
ನಟಿ ರನ್ಯಾ ರಾವ್
̈Gold Smuggling | ನಟಿ ರನ್ಯಾ ರಾವ್ ಮೂರು ದಿನ ಡಿಆರ್‌ಐ ಕಸ್ಟಡಿಗೆ
ರನ್ಯಾಗೆ ಯಾರು ಮತ್ತು ಎಲ್ಲಿಂದ ಚಿನ್ನ ಪೂರೈಸಿದ್ದಾರೆ ಎಂಬುದನ್ನು ತಿಳಿಯಬೇಕಿದೆ. ದೇಶ ವಿರೋಧಿ ಚಟುವಟಿಕೆಗಳ ಜೊತೆ ಚಿನ್ನ ಕಳ್ಳ ಸಾಗಣೆ ತಳುಕು ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಹೆಚ್ಚಿನ ತನಿಖೆ ಅಗತ್ಯವಾಗಿದೆ. ಕಳೆದ ಆರು ತಿಂಗಳಲ್ಲಿ ರನ್ಯಾ 27 ಬಾರಿ ದುಬೈ ಪ್ರವಾಸ ಮಾಡಿದ್ದು, ಇದರ ಉದ್ದೇಶವನ್ನು ಅರಿಯಬೇಕಿದೆ
ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದಲ್ಲಿ ಬಂಧಿತಳಾವಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅಲಿಯಾಸ್ ಹರ್ಷವರ್ದಿನಿ ರನ್ಯಾ ಅವರನ್ನು ತನಿಖೆಗೆ ಒಳಪಡಿಸಲು ಮೂರು ದಿನಗಳ ಕಾಲ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಕ್ಕೆ ನೀಡಿ ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.
ರನ್ಯಾರನ್ನು ತನಿಖೆಗೆ ಒಳಪಡಿಸಲು ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಕೋರಿ ಡಿಆರ್‌ಐ ಸಲ್ಲಿಸಿದ್ದ ಅರ್ಜಿಯನ್ನು ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ್ ಚನ್ನಬಸಪ್ಪ ಗೌಡರ್ ಪುರಸ್ಕರಿಸಿ, ಮೂರು ದಿನ ಡಿಆರ್‌ಐ ಕಸ್ಟಡಿಗೆ ನೀಡಿದರು.
ಡಿಆರ್‌ಐ ಪರ ವಕೀಲರು “ರನ್ಯಾಗೆ ಯಾರು ಮತ್ತು ಎಲ್ಲಿಂದ ಚಿನ್ನ ಪೂರೈಸಿದ್ದಾರೆ ಎಂಬುದನ್ನು ತಿಳಿಯಬೇಕಿದೆ. ದೇಶ ವಿರೋಧಿ ಚಟುವಟಿಕೆಗಳ ಜೊತೆ ಚಿನ್ನ ಕಳ್ಳ ಸಾಗಣೆ ತಳುಕು ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಹೆಚ್ಚಿನ ತನಿಖೆ ಅಗತ್ಯವಾಗಿದೆ. ಕಳೆದ ಆರು ತಿಂಗಳಲ್ಲಿ ರನ್ಯಾ 27 ಬಾರಿ ದುಬೈ ಪ್ರವಾಸ ಮಾಡಿದ್ದು, ಇದರ ಉದ್ದೇಶವನ್ನು ಅರಿಯಬೇಕಿದೆ” ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ರನ್ಯಾ ರಾವ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಅಮಾನತಿನಲ್ಲಿಟ್ಟು, ಆಕೆಯನ್ನು ಡಿಆರ್‌ಐ ಕಸ್ಟಡಿಗೆ ತನಿಖೆಗಾಗಿ ನೀಡಿದೆ.
ಮಾರ್ಚ್ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು. ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್ ಮತ್ತು ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎನ್ನಲಾಗಿದೆ.
ಆನಂತರ ಆಕೆಯ ಮನೆಯಲ್ಲಿ ಶೋಧ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು ₹2.06 ಕೋಟಿ ಮೌಲ್ಯದ ಆಭರಣ ಮತ್ತು ₹2.67 ಕೋಟಿ ನಗದು ಜಫ್ತಿ ಮಾಡಿದ್ದರು. ಇದರಿಂದ ಪ್ರಕರಣದಲ್ಲಿ ಒಟ್ಟು ಜಫ್ತಿಯು ₹17.29 ಕೋಟಿಗೆ ಏರಿಕೆಯಾಗಿದೆ.