
ಮೇಕೆದಾಟು ಯೋಜನೆ | ತಮಿಳುನಾಡಿಗೇ ಹೆಚ್ಚು ಉಪಯೋಗ: ಡಿಸಿಎಂ ಡಿ.ಕೆ.ಶಿವಕುಮಾರ್
ಈ ವರ್ಷ ವರುಣದೇವ ನಮ್ಮನ್ನು ಕಾಪಾಡಿದ್ದಾನೆ. ಮೇಕೆದಾಟು ಯೋಜನೆ ಸಾಕಾರಗೊಂಡರೆ ಕರ್ನಾಟಕಕ್ಕಿಂತ ತಮಿಳುನಾಡಿನ ಜನತೆಗೆ ಹೆಚ್ಚು ಉಪಯೋಗವಾಗಲಿದೆ
“ಈ ವರ್ಷ ವರುಣದೇವ ನಮ್ಮನ್ನು ಕಾಪಾಡಿದ್ದಾನೆ. ಮೇಕೆದಾಟು ಯೋಜನೆ ಸಾಕಾರಗೊಂಡರೆ ಕರ್ನಾಟಕಕ್ಕಿಂತ ತಮಿಳುನಾಡಿನ ಜನತೆಗೇ ಹೆಚ್ಚು ಉಪಯೋಗ. ಈಗ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ತಮಿಳುನಾಡಿನ ಚೆನ್ನೈನಲ್ಲಿರುವ ಶ್ರೀನಿವಾಸ ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಘಟಕಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಮೇಕೆದಾಟು ಅಣೆಕಟ್ಟೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಹೀಗೆ ಉತ್ತರಿಸಿದರು.
ಮಳೆಯಿಂದ ಕರ್ನಾಟಕಕ್ಕೆ ಉಪಯೋಗವಾಗಿದೆಯೇ ಎಂದು ಕೇಳಿದಾಗ “ಮಳೆಯಿಂದ ತಮಿಳುನಾಡಿಗೆ ಒಳ್ಳೆಯದಾಗಿದೆ” ಎಂದು ಚುಟುಕಾಗಿ ಉತ್ತರಿಸಿದರು.
ಘನ ತ್ಯಾಜ್ಯ ನಿರ್ವಹಣೆ: ಚೆನ್ನೈ ಮಾದರಿ ಅಧ್ಯಯನಕ್ಕೆ ಭೇಟಿ
“ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಕಸದಿಂದ ಗ್ಯಾಸ್ ಉತ್ಪಾದನೆಯ ಬಗ್ಗೆ ತಿಳಿದುಕೊಳ್ಳಲು 15 ಮಂದಿ ಅಧಿಕಾರಿಗಳ ಜೊತೆ ಕಸ ನಿರ್ವಹಣೆಯಲ್ಲಿ ಚೆನ್ನೈ ಮಾದರಿಯ ಅಧ್ಯಯನಕ್ಕೆ ಬಂದಿದ್ದೇನೆ. ಇಲ್ಲಿನ ತ್ಯಾಜ್ಯ ನಿರ್ವಹಣೆಯಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಂತಾಯಿತು. ಕಳೆದ ಒಂದು ವರ್ಷದಿಂದ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಈಗ ಸಮಯ ಸಿಕ್ಕ ಕಾರಣಕ್ಕೆ ಭೇಟಿ ನೀಡಿದ್ದೇನೆ. ನಮ್ಮ ರಾಜ್ಯದಲ್ಲೂ ಒಂದಷ್ಟು ಇಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು” ಎಂದರು.
“ಅನೇಕ ಕಡೆ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಯಶಸ್ಸು ಕಂಡಿಲ್ಲ. ನಮ್ಮಲ್ಲಿಯೂ 10 ಕಡೆ ಕಸದಿಂದ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗಿತ್ತು. ಈ ಹಿಂದೆ ಹೈದರಾಬಾದ್ ಗೆ ಭೇಟಿ ನೀಡಿದ್ದೆ. ಇಲ್ಲಿ ನಗರದ ನಡುವೆಯೇ ಸಿಎನ್ ಜಿ ಉತ್ಪಾದನಾ ಘಟಕವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಮ್ಮಲ್ಲೂ ಒಂದಷ್ಟು ಒಳ್ಳೆ ಕೆಲಸ ಮಾಡಿದ್ದೇವೆ. ಇಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ” ಎಂದರು.
ಕಾನೂನಾತ್ಮಕವಾಗಿ ನಿವೇಶನ ಹಂಚಿಕೆ
ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಅವರು ಖರ್ಗೆ ಕುಟುಂಬದ ಟ್ರಸ್ಟಿಗೆ ಕೆಐಡಿಬಿ ಸಿಎ ನಿವೇಶನ ಹಂಚಿಕೆ ಅಕ್ರಮದ ಬಗ್ಗೆ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿ, “ಸಿಎ ನಿವೇಶನ ಹಂಚಿಕೆ ಕಾನೂನಾತ್ಮಕವಾಗಿ ನಡೆದಿದೆ. ಇದರಲ್ಲಿ ಯಾವುದೇ ಅಕ್ರಮವಾಗಿಲ್ಲ. ವ್ಯಕ್ತಿಗೆ ಸೈಟು ಹಂಚಿಲ್ಲ, ಚಾರಿಟಬಲ್ ಟ್ರಸ್ಟಿಗೆ ಹಂಚಿದ್ದೇವೆ” ಎಂದರು.
ತಮಿಳುನಾಡು ಮುಖ್ಯಮಂತ್ರಿಗಳು ವಿದೇಶ ಪ್ರಯಾಣದಲ್ಲಿದ್ದಾರೆ. ತಮಿಳುನಾಡು ಡಿಸಿಎಂ ಅವರನ್ನು ಭೇಟಿ ಮಾಡುವಿರಾ ಎಂದಾಗ “ತಮಿಳುನಾಡು ಡಿಸಿಎಂ ನನ್ನ ಉತ್ತಮ ಸ್ನೇಹಿತರು ಹಾಗೂ ನಮ್ಮ ನಾಯಕರು. ಸಮಯ ಮಾಡಿಕೊಂಡು ಸ್ನೇಹಪೂರ್ವಕವಾಗಿ ಅವರನ್ನು ಭೇಟಿ ಮಾಡಲಾಗುವುದು” ಎಂದು ಹೇಳಿದರು.