ಸಿನಿ ಪ್ರೇಮಿಗಳಿಗೆ ಸಂತಸದ ಸುದ್ದಿ: ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಗರಿಷ್ಠ ದರ 200 ರೂ. ನಿಗದಿ
x

ಸಿನಿ ಪ್ರೇಮಿಗಳಿಗೆ ಸಂತಸದ ಸುದ್ದಿ: ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಗರಿಷ್ಠ ದರ 200 ರೂ. ನಿಗದಿ

ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 2014ರ ನಿಯಮ 55ಕ್ಕೆ ತಿದ್ದುಪಡಿ ತರಲಾಗಿದ್ದು, ಈ ಕೆಳಗಿನ ಅಂಶಗಳನ್ನು ಸೇರಿಸಲಾಗಿದೆ.


ರಾಜ್ಯದಾದ್ಯಂತ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ಟಿಕೆಟ್ ದರವನ್ನು ಗರಿಷ್ಠ 200 ರೂಪಾಯಿ (ತೆರಿಗೆ ಹೊರತುಪಡಿಸಿ) ಸೀಮಿತಗೊಳಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ, ಮನಬಂದಂತೆ ಟಿಕೆಟ್ ದರ ಏರಿಕೆ ಮಾಡುತ್ತಿದ್ದ ಪ್ರವೃತ್ತಿಗೆ ಕಡಿವಾಣ ಹಾಕಿದೆ.

ಒಳಾಡಳಿತ ಇಲಾಖೆಯು "ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2025"ಕ್ಕೆ ಅಂತಿಮ ರೂಪ ನೀಡಿದ್ದು, ಸೆಪ್ಟೆಂಬರ್ 12ರಂದು ಈ ಕುರಿತು ಅಧಿಸೂಚನೆ ಹೊರಡಿಸಿದೆ. ಈ ನಿಯಮವು ರಾಜ್ಯಪತ್ರದಲ್ಲಿ ಪ್ರಕಟವಾದ ದಿನದಿಂದಲೇ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಹೊಸ ನಿಯಮದಲ್ಲಿ ಏನಿದೆ?

ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 2014ರ ನಿಯಮ 55ಕ್ಕೆ ತಿದ್ದುಪಡಿ ತರಲಾಗಿದ್ದು, ಈ ಕೆಳಗಿನ ಅಂಶಗಳನ್ನು ಸೇರಿಸಲಾಗಿದೆ. ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ (ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ) ಯಾವುದೇ ಭಾಷೆಯ ಚಲನಚಿತ್ರ ಪ್ರದರ್ಶನಕ್ಕೆ ತೆರಿಗೆಯನ್ನು ಹೊರತುಪಡಿಸಿ ಟಿಕೆಟ್‌ನ ಗರಿಷ್ಠ ದರವನ್ನು 200 ರೂಪಾಯಿ ಎಂದು ನಿಗದಿಪಡಿಸಲಾಗಿದೆ.

75 ಅಥವಾ ಅದಕ್ಕಿಂತ ಕಡಿಮೆ ಆಸನಗಳನ್ನು ಹೊಂದಿರುವ ಪ್ರೀಮಿಯಂ ಸೌಲಭ್ಯದ (ಉದಾಹರಣೆಗೆ: ಗೋಲ್ಡ್ ಕ್ಲಾಸ್, ವಿಐಪಿ ಸ್ಕ್ರೀನ್) ಬಹುಪರದೆ ಚಿತ್ರಮಂದಿರಗಳಿಗೆ ಈ 200 ರೂಪಾಯಿ ದರ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಅಂದರೆ, ಇಂತಹ ಸ್ಕ್ರೀನ್‌ಗಳಲ್ಲಿ ಚಿತ್ರಮಂದಿರಗಳು 200 ರೂಪಾಯಿಗಿಂತ ಹೆಚ್ಚು ದರ ವಿಧಿಸಬಹುದು.

ನಿಯಮ ಜಾರಿಯ ಹಿನ್ನೆಲೆಯೇನು?

ಈ ನಿಯಮವನ್ನು ಜಾರಿಗೆ ತರುವ ಮುನ್ನ, ಸರ್ಕಾರವು ಜುಲೈ 15ರಂದು ಕರಡು ಅಧಿಸೂಚನೆ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿತ್ತು. ನಿಗದಿತ ಕಾಲಮಿತಿಯೊಳಗೆ ಬಂದ ಎಲ್ಲಾ ಸಲಹೆ-ಸೂಚನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಸರ್ಕಾರವು ಈ ಅಂತಿಮ ನಿಯಮವನ್ನು ಜಾರಿಗೊಳಿಸಿದೆ.

ಈ ಹೊಸ ನಿಯಮದಿಂದಾಗಿ, ದೊಡ್ಡ ಬಜೆಟ್ ಚಿತ್ರಗಳು ಅಥವಾ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದಾಗ ಮೊದಲ ವಾರದಲ್ಲಿ ಟಿಕೆಟ್ ದರವನ್ನು ಸಾವಿರಾರು ರೂಪಾಯಿಗಳಿಗೆ ಏರಿಸುತ್ತಿದ್ದ ಮಲ್ಟಿಪ್ಲೆಕ್ಸ್‌ಗಳ ಧೋರಣೆಗೆ ಕಡಿವಾಣ ಬೀಳಲಿದೆ.

