
ಸೋಫಿಯಾ ಕುರೇಶಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ವಿಜಯ್ ಶಾ
Operation Sindoor | ʻಹೋಗಿ ಕ್ಷಮೆಯಾಚಿಸಿʼ ; ಕರ್ನಲ್ ಸೋಫಿಯಾ ಖುರೇಶಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಸಚಿವರಿಗೆ ಸುಪ್ರೀಂ ಕೋರ್ಟ್ ತರಾಟೆ
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, ಸಚಿವರ ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವ ವ್ಯಕ್ತಿಗಳು ಮಾತಿನಲ್ಲಿ ಸಂಯಮವನ್ನು ಹೊಂದಿರಬೇಕು ಎಂದು ತಿಳಿಸಿದರು.
ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ಅವರನ್ನು "ಉಗ್ರರ ಸಹೋದರಿ" ಎಂದು ಕರೆದಿದ್ದ ಮಧ್ಯಪ್ರದೇಶದ ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ ಅವರನ್ನು ಸುಪ್ರೀಂ ಕೋರ್ಟ್ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, ಸಚಿವರ ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದರು. ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವ ವ್ಯಕ್ತಿಗಳು ಮಾತಿನಲ್ಲಿ ಸಂಯಮ ಕಾಪಾಡಿಕೊಳ್ಳಬೇಕು ಎಂದು ಅವರು ಸೂಚಿಸಿದರು. "ನೀವು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ? ನೀವು ಸೂಕ್ಷ್ಮ ಮನಸ್ಸಿನಿಂದ ಇರಬೇಕು. ಈಗ ಹೋಗಿ ಹೈಕೋರ್ಟ್‌ನಲ್ಲಿ ಕ್ಷಮೆಯಾಚಿಸಿ" ಎಂದು ಮುಖ್ಯ ನ್ಯಾಯಮೂರ್ತಿಗಳು ವಿಜಯ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ಜಬ್ಬಲ್ಪುರ ಹೈಕೋರ್ಟ್, ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ವಿಜಯ್ ಶಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ವಿಜಯ್ ಶಾ ಅವರ ಈ ವಿವಾದಾತ್ಮಕ ಹೇಳಿಕೆಗೆ ವಿರೋಧ ಪಕ್ಷಗಳು, ಮಿಲಿಟರಿ ನಿವೃತ್ತರು ಮತ್ತು ಆಡಳಿತಾರೂಢ ಬಿಜೆಪಿಯ ಕೆಲವು ಸದಸ್ಯರು ಸಹ ತೀವ್ರ ಟೀಕೆ ವ್ಯಕ್ತಪಡಿಸಿದ್ದರು.
ವಿಜಯ್ ಶಾ ಅವರ ಹೇಳಿಕೆ ಏನು?
ಮೇ 12 ರಂದು ಇಂದೋರ್ ಸಮೀಪದ ರಾಮಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿಜಯ್ ಶಾ, 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯನ್ನು ವಿವರಿಸುವಾಗ ಕರ್ನಲ್ ಸೋಫಿಯಾ ಖುರೇಶಿ ಅವರನ್ನು "ಉಗ್ರರ ಸಹೋದರಿ" ಎಂದು ಕರೆದಿದ್ದರು. "ಪಹಲ್ಗಾಮ್ ದಾಳಿಯಲ್ಲಿ ನಮ್ಮ ಸಹೋದರಿಯರ ಸಿಂಧೂರವನ್ನು ಒರೆಸಿ ಹಾಕಿದ ಉಗ್ರರ ವಿರುದ್ಧ ಪ್ರತೀಕಾರವಾಗಿ, ಪ್ರಧಾನಿ ಮೋದಿ ಅವರು ಅವರ ಉಗ್ರರ ಸಹೋದರಿಯನ್ನು (ಸೋಫಿಯಾ ಖುರೇಶಿ) ಸೇನೆಯ ವಿಮಾನದಲ್ಲಿ ಕಳುಹಿಸಿ, ಉಗ್ರರ ಮನೆಯಲ್ಲಿ ದಾಳಿ ಮಾಡಿಸಿದರು" ಎಂದು ಶಾ ಹೇಳಿದ್ದರು. ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.