
Gold Smuggling | ಹಿರಿಯ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಸ್ನೇಹಮಯಿ ಕೃಷ್ಣ ಆಗ್ರಹ
ಮೈಸೂರಿನ ಇಲವಾಲದಲ್ಲಿ 2014 ರಲ್ಲಿ ನಡೆದ ಚಿನ್ನ ಹಾಗೂ ಹಣ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಕೇಂದ್ರ ತನಿಖಾ ತಂಡಕ್ಕೆ (ಸಿಬಿಐ) ದೂರು ನೀಡಿದ್ದಾರೆ.
ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಾಣಿಕೆ ಮಾಡಿದ ಆರೋಪ ಮೇಲೆ ಬಂಧಿತರಾಗಿರುವ ರನ್ಯಾರಾವ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಈ ಮಧ್ಯೆ 11 ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಹಣ ಹಾಗೂ ಚಿನ್ನ ಕಳ್ಳಸಾಗಾಣಿಗೆ ಪ್ರಕರಣ ಮುನ್ನೆಲೆಗೆ ಬಂದಿದೆ.
ಮೈಸೂರಿನ ಇಲವಾಲ ಪೊಲೀಸ್ ಠಾಣೆಯಲ್ಲಿ 2014 ರಲ್ಲಿ ದಾಖಲಾಗಿದ್ದ ಚಿನ್ನ ಹಾಗೂ ಹಣ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಕೇಂದ್ರ ತನಿಖಾ ತಂಡಕ್ಕೆ (ಸಿಬಿಐ) ದೂರು ನೀಡಿದ್ದಾರೆ.
ಚಿನ್ನ ಮತ್ತು ಹಣ ಕಳ್ಳ ಸಾಗಾಣಿಕೆಗೆ ಅವಕಾಶ ಮಾಡಿಕೊಟ್ಟಿರುವ ಇಲವಾಲ ಪ್ರಕರಣವನ್ನು ರನ್ಯಾರಾವ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿಯೇ ಸೇರಿಸಿ ಅಥವಾ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಅಂದಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ (ಕಿಶೋರ್ ಚಂದ್ರ, ಪ್ರಣವ್ ಮೊಹಾಂತಿ, ಕೃಷ್ಣಭಟ್, ಅಭಿನವ ಖರೆ, ರಾಘವೇಂದ್ರ ಹೆಗಡೆ, ವಿಕ್ರಂ ಅಮಟೆ, ಹರಿಬಾಬು, ಸದಾನಂದ ತಿಪ್ಪಣ್ಣನವರ್, ಗಣೇಶ್) ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.
ರಾಮಚಂದ್ರರಾವ್ ಸಿಲುಕಿಸಲು ಷಡ್ಯಂತ್ರ್ಯ ಆರೋಪ
ಈಚೆಗೆ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ರನ್ಯಾರಾವ್ ಪ್ರಕರಣದಲ್ಲಿ ಮಲತಂದೆ ಡಿಜಿಪಿ ಕೆ.ರಾಮಚಂದ್ರರಾವ್ ಹೆಸರು ಕೇಳಿಬರುತ್ತಿದೆ. ಆದರೆ, 2014 ರಲ್ಲಿ ಇದೇ ಕೆ.ರಾಮಚಂದ್ರರಾವ್ ಅವರು ಬೆಂಗಳೂರಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ ಹಣ ಹಾಗೂ ಚಿನ್ನ ಕಳ್ಳ ಸಾಗಾಣಿಕೆ ಪತ್ತೆ ಹಚ್ಚಿದ್ದರು. ಆಗಲೂ ಅವರ ವಿರುದ್ಧ ಇಲಾಖೆಯ ಹಿರಿಯ ಅಧಿಕಾರಿಗಳೇ ಷಡ್ಯಂತ್ರ್ಯ ರೂಪಿಸಿ, ಸಿಲುಕಿಸುವ ಪ್ರಯತ್ನ ನಡೆಸಿದ್ದರು. ಈಗ ಈ ಪ್ರಕರಣದಲ್ಲಿ ಅವರ ಹೆಸರನ್ನು ಎಳೆದು ತರುತ್ತಿರುವುದರ ಹಿಂದೆ ಷಡ್ಯಂತ್ರ್ಯವಿದೆ ಎಂದು ಕೃಷ್ಣ ಆರೋಪಿಸಿದ್ದಾರೆ.
