ಸರಿಯಾದ ಸಮಯಕ್ಕೆ ಸರಿಯಾದ ಬದಲಾವಣಿ ಸಿಕ್ಕಿದೆ: ಗೋಲ್ಡನ್‌ ಸ್ಟಾರ್‌ ಗಣೇಶ್
x
ಗಣೇಶ್‌ ಅಭಿನಯದ ಪಿನಾಕ ಚಿತ್ರದ ಟೀಸರ್‌

ಸರಿಯಾದ ಸಮಯಕ್ಕೆ ಸರಿಯಾದ ಬದಲಾವಣಿ ಸಿಕ್ಕಿದೆ: ಗೋಲ್ಡನ್‌ ಸ್ಟಾರ್‌ ಗಣೇಶ್

ಗಣೇಶ್‍ ಒಂದೇ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಬರೀ ಪ್ರೇಕ್ಷಕರಿಗಷ್ಟೇ ಅಲ್ಲ, ಅವರಿಗೂ ಅನಿಸಿತ್ತಂತೆ. ಬೇರೆ ತರಹದ ಪಾತ್ರಗಳನ್ನು ಮಾಡಬೇಕು ಎಂದರೂ ಅದು ಸಾಧ್ಯವಾಗಿರಲಿಲ್ಲ. ಏಕೆಂದರೆ, ಬದಲಾವಣೆ ಬೇಕು ಎಂದು ಅವರೊಬ್ಬರು ಹೇಳಿದರೆ ಸಾಲದು, ಅದಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರು ಸಹ ಕೈಜೋಡಿಸಬೇಕು. ಅದು ಸಾಧ್ಯವಾಗದ ಕಾರಣ, ಗಣೇಶ್‍ ಸುಮ್ಮನಿದ್ದರಂತೆ. ಇದೀಗ ಬದಲಾವಣೆಗೆ ಒಂದು ಅವಕಾಶ ಸಿಕ್ಕಿದೆ.


ಗಣೇಶ್‍ ಅಭಿನಯದ ‘ಪಿನಾಕ’ ಎಂಬ ಹೊಸ ಚಿತ್ರದ ಫಸ್ಟ್ ಲುಕ್‍ ಟೀಸರ್ ಹೊಸ ವರ್ಷದ ಪ್ರಯುಕ್ತ ಬಿಡುಗಡೆಯಾಗಿದೆ. ಇಷ್ಟು ವರ್ಷಗಳಲ್ಲಿ, ಯಾವ ಚಿತ್ರಗಳಲ್ಲೂ ಕಾಣಸಿಗದ ಗಣೇಶ್‍ ಅವರ ಹೊಸ ಅವತಾರವನ್ನು ಈ ಟೀಸರ್‍ನಲ್ಲಿ ನೋಡಬಹುದು. ಈ ಚಿತ್ರದಲ್ಲಿ ಅವರು ಅಘೋರಿಯಂತೆ ವೇಷ ತೊಟ್ಟು, ಕತ್ತಲ ರಾತ್ರಿಯಲ್ಲಿ ಬುರುಡೆಗಳ ಮೇಲೆ ನಡೆಯುತ್ತಾ ಡೈಲಾಗ್ ಹೊಡೆಯುತ್ತಾರೆ. ಚಿತ್ರದಲ್ಲಿ ಅವರು ರುದ್ರನೋ? ಕ್ಷುದ್ರನೋ? ಎಂಬ ಪ್ರಶ್ನೆ ಹುಟ್ಟುಹಾಕುತ್ತಾರೆ. ಮೊದಲೇ ಹೇಳಿದಂತೆ, ಗಣೇಶ್‍ ಈ ಹಿಂದಿನ ಯಾವ ಚಿತ್ರದಲ್ಲೂ ಹೀಗೆ ಕಾಣಿಸಿಕೊಂಡಿರಲಿಲ್ಲ.

ಈ ಕುರಿತು ಮಾತನಾಡಿರುವ ಗಣೇಶ್‍, ‘’ಮುಂಗಾರು ಮಳೆ’ ಚಿತ್ರ ಬಿಡುಗಡೆಯಾಗಿ 18 ವರ್ಷಗಳಾಗಿವೆ. ಈ 18 ವರ್ಷಗಳ ಪ್ರಯಾಣದ ಬಗ್ಗೆ ನನಗೆ ಖುಷಿ ಇದೆ. ಆದರೆ, ಒಬ್ಬ ನಟನಾಗಿ ನನ್ನನ್ನು ಇನ್ನೊಂದು ಆಯಾಮದಲ್ಲಿ ತೋರಿಸುವಂತಹ ಚಿತ್ರ ಬಂದಿರಲಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಬದಲಾವಣೆ ತರುವಂತಹ ಒಂದು ಚಿತ್ರ ಸಿಕ್ಕಿದೆ’ ಎನ್ನುತ್ತಾರೆ.

