Karnataka By-Election | ಅವರ ಮಗನಿಗೇ ಟಿಕೆಟ್‌ ಕೊಡಲಿ: ಸಿ.ಪಿ.ಯೋಗೇಶ್ವರ್‌ ತಿರುಗೇಟು
x

Karnataka By-Election | ಅವರ ಮಗನಿಗೇ ಟಿಕೆಟ್‌ ಕೊಡಲಿ: ಸಿ.ಪಿ.ಯೋಗೇಶ್ವರ್‌ ತಿರುಗೇಟು

ನನ್ನ ಮೇಲೆ ಅನಾವಶ್ಯಕ ಆರೋಪ ಮಾಡುವ ಅಗತ್ಯವಿಲ್ಲ. ಎಚ್ಡಿಕೆ ನನಗೆ ಟಿಕೆಟ್ ಕೊಡದಿದ್ದರೆ ಅವರ ಮಗನಿಗೇ ಕೊಡಲಿ. ಆದರೆ, ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದೆ ಎಂಬ ಸುಳ್ಳು ಆರೋಪ ಮಾಡಿದ್ದು ಸರಿಯಲ್ಲ ಎಂದು ಸಿ ಪಿ ಯೋಗೇಶ್ವರ್‌ ತಿರುಗೇಟು ನೀಡಿದ್ದಾರೆ.


ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಕಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮೈತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಇದೀಗ ದೋಸ್ತಿ ಪಕ್ಷದ ನಾಯಕರಲ್ಲೇ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಿ.ಪಿ.ಯೋಗೇಶ್ವರ್‌ ತಿರುಗೇಟು ನೀಡಿದ್ದಾರೆ.

ನನ್ನ ಮೇಲೆ ಅನವಶ್ಯಕ ಆರೋಪ ಮಾಡುವ ಅಗತ್ಯವಿಲ್ಲ. ಎಚ್‌ಡಿಕೆ ನನಗೆ ಟಿಕೆಟ್ ಕೊಡದಿದ್ದರೆ ಅವರ ಮಗನಿಗೇ ಕೊಡಲಿ. ಆದರೆ, ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದೆ ಎಂಬ ಸುಳ್ಳು ಆರೋಪ ಮಾಡಿದ್ದು ಸರಿಯಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈವರೆಗೆ ಕಾಂಗ್ರೆಸ್ಸಿನ ಯಾವ ನಾಯಕರನ್ನೂ ಭೇಟಿಯಾಗಿಲ್ಲ. ಒಂದು ವೇಳೆ ಭೇಟಿಯಾದರೂ ತಪ್ಪೇನಿಲ್ಲ ಎಂದು ಹೇಳಿದರು.

