Good news for farmers: GST rates on dairy products, farm equipment and fertilizers reduced
x
ಸಾಂದರ್ಭಿಕ ಚಿತ್ರ

ರೈತರಿಗೆ ಸಿಹಿ ಸುದ್ದಿ: ಹೈನುಗಾರಿಕೆ ಉತ್ಪನ್ನಗಳು, ಕೃಷಿ ಉಪಕರಣಗಳು ಮತ್ತು ರಸಗೊಬ್ಬರಗಳ ಮೇಲಿನ ಜಿಎಸ್‌ಟಿ ದರ ಇಳಿಕೆ

ಹೊಸ ಪರಿಷ್ಕರಣೆಯ ಪ್ರಕಾರ, ಯುಎಚ್‌ಟಿ (UHT) ಹಾಲು ಮತ್ತು ಪನೀರ್ ಮೇಲಿನ ಶೇ. 5ರಷ್ಟು ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಶೂನ್ಯಕ್ಕೆ ಇಳಿಸಲಾಗಿದೆ. ಇದರಿಂದಾಗಿ ಇವು ತೆರಿಗೆ ಮುಕ್ತವಾಗಿವೆ.


Click the Play button to hear this message in audio format

ಹಬ್ಬದ ಋತುವಿಗೆ ಮುನ್ನ ರೈತರು ಮತ್ತು ಗ್ರಾಹಕರಿಗೆ ದೊಡ್ಡ ಕೊಡುಗೆ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಹಲವು ಅಗತ್ಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಗಣನೀಯವಾಗಿ ಕಡಿತಗೊಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 4 ರಂದು ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ತೀರ್ಮಾನವು ರೈತರ ಮೇಲಿನ ಕೃಷಿ ವೆಚ್ಚದ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಗ್ರಾಹಕರಿಗೆ ಅಗತ್ಯ ವಸ್ತುಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲಿದೆ.

ಹೊಸ ಪರಿಷ್ಕರಣೆಯ ಪ್ರಕಾರ, ಯುಎಚ್‌ಟಿ (UHT) ಹಾಲು ಮತ್ತು ಪನೀರ್ ಮೇಲಿನ ಶೇ. 5ರಷ್ಟು ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಶೂನ್ಯಕ್ಕೆ ಇಳಿಸಲಾಗಿದೆ. ಇದರಿಂದಾಗಿ ಇವು ತೆರಿಗೆ ಮುಕ್ತವಾಗಿವೆ. ಇದಲ್ಲದೆ, ಕಂಡೆನ್ಸ್ಡ್ ಮಿಲ್ಕ್, ಬೆಣ್ಣೆ, ತುಪ್ಪ ಮತ್ತು ಚೀಸ್‌ನಂತಹ ಇತರ ಹೈನುಗಾರಿಕೆ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಸಲಾಗಿದೆ.

ಕೃಷಿ ಯಂತ್ರೋಪಕರಣಗಳ ಬೆಲೆ ಇಳಿಕೆ

ಕೃಷಿ ವಲಯಕ್ಕೆ ಉತ್ತೇಜನ ನೀಡಲು, ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಲಾಗಿದೆ. ಕೈ ಪಂಪುಗಳು, ಹನಿ ನೀರಾವರಿ ನಳಿಕೆಗಳು, ಸ್ಪ್ರಿಂಕ್ಲರ್‌ಗಳು, ಮಣ್ಣು ಸಿದ್ಧಪಡಿಸುವ, ಕೊಯ್ಲು ಮಾಡುವ ಯಂತ್ರಗಳು, ಕಾಂಪೋಸ್ಟಿಂಗ್ ಯಂತ್ರಗಳು ಮತ್ತು ಟ್ರ್ಯಾಕ್ಟರ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಇದೇ ರೀತಿ, ರಸಗೊಬ್ಬರ ತಯಾರಿಕೆಗೆ ಬೇಕಾದ ಸಲ್ಫ್ಯೂರಿಕ್ ಆಸಿಡ್, ನೈಟ್ರಿಕ್ ಆಸಿಡ್ ಮತ್ತು ಅಮೋನಿಯಾದಂತಹ ಕಚ್ಚಾ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಶೇ. 18 ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಹಾಗೆಯೇ, ಜೈವಿಕ ಕೀಟನಾಶಕಗಳು ಮತ್ತು ಬೇವಿನ ಆಧಾರಿತ ಕೀಟನಾಶಕಗಳ ಮೇಲಿನ ತೆರಿಗೆಯನ್ನು ಶೇ. 12 ರಿಂದ ಶೇ. 5ಕ್ಕೆ ತಗ್ಗಿಸಲಾಗಿದೆ.

ಟ್ರ್ಯಾಕ್ಟರ್‌ಗಳ ಬಿಡಿಭಾಗಗಳ ಮೇಲಿನ ತೆರಿಗೆಯನ್ನೂ ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಟ್ರ್ಯಾಕ್ಟರ್‌ಗಳ ಟೈರ್-ಟ್ಯೂಬ್‌ಗಳು, ಡೀಸೆಲ್ ಇಂಜಿನ್‌ಗಳು, ಹೈಡ್ರಾಲಿಕ್ ಪಂಪ್‌ಗಳು, ಗೇರ್ ಬಾಕ್ಸ್‌ಗಳು ಮತ್ತು ರೇಡಿಯೇಟರ್‌ಗಳಂತಹ ಪ್ರಮುಖ ಬಿಡಿಭಾಗಗಳ ಮೇಲಿನ ಜಿಎಸ್‌ಟಿಯನ್ನು ಶೇ. 18 ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಈ ಎಲ್ಲಾ ಹೊಸ ದರಗಳು ಇದೇ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.

Read More
Next Story