ಪಿನಾಕ ಚಿತ್ರತಂಡ

ಪಿನಾಕ ಚಿತ್ರತಂಡ

ಗಣೇಶ್‍ ಚಿತ್ರರಂಗಕ್ಕೆ ಬಂದಿದ್ದು ಹೀರೋ ಆಗಲ್ಲ. ಕಾಲಕ್ರಮೇಣ ಹೀರೋ ಆದರು. ಒಂದೇ ತರಹದ ಪಾತ್ರಗಳಿಗೆ ಬ್ರಾಂಡ್‍ ಆದರೆ. ‘ನಾನು ಚಿತ್ರರಂಗಕ್ಕೆ ಹೀರೋ ಆಗಿ ಬರಲಿಲ್ಲ. ನಾನು ಮೊದಲು ಚಿತ್ರದಲ್ಲಿ ನಟಿಸಿದ್ದು ನೆಗೆಟಿವ್‍ ಪಾತ್ರದಲ್ಲಿ. ಆ ಚಿತ್ರ ಫ್ಲಾಪ್‍ ಆಯ್ತು. ಆ ನಂತರ ಸಾಕಷ್ಟು ಸೈಕಲ್‍ ಹೊಡೆದು, ಹೀರೋ ಪಾತ್ರದವರೆಗೂ ಬಂದೆ. ‘ಮುಂಗಾರು ಮಳೆ’ ಚಿತ್ರದಲ್ಲಿ ನಾನೇನಲ್ಲವೋ ಅದನ್ನು ಮಾಡಿದೆ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಚಿತ್ರದಲ್ಲಿ ಶ್ರೀಮಂತರ ಮನೆಯ ಹುಡುಗನಾಗಿ ಕಾಣಿಸಿಕೊಂಡಿದ್ದೆ. ಸ್ವಲ್ಪ ಬೆಳ್ಳಗಿದ್ದರಿಂದಲೋ ಏನೋ, ಪಾತ್ರ ಯಶಸ್ವಿಯಾಯಿತು. ಆ ನಂತರ ಅದೇ ತರಹ ಪಾತ್ರಗಳು ಸಿಗುತ್ತಾ ಹೋದವು. ಜನ ಏನು ಇಷ್ಟಪಡುತ್ತಾರೋ, ನಾನೂ ಅದನ್ನೇ ಮುಂದುವರೆಸಿಕೊಂಡು ಹೋದೆ. ಬೇರೆ ತರಹದ ಚಿತ್ರಗಳು ಮತ್ತು ಪಾತ್ರಗಳನ್ನು ಮಾಡಬೇಕು ಎಂದು ನನಗೂ ಆಸೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ನಾನೊಬ್ಬ ಬದಲಾಗಬೇಕು ಎಂದು ಮನಸ್ಸು ಮಾಡಿದರೆ ಸಾಧ್ಯವಿಲ್ಲ. ನನ್ನಿಂದ ಬೇರೆ ಏನೋ ಮಾಡಿಸಬೇಕು ಎಂದು ನಿರ್ದೇಶಕರಿಗೂ ಯೋಚನೆ ಇರಬೇಕು. ನನಗೂ ಬೇರೆ ತರಹದ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟ. ಆದರೆ, ಆ ತರಹದ ಕಥೆಗಳು ಬರಲಿಲ್ಲ. ಮೊದಲು ವರ್ಷಕ್ಕೆ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದೆ. ಅದರಲ್ಲಿ ಒಂದು ಪ್ರಯೋಗ ಮಾಡುವುದಕ್ಕೆ ಖಂಡಿತಾ ಅವಕಾಶವಿತ್ತು. ಆದರೆ, ಪ್ರಯೋಗ ಮಾಡುವಂತಹ ಚಿತ್ರಗಳು ಬರಲಿಲ್ಲ. ಬೇರೆ ಕಥೆಗಳನ್ನು ಬರೆಯುವುದರ ಜೊತೆಗೆ, ತರಹದ ಪ್ರಯೋಗ ಮಾಡುವ ನಿರ್ಮಾಪಕರು ಸಹ ಬಹಳ ಮುಖ್ಯ. ಆದರೆ, ಆಗ ಅದು ಸಾಧ್ಯವಾಗಿರಲಿಲ್ಲ. ಈಗ ಈ ಚಿತ್ರದಲ್ಲಿ ಅಂಥದ್ದೊಂದು ಕಥೆ ಮತ್ತು ಪ್ರಯೋಗ ಮಾಡುವ ನಿರ್ಮಾಪಕರು ಸಿಕ್ಕಿದ್ದರಿಂದ ಈ ಚಿತ್ರ ಸಾಧ್ಯವಾಗಿದೆ’ ಎನ್ನುತ್ತಾರೆ.

