GBA formed for better service to the public, decentralization of power
x

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸಾರ್ವಜನಿಕರಿಗೆ ಉತ್ತಮ ಸೇವೆ, ಅಧಿಕಾರ ವಿಕೇಂದ್ರಿಕರಣಕ್ಕಾಗಿ ಜಿಬಿಎ ರಚನೆ

ನಗರದ ನಾಗರಿಕರಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವುದು, ಸಮರ್ಪಕ ಕಸ ವಿಲೇವಾರಿ, ಸಂಚಾರ ದಟ್ಟಣೆ ಕಡಿಮೆ ಮಾಡುವುದು, ರಸ್ತೆ, ಚರಂಡಿ ವ್ಯವಸ್ಥೆ ಚೆನ್ನಾಗಿರುವಂತೆ ಮಾಡಬೇಕುಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


Click the Play button to hear this message in audio format

ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 1.40 ಕೋಟಿ ಜನಸಂಖ್ಯೆಯ ಬೃಹತ್ ಬೆಂಗಳೂರಿನ ಸಮರ್ಪಕ ಆಡಳಿತ ಕೇವಲ ಒಂದು ಪಾಲಿಕೆಯಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ, ಅಧಿಕಾರ ವಿಕೇಂದ್ರೀಕರಣ ಮತ್ತು ಜನರಿಗೆ ಉತ್ತಮ ಆಡಳಿತ ನೀಡುವ ಉದ್ದೇಶದಿಂದ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (ಜಿಬಿಎ) ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಶುಕ್ರವಾರ ನಡೆದ ಜಿಬಿಎ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ವಿಶ್ವದ ಹಲವು ದೇಶಗಳ ಜನರು ಬೆಂಗಳೂರಿನಲ್ಲಿ ಬಂಡವಾಳ ಹೂಡಿ, ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅವರ ಆಶೋತ್ತರಗಳನ್ನು ಈಡೇರಿಸುವ, ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾದ ಆಡಳಿತ ನೀಡಲು ಜಿಬಿಎ ರಚಿಸಿದ್ದೇವೆ. ಇದರಿಂದ ಅಧಿಕಾರದ ವಿಕೇಂದ್ರೀಕರಣ ಸಾಧ್ಯವಾಗಲಿದೆ" ಎಂದು ತಿಳಿಸಿದರು.

ಜಿಬಿಎ ರಚನೆಗೆ ಬಿಜೆಪಿ, ಜೆಡಿಎಸ್ ನಿರಾಸಕ್ತಿ

"ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ (2014-19) ಬಿಬಿಎಂಪಿಯನ್ನು ವಿಭಜಿಸಿ ಹೆಚ್ಚು ಕಾರ್ಪೊರೇಷನ್‌ಗಳನ್ನು ರಚಿಸುವ ಸಾಧ್ಯತೆಗಳ ಕುರಿತು ವರದಿ ನೀಡಲು ಸಮಿತಿ ರಚಿಸಿದ್ದೆವು. ಸಮಿತಿಯು ಮಧ್ಯಂತರ ವರದಿ ನೀಡಿತ್ತು. ಆದರೆ, ನಂತರ ಬಂದ ಸರ್ಕಾರಗಳು ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಿತಿಯನ್ನು ಪುನರ್‌ರಚಿಸಿ, ಸಾರ್ವಜನಿಕರಿಂದ ಸಲಹೆ-ಆಕ್ಷೇಪಣೆಗಳನ್ನು ಸ್ವೀಕರಿಸಿ, ಕಾನೂನುಬದ್ಧವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿದ್ದೇವೆ. ಇದರ ಅಡಿಯಲ್ಲಿ ಇದೀಗ ಐದು ಹೊಸ ನಗರಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ" ಎಂದು ಸಿಎಂ ಮಾಹಿತಿ ನೀಡಿದರು.