2014 ರಲ್ಲಿ ನಡೆದ ಹಣ ಮತ್ತು ಚಿನ್ನ ಕಳ್ಳಸಾಗಾಣಿಕೆ ಕುರಿತು ಸಾಕಷ್ಟ ಬಾರಿ ದೂರು ನೀಡಿದ್ದರೂ ಅಂದಿನ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಿರಲಿಲ್ಲ. ಅಂತವರು ಈಗ ಉನ್ನತ ಹುದ್ದೆಗಳಲ್ಲಿ ಕುಳಿತಿದ್ದಾರೆ. ಕೆಲವರು ನಿವೃತ್ತಿಯಾಗಿದ್ದಾರೆ. ಆದರೆ, ಹಣ ಮತ್ತು ಚಿನ್ನ ಕಳ್ಳ ಸಾಗಾಣಿಕೆ ತಡೆಯಲು ಪ್ರಯತ್ನಿಸಿದ್ದ ಕೆ.ರಾಮಚಂದ್ರರಾವ್ ಅವರನ್ನು ಮಲಮಗಳ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ ಎಂದು ದೂರಿದ್ದಾರೆ.
ರನ್ಯಾರಾವ್ ಪ್ರಕರಣದಲ್ಲಿ ಕೆ.ರಾಮಚಂದ್ರರಾವ್ ಪಾತ್ರದ ಕುರಿತು ತನಿಖೆ ನಡೆಯಲಿ, ಆದರೆ ಯಾವುದೇ ಸಾಕ್ಷಾಧಾರವಿಲ್ಲದೆ ಅನವಶ್ಯಕವಾಗಿ ಸಿಲುಕಿಸುವುದು ಸರಿಯಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇಲವಾಲ ಘಟನೆ ಏನು?
2014 ರಲ್ಲಿ ಕೆ.ರಾಮಚಂದ್ರರಾವ್ ಅವರು ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಕೇರಳದ ಕ್ಯಾಲಿಕಟ್‌ಗೆ ಖಾಸಗಿ ಬಸ್ಸಿನಲ್ಲಿ ಹಣ ಹಾಗೂ ಚಿನ್ನ ಕಳ್ಳ ಸಾಗಾಣಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಂದಿನ ಐಜಿಪಿ ರಾಮಚಂದ್ರರಾವ್ ಅವರು ತಮ್ಮ ಗನ್‌ಮ್ಯಾನ್ ಮೂಲಕ ಅಂದಿನ ಮೈಸೂರು ಗ್ರಾಮಾಂತರ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕರ ನೇತೃತ್ವದ ತಂಡಕ್ಕೆ ಮಾಹಿತಿ ರವಾನಿಸಿದ್ದರು.
ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಅಂದಿನ ಡಿವೈಎಸ್ಪಿ ಜಗದೀಶ್ ನೇತೃತ್ವದ ತಂಡ 2014 ಜ.3 ರಂದು ರಾತ್ರಿ ಮೈಸೂರಿನ ಇಲವಾಲ ಪೊಲೀಸ್ ಠಾಣೆಯ ಮುಂದೆ ಖಾಸಗಿ ಬಸ್ ತಡೆದು ಪರಿಶೀಲಿಸಿದಾಗ 20 ಲಕ್ಷ ರೂ. ಪತ್ತೆಯಾಗಿತ್ತು. ಹಣದ ಮೂಲ ತಿಳಿಸದ ಕಾರಣ ಬಸ್ ಡ್ರೈವರ್ ಮತ್ತು ಕ್ಲೀನರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಬಸ್ನಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ 2ಕೆ.ಜಿ.ಚಿನ್ನ ಹಾಗೂ ಹಣ ಇತ್ತು. ಅದನ್ನು ಪೊಲೀಸರೇ ದರೋಡೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.
ಆರೋಪಿಗಳಿಗೆ ಪೊಲೀಸರ ನೆರವು?
