![Invest Karnataka 2025 | 3ನೇ ದಿನಕ್ಕೆ ಸಮಾವೇಶ; ಆಟೋಮೊಬೈಲ್, ಇಂಧನ ವಲಯಕ್ಕೆ ಹರಿದುಬಂತು ಹೂಡಿಕೆ Invest Karnataka 2025 | 3ನೇ ದಿನಕ್ಕೆ ಸಮಾವೇಶ; ಆಟೋಮೊಬೈಲ್, ಇಂಧನ ವಲಯಕ್ಕೆ ಹರಿದುಬಂತು ಹೂಡಿಕೆ](https://karnataka.thefederal.com/h-upload/2025/02/13/512538-investkarnataka.webp)
Invest Karnataka 2025 | 3ನೇ ದಿನಕ್ಕೆ ಸಮಾವೇಶ; ಆಟೋಮೊಬೈಲ್, ಇಂಧನ ವಲಯಕ್ಕೆ ಹರಿದುಬಂತು ಹೂಡಿಕೆ
ಇನ್ವೆಸ್ಟ್ ಕರ್ನಾಟಕ 2025ರಲ್ಲಿ 19 ದೇಶಗಳ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದು, ಈ ವರೆಗೆ ಒಟ್ಟು 26 ಕಂಪನಿಗಳಿಂದ ಸುಮಾರು 5,05,885 ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿರುವ ಮಾಹಿತಿಯಿದೆ.
ಬಹಳಷ್ಟು ನಿರೀಕ್ಷೆಗಳೊಂದಿಗೆ ಆರಂಭವಾಗಿರುವ ಜಾಗತಿಕ ಹೂಡಿಕೆದಾರರ 'ಇನ್ವೆಸ್ಟ್ ಕರ್ನಾಟಕ 2025 ಸಮಾವೇಶ'ದಲ್ಲಿ ಹಲವು ಕಂಪನಿಗಳು ಹೂಡಿಕೆ ಒಪ್ಪಂದ ಮಾಡಿಕೊಂಡಿವೆ. ಸಮಾವೇಶವು ಫೆ.13 ರಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೆ ವೋಲ್ವೊ, ಸುಜ್ಲಾನ್, ವಿಪ್ರೋ ಹೆಲ್ತ್ ಕೇರ್, ಮರ್ಸಿಡಿಸ್-ಬೆನ್ಜ್ ಇಂಡಿಯಾ ಸೇರಿದಂತೆ ಹಲವು ಕಂಪನಿಗಳು ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.
ಇನ್ವೆಸ್ಟ್ ಕರ್ನಾಟಕ 2025ರಲ್ಲಿ 19 ದೇಶಗಳ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದು, ಈ ವರೆಗೆ ಒಟ್ಟು 26 ಕಂಪನಿಗಳಿಂದ ಸುಮಾರು 5,05,885 ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿರುವ ಮಾಹಿತಿಯಿದೆ.
ಸಮಾವೇಶ ಫೆ.14ರಂದು ಸಮಾರೋಪಗೊಳ್ಳಲಿದೆ. ಸದ್ಯ ಫೆ.13ರ ವರೆಗೆ ರಾಜ್ಯದಲ್ಲಿ ಹೂಡಿಕೆ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳು ಹಾಗೂ ಕ್ಷೇತ್ರಗಳ ಕುರಿತು ವಿವರ ಮುಂದಿದೆ.
