
ಆರೋಗ್ಯ ಇಲಾಖೆಯಲ್ಲಿ ಬೃಹತ್ ನೇಮಕಾತಿ: ತಜ್ಞ ವೈದ್ಯರು, ಸಿಬ್ಬಂದಿ ಹುದ್ದೆಗಳಿಗೆ ಸರ್ಕಾರದ ಅಸ್ತು
19 ಜಿಲ್ಲೆಗಳ 40 ಹಾಸಿಗೆಗಳ ತೀವ್ರ ನಿಗಾ ಘಟಕಗಳಲ್ಲಿ 38 ಹುದ್ದೆಗಳು ಹಾಗೂ 147 ತಾಲ್ಲೂಕು ಆಸ್ಪತ್ರೆಗಳ 20 ಹಾಸಿಗೆಗಳ ತೀವ್ರ ನಿಗಾ ಘಟಕಗಳಿಗೆ 147 ಹುದ್ದೆಗಳು ಸೇರಿ ಒಟ್ಟು 185 ಹುದ್ದೆಗಳ ಸೃಜನೆಯನ್ನು ಅನುಮೋದಿಸಲಾಗಿದೆ.
ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ 19 ಜಿಲ್ಲಾಸ್ಪತ್ರೆಗಳು ಮತ್ತು 147 ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ತೀವ್ರ ನಿಗಾ ಘಟಕಗಳಿಗೆ (ಐಸಿಯು) ಹೊಸದಾಗಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಹುದ್ದೆಗಳನ್ನು ಸೃಜಿಸಿ ಆದೇಶ ಹೊರಡಿಸಿದೆ. ಆರೋಗ್ಯ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆ ಮತ್ತು ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಆದೇಶದ ಅನ್ವಯ, ಒಟ್ಟು 185 ತಜ್ಞ ವೈದ್ಯರು ಮತ್ತು ಅರವಳಿಕೆ ತಜ್ಞರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 19 ಜಿಲ್ಲಾಸ್ಪತ್ರೆಗಳಲ್ಲಿರುವ 40 ಹಾಸಿಗೆಗಳ ಸಾಮರ್ಥ್ಯದ ತೀವ್ರ ನಿಗಾ ಘಟಕಗಳಿಗೆ ತಲಾ ಇಬ್ಬರಂತೆ ಒಟ್ಟು 38 ಹುದ್ದೆಗಳನ್ನು ಹಾಗೂ 147 ತಾಲೂಕು ಆಸ್ಪತ್ರೆಗಳಲ್ಲಿರುವ 20 ಹಾಸಿಗೆಗಳ ಐಸಿಯುಗಳಿಗೆ ತಲಾ ಒಬ್ಬರಂತೆ 147 ಹುದ್ದೆಗಳನ್ನು ಸೃಜಿಸಲಾಗಿದೆ.
ಹೊಸ ಹುದ್ದೆಗಳ ವಿವರ
ಜಿಲ್ಲಾಸ್ಪತ್ರೆ (40 ಹಾಸಿಗೆಗಳ ಐಸಿಯು): ಪ್ರತಿ ಘಟಕಕ್ಕೆ ಇಬ್ಬರು ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು, ಆರು ಶುಶ್ರೂಷಕರು ಮತ್ತು ಮೂರು ಗ್ರೂಪ್ 'ಡಿ' ದರ್ಜೆಯ ಸಿಬ್ಬಂದಿ ಹುದ್ದೆಗಳನ್ನು ಸೃಜಿಸಲಾಗಿದೆ.
ತಾಲೂಕು ಆಸ್ಪತ್ರೆ (20 ಹಾಸಿಗೆಗಳ ಐಸಿಯು): ಪ್ರತಿ ಘಟಕಕ್ಕೆ ಒಬ್ಬರು ತಜ್ಞ ವೈದ್ಯರು, ಇಬ್ಬರು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು, ಮೂವರು ಶುಶ್ರೂಷಕರು ಮತ್ತು ಹನ್ನೆರಡು ಗ್ರೂಪ್ 'ಡಿ' ದರ್ಜೆಯ ಸಿಬ್ಬಂದಿ ಹುದ್ದೆಗಳನ್ನು ಸೃಜಿಸಲಾಗಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ.ಎಸ್. ಅವರು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.