
ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸರ್ಕಾರ ಬದ್ಧ: ರಾಹುಲ್ ಗಾಂಧಿಗೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುವ ಸಂಕಲ್ಪಕ್ಕೆ ಸರ್ಕಾರ ಕಟಿ ಬದ್ಧವಾಗಿದೆ. ರೋಹಿತ್, ಪಾಯಲ್, ದರ್ಶನ್ ಸೇರಿದಂತೆ ಶೋಷಣೆಗೆ ಒಳಗಾದ ಅಸಂಖ್ಯಾತ ಯುವಕರ ಕನಸುಗಳನ್ನು ಗೌರವಿಸಲು ರೋಹಿತ್ಈ ವೇಮುಲ ಕಾಯ್ದೆಯನ್ನು ಆದಷ್ಟು ಬೇಗ ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.lp
ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯುವ ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ತರುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರೆದ ಪತ್ರಕ್ಕೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏ.16ರಂದು ಪತ್ರ ಬರೆದು, ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಭೇದಭಾವ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ' ಜಾರಿಗೆ ಒತ್ತಾಯಿಸಿದ್ದರು.
ರೋಹಿತ್ ವೇಮುಲಾ, ಪಾಯಲ್ ತಡವಿ ಮತ್ತು ದರ್ಶನ್ ಸೋಲಂಕಿ ಆತ್ಮಹತ್ಯೆಗಳ ಕುರಿತು ಉಲ್ಲೇಖಿಸಿ, ಇಂತಹ ದುರ್ಘಟನೆಗಳನ್ನು ತಡೆಯಲು ಕಠಿಣ ಕಾನೂನು ಕ್ರಮ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಬಾಲ್ಯದ ಅನುಭವಗಳನ್ನು ಉಲ್ಲೇಖಿಸಿ, ತ್ವರಿತವಾಗಿ ರೋಹಿತ್ ವೇಮುಲ ಕಾಯ್ದೆ ಜಾರಿಗೆ ತರುವಂತೆ ಸೂಚಿಸಿದ್ದರು.
ಮುಂದಿನ ಅಧಿವೇಶನದಲ್ಲಿ ಕಾಯ್ದೆ
ರಾಹುಲ್ ಗಾಂಧಿ ಅವರ ಪತ್ರ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕಾಗಿ ರಾಹುಲ್ ಗಾಂಧಿ ಅವರ ಅಚಲ ಬದ್ಧತೆಗೆ ಧನ್ಯವಾದ ತಿಳಿಸುತ್ತೇನೆ.ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ವಿದ್ಯಾರ್ಥಿಯು ತಾರತಮ್ಯವನ್ನು ಎದುರಿಸಬಾರದು ಎಂದು ಖಚಿತಪಡಿಸಿಕೊಳ್ಳಲು ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುವ ಸಂಕಲ್ಪಕ್ಕೆ ಸರ್ಕಾರ ಕಟಿ ಬದ್ಧವಾಗಿದೆ. ರೋಹಿತ್, ಪಾಯಲ್, ದರ್ಶನ್ ಸೇರಿದಂತೆ ಶೋಷಣೆಗೆ ಒಳಗಾದ ಅಸಂಖ್ಯಾತ ಯುವಕರ ಕನಸುಗಳನ್ನು ಗೌರವಿಸಲು ರೋಹಿತ್ಈ ವೇಮುಲ ಕಾಯ್ದೆಯನ್ನು ಆದಷ್ಟು ಬೇಗ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನ, ಸಹಾನುಭೂತಿಯ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಇದು ಒಂದು ಹೆಜ್ಜೆಯಾಗಲಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಕಾಯ್ದೆ ಜಾರಿಗೆ ತರುವ ಮೊದಲ ರಾಜ್ಯ
ರೋಹಿತ್ ವೇಮುಲಾ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತಂದರೆ ಇಂತಹ ಕಾನೂನನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಲಿದೆ. ಇದು ಶಿಕ್ಷಣದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವಲ್ಲಿ ರಾಷ್ಟ್ರವ್ಯಾಪಿ ಸುಧಾರಣೆಗಳಿಗೆ ಪೂರ್ವನಿದರ್ಶನ ಸೃಷ್ಟಿಸಲಿದೆ. ಅಲ್ಲದೇ ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಭೇದಭಾವ ವಿರೋಧಿ ಘಟಕಗಳನ್ನು ಸ್ಥಾಪಿಸಲು ಮತ್ತು ಜಾತಿ ಆಧಾರಿತ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.
ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರು 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಲೇಜಿನಲ್ಲಿ ಜಾತಿ ಆಧಾರಿತ ಭೇದಭಾವ ಮತ್ತು ಅನ್ಯಾಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ನಲ್ಲಿ ಆರೋಪಿಸಿದ್ದರು.
ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ (ASA) ಸದಸ್ಯರಾಗಿದ್ದ ವೇಮುಲಾ, ಜಾತಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಈ ಹಿನ್ನೆಲೆಯಲ್ಲಿ, 2015ರ ಆಗಸ್ಟ್‌ನಲ್ಲಿ ವೇಮುಲಾ ಮತ್ತು ಇತರ ನಾಲ್ವರನ್ನು ಹಾಸ್ಟೆಲ್‌ನಿಂದ ಉಚ್ಚಾಟಿಸಲಾಗಿತ್ತು. ಇದರಿಂದ ಮಾನಸಿಕವಾಗಿ ನೊಂದಿದ್ದ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ವೇಮುಲಾ ಸಾವಿನ ನಂತರ ದೇಶಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅವರ ತಾಯಿ ರಾಧಿಕಾ ವೇಮುಲಾ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. 2024ರಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಪರಿಸಮಾಪ್ತಿ ವರದಿ ಸಲ್ಲಿಸಿದ್ದರು.
ವೇಮುಲಾ ಕಾಯ್ದೆಯಿಂದ ಏನು ಲಾಭ?
ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ವಿರೋಧಿ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸಲಾಗುತ್ತದೆ.
ಸಾಂಸ್ಥಿಕ ತಾರತಮ್ಯಕ್ಕೆ ಕಠಿಣ ದಂಡಗಳು ವಿಧಿಸಲು ಅವಕಾಶ ಇರಲಿದೆ.
ವಿಶ್ವವಿದ್ಯಾನಿಲಯಗಳಲ್ಲಿ ಸ್ವತಂತ್ರ ಕುಂದುಕೊರತೆ ನಿವಾರಣಾ ಘಟಕಗಳನ್ನುಸ್ಥಾಪಿಸಲು ಅವಕಾಶ ನೀಡಲಿದೆ.
ನಿರ್ಲಕ್ಷ್ಯ ಅಥವಾ ಪಕ್ಷಪಾತದ ಪ್ರಕರಣಗಳಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಿದೆ.