ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಸೇರಿದ ₹34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ
x
ರನ್ಯಾ ರಾವ್‌ 

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಸೇರಿದ ₹34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನಲ್ಲಿರುವ ಮನೆ, ಅರ್ಕಾವತಿ ಲೇಔಟ್‌ನಲ್ಲಿರುವ ನಿವೇಶನ, ತುಮಕೂರಿನಲ್ಲಿರುವ ಕೈಗಾರಿಕಾ ನಿವೇಶನ ಹಾಗೂ ಆನೇಕಲ್ ತಾಲೂಕಿನಲ್ಲಿರುವ ಕೃಷಿ ಜಮೀನು ಸೇರಿವೆ.

ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರಿಗೆ ಸೇರಿದ 34.12 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಅಂತಾರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಭಾಗವಾಗಿ, ನಟಿಗೆ ಸೇರಿದ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನಲ್ಲಿರುವ ಮನೆ, ಅರ್ಕಾವತಿ ಲೇಔಟ್‌ನಲ್ಲಿರುವ ನಿವೇಶನ, ತುಮಕೂರಿನಲ್ಲಿರುವ ಕೈಗಾರಿಕಾ ನಿವೇಶನ ಹಾಗೂ ಆನೇಕಲ್ ತಾಲೂಕಿನಲ್ಲಿರುವ ಕೃಷಿ ಜಮೀನು ಸೇರಿವೆ.

ಪ್ರಕರಣದ ಹಿನ್ನೆಲೆ: ದುಬೈನಿಂದ ಆಗಮಿಸಿದ್ದ ನಟಿ ಬಂಧನ

ಕಳೆದ ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ನಟಿ ರನ್ಯಾ ರಾವ್ ಬಳಿ 14.80 ಕೆ.ಜಿ. ಚಿನ್ನ ಪತ್ತೆಯಾಗಿತ್ತು. ತಕ್ಷಣವೇ ನಟಿಯನ್ನು ಬಂಧಿಸಲಾಗಿತ್ತು.

ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ರನ್ಯಾ ರಾವ್ ಮತ್ತು ಅವರ ಇಬ್ಬರು ಸಹಚರರಾದ ತರುಣ್ ಕೊಡೂರು ರಾಜು ಹಾಗೂ ಸಾಹಿಲ್ ಸಕರಿಯಾ ಜೈನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಜಾಮೀನು ಮಂಜೂರಾಗಿದ್ದರೂ, ಕಠಿಣ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ 1974 (COFEPOSA ಕಾಯ್ದೆ, 1974) ಅಡಿಯಲ್ಲಿ ಬಂಧಿಸಿರುವ ಕಾರಣ ರನ್ಯಾ ರಾವ್ ಅವರನ್ನು ಇನ್ನೂ ಜೈಲಿನಿಂದ ಬಿಡುಗಡೆ ಮಾಡಿಲ್ಲ.

Read More
Next Story