ಈ ಪಾತ್ರದ ಮೇಕಪ್‍ಗೆ ಸುಮಾರು ಮೂರು ತಾಸು ಹಿಡಿಯಿತಂತೆ. ‘ಈ ಟೀಸರ್‍ ನೋಡಿದರೆ ರುದ್ರನೋ, ಕ್ಷುದ್ರನೋ ಎಂಬ ಅನುಮಾನ ಬರುತ್ತದೆ. ಬರೀ ಟೀಸರ್‍ ಅಷ್ಟೇ ಅಲ್ಲ, ಚಿತ್ರದಲ್ಲೂ ಅದು ಮುಂದುವರೆಯುತ್ತದೆ. ಪ್ರತಿಯೊಬ್ಬರಲ್ಲೂ ಒಳ್ಳೆಯದ್ದು ಮತ್ತು ಕೆಟ್ಟದ್ದು ಎಂಬ ಎರಡು ಶಕ್ತಿಗಳಿವೆ. ನಾವು ಯಾವುದನ್ನು ಹೆಚ್ಚು ಬಳಸಿಕೊಳ್ಳುತ್ತೇವೆ, ಅದರಿಂದ ಏನೆಲ್ಲಾಆಗುತ್ತದೆ ಎನ್ನುವುದು ಕಥೆ. ಕೆಲವು ಕಥೆಗಳು ಕೇಳಿದರೆ ಮೇಲ್ನೋಟಕ್ಕೆ ಪುರಾಣ ಎಂದನಿಸುತ್ತದೆ. ಉದಾಹರಣೆಗೆ, ರಾಮಾಯಣ ಪುರಾಣದ ಕಥೆ ಅಂತನಿಸಿದರೂ, ಕಿಷ್ಕಿಂದೆ ನಿಜಕ್ಕೂ ಇದೆ. ಅಲ್ಲಿ ರಾಮಾಯದ ಕಥೆ ನಡೆದಿತ್ತು ಎಂಬ ಉಲ್ಲೇಖವಿದೆ. ಅದು ಬರೀ ಕಟ್ಟುಕಥೆಯಲ್ಲ, ಇತಿಹಾಸದ ಒಂದು ಭಾಗ ಎಂದನಿಸುತ್ತದೆ. ಇದು ಸಹ ಅದೇ ತರಹದ ಕಥೆ. ಸುಮಾರು 500 ವರ್ಷಗಳ ಹಿಂದೆ ನಡೆದ ಒಂದು ಘಟನೆ ಈ ಚಿತ್ರಕ್ಕೆ ಸ್ಫೂರ್ತಿ. ಅಲ್ಲಿಂದ ಶುರುವಾಗುವ ಕಥೆ ಏನೆಲ್ಲಾ ತಿರುವುಗಳನ್ನು ಪಡೆಯುತ್ತದೆ ಎಂದು ಹೇಳಲಾಗಿದೆ’ ಎನ್ನುತ್ತಾರೆ ಗಣೇಶ್‍.