ಆದಾಯ ಹೆಚ್ಚಳ, ಗುಣಮಟ್ಟಕ್ಕೆ ಆದ್ಯತೆ: ಅಧಿಕಾರಿಗಳಿಗೆ ಸೂಚನೆ

ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ ಮುಖ್ಯಮಂತ್ರಿಗಳು, "ನಗರದ ನಾಗರಿಕರಿಗೆ ಅಗತ್ಯ ಮೂಲಸೌಕರ್ಯ, ಸಮರ್ಪಕ ಕಸ ವಿಲೇವಾರಿ, ಸಂಚಾರ ದಟ್ಟಣೆ ನಿವಾರಣೆ, ಉತ್ತಮ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಒದಗಿಸಬೇಕು. ನಗರವನ್ನು ಸ್ವಚ್ಛವಾಗಿಟ್ಟು, ಸೌಂದರ್ಯ ಹೆಚ್ಚಿಸಬೇಕು. ಪಾಲಿಕೆಗಳ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು," ಎಂದು ನಿರ್ದೇಶಿಸಿದರು.

"ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾದರೆ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಎಲ್ಲಾ ನಗರಪಾಲಿಕೆಗಳ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು ಹಾಗೂ ಫುಟ್‌ಪಾತ್‌ಗಳು ಸಾಧ್ಯವಾದಷ್ಟು ವಿಸ್ತಾರವಾಗಿರುವಂತೆ ನೋಡಿಕೊಳ್ಳಬೇಕು," ಎಂದು ಎಚ್ಚರಿಕೆ ನೀಡಿದರು.

ವಿವಿಧ ಇಲಾಖೆಗಳ ಸಮನ್ವಯಕ್ಕೆ ಒತ್ತು

"ಬೆಂಗಳೂರಿನ ನಾಗರಿಕರಿಗೆ ಸೇವೆ ನೀಡುತ್ತಿರುವ ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಆರ್‌ಸಿಎಲ್‌ನಂತಹ ಸಂಸ್ಥೆಗಳು ಜಿಬಿಎ ಜೊತೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಐದು ನಗರಪಾಲಿಕೆಗಳಿಗೆ ಸುಸಜ್ಜಿತ ಆಡಳಿತ ಕಚೇರಿಗಳನ್ನು ನಿರ್ಮಿಸಲು ಶೀಘ್ರವೇ ಸ್ಥಳ ಗುರುತಿಸಬೇಕು. ಆಯಾ ಕಾರ್ಪೊರೇಷನ್‌ಗಳು ತಮ್ಮ ಹಂತದಲ್ಲಿಯೇ ಕಸ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಸೂಚಿಸಿದರು.

ಸಂಚಾರ ದಟ್ಟಣೆ ನಿವಾರಣೆಗೆ ಹೊಸ ಯೋಜನೆ

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ಲೈನ್‌ನ ಕೊನೆಯ ನಿಲ್ದಾಣಗಳಿಗೆ ಬಸ್ ಸಂಪರ್ಕವನ್ನು ಹೆಚ್ಚಿಸುವ ಕುರಿತು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಸಾರಿಗೆ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

ವಿಪಕ್ಷಗಳ ಬಹಿಷ್ಕಾರಕ್ಕೆ ಸಿಎಂ ಟೀಕೆ

"ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಜನರಿಗೆ ಅತ್ಯುತ್ತಮ ನಾಗರಿಕ ಸೌಲಭ್ಯ ಮತ್ತು ಉತ್ತಮ ಆಡಳಿತ ನೀಡುವುದೇ ನಮ್ಮ ಗುರಿ. ಆದರೆ, ಬೆಂಗಳೂರಿನ ಅಭಿವೃದ್ಧಿ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧವಿರುವವರು ಈ ಸಭೆಯನ್ನು ಬಹಿಷ್ಕರಿಸಿದ್ದಾರೆ. ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಇಲ್ಲಿ ಅವಕಾಶವಿತ್ತು, ಆದರೆ ಕೆಲವರು ಆ ಅವಕಾಶವನ್ನು ಕಳೆದುಕೊಂಡಿದ್ದಾರೆ" ಎಂದು ಸಭೆಗೆ ಗೈರಾದ ವಿರೋಧ ಪಕ್ಷದ ನಾಯಕರ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಟೀಕಿಸಿದರು.

Read More
Next Story