ಡಾ.ಕೆ.ಸುಧಾಕರ್ ವಿರುದ್ಧವೂ ಈಗ ʼಗೋ ಬ್ಯಾಕ್ ಸುಧಾಕರ್ʼ ಅಭಿಯಾನ
ಡಾ.ಕೆ.ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿರುವ ಕ್ರಮವನ್ನು ವಿರೋಧಿಸಿ, ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಬೆಂಬಲಿಗರು ʼಗೋ ಬ್ಯಾಕ್ ಸುಧಾಕರ್ʼ ಅಭಿಯಾನ ಆರಂಭಿಸಿದ್ದಾರೆ.
ಯಲಹಂಕ: ಡಾ.ಕೆ.ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿರುವ ಕ್ರಮವನ್ನು ವಿರೋಧಿಸಿ, ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಬೆಂಬಲಿಗರು ʼಗೋ ಬ್ಯಾಕ್ ಸುಧಾಕರ್ʼ ಅಭಿಯಾನ ಆರಂಭಿಸಿದ್ದಾರೆ.
ಸೋಮವಾರ (ಮಾರ್ಚ್ 25) ಹಳೆ ಯಲಹಂಕ ಸಂತೆ ವೃತ್ತದ ಕೆಂಪೇಗೌಡ ಪ್ರತಿಮೆ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು 'ಗೋಬ್ಯಾಕ್ ಸುಧಾಕರ್' ಎಂದು ಘೋಷಣೆ ಕೂಗಿದರು. ಮುಖ್ಯರಸ್ತೆ ತಡೆದು ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಕೆ.ಸುಧಾಕರ್ ಅವರು ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸುಧಾಕರ್ ಕೊಡುಗೆ ಏನು ಇಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಇದರ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಯಿತು ಎಂದು ಆರ್ ವಿಶ್ವನಾಥ್ ಬೆಂಬಲಿಗರು ಆರೋಪಿಸಿದರು.
ಬಿಜೆಪಿ ಮುಖಂಡ ಅದ್ದೆ ವಿಶ್ವನಾಥಪುರ ಮಂಜುನಾಥ್ ರೆಡ್ಡಿ ಮಾತನಾಡಿ, ಯುವ ಮುಖಂಡ ಅಲೋಕ್ ವಿಶ್ವನಾಥ್ ಅವರಿಗೆ ಟಿಕೆಟ್ ಸಿಗುವುದಾಗಿ ಕ್ಷೇತ್ರದ ಜನರು ವಿಶ್ವಾಸವಿಟ್ಟಿದ್ದರು. ಈಗ ಸುಧಾಕರ್ ಅವರಿಗೆ ಟಿಕೆಟ್ ನೀಡಿರುವುದರಿಂದ ಜನರಿಗೆ ನಿರಾಸೆಯಾಗಿದೆ. ಜನರ ಕೂಗು ಬಿಜೆಪಿ ಹೈಕಮಾಂಡ್‌ಗೆ ತಲುಪುವವರೆಗೂ ʼಗೋ ಬ್ಯಾಕ್ ಸುಧಾಕರ್ʼ ಅಭಿಯಾನ ನಡೆಸುತ್ತೇವೆ ಎಂದರು.
ಇನ್ನು ಪ್ರತಿಭಟನೆಯಿಂದಾಗಿ ಕೆಂಪೇಗೌಡ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
ಬಿಜೆಪಿಯ ಶೋಭಾ ಕರಂದ್ಲಾಜೆ ಸೇರಿದಂತೆ ಕೆಲವು ಅಭ್ಯರ್ಥಿಗಳ ವಿರುದ್ಧ ಪಕ್ಷದ ಕಾರ್ಯಕರ್ತರು, ಮುಖಂಡರ ನೇತೃತ್ವದಲ್ಲಿ ಗೋ ಬ್ಯಾಕ್ ಚಳವಳಿ ನಡೆಯುತ್ತಿದೆ. ಚಿಕ್ಕಬಳ್ಳಾಪುರದಿಂದ ಟಿಕೆಟ್ ಪಡೆದಿರುವ ಮಾಜಿ ಸಚಿವ ಡಾ ಸುಧಾಕರ್ ವಿರೋಧಿ ಅಭಿಯಾನ ಆ ಪಟ್ಟಿಗೆ ಹೊಸ ಸೇರ್ಪಡೆ.