ಉಪಚುನಾವಣೆ ಸ್ಪರ್ಧೆಗೆ ಅವಕಾಶ ಕೊಟ್ಟರೆ ಎನ್‌ಡಿಎ ಅಭ್ಯರ್ಥಿ ಆಗುತ್ತೇನೆ. ಆದರೆ, ಅವಕಾಶ ಸಿಗಬೇಕಷ್ಟೇ. ನಾನು ಮೂರು ದಿನಗಳಿಂದ ಕುಮಾರಸ್ವಾಮಿ ಜೊತೆ ಚರ್ಚೆ ಮಾಡುತ್ತಿದ್ದೇನೆ. ಜೆಡಿಎಸ್ ‌ಚಿಹ್ನೆಯಡಿ ಸ್ಪರ್ಧೆ ಮಾಡಿದರೆ ಕಷ್ಟವಾಗಲಿದೆ, ಬಿಜೆಪಿಯಿಂದಲೇ ಸ್ಪರ್ಧಿಸಬೇಕು ಎಂಬುದನ್ನು ತಿಳಿಸಿದ್ದೇನೆ. ಆದರೆ, ಕುಮಾರಸ್ವಾಮಿ ಅವರಿಗೆ ತಮ್ಮ ಮಗನಿಗೇ ಟಿಕೆಟ್ ಕೊಡಬೇಕೆಂಬ ಮನಸ್ಸಿದೆ. ಆ ರೀತಿ ಇದ್ದರೆ ಏನು ಮಾಡಲಾಗುತ್ತದೆ? ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವುದು ಬೇಡ ಎಂದು ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರು ಹೇಳುತ್ತಿದ್ದಾರೆ. ಮೊದಲೇ ನನ್ನನ್ನು ಪಕ್ಷಾಂತರಿ ಎಂದು ಕರೆಯುತ್ತಿದ್ದಾರೆ. ಹಾಗಾಗಿ ಜೆಡಿಎಸ್‌ ಚಿಹ್ನೆಯಡಿ ಬೇಡ, ಬಿಜೆಪಿಯಿಂದಲೇ ಸ್ಪರ್ಧಿಸಬೇಕೆಂದು ನಿರ್ಧರಿದ್ದೇನೆ. ವಿಪರ್ಯಾಸ ಎಂದರೆ ನನಗೆ ಯಾರೂ ಕೂಡ ಬೆಂಬಲ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಯಡಿಯೂರಪ್ಪ ವಿರುದ್ಧ ಅಸಮಾಧಾನ

ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಎಂಬ ಬಿ.ಎಸ್‌.ಯಡಿಯೂರಪ್ಪ ಹೇಳಿಕೆಗೆ ಸಿ.ಪಿ.ಯೋಗೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದರು. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಹೇಳಿಕೆ ಕೊಡುವ ಅಗತ್ಯ ಇರಲಿಲ್ಲ ಎಂದು ಹೇಳಿದರು.

ಚನ್ನಪಟ್ಟಣ ಕುಮಾರಸ್ವಾಮಿ ಅವರ ಕ್ಷೇತ್ರವೇ ಇರಬಹುದು, ಅಭ್ಯರ್ಥಿಯನ್ನು ಅವರೇ ತೀರ್ಮಾನ ಮಾಡಲಿ. ಆದರೆ ಕುಮಾರಸ್ವಾಮಿ ಅವರಿಗೆ ದೊಡ್ಡ ಮನಸು ಇದ್ದರೆ ಅನುಕೂಲ ಆಗುತ್ತಿತ್ತು. ಯಡಿಯೂರಪ್ಪ ಬಾಯಿಂದ ಉದ್ದೇಶಪೂರ್ವಕವಾಗಿ ಹೇಳಿಕೆ ಕೊಡಿಸಿರುವುದು ಸರಿಯಲ್ಲ ಎಂದರು.

ಯಡಿಯೂರಪ್ಪ ಹೇಳಿಕೆ ಹಿಂದೆ ದುರುದ್ದೇಶವಿದೆ. ಹೇಳಿಕೆ ಕೊಡಲು ಯಡಿಯೂರಪ್ಪ ಯಾರು, ಪಕ್ಷದ ರಾಜ್ಯಾಧ್ಯಕ್ಷರು ಹೇಳಿಕೆ ಕೊಟ್ಟಿದ್ದರೆ ನಡೆಯುತ್ತಿತ್ತು. ಉದ್ದೇಶಪೂರ್ವಕವಾಗಿ ಬಿಎಸ್‌ವೈ ಮೂಲಕ ಹೇಳಿಕೆ ಕೊಡಿಸಿದ್ದಾರೆ. ನಾನು ಕೂಡ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮುಂದೆ ಏನಾಗುತ್ತದೋ ಕಾದು ನೋಡೋಣ ಎಂದು ಯೋಗೇಶ್ವರ್ ಹೇಳಿದರು.

ಇನ್ನು ಎಚ್.ಡಿ.ಕುಮಾರಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ನಾನು ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿನೂ ಮಾಡಿಲ್ಲ, ಮಾತನಾಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story