
ಬರ ಭೀಕರ | ಚುನಾವಣೆಯಷ್ಟೇ ಆದ್ಯತೆ ರೈತ ಸಮಸ್ಯೆ ಪರಿಹಾರಕ್ಕೂ ಕೊಡಿ: ಕುರುಬೂರು ಶಾಂತಕುಮಾರ್
ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ರೈತ ಮುಖಂಡರ ನಿಯೋಗ ಒತ್ತಾಯಿಸಿದೆ. ಚುನಾವಣೆಯ ಅಬ್ಬರದಲ್ಲಿ ಭೀಕರ ಬರದಲ್ಲಿ ನರಳುತ್ತಿರುವ ರೈತರನ್ನು ಮರೆಯಬೇಡಿ. ಚುನಾವಣೆಯಷ್ಟೇ ಪ್ರಮುಖ್ಯತೆ ರೈತರಿಗೂ ಸಿಗಲಿ ಎಂದಿದ್ದಾರೆ.
ರಾಜಕೀಯ ನಾಯಕರು ಚುನಾವಣೆಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ಸಂಕಷ್ಟ ಪರಿಹಾರಕ್ಕೂ ನೀಡಬೇಕು ಎಂದು ರೈತ ಮುಖಂಡರ ನಿಯೋಗ ಒತ್ತಾಯಿಸಿದೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗವು ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರನ್ನು ಸೋಮವಾರ ವಿಧಾನಸೌಧದಲ್ಲಿ ಭೇಟಿ ಮಾಡಿದರು. ಈ ವೇಳೆ ರಾಜ್ಯದಲ್ಲಿ ಎದುರಾಗಿರುವ ಬರಗಾಲದಿಂದ ರೈತರಿಗೆ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯ ನಂತರ ಮಾತನಾಡಿದ ಕುರುಬೂರು ಶಾಂತಕುಮಾರ್, ರಾಜ್ಯದಲ್ಲಿ ತೀವ್ರ ಬರ ಸೃಷ್ಟಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಬೆಳಗಾವಿ, ಬಾಗಲಕೋಟೆ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡುತ್ತಿದೆ. ಕೃಷ್ಣಾ ನದಿ ಭಾಗದಿಂದ ಹಾಗೂ ರಾಜ್ಯದ ಎಲ್ಲಾ ಜಲಾಶಯಗಳಿಂದ ನೀರು ಹರಿಸಿದರೆ, ರೈತರಿಗೆ ಅನುಕೂಲವಾಗಲಿದೆ. ಕರ್ನಾಟಕಕ್ಕೆ ನೀರು ಹರಿಸುವ ಬಗ್ಗೆ ಕೂಡಲೇ ಮಹಾರಾಷ್ಟ್ರ ಸರ್ಕಾರದ ಗಮನ ಸೆಳೆದು ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತಿದೆ. ಆದರೆ, ಅಧಿಕಾರಿಗಳು ಚುನಾವಣೆ ನೆಪ ಹೇಳುತ್ತಿದ್ದಾರೆ. ರಾಜ್ಯದ ಸಕ್ಕರೆ ಕಾರ್ಖಾನೆಗಳು 2600 ಕೋಟಿ ರೂ.ನಷ್ಟು ಆರು ತಿಂಗಳ ಕಬ್ಬಿನ ಬಾಕಿ ರೈತರಿಗೆ ಪಾವತಿಸಿಲ್ಲ. ಕಬ್ಬಿನ ಹಣದ ಮೇಲುಸ್ತುವಾರಿ ವಹಿಸಿದ್ದ ಅಧಿಕಾರಿಯನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಲಾಗಿದ್ದು, ಯಾವುದೇ ಕೆಲಸ ನಡೆಯುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರವು ಕರ್ನಾಟಕದ 224 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ, ಬರಗಾಲದ ನಷ್ಟಕ್ಕಾಗಿ ರೈತರ ಖಾತೆಗಳಿಗೆ 2000 ಹಣ ವರ್ಗಾಯಿಸಿದೆ. ಆದರೆ, ಇದರಿಂದ ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಕೂಡಲೇ ಎಸ್‌ಡಿಆರ್‌ಫ್ ಹಾಗೂ ಎನ್‌ಡಿಆರ್‌ಎಫ್ ಮಾನದಂಡದಂತೆ ಹಣ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ 40 ಲಕ್ಷ ಕೃಷಿ (ಕೃಷಿ ಮಾದರಿಗಳು) ಇವೆ. ಆದರೆ, ಬರದಿಂದ 10 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ನೀರಿಲ್ಲ. ಲಕ್ಷಾಂತರ ತೆಂಗಿನ ಗಿಡಗಳು, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಒಳಗೆ ಒಣಗಿ ಹೋಗುತ್ತಿವೆ. ಕಾಡಂಚಿನ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಪ್ರಾಣಿಗಳು ಆನೆ, ಕಾಡುಹಂದಿ, ನವಿಲು, ಕೋತಿ ಸೇರಿದಂತೆ ಕಾಡಿನ ಪ್ರಾಣಿಗಳು ಹಳ್ಳಿಗಳಿಗೆ ಬರುತ್ತಿವೆ. ಇದರಿಂದ ಉಳಿದಿರುವ ಬೆಳೆಯೂ ನಾಶವಾಗುತ್ತಿದೆ ಎಂದರು.
ರಾಜ್ಯಾದ್ಯಂತ ಬೆಳೆವಿಮೆ ಮಾಡಿಸಿಕೊಂಡಿರು ರೈತರಿಗೆ ಪರಿಹಾರ ಹಣ ಇಲ್ಲಿಯವರೆಗೆ ಬಂದಿಲ್ಲ. ಇದಕ್ಕೆ ಯಾವುದೇ ಕಂಪನಿಗಳು ಸಹ ಸಮರ್ಪಕವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಇನ್ನು ರಾಜ್ಯದಲ್ಲಿ ಭೀಕರ ಬರಗಾಲ ಇರುವುದರಿಂದ ಮುಂದಿನ ಕೃಷಿ ಚಟುವಟಿಕೆಗಳನ್ನು ನಡೆಸಲು ಎಲ್ಲಾ ಬ್ಯಾಂಕ್‌ಗಳಲ್ಲಿ ಬಡ್ಡಿ ರಹಿತ ಸಾಲ ನೀಡಲು ಕ್ರಮ ವಹಿಸಬೇಕು. ರೈತರ ಕೃಷಿ ಸಾಲಕ್ಕೆ ಎಲ್ಲಾ ಬ್ಯಾಂಕುಗಳಲ್ಲಿ ಸಿಬಿಲ್ ಸ್ಕೋರ್ ಕೇಳುವುದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಮಸ್ಯೆಗಳಿಗೆ ತುರ್ತು ಪರಿಹಾರ ಕಲ್ಪಿಸಬೇಕು. ಬರಗಾಲದ ಸಂಕಷ್ಟ ನಿವಾರಣೆಗೆ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿ, ರೈತರ ಸಮಸ್ಯೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ಸಭೆಗೆ ಸೂಚನೆ
ರೈತರ ಸಮಸ್ಯೆ ಪರಿಹರಿಸಲು ರೈತ ಮುಖಂಡರ ನಿಯೋಗ ಮಾಡಿದ ಮನವಿಗೆ ಸ್ಪಂದಿಸಿದ ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರು ಆಪ್ತ ಕಾರ್ಯದರ್ಶಿ ಪ್ರಶಾಂತ್ ಕುಮಾರ್‌ಗೆ ಸೂಚನೆ ನೀಡಿ ಕೂಡಲೇ ಕಂದಾಯ, ಕೃಷಿ, ನೀರಾವರಿ, ವಿದ್ಯುತ್ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಆಯೋಜಿಸುವಂತೆ ಸೂಚನೆ ನೀಡಿದರು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ನಿಯೋಗದಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ನಾಗಾರ್ಜುನ್, ಬರಡನಪುರ ನಾಗರಾಜ್, ಧರ್ಮರಾಜ್ ಹಾಗೂ ಮಾದಪ್ಪ ಇದ್ದರು.