Heinous Crime | ಹಕ್ಕಿಪಿಕ್ಕಿ ಬಾಲಕಿಯ ಭೀಬತ್ಸ ಕೊಲೆ ; ಕಾರಣ ನಿಗೂಢ, ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯತ್ತ ಎಲ್ಲರ ಚಿತ್ತ
x

ಬಿಡದಿ ಪೊಲೀಸ್‌ 

Heinous Crime | ಹಕ್ಕಿಪಿಕ್ಕಿ ಬಾಲಕಿಯ ಭೀಬತ್ಸ ಕೊಲೆ ; ಕಾರಣ ನಿಗೂಢ, ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯತ್ತ ಎಲ್ಲರ ಚಿತ್ತ

ಶನಿವಾರ (ಮೇ 17) ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈ ಸೇರಲಿದ್ದು, ಬಾಲಕಿಯದ್ದು ಹತ್ಯೆಯೋ, ಅತ್ಯಾಚಾರವೋ ಎಂಬುದು ಗೊತ್ತಾಗಲಿದೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಶನಿವಾರ ಪತ್ರಿಕಾಗೋಷ್ಠಿ ಕರೆದು ವರದಿಯ ವಿವರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಬಿಡದಿ ಹೋಬಳಿ ಭದ್ರಾಪುರದ ರೈಲ್ವೆ ಹಳಿಯ ಸಮೀಪ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಬಾಲಕಿಯ ಶವ ಪತ್ತೆಯಾದ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಬಾಲಕಿಯದ್ದು ಕೊಲೆಯೋ ಅಥವಾ ಅತ್ಯಾಚಾರವೋ ಎಂಬ ಸಂಶಯಗಳಿಗೆ ವರದಿಯಿಂದ ಉತ್ತರ ಸಿಗಲಿದೆ. ಬಾಲಕಿಯ ಶವ ಪತ್ತೆಯಾದ ಪ್ರಕರಣದಲ್ಲಿ ಪೊಲೀಸರು ಈವರೆಗೂ ಆರೋಪಿಗಳನ್ನು ಬಂಧಿಸದ ಕ್ರಮಕ್ಕೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಮಾತು ಬಾರದ, ಕಿವಿಯೂ ಕೇಳದ ಬಾಲಕಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಬಿಸಾಡಿರುವ ಕೃತ್ಯ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.

ಅರೆಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಬಾಲಕಿ ಮೇಲೆ ಅತ್ಯಾಚಾರ ನಡೆದಿರಬಹುದು ಎಂದು ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸುತ್ತಿದ್ದರೂ, ಪೊಲೀಸರು ತನಿಖೆ ವಿಳಂಬ ಮಾಡುತ್ತಿರುವುದಕ್ಕೆ ಅನುಮಾನ ಸಹ ವ್ಯಕ್ತವಾಗಿದೆ.

ಶನಿವಾರ (ಮೇ 17) ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈ ಸೇರಲಿದ್ದು, ಬಾಲಕಿಯದ್ದು ಹತ್ಯೆಯೋ, ಅತ್ಯಾಚಾರವೋ ಎಂಬುದು ಗೊತ್ತಾಗಲಿದೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಶನಿವಾರ ಪತ್ರಿಕಾಗೋಷ್ಠಿ ಕರೆದು ವರದಿಯ ವಿವರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂವರು ಮಕ್ಕಳಿಗೆ ಮಾತು ಬರಲ್ಲ

ಹತ್ಯೆಗೀಡಾದ ಬಾಲಕಿ ಸೇರಿ ಒಂದೇ ಕುಟುಂಬದಲ್ಲಿ ಮೂವರು ಮಕ್ಕಳಿಗೆ ಮಾತು ಬರುವುದಿಲ್ಲ ಎಂಬುದು ಆಕ್ರೋಶ ಹೆಚ್ಚಲು ಕಾರಣವಾಗಿದೆ.

ತಂದೆ ಇಲ್ಲದ ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಬಾಲಕ, ತಾಯಿಯ ಆಶ್ರಯದಲ್ಲೇ ಬೆಳೆಯುತ್ತಿದ್ದರು. ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿ ಕುಟುಂಬವಿತ್ತು. ಆದರೂ, ಬಾಲಕಿಯನ್ನು ತಾವರೆಕೆರೆಯ ಯಲಚಗುಪ್ಪೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಓದಿಸಲಾಗುತ್ತಿತ್ತು.