ವೋಲ್ವೋ ಕಂಪನಿಯಿಂದ ಒಪ್ಪಂದ
ಬಸ್ ಮತ್ತು ಟ್ರಕ್ ತಯಾರಿಕೆಗೆ ಹೆಸರಾಗಿರುವ ಸ್ವೀಡನ್ ಮೂಲದ ವೋಲ್ವೊ ಕಂಪನಿಯು ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿರುವ ತನ್ನ ತಯಾರಿಕಾ ಸ್ಥಾವರವನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 1,400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ನಿವಾಸ ಕಾವೇರಿಯಲ್ಲಿ ಗುರುವಾರ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸಮ್ಮುಖದಲ್ಲಿ ಎಂಒಯುಗೆ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ವೋಲ್ವೊ ಇಂಡಿಯಾದ ಎಂಡಿ ಕಮಲ್ ಬಾಲಿ ಸಹಿ ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, `ವೋಲ್ವೋ ಕಂಪನಿಯು 25 ವರ್ಷಗಳ ಹಿಂದೆಯೇ ರಾಜ್ಯಕ್ಕೆ ಬಂದು, ಬಂಡವಾಳ ಹೂಡಿ, ಬದಲಾವಣೆಗೆ ನಾಂದಿ ಹಾಡಿತು. ಈಗ ನಮ್ಮಲ್ಲಿ ವೋಲ್ವೊ ಎನ್ನುವುದು ಉತ್ಕೃಷ್ಟ ಗುಣಮಟ್ಟದ ಬಸ್ಸುಗಳಿಗೆ ಇನ್ನೊಂದು ಹೆಸರಾಗಿದೆ. ರಾಜ್ಯ ಸಾರಿಗೆ ನಿಗಮದ ಐಷಾರಾಮಿ ಬಸ್ಸುಗಳನ್ನು ಕೂಡ ಜನ ಇದೇ ಹೆಸರಿನಿಂದ ಕರೆಯುತ್ತಿದ್ದಾರೆ. ವೋಲ್ವೊ ಕಂಪನಿಗೆ ಸರ್ಕಾರ ಅಗತ್ಯ ಸೌಲಭ್ಯ ಮತ್ತು ನೆರವು ಒದಗಿಸಲಿದೆ. ಕಂಪನಿಯು ತನ್ನಲ್ಲಿ ಹೆಚ್ಚಿನ ಕನ್ನಡಿಗರಿಗೆ ಕೆಲಸ ಕೊಡಬೇಕು. ಇದರಿಂದ ಸ್ಥಳೀಯರಿಗೆ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆ ಎರಡನ್ನೂ ಸಾಧಿಸಬಹುದು’ ಎಂದರು.
ವೋಲ್ವೊ ಸಿಇಒ ಮಾರ್ಟಿನ್ ಲುಂಡ್ಸ್ಟೆಡ್ ಮಾತನಾಡಿ, `ಕರ್ನಾಟಕದಲ್ಲಿ ಕಂಪನಿಯು ಪೀಣ್ಯ, ಹೊಸಕೋಟೆ ಮತ್ತು ಧಾರವಾಡ ಸಮೀಪದ ಪೀತಂಪುರದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ. ಈಗ ನಾವು ವರ್ಷಕ್ಕೆ ಇಲ್ಲಿ 3,000 ಬಸ್/ಟ್ರಕ್ ತಯಾರಿಸುತ್ತಿದ್ದೇವೆ. ಹೊಸಕೋಟೆ ಸ್ಥಾವರದ ವಿಸ್ತರಣೆಯಿಂದ ನಾವು ವರ್ಷಕ್ಕೆ 20 ಸಾವಿರ ಬಸ್/ಟ್ರಕ್ ತಯಾರಿಸಬಹುದು. ಈ ಸಾಮರ್ಥ್ಯ ವೃದ್ಧಿಯಿಂದ ಉದ್ಯೋಗ ಸೃಷ್ಟಿಯೂ ಆಗಲಿದ್ದು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಮತ್ತು ಕರ್ನಾಟಕದ ಸ್ಥಾನ ಮತ್ತಷ್ಟು ಸುಭದ್ರವಾಗಲಿದೆ. ಜತೆಗೆ ಸ್ಥಳೀಯ ಮಾರುಕಟ್ಟೆ ಅಗತ್ಯಗಳನ್ನೂ ಸರಾಗವಾಗಿ ಪೂರೈಸಲು ಸಾಧ್ಯವಾಗಲಿದೆ’ ಎಂದರು.
