
ಶಿಕ್ಷಕರ ಕ್ಷೇತ್ರಗಳಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸುವಂತೆ ಡಿಕೆಶಿ ಸೂಚನೆ ನೀಡಿದ್ದಾರೆ.
ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಗೆ ಸಿದ್ಧರಾಗಿ : ಶಿಕ್ಷಕರ ದಿನಾಚರಣೆಯಲ್ಲಿ ಡಿಕೆಶಿ ಕರೆ!
ಶಿಕ್ಷಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವರ ಹಕ್ಕುಗಳಿಗಾಗಿ ಹೋರಾಡುವ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಮ್ಮ ಗುರಿ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಮುಂದಿನ ವರ್ಷ ನಡೆಯಲಿರುವ ಮಹತ್ವದ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸುವಂತೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ. ಶಿಕ್ಷಕರ ಕ್ಷೇತ್ರಗಳಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮುಂದಿನ ವರ್ಷ ನಾಲ್ಕು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಈ ತಿಂಗಳ ಒಳಗಾಗಿಯೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪುಟ್ಟಣ್ಣ ಸೇರಿದಂತೆ ಅನೇಕರು ಗೆಲುವು ಸಾಧಿಸಿರುವುದು ನಮಗೆ ಸ್ಫೂರ್ತಿ," ಎಂದು ಹೇಳಿದರು.
ಈ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದ ಶಿವಕುಮಾರ್, ಶಿಕ್ಷಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವರ ಹಕ್ಕುಗಳಿಗಾಗಿ ಹೋರಾಡುವ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಶಿಕ್ಷಕರೇ ಪ್ರಗತಿಯ ಮೂಲ:
ಇದೇ ಸಂದರ್ಭದಲ್ಲಿ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು, "ಇಡೀ ಪ್ರಪಂಚವು ಭಾರತವನ್ನು ಕರ್ನಾಟಕದ ಮೂಲಕ ನೋಡುತ್ತಿದ್ದರೆ, ಅದಕ್ಕೆ ಶಿಕ್ಷಕರ ಕೊಡುಗೆ ಅಪಾರ. ಶಿಕ್ಷಣದಿಂದಲೇ ಪ್ರಗತಿ ಸಾಧ್ಯ, ಮತ್ತು ಈ ಪ್ರಗತಿಗೆ ನೀವೇ ಮೂಲಶಕ್ತಿ," ಎಂದು ಬಣ್ಣಿಸಿದರು.
ಸಿಎಸ್‌ಆರ್ ಅನುದಾನದಲ್ಲಿ ಶಾಲಾ ಕ್ರಾಂತಿ:
ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ಅನುದಾನವನ್ನು ಬಳಸಿಕೊಳ್ಳುವ ಸರ್ಕಾರದ ಯೋಜನೆಯ ಬಗ್ಗೆ ವಿವರಿಸಿದ ಅವರು, "ಸುಮಾರು 2,000 ಶಾಲೆಗಳನ್ನು ಕಾರ್ಪೊರೇಟ್ ಸಹಭಾಗಿತ್ವದಲ್ಲಿ ನಿರ್ಮಿಸುವ ಗುರಿ ಹೊಂದಿದ್ದೇವೆ. ಉತ್ತಮ ಶಿಕ್ಷಣವನ್ನು ಸ್ಥಳೀಯವಾಗಿಯೇ ಒದಗಿಸುವುದರಿಂದ ಗ್ರಾಮೀಣ ಭಾಗದಿಂದ ನಗರಗಳಿಗೆ ಆಗುವ ವಲಸೆಯನ್ನು ತಡೆಯಬಹುದು," ಎಂದು ಅಭಿಪ್ರಾಯಪಟ್ಟರು.
"ಗುರಿ ತಲುಪಲು ಗುರು ಇರಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ಕೃತಕ ಬುದ್ಧಿಮತ್ತೆಯಂತಹ ಹೊಸ ವಿಚಾರಗಳತ್ತ ಶಿಕ್ಷಕರು ಗಮನಹರಿಸಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಆತ್ಮತೃಪ್ತಿಯೊಂದಿಗೆ ಕೆಲಸ ಮಾಡಬೇಕು" ಎಂದು ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.