
ಉತ್ತರ ಕರ್ನಾಟಕದ ಭಕ್ತರಿಗೆ ಖಷಿಯ ಸುದ್ದಿ: ಬೆಳಗಾವಿಯಲ್ಲಿ ತಿರುಪತಿ ತಿಮ್ಮಪ್ಪನ ದೇಗುಲ ನಿರ್ಮಾಣ
ಬೆಳಗಾವಿ ಸುವರ್ಣಸೌಧದ ಬಳಿ ಈ ದೇವಸ್ಥಾನ ನಿರ್ಮಾಣವಾಗಲಿದ್ದು, ಶ್ರೀವಾರಿ ಟ್ರಸ್ಟ್ ಮೂಲಕ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಟಿಟಿಡಿ ಸದಸ್ಯರಾದ ಎಸ್. ನರೇಶ್ ಕುಮಾರ್ ಹೇಳಿದ್ದಾರೆ.
ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಬೆಳಗಾವಿಯಲ್ಲಿ ತಿರುಪತಿ ಮಾದರಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಟಿಟಿಡಿ ಸದಸ್ಯರಾದ ಎಸ್. ನರೇಶ್ ಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ಅವರು, ತಿರುಮಲದಲ್ಲಿ ಸೆಪ್ಟೆಂಬರ್ 24ರಿಂದ ಆರಂಭವಾಗಲಿರುವ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಗರದ ಮಲ್ಲೇಶ್ವರಂನ ವೈಯಾಲಿಕಾವಲ್‌ನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ಶ್ರೀವಾರಿ ದೇವಸ್ಥಾನ
ಬೆಳಗಾವಿಯಲ್ಲಿ ಟಿಟಿಡಿ ದೇವಸ್ಥಾನ ನಿರ್ಮಾಣ ಮಾಡುವ ಕುರಿತು ಸೆಪ್ಟೆಂಬರ್ 16 ರಂದು ನಡೆದ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಅನುಮೋದನೆ ನೀಡಲಾಗಿದೆ. ಬೆಳಗಾವಿ ಸುವರ್ಣಸೌಧದ ಬಳಿ ಈ ದೇವಸ್ಥಾನ ನಿರ್ಮಾಣವಾಗಲಿದ್ದು, ಶ್ರೀವಾರಿ ಟ್ರಸ್ಟ್ ಮೂಲಕ ಕಾಮಗಾರಿ ಕೈಗೊಳ್ಳಲಾಗುವುದು. ಈ ದೇವಸ್ಥಾನ ನಿರ್ಮಾಣದಿಂದಾಗಿ ಆ ಭಾಗದ ಭಕ್ತರು ಪ್ರತಿ ಬಾರಿಯೂ ತಿರುಪತಿಗೆ ಭೇಟಿ ನೀಡುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಸ್ವಾಮಿಯ ದರ್ಶನ ಪಡೆಯಬಹುದು. ಮುಂದಿನ ದಿನಗಳಲ್ಲಿ ಟಿಟಿಡಿ ಅಧ್ಯಕ್ಷರಾದ ಬಿ. ಆರ್. ನಾಯ್ಡು ಅವರು ಬೆಳಗಾವಿಗೆ ಭೇಟಿ ನೀಡಿ ಮುಂದಿನ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ನರೇಶ್ ಕುಮಾರ್ ಹೇಳಿದರು.