ಸುಜ್ಲಾನ್ ಕಂಪನಿ ಹೂಡಿಕೆ ಒಪ್ಪಂದ
ವಿಜಯಪುರದಲ್ಲಿ 3000 ಮೆಗಾವಾಟ್ ಸಾಮರ್ಥ್ಯದ ಗಾಳಿ ವಿದ್ಯುತ್ ಉತ್ಪಾದನೆ ಅಭಿವೃದ್ಧಿಪಡಿಸಲು ಮತ್ತು ಅತ್ಯಾಧುನಿಕ ವಿಂಡ್ ಟರ್ಬೈನ್ ಬ್ಲೇಡ್ ತಯಾರಿಕಾ ಘಟಕ ಸ್ಥಾಪಿಸಲು ಸುಜ್ಲಾನ್ ಕಂಪನಿಯು ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಗಾಳಿ ವಿದ್ಯುತ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಭಾರತವನ್ನು ಅಭಿವೃದ್ಧಿಪಡಿಸಲು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಸುಸ್ಥಿರತೆ ಸಾಧಿಸಲು ನೆರವಾಗಲಿದೆ.
ವಿಂಗ್ಸ್- ವಿಟೆರಾ ಕಂಪನಿ
ವಿಜಯಪುರ ಅಥವಾ ಕಲಬುರಗಿಯಲ್ಲಿ ಪ್ರತಿ ದಿನ 800 ಟನ್ ಸಾಮರ್ಥ್ಯದ ಬಹುಬಗೆಯ ಬೇಳೆಕಾಳು ಸಂಸ್ಕರಣಾ ಘಟಕ ಸ್ಥಾಪಿಸಲು ವಿಂಗ್ಸ್- ವಿಟೆರಾ ಕಂಪನಿಯು ₹ 250 ಕೋಟಿ ಬಂಡವಾಳ ತೊಡಗಿಸಲಿದೆ. ಈ ಘಟಕವು ಕಾರ್ಯಾರಂಭ ಮಾಡಿದ 2ನೇ ವರ್ಷದಿಂದ ₹ 800 ಕೋಟಿ ವಾರ್ಷಿಕ ವಹಿವಾಟು ನಡೆಸಲಿದೆ. ದಕ್ಷಿಣ ಭಾರತದಲ್ಲಿನ ಬೇಳೆಕಾಳುಗಳ ಅತಿದೊಡ್ಡ ಸಂಸ್ಕರಣಾ ಘಟಕ ಇದಾಗಿರಲಿದೆ.
ಈ ಉದ್ದೇಶಿತ ಘಟಕವು ಸ್ಥಳೀಯ ಉದ್ಯೋಗ ಅವಕಾಶ ಹೆಚ್ಚಳ, ಮಹಿಳೆಯರ ಸಬಲೀಕರಣ ಮತ್ತು ಗ್ರಾಮೀಣ ಆರ್ಥಿಕ ಪ್ರಗತಿಗೆ ಗಣನೀಯ ಕೊಡುಗೆ ನೀಡಲಿದೆ. ಕಂಪನಿಯು ಪ್ರತ್ಯೇಕ ಸಂಗ್ರಹಣಾ ಕೇಂದ್ರ ತೆರೆಯಲಿರುವುದರಿಂದ ಬೆಳೆಗಾರರಿಗೆ ಉತ್ಪನ್ನಗಳ ಮಾರಾಟ ಸುಗಮಗೊಳಿಸಿ ಹೆಚ್ಚಿನ ಆದಾಯ ಪಡೆಯಲು ನೆರವಾಗಲಿದೆ. ಇದರಿಂದ ಆಯ್ದ ಬೆಳೆಗಳ ಸಾಗುವಳಿ ಹೆಚ್ಚಿಸಲು ರೈತರಿಗೆ ಉತ್ತೇಜನ ದೊರೆಯಲಿದೆ. ಬೇಳೆಕಾಳುಗಳ ಆಮದು ಮೇಲಿನ ದೇಶದ ಅವಲಂಬನೆ ತಪ್ಪಿಸಲಿದೆ. ಕೃಷಿ ಸ್ವಾವಲಂಬನೆಗೆ ಉತ್ತೇಜನ ಸಿಗಲಿದೆ.
