
ಚಿತ್ರ ಬಿಡಿಸುವ ಮೂಲಕ ಕಲಾಲೋಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ರಾಜ್ಯದ ಜಿಐ ಉತ್ಪನ್ನಗಳಿಗೆ ಜಾಗತಿಕ ಪ್ರಚಾರ, ವಿಮಾನ ನಿಲ್ದಾಣದಲ್ಲಿ ಕಲಾಲೋಕ ಉದ್ಘಾಟನೆ
ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆ ಹೊಂದಿರುವ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪ್ರತೀ ದಿನವೂ ವಿಮಾನ ನಿಲ್ದಾಣಕ್ಕೆ ಸಾವಿರಾರು ಪ್ರಯಾಣಿಕರು ಬರುತ್ತಿರುತ್ತಾರೆ. ಪ್ರವಾಸಿಗರು ಇಲ್ಲಿಗೆ ಬಂದ ತಕ್ಷಣವೇ ಕರ್ನಾಟಕದ ಅಭಿಮಾನದ ಪಯಣ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ಕಲಾಲೋಕ ಮಳಿಗೆ ನಿರ್ಮಿಸಲಾಗಿದ್ದು, ಇದರ ಮೂಲಕ ಕರ್ನಾಟಕದ ಹೆಮ್ಮಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಚಾರ, ಬ್ರ್ಯಾಂಡಿಂಗ್ ಸಾಧಿಸಿ ಮಾರಾಟ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ(ನ.11) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿತ್ರಕಲಾ ರಚನೆ ಮತ್ತು ಘಂಟಾನಾದದ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಇದೊಂದು ಸಂತಸದ ಕ್ಷಣವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನವು ಜನನಿಬಿಡತೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನಲ್ಲಿ ಆಕರ್ಷಕ ಮತ್ತು ಸುಸಜ್ಜಿತ ಕಲಾಲೋಕ ಮಳಿಗೆ ಸ್ಥಾಪಿಸಿದ್ದು, ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆ ಹೊಂದಿರುವ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸಲಾಗುವುದು ಎಂದರು.
45 ಉತ್ಪನ್ನಗಳ ಪ್ರದರ್ಶನ
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, "ಟರ್ಮಿನಲ್-2ರ ಸಮೀಪ ನಿರ್ಮಿತವಾಗಿರುವ ಕಲಾಲೋಕ ಮಳಿಗೆಯಲ್ಲಿ ರಾಜ್ಯದ ಪಾರಂಪರಿಕ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ, ಅಗರಬತ್ತಿ, ಮೈಸೂರು ಸಿಲ್ಕ್, ಚನ್ನಪಟ್ಟಣದ ಬೊಂಬೆ, ಲಿಡ್ಕರ್ ಉತ್ಪನ್ನಗಳು, ಬಗೆಬಗೆಯ ಪರಿಮಳವಿರುವ ಕಾಫಿಪುಡಿ ಮತ್ತು ಪಾನೀಯ, ಕೈಮಗ್ಗದ ಉತ್ಪನ್ನಗಳು, ಇಳಕಲ್ ಸೀರೆ, ಲಂಬಾಣಿ ಉಡುಪು, ಗಂಧದ ಕಲಾಕೃತಿ, ಬಿದರಿ ಕಲಾಕೃತಿ, ಮೈಸೂರು ಶೈಲಿಯ ಕಲಾಕೃತಿಗಳು, ಮುಂತಾದವು ಸಿಗಲಿವೆ. ಒಟ್ಟಾರೆಯಾಗಿ ಜಿಐ ಮಾನ್ಯತೆ ಹೊಂದಿರುವ ರಾಜ್ಯದ 45 ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಎರಡೂ ಈ ಮಳಿಗೆಯಲ್ಲಿ ನಡೆಯಲಿದೆʼʼ ಎಂದಿದ್ದಾರೆ.
ಜಿಐ ಉತ್ಪನ್ನಗಳ ಪರಿಚಯ
ರಾಜ್ಯವೇ ಹೆಮ್ಮೆಪಡುವಂತಹ ಪಾರಂಪರಿಕ ಮತ್ತು ಭೌಗೋಳಿಕ ವಿಶಿಷ್ಟತೆಯ ಮನ್ನಣೆ ಹೊಂದಿರುವ ಉತ್ಪನ್ನಗಳನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಮಳಿಗೆ ಆರಂಭದ ಆಶಯವಾಗಿದೆ. ಇದಕ್ಕೆ ಸರ್ಕಾರಿ ಸ್ವಾಮ್ಯದ ಕೆಎಸ್‌ಡಿಎಲ್ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಯಮಿತ, ಕೆಎಸ್ಐಸಿ, ಕಾಫಿ ಬೋರ್ಡ್ ಮತ್ತು ಲಿಡ್ಕರ್ ಮುಂತಾದ ಉದ್ದಿಮೆಗಳು ಕೈಜೋಡಿಸಿವೆ. ವಿಮಾನ ನಿಲ್ದಾಣಕ್ಕೆ ಬರುವವರಿಗೆ ಮತ್ತು ಇಲ್ಲಿಂದ ಹೋಗುವವರಿಗೆ ಒಂದೇ ತಾಣದಲ್ಲಿ ಕರ್ನಾಟಕದ ಅಸ್ಮಿತೆ ಇಲ್ಲಿ ಅನುಭವಕ್ಕೆ ಸಿಗಲಿದೆ ಎಂದು ಬಣ್ಣಿಸಿದರು.
ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಕಲಾಲೋಕ ಮಳಿಗೆಗೆ ಟರ್ಮಿನಲ್ -2ರ ಡೊಮೆಸ್ಟಿಕ್ ಬೇನಲ್ಲಿ 132 ಚ.ಮೀ. ಜಾಗವನ್ನು ಬಾಡಿಗೆಗೆ ಒದಗಿಸಿದೆ. ಟರ್ಮಿನಲ್-2ರಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರ ನಿರ್ಗಮನ ವಲಯದಲ್ಲಿ 140 ಚ.ಮೀ. ಜಾಗದಲ್ಲಿ ಇಂತಹುದೇ ಮತ್ತೊಂದು ಮಳಿಗೆ ಆರಂಭಿಸಲಾಗುವುದು. ಮಳಿಗೆಯನ್ನು ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪಡಿಯಚ್ಚಿನಂತೆ ಮೋಹಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಹಿಂದೆ ದೂರದೃಷ್ಟಿ ಇದೆ ಎಂದು ತಿಳಿಸಿದರು.