ತಿರುಮಲ ಬ್ರಹ್ಮೋತ್ಸವಕ್ಕೆ ಸಿದ್ಧತೆ
ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವವು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ. ಸೆಪ್ಟೆಂಬರ್ 23ರಂದು ಅಂಕುರಾರ್ಪಣೆಯೊಂದಿಗೆ ಧಾರ್ಮಿಕ ವಿಧಿಗಳು ಆರಂಭವಾಗಲಿವೆ. ಸೆಪ್ಟೆಂಬರ್ 24ರಂದು ಧ್ವಜಾರೋಹಣ ನಡೆಯಲಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸ್ವಾಮಿಗೆ ಪಟ್ಟುವಸ್ತ್ರಗಳನ್ನು ಸಮರ್ಪಿಸಲಿದ್ದಾರೆ
ಸೆಪ್ಟೆಂಬರ್ 28 ರಂದು ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ವೈಭವದ ಗರುಡ ಸೇವೆ ನಡೆಯಲಿದೆ. ಅಕ್ಟೋಬರ್ 1ರಂದು ರಥೋತ್ಸವ ಹಾಗೂ ಅಕ್ಟೋಬರ್ 2 ರಂದು ಚಕ್ರ ಸ್ನಾನ ಮತ್ತು ಧ್ವಜಾವರೋಹಣದೊಂದಿಗೆ ಬ್ರಹ್ಮೋತ್ಸವವು ಮುಕ್ತಾಯಗೊಳ್ಳಲಿದೆ.
ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳು
ಬ್ರಹ್ಮೋತ್ಸವದ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡುವ ಸಲುವಾಗಿ ಶಿಫಾರಸು ಪತ್ರಗಳ ಮೂಲಕ ಕೊಠಡಿ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಪ್ರತಿದಿನ 3,500 ಕೊಠಡಿಗಳನ್ನು ಆಫ್‌ಲೈನ್‌ನಲ್ಲಿ ಹಂಚಿಕೆ ಮಾಡಲಾಗುವುದು. ವಿಐಪಿ ಬ್ರೇಕ್ ದರ್ಶನವನ್ನು ಸ್ವತಃ ಹಾಜರಾಗುವ ಗಣ್ಯರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಪ್ರತಿದಿನ 8 ಲಕ್ಷ ಲಡ್ಡುಗಳನ್ನು ದಾಸ್ತಾನು ಇರಿಸಲಾಗುವುದು. ಗರುಡ ಸೇವೆ ದಿನದಂದು ಗ್ಯಾಲರಿಗಳಲ್ಲಿರುವ ಭಕ್ತರಿಗೆ 14 ಬಗೆಯ ತಿಂಡಿ-ತಿನಿಸುಗಳನ್ನು ವಿತರಿಸಲಾಗುವುದು ಹಾಗೂ ಅನ್ನಪ್ರಸಾದ ಭವನದಲ್ಲಿ ನಿರಂತರ ಸೇವೆ ಇರುತ್ತದೆ.
ಭದ್ರತೆಗಾಗಿ 2,000 ಟಿಟಿಡಿ ಸಿಬ್ಬಂದಿ, 4,700 ಪೊಲೀಸ್ ಸಿಬ್ಬಂದಿ, 3,500 ಶ್ರೀವಾರಿ ಸೇವಕರು ಹಾಗೂ 3,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಕ್ತರ ಕೇಶಮುಂಡನೆಗಾಗಿ ಹೆಚ್ಚುವರಿಯಾಗಿ 1,500 ಕ್ಷೌರಿಕರನ್ನು ನಿಯೋಜಿಸಲಾಗಿದೆ.
ಬೆಂಗಳೂರು ದೇವಸ್ಥಾನದಲ್ಲೂ ವಿಶೇಷ ಪೂಜೆ
ಬೆಂಗಳೂರು ಶ್ರೀ ವೆಂಕಟೇಶ್ವರ ದೇವಸ್ಥಾನದ ಸುಪರಿಂಟೆಂಡೆಂಟ್ ಜಯಂತಿ ಅವರು ಮಾತನಾಡಿ, ಬ್ರಹ್ಮೋತ್ಸವದ ಅಂಗವಾಗಿ ಬೆಂಗಳೂರಿನ ದೇವಸ್ಥಾನದಲ್ಲೂ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ಏರ್ಪಡಿಸಲಾಗಿದ್ದು, ಪ್ರತಿದಿನ ಸಂಜೆ ಉಂಜಲ್ ಸೇವೆ ನಡೆಯಲಿದೆ ಎಂದು ತಿಳಿಸಿದರು.