ಕಳ್ಳ ಸಾಗಣೆದಾರರ ಜಾಲದ ಕುರಿತು ಸೂಕ್ತ ತನಿಖೆ ನಡೆಸದ ಕಾರಣ ಆರೋಪಿಗಳು ನ್ಯಾಯಾಲಯಕ್ಕೆ ಸುಳ್ಳು ದಾಖಲೆ ನೀಡಿ 20 ಲಕ್ಷ ಹಣ ಬಿಡಿಸಿಕೊಂಡಿದ್ದರು. ಆದರೆ, ಚಿನ್ನ ಸಾಗಣೆ ಕುರಿತು ನೀಡಿದ್ದ ಸುಳಿವಿನ ಕುರಿತು ಪರಿಶೀಲನೆ ನಡೆಸಿರಲಿಲ್ಲ. ಕೇರಳ ಹಾಗೂ ಬೆಂಗಳೂರಿನ ಕೆಲವರು 2 ಕೋಟಿ ಹಣ ಹಾಗೂ 2 ಕೆ.ಜಿ. ಚಿನ್ನ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರೂ ಯಾವುದೇ ತನಿಖೆ ನಡೆಸಿರಲಿಲ್ಲ. ಬದಲಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಬಾತ್ಮೀದಾರರ ವಿರುದ್ಧ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಿರಿಯ ಅಧಿಕಾರಿಯ ಸೂಚನೆ ಪಾಲಿಸಿರಲಿಲ್ಲ
2014 ಜ.16 ರಂದು ಐಜಿಪಿ ಕೆ.ರಾಮಚಂದ್ರರಾವ್ ಅವರು ಮೈಸೂರು ಜಿಲ್ಲೆಯ ಎಸ್ಪಿ ಅಭಿನವ ಖರೆ ಅವರಿಗೆ ಮೆಮೊ ಕಳುಹಿಸಿ, ಬಸ್ಸಿನಲ್ಲಿದ್ದ ಹಣ ಮತ್ತು ಚಿನ್ನದ ಬಗ್ಗೆ ವಿವರವಾದ ವಿಚಾರಣೆ ನಡೆಸಿ, ವರದಿ ನೀಡುವಂತೆ ಸೂಚಿಸಿದ್ದರು. ಆದರೆ, ಅಭಿನವ್ ಖರೆ ಅವರು ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಸೂಚನೆ ಮೇರೆಗೆ ಪೊಲೀಸರ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಜೊತೆಗೆ ಕೆ.ರಾಮಚಂದ್ರರಾವ್ ಅವರನ್ನು ಆರೋಪಿಯನ್ನಾಗಿಸಿ, ಬಂಧಿಸುವ ಪ್ರಯತ್ನ ನಡೆಸಿದ್ದರು ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಜ.12 ರಂದು ಖಾಸಗಿ ಬಸ್ ಚಾಲಕ ಅಕ್ತರ್ ಹುಸೇನ್ ಅವರು ಮಲೆಯಾಳಿ ಭಾಷೆಯಲ್ಲಿ 2 ಕೋಟಿ ಹಣ ಹಾಗೂ ಚಿನ್ನ ಕಳುವಾಗಿರುವ ಕುರಿತು ಎಸ್ಪಿ ಅಭಿನವ ಖರೆ ಅವರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಿರಲಿಲ್ಲ.
ಅಂದಿನ ಮೈಸೂರು ಗ್ರಾಮಾಂತರ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕ ಹರಿಬಾಬು ಮತ್ತು ಮೈಸೂರು ಗ್ರಾಮಾಂತರ ವೃತ್ತದ ಪೊಲೀಸ್ ನಿರೀಕ್ಷಕ ಸದಾನಂದ ತಿಪ್ಪಣನವರ್ ಅವರು ಬಸ್ ಚಾಲಕನನ್ನು ವಿಚಾರಣೆ ಮಾಡಿದಾಗ ಎರಡು ಕೆ.ಜಿ.ಚಿನ್ನವನ್ನು ಚಾಲಕನ ಹಿಂದಿನ ಸೀಟಿನ ಕೆಳಗೆ ಇಟ್ಟಿದೆ. ಅದನ್ನು ಜಂಷಿದ್ ಸೂಚನೆ ಮೇರೆಗೆ ಬಾಬು ಎಂಬಾತ ತೆಗೆದುಕೊಂಡು ಹೋದ ಎಂದು ಹೇಳಿಕೆ ನೀಡಿದ್ದರು. ಆದಾಗ್ಯೂ ಬಾಬು ಹಾಗೂ ಜಂಷಿದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿರಲಿಲ್ಲ. ಜ.25 ರಂದು ಸೈನುದ್ದೀನ್ ಎಂಬಾತ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಾ.8 ರಂದು ಏಳು ಮಂದಿ ಪೊಲೀಸರು ಮತ್ತು ಮೂವರು ಬಾತ್ಮೀದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಸ್ನೇಹಮಯಿ ಕೃಷ್ಣ ಅವರು ದಾಖಲೆ ಒದಗಿಸಿದ್ದಾರೆ.