ಮೂವರು ಮಕ್ಕಳಿಗೆ ಮಾತು ಬಾರದ ಕಾರಣ ಇಡೀ ಕುಟುಂಬ ಮೂಕವೇದನೆ ಅನುಭವಿಸುತ್ತಿತ್ತು. ಈಗ ಮೂಕ ಬಾಲಕಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದರಿಂದ ಬರ ಸಿಡಿಲು ಬಡಿದಂತಾಗಿದೆ.

ತನಿಖೆಗೆ ಹೆಚ್ಚಿದ ಒತ್ತಡ

ಆರೋಪಿಗಳನ್ನು ಬಂಧಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿರುವುದರಿಂದ ಪೋಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದ ಸುಟ್ಟಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

ಸದ್ಯ ಆರು ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತವರು ಜಿಲ್ಲೆಯಲ್ಲೇ ಭೀಭತ್ಸ ಘಟನೆ ನಡೆದಿರುವುದರಿಂದ ಬಾಲಕಿಯ ಸಾವು ಕೊಲೆಯೋ, ಅತ್ಯಾಚಾರವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ವರದಿಗಾಗಿ ಕಾಯುತ್ತಿದ್ದಾರೆ.

ಅರಣ್ಯ ಭೂಮಿಯಲ್ಲಿ ವಾಸ

ಭದ್ರಾಪುರದಲ್ಲಿ ಸುಮಾರು 200 ಹಕ್ಕಿಪಿಕ್ಕಿ ಜನಾಂಗದ ಮನೆಗಳಿವೆ. ಈ ಕುಟುಂಬಗಳು ವಾಸವಾಗಿರುವ ಭೂಮಿ ಕುಂಬಳಗೋಡು ರಾಜ್ಯ ಅರಣ್ಯ ವ್ಯಾಪ್ತಿಗೆ ಸೇರುತ್ತದೆ. 10 ಎಕರೆ ವಿಸ್ತೀರ್ಣದಲ್ಲಿ ಮನೆಗಳನ್ನು ಕಟ್ಟಿಕೊಂಡರೆ, 116 ಎಕರೆಯಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಬಾಲಕಿಯ ಕುಟುಂಬ ಕೂಡ ತಗಡಿನ ಮನೆ ನಿರ್ಮಿಸಿಕೊಂಡು ಗ್ರಾಮದಲ್ಲಿ ವಾಸವಾಗಿತ್ತು. ಬಾಲಕಿಗೆ ತಂದೆ ಇಲ್ಲ. ಭಾನುವಾರ ಸಂಜೆ ಕಣಮಿಣಿಕೆ ಸಮೀಪ ಅಂಗಡಿಗೆ ತೆರಳಿದ್ದ ಬಾಲಕಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಸೋಮವಾರ ಬೆಳಿಗ್ಗೆ ಬಾಲಕಿಯ ಶವ ರೈಲ್ವೆ ಹಳಿ ಸಮೀಪ ಪತ್ತೆಯಾಗಿತ್ತು.

ಬಾಲಕಿಯ ಕಾಲು, ಸೊಂಟ ಮುರಿದಿದ್ದು, ತಲೆಗೆ ಪೆಟ್ಟು ಬಿದ್ದಿತ್ತು. ಬಾಲಕಿಯನ್ನು ಬೇರೆ ಕಡೆ ಕೊಲೆ ಮಾಡಿ ಶವ ತಂದು ಗ್ರಾಮದ ಸಮೀಪ ಎಸೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಹಕ್ಕಿಪಿಕ್ಕಿ ಜನಾಂಗದ ಕಡೆಗಣನೆ

ಹಕ್ಕಿಪಿಕ್ಕಿ ಜನಾಂಗವನ್ನು ಸರ್ಕಾರ ಕಡೆಗಣಿಸಿದ್ದು, ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಗ್ರಾಮದಲ್ಲಿ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಹೆಣ್ಣು ಮಕ್ಕಳು ಮನೆಯಿಂದ ಆಚೆ ಬರುವುದೇ ಕಷ್ಟವಾಗಿದೆ.

ಕಣಿಮಿಣಿಕೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಹಳೇವೂರಮ್ಮ ದೇವಸ್ಥಾನವಿದೆ. ಪುಂಡರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಬಾಲಕಿಯನ್ನು ಕಿಡಿಗೇಡಿಗಳು ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಅನುಮಾನವಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡ ಶಂಕೆ

ಬಾಲಕಿಯ ಹತ್ಯೆಯ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾದ ಕೈವಾಡವೂ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಭದ್ರಾಪುರ ಸುತ್ತಮುತ್ತ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಹೊರಗಿನಿಂದ ಬಂದ ಹಲವರು ಗ್ರಾಮದಲ್ಲಿ ನಿವೇಶನ ಖರೀದಿಸಿ, ಮಾರಾಟ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಭದ್ರಾಪುರ ಗ್ರಾಮದಲ್ಲಿ ಬೈಪಾಸ್ ಹಾದು ಹೋಗಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಜೋರಾಗಿದೆ. ಅಲೆಮಾರಿ ಸಮುದಾಯವಾದ ಹಕ್ಕಿಪಿಕ್ಕಿ ಜನಾಂಗವನ್ನು ಒಕ್ಕಲೆಬ್ಬಿಸಲು ಇಂತಹ ನೀಚ ಕೃತ್ಯ ಎಸಗಿರಬಹುದು ಎಂಬ ಶಂಕೆ ಇದೆ. ಏಕೆಂದರೆ, ಇಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯದ ಹಕ್ಕಿಪಿಕ್ಕಿ ಜನಾಂಗದವರು 1995 ರಲ್ಲಿ ಬೆಂಗಳೂರಿನ ಟಿಂಬರ್ ಯಾರ್ಡ್ ಪ್ರದೇಶದಲ್ಲಿ ವಾಸವಾಗಿದ್ದರು. ಕೆಲ ಪ್ರಭಾವಿಗಳು ಒಕ್ಕಲೆಬ್ಬಿಸಿದ್ದರಿಂದ ಸಾಕಷ್ಟು ಕುಟುಂಬಗಳು ಭದ್ರಾಪುರಕ್ಕೆ ಬಂದು ನೆಲೆ ನಿಂತವು. ಈ ಹಿಂದೆ ಹಕ್ಕಿಪಿಕ್ಕಿ ಜನಾಂಗದವರು ಮಾತ್ರ ಇದ್ದರು. ಆದರೆ, ಈಗ ಬೇರೆ ಬೇರೆ ಜಾತಿಯವರು ಕೂಡ ಇದ್ದಾರೆ. ನಗರ ಬೆಳೆದಂತೆಲ್ಲ ನಿವೇಶನ ಹಾಗೂ ಭೂಮಿಯ ಬೆಲೆ ಹೆಚ್ಚಾಗುತ್ತಿದೆ. ಈ ಹಿಂದೆ ಮಾಡಿದಂತೆ ಒಕ್ಕಲೆಬ್ಬಿಸಲು ಈ ರೀತಿ ಮಾಡಿರಬಹುದು ಎಂದು ಗ್ರಾಮದ ಹೆಸರೇಲೆಳಲು ಇಚ್ಚಿಸದ ವ್ಯಕ್ತಿಯೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಬಾಲಕಿ ಮನೆಗೆ ರಾಜಕಾರಣಿಗಳ ದಂಡು

ಬಾಲಕಿಯ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಸಂಘಟನೆಗಳು ಒತ್ತಾಯಿಸುತ್ತಿರುವ ಬೆನ್ನಲ್ಲೇ ರಾಜಕಾರಣಿಗಳು ಕೂಡ ಬಾಲಕಿಯರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಶುಕ್ರವಾರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಅವರು ಭೇಟಿ ನೀಡಿ, ಕುಟುಂಬ ಹಾಗೂ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.

ಸಣ್ಣ ಸಮುದಾಯವಾದ ಹಕ್ಕಿಪಿಕ್ಕಿ ಜನಾಂಗದ ಬಾಲಕಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದರೂ ಗೃಹ ಸಚಿವರಾಗಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾಗಲಿ ಇತ್ತ ಮುಖ ಮಾಡದಿರುವುನ್ನು ಖಂಡಿಸಿದ್ದಾರೆ. ಗುರುವಾರ ಬಿಜೆಪಿ ಸಂಸದ ಡಾ. ಮಂಜುನಾಥ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

ಒಟ್ಟಾರೆ ಶನಿವಾರ ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸಲಿದ್ದು, ಕುತೂಹಲ ಮೂಡಿಸಿದೆ.

Read More
Next Story