
ಜಿ.ಪರಮೇಶ್ವರ್
ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧ, ಪ್ರತಿಭಟನೆ ಕೈಬಿಡಿ: ಗೃಹ ಸಚಿವ ಪರಮೇಶ್ವರ್ ಮನವಿ
ಮುಖ್ಯಮಂತ್ರಿಗಳು ಹಲವು ಬಾರಿ ಸ್ಪಷ್ಟಪಡಿಸಿದಂತೆ, ನಾವು ವರದಿಯನ್ನು ಜಾರಿ ಮಾಡಿಯೇ ಮಾಡುತ್ತೇವೆ," ಎಂದು ಪರಮೇಶ್ವರ್ ಅವರು ಮಾದಿಗ ಸಮುದಾಯಗಳ ಒಕ್ಕೂಟಕ್ಕೆ ಭರವಸೆ ನೀಡಿದರು.
ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೊಳಿಸುವ ವಿಚಾರವಾಗಿ ಮಾದಿಗ ಸಮುದಾಯಗಳ ಒಕ್ಕೂಟವು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಒಳ ಮೀಸಲಾತಿ ಜಾರಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದ್ದು, ಪ್ರತಿಭಟನಾಕಾರರು ಸ್ವಲ್ಪ ಸಮಯಾವಕಾಶ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸರ್ಕಾರವು ಎಸ್ಸಿ ಒಳ ಮೀಸಲಾತಿ ವರದಿ ಜಾರಿಗೆ ಬದ್ಧವಾಗಿದೆ. ಈ ಬಗ್ಗೆ ಚಿತ್ರದುರ್ಗದಲ್ಲೇ ಘೋಷಣೆ ಮಾಡಲಾಗಿದ್ದು, ನಮ್ಮ ಪ್ರಣಾಳಿಕೆಯಲ್ಲೂ ಈ ಭರವಸೆ ನೀಡಿದ್ದೇವೆ. ಆದರೆ, ಒಳ ಮೀಸಲಾತಿಯನ್ನು ಏಕಾಏಕಿ ಜಾರಿ ಮಾಡಿದರೆ ಅದು ಕಾನೂನಿನ ಪ್ರಕಾರ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ," ಎಂದು ಹೇಳಿದರು.
"ಹಿಂದಿನ ಬಿಜೆಪಿ ಸರ್ಕಾರವು ಸದಾಶಿವ ಆಯೋಗದ ವರದಿಯಲ್ಲಿ ಸರಿಯಾದ ಡೇಟಾ ಇಲ್ಲವೆಂಬ ಕಾರಣಕ್ಕೆ ತಿರಸ್ಕರಿಸಿತ್ತು. ಹೀಗಾಗಿಯೇ, ಕಾನೂನುಬದ್ಧವಾಗಿ ಮತ್ತು ಯಾರಿಗೂ ಅನ್ಯಾಯವಾಗದಂತೆ ಜಾರಿಗೊಳಿಸಲು ನಾವು ನಾಗಮೋಹನದಾಸ್ ಆಯೋಗವನ್ನು ರಚಿಸಿದ್ದೇವೆ. ಆಯೋಗದ ವರದಿಯು ನಾಳೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ," ಎಂದು ಅವರು ತಿಳಿಸಿದರು.
ವರದಿ ಸಲ್ಲಿಕೆಯಾದ ನಂತರ ಅದರಲ್ಲಿನ ಅಂಶಗಳನ್ನು ಕೂಲಂಕಷವಾಗಿ ಚರ್ಚಿಸಿ, ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಜಾರಿಗೊಳಿಸಲಾಗುವುದು. "ಪ್ರತಿಭಟನೆ ನಡೆಸುತ್ತಿರುವವರಿಗೆ ನಾನು ಮನವಿ ಮಾಡುತ್ತೇನೆ, ದಯವಿಟ್ಟು ನಮಗೆ ಸ್ವಲ್ಪ ಸಮಯ ಕೊಡಿ. ಮುಖ್ಯಮಂತ್ರಿಗಳು ಹಲವು ಬಾರಿ ಸ್ಪಷ್ಟಪಡಿಸಿದಂತೆ, ನಾವು ವರದಿಯನ್ನು ಜಾರಿ ಮಾಡಿಯೇ ಮಾಡುತ್ತೇವೆ," ಎಂದು ಪರಮೇಶ್ವರ್ ಅವರು ಮಾದಿಗ ಸಮುದಾಯಗಳ ಒಕ್ಕೂಟಕ್ಕೆ ಭರವಸೆ ನೀಡಿದರು.
ಮಾದಕವಸ್ತು ತಡೆಗೆ ವಿಶೇಷ ಕಾರ್ಯಪಡೆ ರಚನೆ
ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ಮಾದಕವಸ್ತುಗಳ ಹಾವಳಿಯನ್ನು ತಡೆಗಟ್ಟುವ ಕುರಿತು ಮಾತನಾಡಿದ ಗೃಹ ಸಚಿವರು, "ನಾವು ಮಾದಕವಸ್ತುಗಳ ವಿರುದ್ಧ ಸಮರವನ್ನೇ ಸಾರಿದ್ದೇವೆ. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ವಿಶೇಷ 'ಡ್ರಗ್ಸ್ ಕಾರ್ಯಪಡೆ'ಯನ್ನು ರಚಿಸಲಾಗಿದ್ದು, ಅಧಿಕಾರಿಗಳನ್ನು ನೇಮಿಸಿ ಅವರಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ," ಎಂದು ಮಾಹಿತಿ ನೀಡಿದರು.