗಳು, 4 ದನದ ಕೊಟ್ಟಿಗೆ, 1 ಬಾವಿ, 1 ದೇವಾಲಯ ವ್ಯಾಪ್ತಿಯೊಳಗೆ ಯೋಜನೆಯು ಬರಲಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ.
ಯೋಜನೆ ಜಾರಿಯಾದರೆ ಕ್ರಾಂತಿಕಾರಿ ಹೋರಾಟ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಶಿವಮೊಗ್ಗ- ಉತ್ತರ ಕನ್ನಡ ಜಿಲ್ಲೆಯ ಜನತೆ, ಪರಿಸರ ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಸತ್ಯಾಗ್ರಹ, ಸರ್ಕಾರದ ಅಣಕು ಶವದ ಮೆರವಣಿಗೆ ಸೇರಿದಂತೆ ನಾನಾ ರೀತಿಯಲ್ಲಿ ಎರಡು ಜಿಲ್ಲೆಗಳಲ್ಲಿಯೂ ಹೋರಾಟ ನಡೆಸಲಾಗುತ್ತಿದೆ. ಆದರೂ ಸರ್ಕಾರ ಇದಕ್ಕೆ ಸೊಪ್ಪು ಹಾಕದೆ ಯೋಜನೆ ಜಾರಿಗೆ ಮುಂದಾಗಿದೆ. ಹೀಗಾಗಿ ಸ್ವಾಮೀಜಿಗಳು, ಹೋರಾಟಗಾರರು, ಪರಿಸರವಾದಿಗಳು, ಯುವಕರು ಕೈಜೋಡಿಸಿದ್ದಾರೆ. ಒಗ್ಗೂಡಿ ಹೋರಾಟ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ದಟ್ಟ ಅರಣ್ಯದ ಮಧ್ಯದಲ್ಲಿ ಈ ಯೋಜನೆ ನಡೆಯುತ್ತದೆ. ಹೀಗಾಗಿ ಕೇವಲ ಅರಣ್ಯ ನಾಶವಾಗುವುದು ಅಷ್ಟೇ ಅಲ್ಲ, ಅಲ್ಲಿಯ ಅಪರೂಪದ ಸಸ್ಯ, ಪ್ರಾಣಿ ಸಂಕುಲಕ್ಕೂ ಸಂಕಷ್ಟ ಎದುರಾಗುತ್ತಿದೆ. ಇದೇ ಕಾರಣಕ್ಕಾಗಿ ಅಲ್ಲಿಯ ಜನ, ಪರಿಸರ ಪ್ರೇಮಿಗಳು ಯಾವುದೇ ಕಾರಣಕ್ಕೂ ನಮಗೆ ಈ ಯೋಜನೆ ಬೇಡವೇ ಬೇಡ ಅಂತ ಹೋರಾಟದ ಹಾದಿ ಹಿಡಿದಿದ್ದಾರೆ. ದೇಶಕ್ಕೆ, ರಾಜ್ಯಕ್ಕೆ ಅಭಿವೃದ್ಧಿ ಯೋಜನೆಗಳು ಬೇಕು, ಆದರೆ, ಅದು ಪರಿಸರಕ್ಕೆ, ಜನರಿಗೆ ಮಾರಕವಾಗಿಬಾರದು. ಯೋಜನೆಯ ಬಹುತೇಕ ರಚನೆಗಳು ಸುರಂಗದೊಳಗೆ ಇರುವುದರಿಂದ ಭೂಮಿಯ ಮೇಲ್ಮೈನಲ್ಲಿ ದುಷ್ಪರಿಣಾಮ ಉಂಟಾಗುತ್ತದೆ ಎನ್ನುವುದು ಎಂಬುದು ಪರಿಸರವಾದಿಗಳು, ಹೋರಾಟಗಾರರು, ತಜ್ಞರ ಅಭಿಪ್ರಾಯವಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಶರಾವತಿ ಉಳಿಸಿ ಹೋರಾಟಗಾರರ ಮುಖಂಡ ಅಖಿಲೇಶ್ ಚಿಪ್ಪಳಿ, ಈ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಸುಮಾರು ನಾಲ್ಕು ಸಾವಿರ ಎಕರೆ ಅರಣ್ಯ ನಾಶವಾಗುತ್ತದೆ. ಸರ್ಕಾರವು ವಾಸ್ತವಾಂಶ ಮುಚ್ಚಿಟ್ಟು ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಗುಡ್ಡವನ್ನು ಕೊರೆದು ಸುರಂಗ ಮಾರ್ಗ ನಿರ್ಮಿಸುವ ಉದ್ದೇಶ ಯೋಜನೆ ಹೊಂದಿದೆ. ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ. ನ್ಯಾಯಾಲಯ ಅನುಮತಿ ನೀಡಿದರೂ ಸಹ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಅಭಿವೃದ್ಧಿಯ ಹೆಸರಲ್ಲಿ ಈಗಾಗಲೇ ನೈಸರ್ಗಿಕ ಸಾಕಾಷ್ಟು ಹಾಳಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಇನ್ನಷ್ಟು ನಾಶವಾಗಲಿದೆ. ಈಗಾಗಲೇ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ. ಎರಡು ಜಿಲ್ಲೆಯ ಜನರು, ಯುವಜನಾಂಗದವರು ಒಂದಾಗಿ ಹೋರಾಟ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಯೋಜನೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಪ್ರಾಣ ಬಿಡಲು ಸಿದ್ಧವಾಗಿದ್ದೇವೆಯೇ ಹೊರತು ಯೋಜನೆ ಮಾತ್ರ ಅನುಷ್ಠಾನಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ
ಶಿವಮೊಗ್ಗ ಜಿಲ್ಲೆ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಅರಣ್ಯದ ಮಧ್ಯ ಭಾಗದಿಂದ 16 ಸಾವಿರಕ್ಕೂ ಹೆಚ್ಚು ದೈತ್ಯಾಕಾರದ ಮರಗಳನ್ನು ಕತ್ತರಿಸುವ ಜತೆಗೆ ಅಪರೂಪದ ಸಸ್ಯ, ಪ್ರಾಣಿ ಸಂಕುಲನಕ್ಕೆ ದಕ್ಕೆ ಉಂಟು ಮಾಡುವ ಭೂಗತ ಜಲ ವಿದ್ಯುತ್ ಯೋಜನೆ ಶರಾವತಿ ಪಂಪ್ಡ್ ಸ್ಟೋರೇಜ್ ಮೂಲಕ 2 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಅವೈಜ್ಞಾನಿಕ ಯೋಜನೆ ರದ್ದುಪಡಿಸುವ ಕುರಿತು ಸರ್ಕಾರ ಸೂಚನೆ ನೀಡುವಂತೆ ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯಲಾಗಿದೆ. ಹಿರಿಯ ಸಾಮಾಜಿಕ ಮತ್ತು ಪರಿಸರ ಹೋರಾಟಗಾರ ಎಚ್.ಎಂ. ವೆಂಕಟೇಶ್ ಪತ್ರ ಬರೆದಿದ್ದು, ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಸಿಎಲ್) ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನೆ ಘಟಕವನ್ನು ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿದ್ದು, ಇದು ಅವೈಜ್ಞಾನಿಕವಾಗಿದೆ. ಯೋಜನೆಯಿಂದ ವನ್ಯಜೀವಿ, ಅಪರೂಪದ ಸಸ್ಯ ಸಂಕುಲನ ಜನಜಾನುವಾರುಗಳಿಗೆ ತೊಂದರೆ ಉಂಟಾಗುತ್ತಿದೆ. ಇಂತಹ ಜನವಿರೋಧಿ ಯೋಜನೆಯನ್ನು ರದ್ದು ಪಡಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಯೋಜನೆಯ ಅಂದಾಜು ವೆಚ್ಚ 10,500 ಕೋಟಿ ರೂ. ಆಗಿದ್ದು, ಯೋಜನೆಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯನ್ನು ನೀಡದೆ ಏಕ ಪಕ್ಷಿಯ ನಿರ್ಧಾರಗಳನ್ನು ತೆಗೆದುಕೊಂಡು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿ ಉಂಟು ಮಾಡಲಾಗುತ್ತಿದೆ. ಕಳೆದ 75 ವರ್ಷಗಳಿಂದ ಪಶ್ಚಿಮ ಘಟ್ಟಗಳ ಅರಣ್ಯಗಳನ್ನು ನಾಶ ಮಾಡಿ ವಿದ್ಯುತ್ ಉತ್ಪಾದನೆಯನ್ನು ಈಗಾಗಲೇ ಮಾಡುತ್ತಾ ಬಂದಿದ್ದಾರೆ. ಇದರಲ್ಲಿ ಲಿಂಗನಮಕ್ಕಿ, ತಳಕಳಲೆ, ಚಕ್ರ, ವಾರಾಹಿ, ಮಣಿ, ಗೇರು ಸೊಪ್ಪು ಜಲಾಶಯಗಳಲ್ಲಿ ವಿದ್ಯುತ್ ಕೇಂದ್ರಗಳಿವೆ. ಇದರಿಂದ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳು ನಾಶವಾಗುತ್ತಲೇ ಇದೆ. ಅಲ್ಲದೇ, ಸುಮಾರು 54,155 ಹೆಕ್ಟೇರ್ ಪರಿಸರ ಸೂಕ್ಷ್ಮಅರಣ್ಯ ಭೂಮಿ ನಾಶಪಡಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸ್ಥಳೀಯ ನಿವಾಸಿಗಳಿಗೆ ಈ ಯೋಜನೆಯಿಂದ ತುಂಬಾ ತೊಂದರೆಯಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಸೌರಶಕ್ತಿ ಮತ್ತು ವಿಂಡ್ ಮಿಲ್‌ನಂತಹ ಯೋಜನೆಗಳನ್ನು ರೂಪಿಸಿ ವಿದ್ಯುತ್ ಉತ್ಪಾದನೆ ಮಾಡುವ ವಿವಿಧ ಮಾರ್ಗೋಪಾಯಗಳು ಇದ್ದರೂ ಸಹ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಈ ಯೋಜನೆಗೆ ಜಾಗವನ್ನು ಗುರುತಿಸಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಹೇಳಲಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಸಾಮಾಜಿಕ ಮತ್ತು ಪರಿಸರ ಹೋರಾಟಗಾರ ಎಚ್.ಎಂ.ವೆಂಕಟೇಶ್, ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟಗಳು ರಾಜ್ಯದ ನಾಗರಿಕರು ಉಸಿರಾಡುವ ಆಮ್ಲಜನಕ ಬ್ಯಾಂಕ್ ಇದ್ದಂತೆ. ಅರಣ್ಯ ಸಂಪತ್ತು, ಸಸ್ಯ ಸಂಪತ್ತು, ಪ್ರಾಣಿ ಪಕ್ಷಿಗಳ ಸಂಪತ್ತು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಭಾಗದಲ್ಲಿ 745 ಮರಗಳು, ವನ್ಯಜೀವಿ ವಲಯದಲ್ಲಿ 1918 ಮರಗಳು,ಉತ್ತರ ಕನ್ನಡ ಭಾಗದಲ್ಲಿ 13,856 ಮರಗಳು ಹೀಗೆ ಪ್ರಕೃತಿ ಸಹಜವಾಗಿ ಬೆಳೆದು ನಿಂತಿರುವ 16, 041 ಮರಗಳನ್ನು ಅಂದಾಜಿಸಿ ಕತ್ತರಿಸಲಾಗುತ್ತಿದೆ. ಸರ್ಕಾರಿ ಪಾಠಶಾಲೆಗಳು, ದೇವಾಲಯಗಳು, ರೈತರ ಮನೆಗಳು ಮತ್ತು ಜಾನುವಾರುಗಳ ಕೊಟ್ಟಿಗೆಗಳು ಈ ಯೋಜನೆಯಿಂದ ನಾಶವಾಗುತ್ತಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಪರಿಸರ ಸೂಕ್ಷ್ಮ ಅರಣ್ಯ ಭೂಮಿಯ ಮೇಲೆ ನಡೆಯುವ ಅತ್ಯಾಚಾರವೆಂದೆ ಹೇಳಬಹುದು. ಸರ್ಕಾರವು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಾಶಪಡಿಸುತ್ತಿರುವ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತು, ಜನಜಾನುವಾರುಗಳಿಗೆ ಆಗುವ ಹಾನಿಯನ್ನು ಪುನರ್ ನಿರ್ಮಾಣ ಮಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಯೋಜನೆ ಬಗ್ಗೆ ಸರ್ಕಾರದ ಸಮರ್ಥನೆ
ಯೋಜನೆ ಬಗ್ಗೆ ಸಾಕಾಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದರೂ ಸರ್ಕಾರವು ತನ್ನ ಸಮರ್ಥನೆ ಮುಂದುವರಿಸಿದೆ. ಈ ಯೋಜನೆಯ ಬಹುಭಾಗ ಭೂಮಿಯಾಳದಲ್ಲಿ ನಡೆಯುತ್ತದೆ. ಹೀಗಾಗಿ ಅರಣ್ಯಕ್ಕೆ ಹೆಚ್ಚಾಗಿ ಹಾನಿಯಾಗುವುದಿಲ್ಲ. ವಿದ್ಯುತ್ ಕೊರತೆ ನೀಗಿಸಿಕೊಳ್ಳಲು ಸಮುದ್ರಕ್ಕೆ ಸೇರುವ ನೀರನ್ನು ಪುನರ್ಬಳಕೆ ಮಾಡಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸಲು ಈ ಯೋಜನೆ ಅಗತ್ಯ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಪರಿಸರ ಸ್ನೇಹಿಯಾಗಿ, ಮುಂದಿನ ಜನಾಂಗವನ್ನು ಗುರಿಯಾಗಿಸಿಕೊಂಡು ಜಾರಿ ಮಾಡಲಾಗುತ್ತಿದೆ. ಈ ಯೋಜನೆಯಿಂದ ರಾಜ್ಯ ಹಾಗೂ ದೇಶಕ್ಕೆ 2 ಸಾವಿರ ಮೆಗಾ ಯೂನಿಟ್ ವಿದ್ಯುತ್ ಲಭ್ಯವಾಗುತ್ತದೆ. ಯೋಜನೆಯನ್ನು ಯಾವುದೇ ಅಣೆಕಟ್ಟು ಕಟ್ಟದೆ, ಹರಿಯುವ ನೀರನ್ನು ನಿಲ್ಲಿಸದೇ ನಡೆಸಲಾಗುತ್ತದೆ ಎಂಬುದು ಕೆಪಿಸಿಎಲ್‌ನ ಸ್ಪಷ್ಟನೆಯಾಗಿದೆ.
ಈ ಯೋಜನೆಗಾಗಿ 100 ಹೆಕ್ಟೇರ್ ಪ್ರದೇಶ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ 54.155 ಹೆಕ್ಟೇರ್ ಅರಣ್ಯ ಪ್ರದೇಶ ಹಾಗೂ 46.49 ಹೆಕ್ಟೇರ್ ಅರಣ್ಯೇತರ ಪ್ರದೇಶವಾಗಿದೆ. ತಲಕಳಲೆ ಡ್ಯಾಂ ಹಾಗೂ ಗೇರುಸೂಪ್ಪ ಅಣೆಕಟ್ಟೆ ನಡುವೆ ನೀರನ್ನು ಮೇಲೆತ್ತಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ನೀರನ್ನು ಮೇಲಕ್ಕೆತ್ತಲು ಸುರಂಗ ಬಳಸಲಾಗುವುದರಿಂದ ಅರಣ್ಯ ನಾಶ ಕಡಿಮೆಯಾಗುತ್ತದೆ. ಈಗಾಗಲೇ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ವಿದ್ಯುತ್ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಇದು ಅನುಮತಿ ನೀಡಲು 13 ನಿರ್ದೇಶನಾಲಯಗಳ ಅಭಿಪ್ರಾಯನ್ನು ಸಂಗ್ರಹಿಸಿತ್ತು. ಭೂ ಕುಸಿತ, ಭೂಕಂಪನ, ಜೀವ ವೈವಿಧ್ಯತೆಗೆ ಧಕ್ಕೆ ಉಂಟಾಗುವುದಿಲ್ಲ. ಭೂಮಿಯ ಸ್ಥಿರತೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ ವರದಿ ನೀಡಿದೆ ಎಂದು ಹೇಳಿದೆ.
ಸಿಂಗಳೀಕ ಸಂಕುಲದ ಆವಾಸಕ್ಕೆ ಧಕ್ಕೆ?
ಅಪರೂಪದ ಸಿಂಗಳಿಕಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗದಂತೆ ಕ್ರಮವಹಿಸಲಾಗಿದೆ. ಪ್ರಾಣಿಗಳು ಓಡಾಡಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಅನುಸರಿಸಲಾಗಿರುವ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುವುದು. ಈ ಯೋಜನೆಗೆ ಕೇವಲ 0.37 ಟಿಎಂಸಿ ನೀರನ್ನು ಬಳಕೆ ಮಾಡಲಾಗುವುದು. ಇದರಿಂದ ನದಿಯಲ್ಲಿನ ನೀರಿನ ಹರಿವು ಕಡಿಮೆ ಆಗುವುದಿಲ್ಲ. ಈ ಯೋಜನೆಯಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸರಬರಾಜು ಮಾಡಲು ಪ್ರಸ್ತುತ ಓನ್ ನೇಷನ್ ಓನ್ ಗ್ರಿಡ್ನಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನೇ ಬಳಸಲಾಗುವುದು. ಹಾಲಿ ಇರುವ 220 ಕೆ.ವಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು 400 ಕೆ.ವಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದೆ.

