
ಸಾಂದರ್ಭಿಕ ಚಿತ್ರ
ಪಿಎಸ್‌ಐ, ಕಾನ್‌ಸ್ಟೆಬಲ್ ಆಕಾಂಕ್ಷಿಗಳಿಗೆ ಸಿಹಿಸುದ್ದಿ: ವಯೋಮಿತಿ ಹೆಚ್ಚಳಕ್ಕೆ ಸರ್ಕಾರದ ಅಸ್ತು
ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 27 ವರ್ಷದಿಂದ 30 ವರ್ಷಕ್ಕೆ ಏರಿಸಲಾಗಿದೆ.
ರಾಜ್ಯದಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿಗದಿಪಡಿಸಲಾಗಿದ್ದ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಿ ಗೃಹ ಇಲಾಖೆ ಅನುಮತಿ ನೀಡಿದೆ. ಇದರಿಂದಾಗಿ ವಯೋಮಿತಿ ಮೀರುವ ಆತಂಕದಲ್ಲಿದ್ದ ಲಕ್ಷಾಂತರ ಯುವಕ-ಯುವತಿಯರಿಗೆ ಹೊಸ ಅವಕಾಶ ದೊರೆತಂತಾಗಿದೆ.
ಗೃಹ ಇಲಾಖೆ ಅನುಮೋದಿಸಿರುವ ಹೊಸ ನಿಯಮದ ಪ್ರಕಾರ, ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 27 ವರ್ಷದಿಂದ 30 ವರ್ಷಕ್ಕೆ ಏರಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಈ ಮಿತಿಯನ್ನು 25 ರಿಂದ 27 ವರ್ಷಕ್ಕೆ ಹೆಚ್ಚಿಸಲಾಗಿದೆ.
ಹಾಗೆಯೇ, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 30 ರಿಂದ 32 ವರ್ಷಕ್ಕೆ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 28 ರಿಂದ 30 ವರ್ಷಕ್ಕೆ ಏರಿಕೆ ಮಾಡಲಾಗಿದೆ.
ಕಾರಣವೇನು?
ಹಲವು ವರ್ಷಗಳಿಂದ ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದು, ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ನಂತರ ಅಧಿಸೂಚನೆಗಳು ಸರಿಯಾದ ಸಮಯಕ್ಕೆ ಹೊರಬಿದ್ದಿರಲಿಲ್ಲ. ಇದರಿಂದಾಗಿ, ಹಲವು ಅಭ್ಯರ್ಥಿಗಳು ವಯೋಮಿತಿ ಮೀರಿ ಅವಕಾಶ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ವಯೋಮಿತಿ ಹೆಚ್ಚಳ ಮಾಡುವಂತೆ ಆಕಾಂಕ್ಷಿಗಳು ನಿರಂತರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಈ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಬೇಡಿಕೆಯನ್ನು ಪರಿಗಣಿಸಿರುವ ಸರ್ಕಾರವು ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಗೃಹ ಇಲಾಖೆಯು ಅನುಮತಿ ನೀಡಿರುವುದರಿಂದ, ಶೀಘ್ರದಲ್ಲೇ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ. ಬಳಿಕ, ಪೊಲೀಸ್ ನೇಮಕಾತಿ ವಿಭಾಗವು ಮುಂಬರುವ ನೇಮಕಾತಿ ಅಧಿಸೂಚನೆಗಳಲ್ಲಿ ಈ ಹೊಸ ವಯೋಮಿತಿಯ ನಿಯಮವನ್ನು ಅಳವಡಿಸಿಕೊಳ್ಳಲಿದೆ. ಇದು ಸಾವಿರಾರು ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಅನುಕೂಲವನ್ನು ಒದಗಿಸಲಿದೆ.