ಕಾರ್ಮಿಕರ ಕುಶಲತೆ ಹೆಚ್ಚಿಸಲು ಮತ್ತು ಉದ್ಯೋಗ ಅವಕಾಶ ಹೆಚ್ಚಿಸುವ ತನ್ನ ಬದ್ಧತೆಯ ಭಾಗವಾಗಿ ಸುಜ್ಲಾನ್, ಶೇ 90ರಷ್ಟು ಉದ್ಯೋಗಿಗಳಲ್ಲಿ ಐಟಿಐ ಪದವೀಧರರನ್ನು ನೇಮಿಸಿಕೊಳ್ಳಲಿದೆ. ವೃತ್ತಿ ಪರಿಣತಿ ಹೆಚ್ಚಿಸಲು ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಪರಿಣತಿ ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ಇನ್ವೆಸ್ಟ್ ಕರ್ನಾಟಕದಲ್ಲಿ ಪ್ರಕಟಿಸಿದ 21 ಪ್ರಮುಖ ಹೂಡಿಕೆಗಳು
- ಜೆಎಸ್‌ಡಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್ - ಸೌರ ಯೋಜನೆ , ಗಾಳಿ ಶಕ್ತಿ ಯೋಜನೆಗಳು, ಬ್ಯಾಟರಿ ಶಕ್ತಿ ಸಂಗ್ರಹಣೆ, ಬ್ಲೇಡ್ ತಯಾರಿಕೆ ಮತ್ತು ವಿಂಡ್ ಟರ್ಬೈನ್ ಜನರೇಟರ್ ಸ್ಥಾವರ ಸ್ಥಾಪನೆಗೆ ₹ 56,000 ಕೋಟಿ ಹೂಡಿಕೆ.
- ಬಲ್ಡೋಟಾ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ - ಸಮಗ್ರ ಉಕ್ಕು ತಯಾರಿಕಾ ಸ್ಥಾವರಕ್ಕೆ ರೂ ₹ 54,000 ಕೋಟಿ ಹೂಡಿಕೆ.
- ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಲಿಮಿಟೆಡ್ - ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಳು ಮತ್ತು ಮೇಲ್ಚಾವಣಿ ವಿದ್ಯುತ್ ಪರಿಹಾರಗಳ ಅಭಿವೃದ್ಧಿಗೆ ₹ 50,000 ಕೋಟಿ ಹೂಡಿಕೆ.
- ರೆನ್ಯೂ ಪ್ರೈವೇಟ್ ಲಿಮಿಟೆಡ್ – 4ಗಿಗಾವಾಟ್ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು ₹ 50,000 ಕೋಟಿ ಹೂಡಿಕೆ.
- ಸೆರೆಂಟಿಕಾ ರಿನ್ಯೂವೇಬಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ - ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿಗಾಗಿ ₹43,975 ಕೋಟಿ ಹೂಡಿಕೆ.
- ಜೆಎಸ್‌ಡಬ್ಲ್ಯು ಗ್ರೂಪ್ - ಜೆಎಸ್‌ಡಬ್ಲ್ಯು ಸಿಮೆಂಟ್ ಆ್ಯಂಡ್ ಸ್ಟೀಲ್ ಮತ್ತು ಅದರ ಅಂಗಸಂಸ್ಥೆಗಳಿಗೆ ₹ 43,900 ಕೋಟಿ ಹೂಡಿಕೆ.
- ಮಹೀಂದ್ರಾ ಸಸ್ಟೆನ್ ಪ್ರೈವೇಟ್ ಲಿಮಿಟೆಡ್ - ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು ₹ 35,000 ಕೋಟಿ ಹೂಡಿಕೆ
- ಹೀರೋ ಫ್ಯೂಚರ್ ಎನರ್ಜಿಸ್ - ನವೀಕರಿಸಬಹುದಾದ ಇಂಧನ, ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳ ಯೋಜನೆಗಳಿಗೆ ₹ 22,200 ಕೋಟಿ ಹೂಡಿಕೆ
- ಸುಜ್ಲಾನ್ ಎನರ್ಜಿ ಲಿಮಿಟೆಡ್ - ಪವನ ವಿದ್ಯುತ್ ಯೋಜನೆಗಳಿಗೆ ₹ 21,950 ಕೋಟಿ ಹೂಡಿಕೆ.
- ಎಸ್ಸಾರ್ ರಿನ್ಯೂವೇಬಲ್ಸ್ ಲಿಮಿಟೆಡ್- ₹ 20,000 ಕೋಟಿ ಹೂಡಿಕೆ.
- ಅವಾಡಾ ಎನರ್ಜಿ ಪ್ರೈವೇಟ್ ಲಿಮಿಟೆಡ್ - ₹ 18,000 ಕೋಟಿ ಹೂಡಿಕೆ.
