ನನಗೆ ಗೌರವ ಕೊಡಬೇಕಂದ್ರೆ ನಮ್ಮ ಅಭ್ಯರ್ಥಿಗೆ ಲೀಡ್ ಕೊಡಿಸಿ: ಸಿದ್ದರಾಮಯ್ಯ
x

ನನಗೆ ಗೌರವ ಕೊಡಬೇಕಂದ್ರೆ ನಮ್ಮ ಅಭ್ಯರ್ಥಿಗೆ ಲೀಡ್ ಕೊಡಿಸಿ: ಸಿದ್ದರಾಮಯ್ಯ


ʼʼನನಗೆ ಗೌರವ ಕೊಡಬೇಕೆಂದರೆ ಲೋಕಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಗೆ ಅತಿ ಹೆಚ್ಚು ಲೀಡ್ ಕೊಡಿಸಿʼʼ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ʼʼ2013-18ರ ವರೆಗೆ ನಾನು ಮುಖ್ಯಮಂತ್ರಿಯಾಗಿ ಎಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದೆ. ಇಡೀ ರಾಜ್ಯದಲ್ಲಿ ಅನ್ನಭಾಗ್ಯದಿಂದ ರೈತರ ಸಾಲ ಮನ್ನಾವರೆಗೂ ಎಷ್ಟೆಷ್ಟು ಕೆಲಸ ಮಾಡಿದ್ದೆ. ಆದರೂ ನಮಗೆ 2018 ರಲ್ಲಿ ಹಿನ್ನಡೆಯಾಗಿದ್ದು ನೋವು ತಂದಿದೆʼʼ ಎಂದಿದ್ದಾರೆ.

ʼʼಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಇಲ್ಲಿ ಬಿಜೆಪಿ ಠೇವಣಿಯನ್ನು ಕಳೆದುಕೊಂಡಿರುವ ಉದಾಹರಣೆಯೇ ಹೆಚ್ಚು. ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಕೆಲಸಗಳು ಕಣ್ಣಿಗೆ ಕಾಣುತ್ತಿವೆ. ಆದ್ದರಿಂದ ಚಾಮುಂಡೇಶ್ವರಿ ಕ್ಷೇತ್ರದ ಜನ ತೀರ್ಮಾನ ಮಾಡಿದರೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕತೆ ಮುಗಿಯತ್ತದೆ. ನನಗೆ ಗೌರವ ಕೊಡಬೇಕೆಂದರೆ ಚಾಮುಂಡೇಶ್ವರಿಯಲ್ಲಿ ಲೋಕಸಭಾ ಅಭ್ಯರ್ಥಿಗೆ ಅತಿ ಹೆಚ್ಚು ಲೀಡ್ ಕೊಡಿಸಿʼʼ ಎಂದು ಮನವಿ ಮಾಡಿಕೊಂಡಿದ್ದಾರೆ.

ʼʼ1977ರ ಬಳಿಕ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಒಕ್ಕಲಿಗರೊಬ್ಬರು ಗೆಲ್ಲಲಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಒಲವು ಇದೆ. ಮೋದಿ ಅಲೆ ದುರ್ಬೀನು ಹಾಕಿ ಹುಡುಕಿದರೂ ಕಾಣುತ್ತಿಲ್ಲʼʼ ಎಂದು ಕುಟುಕಿದ್ದಾರೆ.

ʼʼಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ನಮ್ಮದೇ ತಪ್ಪುಗಳಿಂದ ಕೈತಪ್ಪಿದೆ. ಈಗಲೂ ಚಾಮುಂಡೇಶ್ವರಿ ಜನ ನಮ್ಮ ಪರವಾಗಿದ್ದಾರೆ. ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದು ನಮಗೆ ಗೊತ್ತಿದೆ. ಕ್ಷೇತ್ರದ ಮತದಾರರು ನಮ್ಮ ಪರವಾಗಿದ್ದಾರೆ, ನಾವು ನಮ್ಮ ಕ್ಷೇತ್ರದ ಪರವಾಗಿ ನಿಲ್ಲಬೇಕು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಾಮರ್ಥ್ಯ ತೋರಿಸಬೇಕುʼʼ ಎಂದು ಕಾರ್ಯಕರ್ತರು ಮತ್ತು ಮುಖಂಡರನ್ನು ಹುರಿದುಂಬಿಸಿದ್ದಾರೆ.

Read More
Next Story