ನ್ಯಾಯಾಲಯದ ಆದೇಶ ಉಲ್ಲಂಘನೆ
20 ಲಕ್ಷ ಹಣ ಜಪ್ತಿ ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದಲ್ಲಿನ ಎಲ್ಲಾ ಸಾಕ್ಷಾಧಾರಗಳನ್ನು ಆಧರಿಸಿ, 2 ಕೆ.ಜಿ.ಚಿನ್ನ ಕಳ್ಳತನದ ಬಗ್ಗೆ ತನಿಖೆಗೆ ಆದೇಶಿಸಿತ್ತು. ಆದೇಶದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸೂಕ್ತ ತನಿಖೆ ನಡೆಸದೇ ನಿರ್ಲಕ್ಷ್ಯ ವಹಿಸಿ, ಕಳ್ಳ ಸಾಗಾಣಿಕೆದಾರರನ್ನು ರಕ್ಷಿಸಿದ್ದರು ಎಂದು ಆರೋಪಿಸಲಾಗಿದೆ.
ಮೊಹಿದ್ದಿನ್ ಕುಟ್ಟಿ ಎಂಬಾತ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ, ಮಹಾಲಸಾ ಸಿಲ್ವರ್ ಶಾಪ್ ಪ್ರೈ.ಲಿ.ನ ಒದಗಿಸಿರುವ ರಸೀದಿಗಳು, ಎ-299618 ಸಂಖ್ಯೆಯ ಚಿನ್ನದ ಗಟ್ಟಿಗೆ ಸಂಬಂಧಿಸಿದ ಕ್ಯಾಲಿಕಟ್ ವಿಮಾನ ನಿಲ್ದಾಣದ ಏರ್ ಕಸ್ಟಮ್ಸ್ ರಸೀದಿ ನೀಡಿದ್ದರೂ ಪೊಲೀಸರು ಸರಿಯಾದ ತನಿಖೆ ನಡೆಸಿರಲಿಲ್ಲ.
ಎ-399618 ಸಂಖ್ಯೆಯ ಒಂದು ಕೆ.ಜಿ. ಚಿನ್ನವನ್ನು2014 ಜ. 3 ರಂದು ಖರೀದಿ ಮಾಡಿರುವ ಕುರಿತು ರಸೀದಿಯಲ್ಲಿದೆ. ಅಂದೇ ಎಐ-938 ಸಂಖ್ಯೆಯ ವಿಮಾನದಲ್ಲಿ ಕ್ಯಾಲಿಕಟ್ಗೆ ಬಂದಿದೆ ಎಂಬುದು ಕಸ್ಟಮ್ಸ್ ಅಧಿಕಾರಿಗಳು ನೀಡಿರುವ ರಸೀದಿಯಲ್ಲಿದೆ. ಹೀಗಿರುವಾಗ ಅದೇ ದಿನ ಬಂದ ಚಿನ್ನವನ್ನು ಕ್ಯಾಲಿಕಟ್ನಿಂದ ಬೆಂಗಳೂರಿಗೆ ತಂದು ಮಾರಾಟ ಮಾಡಲು ಹಣ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ ಎಂಬ ಅನುಮಾನದ ಕುರಿತು ಪೊಲೀಸರು ತನಿಖೆ ನಡೆಸಲಿಲ್ಲ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕ್ಯಾಲಿಕಟ್ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದು, ವಿಮಾನವು 3ನೇ ತಾರೀಖು ಸಂಜೆ 6.45 ರಲ್ಲಿ ಕ್ಯಾಲಿಕಟ್ಗೆ ಬಂದಿಳಿದಿದೆ. ಸಂಜೆ 6.45 ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿರುವ ಚಿನ್ನವನ್ನು ಅದೇ ದಿನ (ಮಾ.3)ಬೆಳಿಗ್ಗೆ 7 ಗಂಟೆಗೆ ಕ್ಯಾಲಿಕಟ್ನಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಿರುವ ರೀತಿ ಬಿಂಬಿಸಲಾಗಿದೆ. ಈ ಮಾಹಿತಿ ಸ್ಪಷ್ಟವಾಗಿದ್ದರೂ ಹಿರಿಯ ಅಧಿಕಾರಿಗಳು ಪರಿಗಣಿಸದೇ ಕಳ್ಳ ಸಾಗಾಣಿಕೆದಾರರ ಹೇಳಿಕೆಯನ್ನೇ ಆಧರಿಸಿ ತನಿಖೆ ಮುಗಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ಮರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ನೇಹಮಯಿಕೃಷ್ಣ ಒತ್ತಾಯಿಸಿದ್ದಾರೆ.