200 ರೂಪಾಯಿಗಿಂತ ಹೆಚ್ಚು ಯಾರಿಗೆ?

ಸರ್ಕಾರದ ನಿಮಯದಲ್ಲಿ ವಿನಾಯಿತಿಯೊಂದನ್ನು ನೀಡಲಾಗಿದೆ. 'ಪ್ರೀಮಿಯಂ ಸೌಲಭ್ಯ'ಗಳನ್ನು ಹೊಂದಿರುವ ಮತ್ತು 75 ಅಥವಾ ಅದಕ್ಕಿಂತ ಕಡಿಮೆ ಆಸನಗಳ ಸಾಮರ್ಥ್ಯವಿರುವ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಿಗೆ ಈ ದರ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಇದರರ್ಥ, ಇಂತಹ ವಿಶೇಷ ಮತ್ತು ಐಷಾರಾಮಿ ಸ್ಕ್ರೀನ್‌ಗಳಲ್ಲಿ ಚಿತ್ರಮಂದಿರಗಳು 200 ರೂಪಾಯಿಗಿಂತ ಹೆಚ್ಚು ದರವನ್ನು ವಿಧಿಸುವ ಅಧಿಕಾರವನ್ನು ಹೊಂದಿರುತ್ತವೆ. ಈ ವಿನಾಯಿತಿಯು ಸಾಮಾನ್ಯ ಸ್ಕ್ರೀನ್‌ಗಳಿಗೆ ಅನ್ವಯಿಸುವುದಿಲ್ಲ ಮತ್ತು ಕೇವಲ ಅತ್ಯುತ್ತಮ ದರ್ಜೆಯ ಅನುಭವ ನೀಡುವ (ಉದಾಹರಣೆಗೆ: ರಿಕ್ಲೈನರ್ ಸೀಟ್‌ಗಳು, ವೈಯಕ್ತಿಕ ಸೇವೆ, ಉತ್ತಮ ಗುಣಮಟ್ಟದ ಆಡಿಯೋ-ವಿಶುವಲ್) ಸಣ್ಣ ಸ್ಕ್ರೀನ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಬೆಂಗಳೂರಿನಲ್ಲಿ ಹಲವಾರು ಮಲ್ಟಿಪ್ಲೆಕ್ಸ್‌ಗಳು ಇಂತಹ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿವೆ. ಸರ್ಕಾರದ ಅಧಿಸೂಚನೆಯಲ್ಲಿ ನಿರ್ದಿಷ್ಟ ಚಿತ್ರಮಂದಿರಗಳನ್ನು ಹೆಸರಿಸಿಲ್ಲವಾದರೂ, ಪಿವಿಆರ್​ , ಐನಾಕ್ಸ್​ ಮತ್ತು ಸಿನೆಪೊಲಿಸ್‌ನಂತಹ ಪ್ರಮುಖ ಸರಣಿಗಳು ಇಂತಹ ಸ್ಕ್ರೀನ್‌ಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ, ಪಿವಿಆರ್​ನ ಸಿನಿಮಾಸ್‌ನ 'ಗೋಲ್ಡ್ ಕ್ಲಾಸ್' ಮತ್ತು 'ಲಕ್ಸ್', ಐನಾಕ್ಸ್​​ನ 'ಇನ್ಸಿಗ್ನಿಯಾ' ಮತ್ತು ಸಿನೆಪೊಲಿಸ್‌ನ 'ವಿಐಪಿ' ಸ್ಕ್ರೀನ್‌ಗಳು ಈ ವರ್ಗಕ್ಕೆ ಸೇರುವ ಸಾಧ್ಯತೆ ಇದೆ. ಓರಿಯನ್ ಮಾಲ್, ಫೋರಂ ಮಾಲ್, ವೇಗಾ ಸಿಟಿ, ಮತ್ತು ಮಹೀಂದ್ರಾ ಮಿಲೇನಿಯಮ್ ಮಾಲ್‌ನಲ್ಲಿರುವ ಮಲ್ಟಿಪ್ಲೆಕ್ಸ್‌ಗಳು ಇಂತಹ ಪ್ರೀಮಿಯಂ ಆಯ್ಕೆಗಳನ್ನು ನೀಡುತ್ತವೆ. ಈ ಸ್ಕ್ರೀನ್‌ಗಳು 75ಕ್ಕಿಂತ ಕಡಿಮೆ ಆಸನಗಳನ್ನು ಹೊಂದಿದ್ದರೆ, ಅವು ಸರ್ಕಾರದ 200 ರೂಪಾಯಿ ದರ ಮಿತಿಯಿಂದ ವಿನಾಯಿತಿ ಪಡೆಯುತ್ತವೆ ಮತ್ತು ತಮ್ಮದೇ ಆದ ದರ ನಿಗದಿಪಡಿಸಬಹುದು.

Read More
Next Story