
ಶಕ್ತಿಕೇಂದ್ರ ವಿಧಾನಸೌಧ.
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ತುಟ್ಟಿ ಭತ್ಯೆ ಹೆಚ್ಚಳ
ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಹಾಗೂ ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ಹಾಗೂ ಕುಟುಂಬ ನಿವೃತ್ತಿಯಾದವರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿದಾರರಿಗೂ ಮಂಜೂರು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ ನೌಕರರಿಗೆ ಸಿಹಿ ಸುದ್ದಿ ನೀಡಿದೆ. 2024ರ ಪರಿಷ್ಕೃತ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿ ಭತ್ಯೆ ದರಗಳನ್ನು ಮೂಲ ವೇತನದ ಶೇಕಡಾ 10.75ರಿಂದ 12.25ಕ್ಕೆ ಹೆಚ್ಚಳ ಮಾಡಿದೆ.
2024ರ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಏಳನೇ ನಿಯಮದಂತೆ ವೇತನ ಶ್ರೇಣಿಯ ಗರಿಷ್ಠಕ್ಕಿಂತ ನೌಕರನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ ಅವುಗಳೂ ಸೇರುತ್ತವೆ. ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಹಾಗೂ ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ಹಾಗೂ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರಿಗೂ ಜನವರಿಯಿಂದ ಪರಿಷ್ಕರಣೆಗೊಂಡಿರುವ ತುಟ್ಟಿ ಭತ್ಯೆ ನೀಡಲಾಗುವುದು ಎಂದು ತಿಳಿಸಿದೆ.
ಸರ್ಕಾರ ಮತ್ತು ಜಿಲ್ಲಾ ಪಂಚಾಯಿತಿಯ ಪೂರ್ಣಾವಧಿ ನೌಕರರಿಗೆ, ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿರುವ ಪೂರ್ಣಾವಧಿ ನೌಕರರಿಗೂ ಈ ನಿಯಮ ಅನ್ವಯಿಸುತ್ತದೆ. ಯುಜಿಸಿ, ಎಐಟಿಯುಸಿ, ಐಸಿಎಆರ್‌ನಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‌ಜಿಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು.
ತುಟ್ಟಿ ಭತ್ಯೆಯ ಬಾಕಿಯನ್ನು 2025 ಮೇ ತಿಂಗಳ ವೇತನದ ಜತೆಗೆ ಪಾವತಿ ಮಾಡಲಾಗುವುದು. ತುಟ್ಟಿ ಭತ್ಯೆಯನ್ನು ವೇತನ ಎಂದು ಪರಿಗಣಿಸುವಂತಿಲ್ಲ ಎಂದು ಆರ್ಥಿಕ ಇಲಾಖೆ ಜಂಟಿ ಕಾರ್ಯದರ್ಶಿ ತಿಳಿಸಿದ್ದಾರೆ.