NEET PG: ಅಭ್ಯರ್ಥಿಗಳಿಗೆ ಸಿಹಿ ಸುದ್ದಿ; ದಾಖಲೆ ಪರಿಶೀಲನೆ ಜ.21ರವರೆಗೆ ವಿಸ್ತರಣೆ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿಗೆ ಜ.21 ರೊಳಗೆ ಮೂಲ ದಾಖಲೆಗಳು ಮತ್ತು ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಅಭ್ಯರ್ಥಿಗಳು ಹಾಜರಾಗಬೇಕು ಎಂದು ಕೆಇಎ ಸೂಚಿಸಿದೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶ ಬಯಸಿರುವ ಅರ್ಹ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಹಾಗೂ ಸಲ್ಲಿಕೆಗೆ ನಿಗದಿ ಮಾಡಿದ್ದ ದಿನಾಂಕವನ್ನು ಜ.21ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಿಸಿದೆ.
ಜ.18, 20 ಮತ್ತು 21ರಂದು ದಾಖಲೆ ಪರಿಶೀಲನೆ ಮತ್ತು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಜ.16ರಂದು ದಾಖಲೆ ಪರಿಶೀಲನೆ ಆರಂಭವಾದರೂ ಮೊದಲ ದಿನ ಹೆಚ್ಚಿನ ಅಭ್ಯರ್ಥಿಗಳು ಬಂದಿರಲಿಲ್ಲ. ಆದರೆ ಎರಡನೇ ದಿನವಾದ ಶುಕ್ರವಾರ ಸುಮಾರು 500ಕ್ಕೂ ಹೆಚ್ಚು ಮಂದಿ ಬಂದಿದ್ದರು. ಹೀಗಾಗಿ ಅಭ್ಯರ್ಥಿಗಳ ಕೋರಿಕೆ ಮೇರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಖಲೆ ಪರಿಶೀಲನೆಯ ಮುಂದಿನ ದಿನಾಂಕಗಳಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿಗೆ ಅವಶ್ಯ ಮೂಲ ದಾಖಲೆಗಳು ಮತ್ತು ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಅಭ್ಯರ್ಥಿಗಳು ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
ಈ ಮೊದಲು ಪಿಜಿ ವೈದ್ಯಕೀಯ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆಗಾಗಿ ಜ. 16ರಿಂದ ಜ18 ರಂದು ಅವಕಾಶ ಕಲ್ಪಿಸಲಾಗಿತ್ತು. ಈಗ ಜ.20 ಹಾಗೂ 21ರಂದು ಕೂಡ ಅವಕಾಶ ಕಲ್ಪಿಸಲಾಗಿದೆ. ಇನ್ನು ಅರ್ಹತೆ ಪಡೆಯುವ ಅಂಗವಿಕಲ ಅಭ್ಯರ್ಥಿಗಳಿಗೆ ಜ. 20ರಂದು ಬೆಳಿಗ್ಗೆ 11ಕ್ಕೆ ವೈದ್ಯಕೀಯ ಪರಿಶೀಲನೆಗೆ ಕೆಇಎ ಕಚೇರಿಗೆ ವೈದ್ಯಕೀಯ ಪ್ರಮಾಣ ಪತ್ರಗಳು ಮತ್ತು ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು (ಸೀಟುಗಳು ಲಭ್ಯವಿದ್ದಲ್ಲಿ ಮಾತ್ರ) ಎಂದು ಕೆಇಎ ತಿಳಿಸಿದೆ.