ಈ ಚಿತ್ರ ಪ್ರಾರಂಭವಾಗುವುದಕ್ಕೆ ಕಾರಣ ತೆಲುಗಿನ ‘ಕಾರ್ತಿಕೇಯ 2’ ಚಿತ್ರ. ‘ಸುಮಾರು ಒಂದೂವರೆ ವರ್ಷಗಳ ಹಿಂದೆ ನಿರ್ಮಾಪಕ ವಿಶ್ವಪ್ರಸಾದ್‍ ಜೊತೆಗೆ ಮಾತನಾಡುತ್ತಿದೆ. ಆ ಸಂದರ್ಭದಲ್ಲಿ ಅವರೇ ನಿರ್ಮಾಣದ ‘ಕಾರ್ತಿಕೇಯ 2’ ಚಿತ್ರದ ಪ್ರಸ್ತಾಪವಾಯಿತು. ಆ ತರಹ ನಮ್ಮ ಚಂದಮಾಮ ಶೈಲಿಯ ತಂತ್ರ, ಮಂತದ ಕಥಯನ್ನು ಮಿಕ್ಸ್ ಮಾಡಿ ಯಾಕೆ ಒಂದು ಚಿತ್ರ ಮಾಡಬಾರದು ಎಂದು ಹೇಳಿದೆ. ಆಗ ಅವರು ಈ ಎಳೆ ಹೇಳಿದರು. ಬಹಳ ಇಷ್ಟವಾಯಿತು. ಸುಮಾರು 500 ವರ್ಷಗಳ ಹಿಂದೆ ಕಥೆ ಪ್ರಾರಂಭವಾಗಿ, ಇಲ್ಲಿಯವರೆಗೂ ಮುಂದುವರೆಯುತ್ತದೆ. ಇದನ್ನೇ ಮಾಡೋಣ ಎಂಬ ತೀರ್ಮಾನಕ್ಕೆ ಬಂದೆವು. ಕಳೆದ ಒಂದೂವರೆ ವರ್ಷಗಳಿಂದ ತಯಾರಿ ನಡೆಯುತ್ತಲೇ ಇದೆ. ಯಾವಾಗ ಕೇಳಿದರೂ ಬರವಣಿಗೆ ನಡೆಯುತ್ತಿದೆ ಎಂದು ನಿರ್ದೇಶಕ ಧನಂಜಯ್‍ ಹೇಳುತ್ತಿದ್ದರು. ಈಗ ಕಥೆ-ಚಿತ್ರಕಥೆ ಸಂಪೂರ್ಣವಾಗಿದ್ದು ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನತ್ತಾರೆ.

ಇದು ಪೀಪಲ್‍ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ 49ನೇ ಚಿತ್ರ. ‘ಇದರಲ್ಲಿ ಸಾಕಷ್ಟು VFX ಇದೆ. ನಿರ್ಮಾಣ ಸಂಸ್ಥೆಯದ್ದೇ VFX ವಿಭಾಗವಿರುವುದರಿಂದ, ಅದೇ ಉಸ್ತುವಾರಿ ವಹಿಸಿದೆ. ನಿಜ ಹೇಳಬೇಕೆಂದರೆ, ಅದಕ್ಕೇ ಹೆಚ್ಚು ಸಮಯವಾಗಿದ್ದು. ಈಗ ಯಾವುದನ್ನು ಹೇಗೆ ಶೂಟ್‍ ಮಾಡಬೇಕು, ಎಲ್ಲಿ VFX ಇದೆ ಎಂಬ ಸ್ಪಷ್ಟತೆ ಸಿಕ್ಕಿದೆ. ಅದಕ್ಕೆ ಪೂರಕವಾಗಿ ಬೇಸಿಕ್‍ ಕೆಲಸಗಳೂ ಆಗಿವೆ. ಚಿತ್ರೀಕರಣ ಪ್ರಾರಂಭವಾಗಬೇಕು ಅಷ್ಟೇ. ಚಿತ್ರೀಕರಣ ಜೊತೆಗೆ ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿರುತ್ತವೆ. ಅರ್ಧ ಚಿತ್ರೀಕರಣ ಸೆಟ್‍ಗಳಲ್ಲೇ ನಡೆಯಲಿವೆ. ಚಿತ್ರದಲ್ಲಿ ನಟಿಸುವ ಕಲಾವಿದರ ಬಗ್ಗೆ ಸಂಕ್ರಾಂತಿ ವೇಳೆಗೆ ಸ್ಪಷ್ಟ ಮಾಹಿತಿ ಸಿಗಲಿದೆ’ ಎನ್ನುತ್ತಾರೆ.

ಈ ಹಿಂದೆ ‘ತೇಜಸ್‍’, ‘ಆಪರೇಷನ್‍ ವ್ಯಾಲಂಟೈನ್‍’, ‘ಸತ್ಯಪ್ರೇಮ್ ಕೀ ಕಥಾ’ ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಹರಿ ಕೆ. ವೇದಾಂತಂ ಈ ಚಿತ್ರದ ಛಾಯಾಗ್ರಹಕರು. ರಘು ನಿಡುವಳ್ಳಿ ಸಂಭಾಷಣೆ ಬರೆದರೆ, ಹಲವಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಧನಂಜಯ್‍, ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

Read More
Next Story