ಯಡಿಯೂರಪ್ಪ ವಿರುದ್ಧ ನಡೆದಿದ್ದ ಷಡ್ಯಂತ್ರಗಳ ಬಗ್ಗೆ ಪುಸ್ತಕ ಬರೆಯಲಿದ್ದೇನೆ: ಬಿ.ವೈ. ವಿಜಯೇಂದ್ರ
x

ಯಡಿಯೂರಪ್ಪ ವಿರುದ್ಧ ನಡೆದಿದ್ದ ಷಡ್ಯಂತ್ರಗಳ ಬಗ್ಗೆ ಪುಸ್ತಕ ಬರೆಯಲಿದ್ದೇನೆ: ಬಿ.ವೈ. ವಿಜಯೇಂದ್ರ


ʻʻನಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ನಡೆದಿದ್ದ ಷಡ್ಯಂತ್ರಗಳ ಬಗ್ಗೆ ಪುಸ್ತಕ ಬರೆಯಲಿದ್ದೇನೆʼʼ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವೀರಶೈವ-ಲಿಂಗಾಯತ ಸಮಾಜದ ಮುಖಂಡರ ಎದುರು ಹೇಳಿದ್ದಾರೆ.

ಮೈಸೂರಿನ ನರಸಿಂಹರಾಜ ಕಂಠೀರವ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ-ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ʻʻಸಮಾಜದವರು ತಲೆ ತಗ್ಗಿಸುವಂತೆ ನಾನು ನಡೆದುಕೊಳ್ಳುವುದಿಲ್ಲ. ವಿಜಯೇಂದ್ರಗೆ ಬೆಂಬಲ ಕೊಟ್ಟಿದ್ದು ಸಾರ್ಥಕವಾಯಿತು ಎಂದು ಎಲ್ಲರೂ ಹೆಮ್ಮೆಯಿಂದ ಮಾತನಾಡುವಂತೆ ರಾಜಕಾರಣ ಮಾಡುತ್ತೇನೆ. ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದಾದ್ಯಂತ ಸಮಾಜಕ್ಕೆ ಶಕ್ತಿ ತುಂಬುತ್ತೇನೆʼʼ ಎಂದು ಭರವಸೆ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು. ನಾನು ತಲೆ ತಗ್ಗಿಸುವಂತೆ ಮಾಡಬೇಡಿ.. ಸಮಾಜದವರು ಒಬ್ಬರು, ಮತ್ತೊಬ್ಬರ ಕಾಲೆಳೆಯುವ ಕೆಲಸ ಮಾಡುತ್ತಿದ್ದೇವೆ. ಪರಿಣಾಮ, ಕವಲು ದಾರಿಯಲ್ಲಿದ್ದೇವೆ. ಹುಬ್ಬಳ್ಳಿಯಲ್ಲಿ ನಡೆದಂತಹ ಘಟನೆ ಕಂಡಾಗ ನಮ್ಮೆಲ್ಲರಿಗೂ ದುಃಖವಾಗಬೇಕು, ಸಿಟ್ಟು ಬರಬೇಕು. ಬೆಂಕಿ ಬಿದ್ದಿರುವುದು ಪಕ್ಕದ ಮನೆಗಲ್ಲವೇ ಎಂದು ಸುಮ್ಮನಿದ್ದರೆ, ಸಮಯ ಮೀರಿದರೆ ಬೆಂಕಿಯನ್ನು ನಂದಿಸಲಾಗದು. ಹೀಗಾಗಿ ಎಚ್ಚೆತ್ತುಕೊಂಡು ಜಾಗೃತರಾಗಬೇಕು' ಎಂದು ಹೇಳಿದರು.

ʻʻಈ ಸರ್ಕಾರ ನೀಡಿರುವ ಗ್ಯಾರಂಟಿಗಳು ಶಾಶ್ವತವಲ್ಲ. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಲಾಗುತ್ತಿದೆ. ಕೆಲವು ತಿಂಗಳು ಕಳೆದರೆ, ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗಲಿದೆ. ಕೇವಲ ಖುಷಿ ಪಡಿಸುವಂತಹ ಕೆಲಸವನ್ನಷ್ಟೆ ಈ ಸರ್ಕಾರ ಮಾಡುತ್ತಿದೆʼʼ ಎಂದು ಕಿಡಿಕಾರಿದರು.

ʻʻದುಡಿದು ಸುಸ್ತಾಗಿ ಬರುವ ಬಡವರು, ರೈತರು ಹಾಗೂ ಕಾರ್ಮಿಕರು ರಾತ್ರಿ ಮಾಡುತ್ತಿದ್ದ ಖರ್ಚು (ಮದ್ಯಪಾನ) ದುಪ್ಪಟ್ಟಾಗಿದೆ. ಪುರುಷರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ದರ ಜಾಸ್ತಿಯಾಗಿದೆ. ವಿದ್ಯುತ್ ದರವೂ ಜಾಸ್ತಿಯಾಗಿದೆ. ನೋಂದಣಿ ಶುಲ್ಕ ಹೆಚ್ಚಾಗಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಜಾಸ್ತಿ ಕಿತ್ತುಕೊಳ್ಳುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆʼʼ ಎಂದು ಆರೋಪಿಸಿದರು.

'ಸ್ವತಃ ಮುಖ್ಯಮಂತ್ರಿಯೇ ಮೈಸೂರಿಗೆ ಆಗಾಗ ಬಂದು ಠಿಕಾಣಿ ಹೂಡುತ್ತಿದ್ದರೂ ಬಿಜೆಪಿ ಅಭ್ಯರ್ಥಿ ಯದುವೀರ್ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದನ್ನು ತಡೆಯಲು ಆಗುವುದಿಲ್ಲʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More
Next Story