- ಎಪ್ಸಿಲಾನ್ ಗ್ರೂಪ್ - ಆನೋಡ್ ಮತ್ತು ಕ್ಯಾಥೋಡ್ ಪದಾರ್ಥಗಳ ತಯಾರಿಕೆಗೆ ₹ 15,350 ಕೋಟಿ ಹೂಡಿಕೆ.
- ಎಂವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ – ಸೋಲಾರ ಫೊಟೊವೊಲ್ಟ್ಯಾಕ್ ಸೆಲ್ಸ್ ಮತ್ತು ಮಾಡ್ಯೂಲ್‌ಗಳ ತಯಾರಿಕೆಗೆ ₹ 15,000 ಕೋಟಿ ಹೂಡಿಕೆ.
- ಲ್ಯಾಮ್ ರಿಸರ್ಚ್ – ಸೆಮಿಕಂಡಕ್ಟರ್ ಉಪಕರಣಗಳ ತಯಾರಿಕೆಗೆ ₹ 10,000 ಕೋಟಿ ಹೂಡಿಕೆ
- ಆಂಪಿನ್ ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್ - ₹10,000 ಕೋಟಿ ಹೂಡಿಕೆ.
- ಎಸಿಎಂಇ ಸೋಲಾರ್ ಹೋಲ್ಡಿಂಗ್ಸ್ ಲಿಮಿಟೆಡ್ - ₹ 10,000 ಕೋಟಿ ಹೂಡಿಕೆ
- ಔ2 ಪವರ್ ಪ್ರೈವೇಟ್ ಲಿಮಿಟೆಡ್ - ನವೀಕರಿಸಬಹುದಾದ ಇಂಧನ ಸೌರ ಮತ್ತು ಪವನ ಯೋಜನೆಗಳ ಸ್ಥಾಪನೆಗೆ ₹ 10,000 ಕೋಟಿ ಹೂಡಿಕೆ
- ಕಾಂಟಿನುಮ್ ಗ್ರೀನ್ ಎನರ್ಜಿ ಜಿಪಿ - ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸಲು ₹ 10,000 ಕೋಟಿ ಹೂಡಿಕೆ
- ಸೋಟೆಫಿನ್ ಭಾರತ್ - ಸಂಪೂರ್ಣ ಸ್ವಯಂಚಾಲಿತ ರೊಬೊಟಿಕ್ ಬಹುಮಹಡಿ ಕಾರ್ ಮತ್ತು ಬಸ್ ಪಾರ್ಕಿಂಗ್ ವ್ಯವಸ್ಥೆಗಳ ನಿರ್ಮಾಣ ಮತ್ತು ಸ್ಥಾಪನೆಗೆ ₹ 8,500 ಕೋಟಿ ಹೂಡಿಕೆ
- ಶ್ರೀ ಸಿಮೆಂಟ್ ಲಿಮಿಟೆಡ್ – ಇಂಟೆಗ್ರೇಟೆಡ್ ಸ್ಥಾವರ ಮತ್ತು ಕ್ಲಿಂಕರ್ ಗ್ರೈಂಡಿಂಗ್ ಘಟಕಕ್ಕೆ ₹ 8,350 ಕೋಟಿ ಹೂಡಿಕೆ
- ಹೆಕ್ಸಾ ಕ್ಲೈಮೇಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ - ₹ 8,000 ಕೋಟಿ ಹೂಡಿಕೆ.
ಮುಖ್ಯವಾಗಿ ಆಟೋಮೊಬೈಲ್ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಅತಿ ಹೆಚ್ಚು ಹೂಡಿಕೆಯ ಒಪ್ಪಂದಗಳಾಗಿದ್ದು, ವಿಶೇಷವಾಗಿ ಸೋಲಾರ್ ಮತ್ತು ಪವನ ವಿದ್ಯುತ್ ವಲಯದ ಹೂಡಿಕೆಗಳು ಸಾಕಾರವಾದಲ್ಲಿ ಕರ್ನಾಟಕ ದೇಶದ ಪ್ರಮುಖ ಇಂಧನ ಹಬ್ ಆಗಿ ವಿಕಾಸಗೊಳ್ಳುವ ಸಾಧ್ಯತೆಗಳು ಇವೆ.