
ನಂದಿನಿ ಸಿಹಿ ತಿಂಡಿಗಳು
ಮಧುಮೇಹಿಗಳಿಗೆ ಉಡುಗೊರೆ: ನಂದಿನಿಯಿಂದ ಸಕ್ಕರೆರಹಿತ ಸಿಹಿ ತಿಂಡಿಗಳ ಹೊಸ ಶ್ರೇಣಿ
ಖೋವಾ ಗುಲಾಬ್ ಜಾಮೂನ್ 500 ಗ್ರಾಂ ಪ್ಯಾಕ್ 220 ರೂ, ನಂದಿನಿ ಹಳೆ ಪೇಡಾ (ಸಕ್ಕರೆರಹಿತ) 200 ಗ್ರಾಂ 170 ರೂ. ಹಾಗೂ ನಂದಿನಿ ಬೆಲ್ಲ ಓಟ್ಸ್ ಮತ್ತು ಬೀಜಗಳ ಬರ್ಫಿ 200 ಗ್ರಾಂ 170 ರೂ. ಲಭ್ಯವಿದೆ.
ಈ ದೀಪಾವಳಿ ಹಬ್ಬದ ಸಂಭ್ರಮವನ್ನು ಆರೋಗ್ಯದೊಂದಿಗೆ ಆಚರಿಸಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಒಂದು ವಿಶೇಷ ಹೆಜ್ಜೆ ಇಟ್ಟಿದೆ. ರಾಜ್ಯದ ಹೆಮ್ಮೆಯ ಬ್ರ್ಯಾಂಡ್ 'ನಂದಿನಿ' ಇದೀಗ ಮಧುಮೇಹಿಗಳು ಮತ್ತು ಆರೋಗ್ಯ ಪ್ರಿಯರಿಗಾಗಿ ಸಕ್ಕರೆರಹಿತ (ಶುಗರ್ ಫ್ರೀ) ಸಿಹಿತಿಂಡಿಗಳ ಹೊಸ ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬದಲಾಗುತ್ತಿರುವ ಜೀವನಶೈಲಿ ಮತ್ತು ಸಕ್ಕರೆಯ ಬಳಕೆಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯನ್ನು ಗಮನದಲ್ಲಿಟ್ಟುಕೊಂಡು ಕೆಎಂಎಫ್ ಈ ವಿನೂತನ ಉತ್ಪನ್ನಗಳನ್ನು ಪರಿಚಯಿಸಿದೆ. "ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮಧುಮೇಹಿಗಳು ಕೂಡ ಹಬ್ಬದ ಸವಿಯನ್ನು ಸವಿಯಲು ಅನುಕೂಲವಾಗುವಂತೆ ಸಕ್ಕರೆರಹಿತ ನಂದಿನಿ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಿದ್ದೇವೆ. ಈ ಉತ್ಪನ್ನಗಳು ಸಕ್ಕರೆ ಬಳಸದೆ, ರುಚಿ ಮತ್ತು ಪೌಷ್ಟಿಕಾಂಶದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ" ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ತಿಳಿಸಿದ್ದಾರೆ. ಈ ಮೂಲಕ, ನಂದಿನಿಯು ಹಬ್ಬದ ಸಿಹಿಗೆ ಹೊಸ, ಆರೋಗ್ಯಕರ ಸ್ಪರ್ಶ ನೀಡಲು ಮುಂದಾಗಿದೆ.
ಹೊಸ ಉತ್ಪನ್ನಗಳು ಮತ್ತು ಆಕರ್ಷಕ ಬೆಲೆ
ದೀಪಾವಳಿಯ ಹಬ್ಬದ ಕೊಡುಗೆಯಾಗಿ ಮೂರು ಬಗೆಯ ಸಕ್ಕರೆರಹಿತ ಸಿಹಿತಿಂಡಿಗಳನ್ನು ಪರಿಚಯಿಸಲಾಗಿದೆ. ನಂದಿನಿ ಖೋವಾ ಗುಲಾಬ್ ಜಾಮೂನ್ (500 ಗ್ರಾಂ) 220 ರೂಪಾಯಿ , ನಂದಿನಿ ಹಳೆ ಪೇಡಾ (200 ಗ್ರಾಂ) 170 ರೂಪಾಯಿ, ಮತ್ತು ನಂದಿನಿ ಬೆಲ್ಲ, ಓಟ್ಸ್ ಮತ್ತು ಬೀಜಗಳ ಬರ್ಫಿ (200 ಗ್ರಾಂ) 170 ರೂಪಾಯಿ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಈ ಉತ್ಪನ್ನಗಳು "ಶುದ್ಧತೆ, ರುಚಿ ಮತ್ತು ಕೈಗೆಟುಕುವ ಬೆಲೆ" ಎಂಬ ನಂದಿನಿ ಬ್ರ್ಯಾಂಡ್‌ನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿವೆ ಎಂದು ಕೆಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ.
ದಸರಾದಲ್ಲಿ ದಾಖಲೆ, ಜಿಎಸ್‌ಟಿಯಿಂದ ಬೆಲೆ ಇಳಿಕೆ
ಇತ್ತೀಚೆಗೆ ಮುಗಿದ ದಸರಾ ಹಬ್ಬದ ಸಂದರ್ಭದಲ್ಲಿ ನಂದಿನಿ ಸಿಹಿತಿಂಡಿಗಳ ಮಾರಾಟವು 750 ಮೆಟ್ರಿಕ್ ಟನ್‌ಗಳನ್ನು ಮೀರಿತ್ತು, ಇದು ಬ್ರ್ಯಾಂಡ್‌ನ ಮೇಲಿನ ಗ್ರಾಹಕರ ನಂಬಿಕೆಯನ್ನು ಸಾಬೀತುಪಡಿಸಿದೆ. ಇದೇ ವೇಳೆ, ಜಿಎಸ್‌ಟಿ ದರಗಳ ಸುಧಾರಣೆಯನ್ನು ಅನುಸರಿಸಿ ಕೆಎಂಎಫ್ ತನ್ನ 21 ಉತ್ಪನ್ನಗಳ ಬೆಲೆಗಳನ್ನು ಪರಿಷ್ಕರಿಸಿದೆ. ಇದರ ಪರಿಣಾಮವಾಗಿ, ನಂದಿನಿ ತುಪ್ಪ, ಉಪ್ಪುರಹಿತ ಬೆಣ್ಣೆ ಮತ್ತು ಚೀಸ್ ಬ್ಲಾಕ್‌ನಂತಹ ಪ್ರಮುಖ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗಿದೆ.